ಮಗನ ಕಾಲೇಜು ಫೀಸ್ ಕಟ್ಟಲು ಜೀವ ಕಳೆದುಕೊಂಡ ತಾಯಿ | ತಮಿಳುನಾಡಿನಲ್ಲೊಂದು ಹೃದಯವಿದ್ರಾವಕಾರಿ ಘಟನೆ

ರಸ್ತೆ ಅಪಘಾತದಲ್ಲಿ ಮೃತಪಟ್ಟರೆ ಆರ್ಥಿಕ ಪರಿಹಾರ ಸಿಗುತ್ತದೆ ಎಂದ ನಂಬಿದ್ದ ಮಹಿಳೆ ಬಸ್‌ ಅಡಿಗೆ ಬಿದ್ದು ಆತ್ಮಹತ್ಯೆ

ಸೇಲಂ: ತನ್ನ ಮಗನ ಶಿಕ್ಷಣಕ್ಕೆ ಹಣ ಹೊಂದಿಸುವ ಸಲುವಾಗಿ ‘ಸ್ವಚ್ಛತಾ ಕಾರ್ಮಿಕ’ ಮಹಿಳೆಯೊಬ್ಬರು ಬಸ್‌ ಅಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಆರಂಭದಲ್ಲಿ, ಘಟನೆಯನ್ನು ವಾಹನ ಅಪಘಾತ ಎಂದೇ ನಂಬಲಾಗಿತ್ತಾದರೂ ತನಿಖೆಯ ನಂತರ ವಾಸ್ತವ ಬೆಳಕಿಗೆ ಬಂದಿದೆ.

ದುರ್ಘಟನೆಯು ಜೂನ್ 28ರಂದು ನಡೆದಿದ್ದು, ತಮಿಳುನಾಡಿನ ಸೇಲಂನ 2ನೇ ಅಗ್ರಹಾರಂ ಬೀದಿಯಲ್ಲಿ ಇದು ಸಂಭವಿದೆ. ಘಟನೆಯ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮಹಿಳೆಯನ್ನು ಪಾಪತಿ (46) ಎಂದು ಗುರುತಿಸಲಾಗಿದ್ದು, ಗಂಡನನ್ನು ತೊರೆದು ಬದುಕುತ್ತಿದ್ದ ಮಹಿಳೆಗೆ ಒಬ್ಬ ಮಗ, ಮಗಳು ಮತ್ತು ತಾಯಿ ಇದ್ದರು. ಪಾಪತಿ ಅವರು ಸೇಲಂ ಕಲೆಕ್ಟರೇಟ್‌ನಲ್ಲಿ ತಾತ್ಕಾಲಿಕ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಜೂನ್ 28ರಂದು ಮಹಿಳೆ ರಸ್ತೆಯ ಬದಿಯಲ್ಲಿ ವೇಗವಾಗಿ ನಡೆಯುತ್ತಾ, ಮುಂದುಗಡೆಯಿಂದ ಬಸ್‌ ಬರುತ್ತಿರುವುದು ಕಂಡ ತಕ್ಷಣ ಅದರ ಕಡೆಗೆ ಅಡ್ಡಲಾಗಿ ಹೋಗುತ್ತಾರೆ. ಈ ವೇಳೆ ಬಸ್‌ ಢಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೆ ಮಹಿಳೆ ಮೃತಪಟ್ಟಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂಓದಿ: ಶಾಲೆಗಳಿಗೆ ಹೊಸ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ : ಸಚಿವ ಮಧು ಬಂಗಾರಪ್ಪ 

ಘಟನೆ ನಡೆದು ಸುಮಾರು ಮೂರು ವಾರಗಳ ನಂತರ, ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ಆಘಾತಕಾರಿ ವಾಸ್ತವವನ್ನು ಬೆಳಕಿಗೆ ತಂದಿದ್ದಾರೆ. ಮೃತಪಟ್ಟ ಮಹಿಳೆ ಪಾಪತಿ ತನ್ನ ಮಗನ ಶಿಕ್ಷಣದ ವೆಚ್ಚವನ್ನು ಪೂರೈಸಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಅಪಘಾತದಲ್ಲಿ ತಾನು ಸಾವಿಗೀಡಾದರೆ ತನ್ನ ಕುಟುಂಬಕ್ಕೆ ಆರ್ಥಿಕ ಪರಿಹಾರ ಸಿಗುತ್ತದೆ,  ಈ ಹಣ ತನ್ನ ಮಕ್ಕಳ ಶಾಲಾ ಶುಲ್ಕ ಪಾವತಿ ಮಾಡಲು ಸಹಾಯ ಮಾಡುತ್ತದೆ ಎಂದು ಮಹಿಳೆ ನಂಬಿದ್ದರು. ಹೀಗಾಗಿ ಮಹಿಳೆ ತನ್ನ ಜೀವವನ್ನೇ ಒಡ್ಡಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸ್ ಅಧಿಕಾರಿಗಳು ಅಪಘಾತ ಸಂಭವಿಸಿದ ರಸ್ತೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಸಾವಿಗೀಡಾಗುವ ಮುಂಚಿನ ದಿನವೂ ಪಾಪತಿ ಅವರು ಇದೇ ರೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅಂದು ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದರು. ಈ ವೇಳೆ ಸೇಲಂ ಟೌನ್ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279 (ಸಾರ್ವಜನಿಕ ಮಾರ್ಗದಲ್ಲಿ ಅತಿವೇಗದ ಚಾಲನೆ ಅಥವಾ ಸವಾರಿ) ಮತ್ತು 304 (ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

ಇದರ ನಂತರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಮಹಿಳೆಯು ತನ್ನ ಮಗನ ಕಾಲೇಜು ಶುಲ್ಕಕ್ಕೆ 45 ಸಾವಿರ ರೂ.ಗಳನ್ನು ಪಾವತಿಸಲು ಸಾಧ್ಯವಾಗದೆ ತೀವ್ರ ಚಿಂತಿತಳಾಗಿದ್ದರು ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, “ಅಪಘಾತ”ದಲ್ಲಿ ತಾನು ಸಾವಿಗೀಡಾದರೆ ಪರಿಹಾರವನ್ನು ಪಡೆಯಲು ಸಾಧ್ಯ ಎಂದು ನಂಬಿಸಿ ಆಕೆಯನ್ನು ದಾರಿ ತಪ್ಪಿಸಲಾಗಿತ್ತು.

ಇದನ್ನೂಓದಿ: ಶಿಕ್ಷಣದ ಬಲವರ್ಧನೆಗೆ ವಿದ್ಯಾರ್ಥಿ ಚಳುವಳಿ ಬಲಗೊಳ್ಳಬೇಕು – ಮೃತ್ಯುಂಜಯ ಗುದಿಗೇರ

“ಪಾಪತಿ ಅವರು ತಾತ್ಕಾಲಿಕ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ಅವರು 10,000 ಮಾಸಿಕ ವೇತನವನ್ನು ಪಡೆಯುತ್ತಿದ್ದರು. ಪತಿಯಿಂದ ಬೇರ್ಪಟ್ಟ ನಂತರ ಅವರು ಕಳೆದ 18 ವರ್ಷಗಳಿಂದ ಮಗಳು ಮತ್ತು ಮಗನೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದರು. ಜೀವನ ಸಾಗಿಸುವುದು ತುಂಬಾ ಕಷ್ಟವಾಗಿದ್ದ ಅವರ ಮಗಳು ಈಗ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಮಗ ಖಾಸಗಿ ಕಾಲೇಜಿನಲ್ಲಿ ಆರ್ಕಿಟೆಕ್ಚರ್‌ನಲ್ಲಿ ಡಿಪ್ಲೊಮಾ ಓದುತ್ತಿದ್ದರು” ಎಂದು ಸೇಲಂ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.

“ಇಲ್ಲಿಯವರೆಗೆ ಸಾಲ ಪಡೆದು ಮರುಪಾವತಿ ಮಾಡುವ ಮೂಲಕ ಆರ್ಥಿಕ ನಿರ್ವಹಣೆ ಮಾಡುತ್ತಿದ್ದ ಮಹಿಳೆ ತನ್ನ ಮಗಳ ಮದುವೆ ಮತ್ತು ಮಗನ ಶಿಕ್ಷಣದ ವೆಚ್ಚದ ಬಗ್ಗೆ ಒತ್ತಡದಲ್ಲಿದ್ದರು. ಈ ವೇಳೆ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟರೆ, ಅದರಲ್ಲೂ ಖಾಸಗಿ ಅಥವಾ ಸರ್ಕಾರಿ ಬಸ್ ಆಗಿದ್ದರೆ ಮಕ್ಕಳಿಗೆ ಪರಿಹಾರ ಸಿಗುತ್ತದೆ ಎಂದು ಯಾರೋ ಹೇಳಿದ್ದರು. ಇದನ್ನು ನಂಬಿದ್ದ ಮಹಿಳೆ ಆತ್ಮಹತ್ಯೆ ಮಾಡುವ ತಿರ್ಮಾನ ಕೈಗೊಂಡಿದ್ದಾರೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದೀಗ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಅಗಿದ್ದು, ಮಗನ ಶಿಕ್ಷಣಕ್ಕಾಗಿ ಹೆತ್ತರವರ ಜೀವವನ್ನೆ ಬಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪವಾಗಿದೆ.

ಇದನ್ನೂಓದಿ: ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಅಸಂವಿಧಾನಿಕ : ಯು.ಎಸ್ ಸುಪ್ರೀಂ ಕೋರ್ಟು

“ಮಗನ ಕಾಲೇಜ್ ಫೀಸ್ ಕಟ್ಟಲು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು, ಆದರೂ ನಾವು ‘ಅಭಿವೃದ್ಧಿ’ಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೇವೆಯೇ?!” ಎಂದು ಪತ್ರಕರ್ತ ಅರವಿಂದ್ ಗುಣಶೇಖರ್‌ ಟ್ವೀಟ್ ಮಾಡಿದ್ದಾರೆ.

“ಭಾರತೀಯ ಶಿಕ್ಷಣದ ಕಳಪೆ ಸ್ಥಿತಿಯನ್ನು ಈ ಘಟನೆ ಎತ್ತಿ ತೋರಿಸಿದೆ” ಎಂದು ಪತ್ರಕರ್ತೆ ಸುಮೇಧಾ ಶರ್ಮಾ ಹೇಳಿದ್ದಾರೆ.

“ಇದೇ ರೀತಿಯ ಘಟನೆ ಕಳೆದ ತಿಂಗಳು ಒಡಿಶಾದಲ್ಲಿ ನಡೆದಿತ್ತು. ವಿಶ್ವಗುರುವಿನ ಯುಗದಲ್ಲಿ ಶಿಕ್ಷಣಕ್ಕಾಗಿ ಎಂಥ ದುರಂತಕ್ಕೆ ನಾವೆಲ್ಲ ಸಾಕ್ಷಿಯಾಗಬೇಕಿದೆ, ಬಹಳ ದುಃಖವಾಗುತ್ತಿದೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದು, “ನಮ್ಮ ದೇಶದಲ್ಲಿ ಇನ್ನೂ ಬಡತನವಿದೆ ಎಂದರೆ ಇದು ನಾಚಿಕೆಯಿಂದ ತಲೆತಗ್ಗಿಸುವಂಥ ವಿಷಯ. ರಾಜಕಾರಣಿಗಳು ಶ್ರೀಮಂತ ಕೈಗಾರಿಕೋದ್ಯಮಿಗಳ ಸಾಲವನ್ನು ಮನ್ನಾ ಮಾಡುವಲ್ಲಿ ಮುಳುಗಿದ್ದಾರೆ. ಹಾಗಾಗಿ ಬಡವರು ಬಡವರಾಗಿಯೇ ಉಳಿದು ಅದರ ಭಾರ ತಾಳಲಾರದೆ ಇಂಥ ನಿರ್ಧಾರಕ್ಕೆ ಬರಬೇಕಾಗುತ್ತಿರುವುದು ವಿಷಾದನೀಯ” ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂಓದಿ: ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವಂತಿಲ್ಲ: ರಾಜ್ಯ ಸರ್ಕಾರ ಸುತ್ತೋಲೆ

ಯಾರಾದರೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆಯಲ್ಲಿದ್ದರೆ, ಅವರಿಗೆ ದಯವಿಟ್ಟು ಸಹಾಯವನ್ನು ಒದಗಿಸಿ. ಇಂತಹ ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ಭಾವನಾತ್ಮಕ ಬೆಂಬಲವನ್ನು ನೀಡುವ ಆತ್ಮಹತ್ಯೆ ತಡೆಗಟ್ಟುವಿಕೆ ಸಂಸ್ಥೆಗಳ ಕೆಲವು ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ.

ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ – 104

Donate Janashakthi Media

Leave a Reply

Your email address will not be published. Required fields are marked *