ಲಕ್ನೋ: ಉತ್ತರ ಪ್ರದೇಶ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ದೇವಾಲಯಗಳ ಬಳಿಯಿರುವ ಮಸೀದಿಗಳನ್ನು ಮುಸ್ಲಿಮರು ಸ್ವಯಂ ಪ್ರೇರಿತರಾಗಿ ಅವರೇ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಮೀನುಗಾರಿಕೆ ಸಚಿವ ಸಂಜಯ್ ನಿಶಾದ್ ಹೇಳಿದ್ದಾರೆ.
ರಾಮ ಮಂದಿರ ಮಾದರಿಯಲ್ಲಿಯೇ, ಮಸೀದಿಗಳನ್ನು ಸ್ವಯಂಪ್ರೇರಿತವಾಗಿ ಸ್ಥಳಾಂತಸಲಾಗಿದೆ. ಅಲ್ಲಿ ಯಾವುದೇ ತೊಂದರೆಯಿಲ್ಲದೆ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಮಸೀದಿಯನ್ನು ಬೇರೆ ಸ್ಥಳದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಬಾಬ್ರಿ ಮಸೀದಿ ಧ್ವಂಸಗೊಳಿಸಿ ರಾಮ ಮಂದಿರ ನಿರ್ಮಾಣದ ಬಗೆಗಿನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಭಾರತೀಯ ಸಂಸ್ಕೃತಿಯ ಇತರ ಧರ್ಮಗಳು ಅವರು ಎಲ್ಲಿ ಬೇಕಾದರೂ ತಮ್ಮ ಪೂಜಾ ಸ್ಥಳಗಳನ್ನು ನಿರ್ಮಿಸಬಹುದು ಎಂದು ಹೇಳುವ ಸಚಿವರು, ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
“ಎಲ್ಲೆಲ್ಲಿ ಮಂದಿರಗಳಿವೆಯೋ ಅವುಗಳ ಪಕ್ಕದಲ್ಲಿ ಮಸೀದಿಗಳನ್ನು ನಿರ್ಮಿಸಲಾಗಿದೆ… ಅಂತಹ ಎಲ್ಲಾ ಮಸೀದಿಗಳನ್ನು ಸ್ವಯಂಪ್ರೇರಣೆಯಿಂದ ಸ್ಥಳಾಂತರಿಸಬೇಕು. ಅವರು ರಾಮ ಮಂದಿರದಿಂದ ದೂರ ಸರಿದಂತೆಯೇ ಇತರೆ ಕಡೆಗಳಲ್ಲೂ ಯಾವುದೇ ತೊಂದರೆಗಳಿಲ್ಲದೆ ಪ್ರತ್ಯೇಕಗೊಳುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಅನುಸರಿಸಬೇಕೆಂದು ಹೇಳಿದ್ದಾರೆ.
ಅಲ್ಲದೆ, ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಚಿವರು, ಭಯೋತ್ಪಾದಕರು ಮತ್ತು ಅಪರಾಧಿಗಳು ಮದರಸಾಗಳೊಂದಿಗೆ ಸಂಪರ್ಕ ಹೊಂದಿರುವುದು ಕಂಡುಬಂದಿದೆ ಎಂದು ಆರೋಪಿಸಿದ್ದರು.
ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ರಾಜ್ಯವನ್ನು ಗಲಭೆ ಮುಕ್ತಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ನಿಶಾದ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಂಜಯ್ ನಿಶಾದ್ 2022ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ನಂತರ ಮೀನುಗಾರಿಕೆ ಸಚಿವರಾಗಿ ಆಯ್ಕೆಯಾಗಿದ್ದಾರೆ.