ರಷ್ಯಾದ 5000ಕ್ಕೂ ಅಧಿಕ ಯೋಧರನ್ನು ಕೊಲ್ಲಲಾಗಿದೆ ಎಂದ ಉಕ್ರೇನ್ ರಾಯಭಾರಿಯಿಂದ ಮಾಹಿತಿ

ಕೀವ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು, ಯುದ್ಧ ಆರಂಭವಾದ ಮೊದಲ ನಾಲ್ಕು ದಿನಗಳಲ್ಲಿ ರಷ್ಯಾದ 5,300 ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ರಕ್ಷಣಾ ಸಚಿವಾಲಯ ಮಾಹಿತಿ ಬಹಿರಂಗ ಪಡಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ಅಧಿಕಾರಿಗಳು, ‘ಅಂದಾಜು 5,300 ರಷ್ಯಾದ ಸೈನಿಕರನ್ನು ಹತ್ಯೆ ಮಾಡಲಾಗಿದೆ ಮತ್ತು ರಷ್ಯಾದ 191 ಟ್ಯಾಂಕ್‌ಗಳು, 29 ಫೈಟರ್ ವಿಮಾನಗಳು, 29 ಹೆಲಿಕಾಪ್ಟರ್‌ಗಳು ಮತ್ತು 816 ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳನ್ನು ಉಕ್ರೇನ್ ಪಡೆಗಳು ನಾಶ ಮಾಡಿವೆ’ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಭಾರತದಲ್ಲಿನ ಉಕ್ರೇನ್ ರಾಯಭಾರಿ ಡಾ. ಇಗೊರ್ ಪೊಲಿಖಾ ಅವರು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಸಮಯದಲ್ಲಿ ನಮ್ಮ ದೇಶದ 16 ಮಕ್ಕಳು ಸಾವನ್ನಪ್ಪಿದ್ದಾರೆ. ವಿವಿಧ ದೇಶಗಳ ನಿರ್ಬಂಧಗಳಿಂದಾಗಿ ರಷ್ಯಾದ ಆರ್ಥಿಕತೆಯು ಪ್ರತಿದಿನವೂ ದುರ್ಬಲಗೊಳ್ಳುತ್ತಿದೆ. ಇದುವರೆಗೆ ಸುಮಾರು 5,300 ರಷ್ಯಾದ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಉಕ್ರೇನಿಯನ್ ನಿರಾಶ್ರಿತರ ಸಂಖ್ಯೆ 4 ಲಕ್ಷವನ್ನು ಮೀರಿದೆ. ಯುದ್ಧವನ್ನು ನಿಲ್ಲಿಸದಿದ್ದರೆ ಈ ಸಂಖ್ಯೆ 7 ಮಿಲಿಯನ್ ದಾಟಬಹುದು. ಗಡಿಯಲ್ಲಿ ಬಹಳ ಉದ್ದವಾದ ಸರತಿ ಸಾಲುಗಳಲ್ಲಿ ಉಕ್ರೇನ್‌ ಜನ ನಿಂತಿದ್ದು, ಗಡಿ ದಾಟಲು ಪ್ರಯತ್ನಿಸುತ್ತಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ ಇಗೊರ್ ಪೊಲಿಖಾ, ಭಾರತೀಯ ಅಧಿಕಾರಿಗಳೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ.

ಸಂಘರ್ಷದ ಆರಂಭದಲ್ಲಿ ರಷ್ಯಾ ಭಾರಿ ಸಾವುನೋವುಗಳನ್ನು ಕಂಡಿದೆ ಎಂದು ಇಂಗ್ಲೆಂಡ್ ರಕ್ಷಣಾ ಸಚಿವಾಲಯವು ನಂಬಿದ್ದರೂ ಕೂಡ, ಈ ಕುರಿತು ಬಿಬಿಸಿ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.

‘ಸಾವುನೋವುಗಳ ಕುರಿತು ಅಧಿಕಾರಿಗಳು ನಿಖರವಾದ ಅಂಕಿಅಂಶವನ್ನು ನೀಡದಿದ್ದರೂ ಕೂಡ, ತನ್ನ ಪಡೆಗಳು ನಷ್ಟವನ್ನು ಅನುಭವಿಸಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಭಾನುವಾರದಂದು ಒಪ್ಪಿಕೊಂಡಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ’ ಎಂದು ಬಿಬಿಸಿ ವರದಿ ಮಾಡಿದೆ.

ಈ ಮಧ್ಯೆ, ರಷ್ಯಾದ ಆಕ್ರಮಣ ಆರಂಭವಾದ ಮೊಲದ ನಾಲ್ಕು ದಿನಗಳಲ್ಲಿ ಉಕ್ರೇನ್‌ನ 94 ನಾಗರಿಕರು ಮೃತಪಟ್ಟು, 354 ಜನ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮೇಲ್ವಿಚಾರಣಾ ತಂಡ ಸೋಮವಾರ ಖಚಿತಪಡಿಸಿದೆ.

ರಷ್ಯಾದ ದಾಳಿಯು ಉಕ್ರೇನ್‌ನಲ್ಲಿ ಮಾನವೀಯತೆಯ ಬಹುದೊಡ್ಡ ಬಿಕ್ಕಟ್ಟನ್ನು ಉಂಟುಮಾಡಲಿದೆ. ನಾಗರಿಕರಿಗೆ ಸಂಬಂಧಿಸಿದ ಸಾವುನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ರಷ್ಯಾದ ವಿಮಾನಗಳಿಗಾಗಿ ಯುರೋಪಿನ ವಾಯುಪ್ರದೇಶವನ್ನು ಭಾನುವಾರ ಮುಚ್ಚಲಾಗಿದೆ. ಆ ದೇಶದ ಆರ್ಥಿಕತೆಯು ಪ್ರತಿದಿನ ದುರ್ಬಲಗೊಳ್ಳುತ್ತಿದೆ. ಎಲ್ಲಾ ವಿದೇಶಿ ಪಾಲುದಾರ ರಾಷ್ಟ್ರಗಳು ಯುದ್ಧ ನಿಲ್ಲಿಸಲು ವ್ಲಾಡಿಮಿರ್ ಪುಟಿನ್ ಮೇಲೆ ಒತ್ತಡ ಹೇರಬೇಕು ಕೇಳಿಬರುತ್ತಿವೆ.

Donate Janashakthi Media

Leave a Reply

Your email address will not be published. Required fields are marked *