ಗುಣಮಟ್ಟದ ಊಟ ಕೊಡಿ ಎಂದು ಕೇಳಿದ್ದಕ್ಕೆ, ಮೂವರು ವಿದ್ಯಾರ್ಥಿಗಳನ್ನು ಹೊರ ಹಾಕಿದ ವಾರ್ಡನ್‌

ತುಮಕೂರು: ತಾಲ್ಲೂಕಿನ ಹೆಬ್ಬೂರು ಸಮೀಪದ ನರಸಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೂವರು ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲಾಗಿದೆ.

ಹಾಸ್ಟೆಲ್‌ನಲ್ಲಿ ಸರಿಯಾಗಿ ಊಟ ನೀಡದಿರುವುದು, ಇತರ ಸಮಸ್ಯೆಗಳನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಹಿಂಸೆ ನೀಡಿ ಹೊರಗೆ ಕಳುಹಿಸಲಾಗಿದೆ. ದಾರಿ ಕಾಣದ ಮಕ್ಕಳು ನಾಗವಲ್ಲಿ ಸಮೀಪದ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಇದನ್ನು ಗಮನಿಸಿದ ಪೊಲೀಸರು ವಿಚಾರಣೆ ಮಾಡಿದಾಗ ಹಾಸ್ಟೆಲ್‌ನಿಂದ ಹೊರಗೆ ಕಳುಹಿಸಿರುವುದು ಬೆಳಕಿಗೆ ಬಂದಿದೆ. ನಂತರ ಆ ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸಿಕೊಡಲಾಗಿತ್ತು.

ಹಾಸ್ಟೆಲ್‌ಗೆ ಬಂದ ವಿದ್ಯಾರ್ಥಿಗಳನ್ನು ಮತ್ತೆ ವಾಪಸ್‌ ಮನೆಗಳಿಗೆ ಕಳುಹಿಸಲಾಗಿದೆ. ಒಂದು ವಾರದ ಹಿಂದೆಯೇ ಹಾಸ್ಟೆಲ್‌ನಿಂದ ಹೊರಗೆ ಕಳುಹಿಸಲಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೆ ಸೇರಿಸಿಕೊಳ್ಳುವಂತೆ ಪೋಷಕರು ಮಾಡಿಕೊಂಡ ಮನವಿಗೂ ಸ್ಪಂದಿಸಿಲ್ಲ.

‘ನಿಮ್ಮ ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಇಟ್ಟುಕೊಳ್ಳುವುದಿಲ್ಲ. ಎಲ್ಲಿಗಾದರೂ ಕರೆದುಕೊಂಡು ಹೋಗಿ ಎಂದು ಪ್ರಾಂಶಿಪಾಲರು ಮತ್ತು ವಾರ್ಡನ್‌ ಹೇಳುತ್ತಿದ್ದಾರೆ,  ಮಕ್ಕಳು ಎಸ್ಸೆಸ್ಸೆಲ್ಸಿ ಓದುತ್ತಿದ್ದು, ಶಿಕ್ಷಣ ಸಿಗದಂತಾಗಿದೆ’ ಎಂದು ವಿದ್ಯಾರ್ಥಿಯ ಪೋಷಕರೊಬ್ಬರು ಅಳಲು ತೋಡಿಕೊಂಡರು.

ಸಾಮಾನ್ಯವಾಗಿ ವಸತಿ ಶಾಲೆಗಳಲ್ಲಿ ಗುಣ ಮಟ್ಟದ ಊಟದ ಕೊರತೆ ಇದ್ದೆ ಇದೆ. ಗುಣ ಮಟ್ಟದ ಊಟ ನೀಡದಿರುವುದು ಸರಕಾರವೇ ಹೊಣೆಯಾಗಿದೆ. ಇನ್ನೂ ಬಂದ ಊಟವನ್ನು ಸರಿಯಾಗಿ ವಿತರಿಸಿದೆ ಬಂದ ಆಹಾರ ಧಾನ್ಯಗಳಲ್ಲಿ ಇಷ್ಟು ಪರ್ಸೆಂಟೇಜ್‌ ಅಂತಾ ರಾಜಕಾರಣಿಗಳ ಮನೆ ಬಾಗಿಲಿಗೆ ತಲುಪಿಸುವ ಕೆಲಸಗಳು ಇಲಾಖೆಯಿಂದ ನಡೆಯುತ್ತಿವೆ. ಮಕ್ಕಳ ಅನ್ನವನ್ನು ಕಿತ್ತು ತಿನ್ನುವ ಬುದ್ದಿ ಇರದಿದ್ದರೆ, ಗುಣ ಮಟ್ಟದ ಊಟವನ್ನು ನೀಡಿದರೆ ಮಕ್ಕಳು ಯಾಕೆ ಪ್ರಶ್ನಿಸುತ್ತಾರೆ. ಊಟ ಸರಿಯಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಆ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ಬಿಂಬಿಸಿ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಸಿ ಹೊರ ದಬ್ಬುವ ಕ್ರಮ ಸರಿಯೇ? ಇನ್ನಾದರೂ ಸರಕಾರ, ಇಲಾಖೆ, ಮತ್ತು ವಾರ್ಡನ್‌ಗಳು ವಿದ್ಯಾರ್ಥಿಗಳ ಜೊತೆ ಸೌಹಾರ್ದಯುತವಾಗಿ ವರ್ತಿಸಬೇಕಿದೆ. ವಸತಿ ಶಾಲೆಗಳು ಎಂದು ಜ್ಞಾನಾರ್ಜನೆಯ ತಾಣ ಎಂಬುದನ್ನು ಸೃಷ್ಟಿಸುವ ಜವಬ್ದಾರಿ ವಾರ್ಡನ್‌, ಪ್ರಂಶಿಪಾಲರು, ಶಿಕ್ಷಕರು ಮತ್ತು ಸರಕಾರದ ಮೇಲಿದೆ.

Donate Janashakthi Media

Leave a Reply

Your email address will not be published. Required fields are marked *