ಪ್ರಜ್ವಲ್ ರೇವಣ್ಣ ವಿಡಿಯೊಗಳ ಮಾರ್ಫಿಂಗ್ ಆರೋಪ; ಇಬ್ಬರಿಗೆ ನೋಟಿಸ್ ಜಾರಿ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಪಟ್ಟ ವಿಡಿಯೊಗಳನ್ನು ಮಾರ್ಫಿಂಗ್ ಮಾಡಿ ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿ ಹಂಚಿಕೆ ಮಾಡಿದ್ದ ಆರೋಪದಡಿ ಹಾಸನ ಸೆನ್‌ (ಸೈಬರ್ ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಕೈಗೆತ್ತಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್–ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯ ಚುನಾವಣೆ ಏಜೆಂಟ್‌ ಆಗಿರುವ ಎಂ.ಜಿ. ಪೂರ್ಣಚಂದ್ರ ತೇಜಸ್ವಿ ಅವರು ವಿಡಿಯೊ ಮಾರ್ಫಿಂಗ್ ಬಗ್ಗೆ ಏಪ್ರಿಲ್ 23ರಂದು ದೂರು ನೀಡಿದ್ದರು. ಪ್ರಜ್ವಲ್‌ ಕಾರಿನ ಚಾಲಕನಾಗಿದ್ದ ಹೊಳೆನರಸೀಪುರ ತಾಲ್ಲೂಕಿನ ಕಡವಿನ ಕೋಟೆಯ ಕಾರ್ತಿಕ್, ಪುಟ್ಟರಾಜು, ಕ್ವಾಲಿಟಿ ಬಾರ್ ಶರತ್, ನವೀನ್‌ ಗೌಡ ಹಾಗೂ ಚೇತನ್‌ ಗೌಡ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿತ್ತು.

ಇದನ್ನು ಓದಿ : ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್‌ ಮಾಕನೂರು ಬಂಧನ

ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪದಡಿ ಪ್ರಜ್ವಲ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು, ಇದೀಗ ಹಾಸನ ಸೆನ್ ಠಾಣೆ ಪ್ರಕರಣದಲ್ಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ, ಆರೋಪಿ ಕಾರ್ತಿಕ್‌ ಹಾಗೂ ವಿಡಿಯೊಗೆ ಸಂಬಂಧಪಟ್ಟಂತೆ ಹಲವೆಡೆ ಮಾಹಿತಿ ಹಂಚಿಕೊಳ್ಳುತ್ತಿರುವ ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ನೋಟಿಸ್ ನೀಡಿದ್ದಾರೆ.

‘ಪ್ರಕರಣದ ಆರೋಪಿಗಳು, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕಾರ್ಯಕರ್ತರ ಜೊತೆ ಸೇರಿಕೊಂಡು ಸಂಚು ರೂಪಿಸಿ ವಿಡಿಯೊ ಹರಿಬಿಟ್ಟಿರುವ ಮಾಹಿತಿ ಇದೆ. ಹೀಗಾಗಿ, ಆರೋಪಿಗಳು ಹಾಗೂ ವಿಡಿಯೊಗೆ ಸಂಬಂಧಪಟ್ಟಂತೆ ಎಲ್ಲರ ವಿಚಾರಣೆ ಅಗತ್ಯವಿದೆ’ ಎಂದು ಮೂಲಗಳು ಹೇಳಿವೆ.

‘ನೋಟಿಸ್ ತಲುಪಿದ 24 ಗಂಟೆಯೊಳಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ವಿಚಾರಣೆ ನಡೆಸಿದ ಬಳಿಕ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿವೆ. ‘ಪ್ರಜ್ವಲ್ ಅವರದ್ದು ಎನ್ನಲಾದ ವಿಡಿಯೊಗಳ ಅಸಲಿ ಪ್ರತಿ ಸಿಗಬೇಕಿದೆ. ಪ್ರಜ್ವಲ್ ಸಹ ತಲೆಮರೆಸಿಕೊಂಡಿದ್ದು, ಅವರು ಸಿಕ್ಕ ಬಳಿಕವೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಹೇಳಿವೆ.

ಇದನ್ನು ನೋಡಿ : ಪೆನ್ ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ ಎಂದ ಬಿಜೆಪಿ, ಇದು ಬಿಜೆಪಿ – ಜೆಡಿಎಸ್ ಷಡ್ಯಂತ್ರ ಎಂದ ಡಿಕೆಶಿ

Donate Janashakthi Media

Leave a Reply

Your email address will not be published. Required fields are marked *