ಮಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಅನೈತಿಕ ಪೊಲೀಸ್ ಗಿರಿ. ಪೊಲೀಸರ ಎದುರಿನಲ್ಲಿಯೇ ನಡೆಯುತ್ತಿದೆ ಸಂಘಪರಿವಾರದ ಗೂಂಡಾಗಿರಿ, ಆರೋಪಿಗಳ ಬಗ್ಗೆ ಸರಕಾರಕ್ಕೆ ಸಾಫ್ಟ್ ಕಾರ್ನ್‌ರ್ ಯಾಕೆ ಇದೆ? ಸಂಘಪರಿವಾರದವರ ಗುಂಡಾಗಿರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದನ್ನು ತೋರಿಸುತ್ತಿದೆಯಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಮಂಗಳೂರಿನಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿ ಸದ್ದು ಮಾಡಿದೆ. ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆಯನ್ನು ನಡೆಸಿದ್ದಾರೆ. ಮಂಗಳೂರಿನ ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಕ್ರಿಶ್ಚಿಯನ್ -ಮುಸ್ಲಿಂ ಯುವಕ-ಯುವತಿಯರು ಸೇರಿ ಒಟ್ಟು 6 ಜನ ಸ್ನೇಹಿತರು ರವಿವಾರ ಸಾಯಂಕಾಲ ಮಲ್ಪೆ ಬೀಚ್ ಗೆ ಹೋಗಿ ವಾಪಸ್ ಬರುವಾಗ ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ಭಜರಂಗ ದಳ ಕಾರ್ಯಕರ್ತರು ಕಾರನ್ನು ತಡೆದು ಹಲ್ಲೆಯನ್ನು ನಡೆಸಿದ್ದಾರೆ. ಸ್ಥಳದಲ್ಲೆ ಇದ್ದ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆ ನಡೆಸದಂತೆ ಮನವಿ ಮಾಡಿದ್ರೂ ಅದಕ್ಕೆ ಸ್ಪಂದಿಸದೆ ಹಲ್ಲೆಯನ್ನು ನಡೆಸಲು ಮುಂದಾಗುತ್ತಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಸಧ್ಯ ಆ ವಿಡಿಯೋ ವೈರಲ್ ಆಗಿದ್ದು, ಬಜರಂಗದಳದ ಕಾರ್ಯಕರ್ತರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ 5 ಮಂದಿಯನ್ನು ಬಂಧಿಸಲಾಗಿದೆ. ಭಜರಂಗದಳ ಜಿಲ್ಲಾ ಮುಖಂಡರಾದ ಅರ್ಶಿತ್, ಪ್ರೀತಂ ಶೆಟ್ಟಿ, ಶ್ರೀನಿವಾಸ್, ರಾಕೇಶ್ ಮತ್ತು ಅಭಿಷೇಕ್ ಅವರನ್ನು ಬಂಧಿಸಿ ಸೆಕ್ಷನ್ 341, 323 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಬಂದಿತರನ್ನು ವಿಚಾರಣೆ ನಡೆಸಿ ಕೆಲವೇ ಘಂಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಸಾಕಷ್ಟು ಪ್ರಶ್ನೆಯನ್ನು ಹುಟ್ಟಿಹಾಕಿದೆ. ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿಯೇ ಹಲ್ಲೆ ನಡೆಸಿರುವ ಸಾಕ್ಷಿ ಇರುವಾಗ ಇವರನ್ನು ಠಾಣೆಯಲ್ಲೆ ಜಾಮೀನು ಪಡೆದೆ ಬಿಟ್ಟಿದ್ದು ಯಾಕೆ? ಪೊಲೀಸರು ಈ ವಿಚಾರದಲ್ಲಿ ಸಾಫ್ಟ್ ಕಾರ್ನರ್ ತೋರಿದಂತೆ ಕಾಣುತ್ತಿದೆ. ಯಾಕೆ ಅಂದ್ರೆ ಅವರ ಮೇಲೆ ಹಾಕಿರುವ ಸೆಕ್ಷನ್ ಗಳನ್ನು ಗಮನಿಸಿದರೆ ಅದು ನಮಗೆ ಗೊತ್ತಾಗುತ್ತದೆ. ದುರ್ಭಲವಾದ ಸೆಕ್ಷನ್‌ಗಳನ್ನು ಹಾಕಿ ಬಿಡುಗಡೆ ಮಾಡಿದ್ದರೆ. ಪೊಲೀಸರ ಈ ಕ್ರಮ ಅಪರಾಧಿಗಳು ಇನ್ನಷ್ಟು ಬಲಗೊಳ್ಳುವದಕ್ಕೆ ಕಾರಣವಾಗುತ್ತದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪವಾಗಿದೆ.
ಇದನ್ನೂ ಓದಿ : ವೈದ್ಯ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಬೆಂಬಲಿಗರಿಂದ ದಾಂಧಲೆ
ಇದೇ ವರ್ಷ ಆಗಸ್ಟ್ 27 ರಂದು ಅನೈತಿಕ ಪೊಲೀಸ್‌ಗಿರಿ ನಡೆದಿತ್ತು, ಮಂಗಳೂರಿನ ಕಾಲೇಜೊಂದರ ಅನ್ಯ ಕೋಮಿನ ವಿದ್ಯಾರ್ಥಿಗಳ ಜೊತೆ, ಇನ್ನೊಂದು ಕೋಮಿನ ವಿದ್ಯಾರ್ಥಿನಿಯರು ಗುಡ್ಡದಲ್ಲಿರುವ ದೇವಾಲಯಕ್ಕೆ ಸಂಜೆಯ ಹೊತ್ತು ಪ್ರವಾಸಕ್ಕೆಂದು ಹೋಗಿದ್ದರು. ಈ ವೇಳೆ ವಿದ್ಯಾರ್ಥಿಗಳನ್ನು ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ವಿದ್ಯಾರ್ಥಿಗಳನ್ನು ತಡೆದು ಅನ್ಯ ಕೋಮಿನ ಯುವಕರ ಮೇಲೆ ಹಲ್ಲೆ ನಡೆಸಿದ್ದಾರು. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು. ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ಮಂಗಳೂರಿಗರನ್ನು ಮತ್ತು ಮಂಗಳೂರಿಗೆ ಪ್ರವಾಸಕ್ಕೆ ಹೋಗುವವರಿಗೆ ಆತಂಕವನ್ನು ತಂದೊಡ್ಡಿವೆ.
ಈ ಘಟನೆಯನ್ನು ವಿಪಕ್ಷ ನಾಯಕ ಸಿದ್ಧರಾಮಯ್ಯ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದಾರೆ. “ಸನ್ಮಾನ್ಯ ಮುಖ್ಯಮಂತ್ರಿ ಅವರೇ ಮಂಗಳೂರಿನಲ್ಲಿ ಇರುವುದು ಬಿಜೆಪಿ ಸರ್ಕಾರನಾ?, ತಾಲಿಬಾನ್‌ಗಳದ್ದಾ?” ಎಂದು ಪ್ರಶ್ನೆ ಮಾಡಿದ್ದಾರೆ. ಸರಕಾರ ಯಾಕೆ ಅನೈತಿಕ ಪೊಲೀಸ್ ಗಿರಿಯನ್ನು ನಿಯಂತ್ರಿಸುತ್ತಿಲ್ಲ ಎಂದು ಅಪಾದನೆ ಮಾಡಿದ್ದಾರೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯೆ ನೀಡಿದ್ದು, ಗೂಂಡಾಧಾರಿಗಳ ಹಿಂದೆ ಸುರತ್ಕಲ್ ಶಾಸಕ ಭರತ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲ್ ಬೆಂಬಲವಾಗಿ ನಿಂತಿದ್ದಾರೆ. ಪೊಲೀಸರ ಕೈ ಕಟ್ಟಿ ಹಾಕಿ, ಮತೀಯ ಕ್ರಿಮಿನಲ್ ಗಳನ್ನು ವಿಜೃಂಭಿಸಲು ಅವಕಾಶ ಮಾಡಿಕೊಡುವುದು ಕರಾವಳಿ ಜಿಲ್ಲೆಯ ದುರಂತವಾಗಿದೆ. ಎಂದು ಮುನೀರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಯನ್ನು ಗಮನಿಸುತ್ತಿದ್ದರೆ, ಮಂಗಳೂರಿನಲ್ಲಿ ಸಂಘಪರಿವಾರದವರ ಪುಂಡಾಟಿಕೆ ಹೆಚ್ಚಾಗುತ್ತಿರುವುದನ್ನು ತೋರಿಸುತ್ತಿದೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಅನೈತಿಕ ಪೊಲೀಸ್‌ಗಿರಿ, ಗೂಂಡಾಗಿರಿಯನ್ನು ತಡೆಗಟ್ಟಲು ಮುಂದಾಗಬೇಕಿದೆ. ಸೌಹಾರ್ಧ ಕರ್ನಾಟಕವನ್ನು ಉಳಿಸಲು ಮುಂದಾಗಬೇಕಿದೆ.