ಮೂಲ-ವಲಸಿಗರ ಗುದ್ದಾಟಕ್ಕೆ ಬಲಿಯಾಗ್ತಾರಾ ಬಿಎಸ್‍ವೈ?

–       ಲಿಂಗಾಯತರ ಆದ್ಯತೆ, ಮಠಗಳ ಆರ್ಶೀವಾದ ಕಾಪಾಡುತ್ತಾ?

 

ಬೆಂಗಳೂರು:  ರಾಜ್ಯ ಬಿಜೆಪಿಯೊಳಗೆ ಸಚಿವ ಸ್ಥಾನ ಪಡೆಯಲು ವಲಸಿಗರು ಮತ್ತು ಮೂಲ ಬಿಜೆಪಿಗರ ನಡುವೆ ನಡೆಯುತತ್ಇರುವ ಮುಸುಕಿನ ಗುದ್ದಾಟದಲ್ಲಿ ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪನವರೇ ಬಲಿಯಾಗಬಹುದಾದ ನಾಟಕೀಯ ಘಟನೆಗಳು ನಡೆಯುತ್ತಿವೆ.

ಬಿಜೆಪಿ ರಾಷ್ಟ್ರೀಯ  ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ  ಸಿ.ಟಿ. ರವಿ ಅವರು ದೆಹಲಿಯಲ್ಲಿ ಆರಂಭಿಸಿದ ಕಚೇರಿ ಉದ್ಘಾಟನೆಯಿಂದ ಹಿಡಿದು ಬಿಎಸ್​ವೈ ಸಂಪುಟ ಸಭೆಯವರೆಗೆ ಮತ್ತು ಅದಕ್ಕೂ ಮೊದಲು ಕಾಂಗ್ರೆಸ್‍-ಜೆಡಿಎಸ್‍ ನಿಂದ ಆಪರೇಷನ್‍ ಕಮಲದ ಮೂಲಕ ಬಿಜೆಪಿ ಪಾಲಾದ ಕೆಲ ಸಚಿವಾಕಾಂಕ್ಷಿಗಳ ಸಭೆವರೆಗೆ ನಡೆದ ಘಟನೆಗಳು ಯಡಿಯೂರಪ್ಪ ಅವರ ಮೇಲೆ ಇರುವ ಒತ್ತಡಗಳಿಗೆ ಸಾಕ್ಷಿಯಾಗಿದೆ.  ಈ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ  ಸಮುದಾಯವನ್ನು ನಿಗಮ ಮತ್ತು ಹಿಂದುಳಿದ ಪಟ್ಟಿಗೆ ಸೇರಿಸುವುದು ಮತ್ತು ಮಠಗಳ ಬೆಂಬಲ ಕ್ರೋಢೀಕರಿಸಲು ಅನುದಾನ ನೀಡಿ ಬಿಎಸ್‍ವೈ ಪರವಾಗಿ ಲಾಬಿ ಮಾಡಿಸುವುದು ಯಡಿಯೂರಪ್ಪ ಟೀಂನ ಉದ್ದೇಶ ಸಫಲವಾಗುತ್ತಾ ಅನ್ನುವುದು ಕುತೂಹಲ ಮೂಡಿಸಿದೆ.

ನೋ ಎಂದ ಹೈಕಮಾಂಡ್‍  : ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನು ಅಧಿಕೃತವಾಗಿ ಪ್ರಕಟಿಸುವ ಇರಾದೆಯಲ್ಲಿದ್ದ ಸಿಎಂ ಯಡಿಯೂರಪ್ಪ ಕೊನೆ ಕ್ಷಣದಲ್ಲಿ ಹೈಕಮಾಂಡ್ ಸೂಚನೆಗೆ ಬಗ್ಗಿ ಪ್ಲಾನ್ ಕೈಬಿಟ್ಟಿದ್ದಾರೆ.  ಸಚಿವ ಸಂಪುಟ ಸಭೆಯಲ್ಲಿ ಅದರ ಚರ್ಚೆಯೂ ಆಗಲಿಲ್ಲ. ಹಾಗೆಯೇ, ಸಂಪುಟ ವಿಸ್ತರಣೆ ವಿಚಾರವೂ ಸಭೆಯಲ್ಲಿ ಸದ್ದಾಗಲಿಲ್ಲ. ಈ ಬೆಳವಣಿಗೆ ಮಧ್ಯೆ ಸಂಪುಟ ಸಭೆ ಬದಲು ಸಿ.ಟಿ. ರವಿ ಕಚೇರಿಯಲ್ಲಿ ಹಿರಿಯ ನಾಯಕರು ಸೇರಿದ್ದು ಒಂದು ಕೌತುಕವಾದರೆ, ನಗರದಲ್ಲಿ ವಲಸಿಗರು ಸೇರಿ ನಡೆಸಿದ ಸಭೆ ಬಹಳ ಕುತೂಹಲ ಮೂಡಿಸಿತು. ಅಸಮಾಧಾನಿತ ವಲಸಿಗರನ್ನು ಓಲೈಸಲು ಎಸ್.ಟಿ. ಸೋಮಶೇಖರ್ ಕರೆದಿದ್ದ ಈ ಮಿತ್ರಮಂಡಳಿ ಸಭೆಯೂ ನಿರೀಕ್ಷಿತ ಫಲ ನೀಡಿಲ್ಲ.

ಬಾಂಬೆ ಟೀನಂನಲ್ಲಿ ಅಪಸ್ವರ:  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ನಿಲ್ಲುವಂತೆ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ಸೆಟೆದು ನಿಲ್ಲುವಂತೆ ಅಸಮಾಧಾನಿತ ವಲಸಿಗರ ಮನವೊಲಿಸಲು ಎಸ್ ಟಿ ಸೋಮಶೇಖರ್ ನೇತೃತ್ವದಲ್ಲಿ ನಡೆದ ಸಭೆ ಫ್ಲಾಪ್ ಆಗಿದೆ. ಸಚಿವ ಸ್ಥಾನ ಸಿಗದೇ ಭುಸುಗುಡುತ್ತಿರುವ ಎಂಟಿಬಿ ನಾಗರಾಜ್, ಆರ್ ಶಂಕರ್ ಮತ್ತು ಹೆಚ್ ವಿಶ್ವನಾಥ್ ಅವರು ಯಡಿಯೂರಪ್ಪ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರ ಮೇಲೂ ಮುನಿಸು ತೋರ್ಪಡಿಸಿದರೆನ್ನಲಾಗಿದೆ.

 ನಾಲ್ಕೂವರೆ ತಿಂಗಳಿಂದ ಮಂತ್ರಿ ಮಾಡುತ್ತೇವೆ ಎಂದು ಹೇಳಿಕೊಂಡೇ ಬರುತ್ತಿದ್ಧಾರೆ. ಯಡಿಯೂರಪ್ಪ ಅವರನ್ನು ಭೇಟಿ ಆದಾಗೆಲ್ಲಾ ನಾಳೆ ನಾಡಿದ್ದು ಆಗೇ ಬಿಡುತ್ತೆ ಎಂದು ಸಾಗಹಾಕುತ್ತಲೇ ಇದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದು ನಮ್ಮಿಂದಲೇ. ನಾವು ಮೂವರನ್ನು ಅವರು ಮೊದಲು ಮಂತ್ರಿ ಮಾಡಲಿ. ಆಮೇಲೆ ಬೇಕಾದರೆ ಸಿ.ಪಿ. ಯೋಗೇಶ್ವರ್ ಅವರನ್ನೋ ಅಥವಾ ಯಾರನ್ನಾದರೂ ಬೇಕಾದರೆ ಸಂಪುಟಕ್ಕೆ ಸೇರಿಸಿಕೊಳ್ಳಲಿ. ಮುಖ್ಯಮಂತ್ರಿಗಳು ನಮಗೆ ಕೊಟ್ಟ ಮಾತಿನಿಂತೆ ನಡೆದುಕೊಳ್ಳುತ್ತಿಲ್ಲ. ಇನ್ನಾದರೂ ಅವರು ನಮ್ಮನ್ನು ಕೂಡಲೇ ಮಂತ್ರಿ ಮಾಡಿ ತಮ್ಮ ಮಾತು ಉಳಿಸಿಕೊಳ್ಳಬೇಕು ಎಂದು ಎಂಟಿಬಿ ನಾಗರಾಜ್, ಹೆಚ್ ವಿಶ್ವನಾಥ್ ಮತ್ತು ಆರ್ ಶಂಕರ್ ಅವರು ಈ ಸಭೆಯಲ್ಲಿ ಬಲವಾಗಿ ಒತ್ತಾಯಿಸಿದ್ದು ತಿಳಿದುಬಂದಿದೆ.

ಸಭೆಯಲ್ಲಿದ್ದ ಇತರ ವಲಸಿಗರೂ ಕೂಡ ಈ ಮೂವರ ಒತ್ತಾಯಕ್ಕೆ ಧ್ವನಿಗೂಡಿಸಿದ್ದಾರೆ. ಬಿಜೆಪಿಯನ್ನು ನಂಬಿ ಬಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ. ನಮ್ಮೊಂದಿಗೆ ಬಂದಿರುವ ಎಲ್ಲರಿಗೂ ಸೂಕ್ತ ಸ್ಥಾನಮಾನ ಸಿಗಬೇಕು ಎಂಬುದು ಎಸ್.ಟಿ. ಸೋಮಶೇಖರ್ ಕರೆದಿದ್ದ ಈ ಸಭೆಯಲ್ಲಿ ಕೇಳಿ ಬಂದ ಒಮ್ಮತದ ಮಾತಾಗಿತ್ತು. ಹಾಗೆಯೇ, ಎಲ್ಲರೂ ಒಗ್ಗಟ್ಟಿನಿಂದ ಮುಖ್ಯಮಂತ್ರಿಗಳನ್ನ ಭೇಟಿಯಾಗಿ ಒತ್ತಡ ಹಾಕಲೂ ನಿರ್ಧರಿಸಲಾಯಿತು ಎಂದು ಹೇಳಲಾಗುತ್ತಿದೆ.

 ಬೆಳಗಾವಿ ಸಾಹುಕಾರ್ ಬಗ್ಗೆಯೂ ಅಸಮಾಧಾನ: ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಸಿಡಿದು ಬಂದ ಗುಂಪಿನ ಮುಂಚೂಣಿ ನಾಯಕರಾಗಿದ್ದ ರಮೇಶ್ ಜಾರಕಿಹೊಳಿ ಬಗ್ಗೆಯೂ  ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅವರೊಂದಿಗೆ ಹೋದ ನಮ್ಮ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಎಲ್ಲರೂ ಒಟ್ಟಿಗೆ ಮಾತುಕತೆ  ನಡೆಸಿ ಬಿಜೆಪಿಗೆ ಹೋಗಿದ್ದೇವಾದರೂ ಈಗ ಅವರು ನಮ್ಮನ್ನ ಮರೆತೇಬಿಟ್ಟಿದ್ಧಾರೆ. ನಮ್ಮ ಮೂವರನ್ನ ಬಿಟ್ಟು ಸಿ.ಪಿ. ಯೋಗೇಶ್ವರ್ ಅವರನ್ನ ಮಂತ್ರಿ ಮಾಡಿ ಎಂದು ಲಾಬಿ ನಡೆಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ ಎಂದು ಸಭೆಯಲ್ಲಿದ್ದವರು ಬೇಸರ ವ್ಯಕ್ತಪಡಿಸಿದ್ದಾರೆ.

ನಿಗಮ ಮಂಡಳಿ ನೇಮಕದಲ್ಲಿ ಅತೃಪ್ತಿ:

ನಿಗಮ ಮಂಡಳಿ ನೇಮಕ ವಿಚಾರದಲ್ಲೂ ಆಪರೇಷನ್‍ ಕಮಲದ  ರೂವಾರಿಗಳು ಅಸಮಾಧಾನಗೊಂಡಿದ್ದಾರೆ. ಅದರಲ್ಲಿ ಚಾಮರಾಜನಗರ ಸಂಸದ  ವಿ.ಶ್ರೀನಿವಾಸ್‍ ಪ್ರಸಾದ್‍ ಪ್ರಮುಖರು.  ಚಾಮರಾಜನಗರ-ಮೈಸೂರು ಪ್ರವಾಸಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ಅವರ ಎದುರೇ ಶ್ರೀನಿವಾಸ್‍ ಪ್ರಸಾದ್‍ ನಿಗಮ ಮಂಡಳಿ ನೇಮಕ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸಿಎಂ ಆಗುವಾಗ ನಾವು ಬೇಕಿತ್ತು. ಸಿಎಂ ಈಗ ಆರಾಮವಾಗಿದ್ದಾರೆ. ನಮ್ಮ ದರ್ದು ಈಗಿಲ್ಲ. ಮುಂದೆ ನೋಡ್ಕೋತ್ತೀವಿ ಎಂದು ಹೇಳಿದ್ದಾರೆ.  ಶ್ರೀನಿವಾಸ್‍ಪ್ರಸಾದ್‍  ಮೈಸೂರಿನಲ್ಲಿ ಕುಳಿತು ಆಪರೇಷನ್‍ ಕಮಲ ರೂಪಿಸಿದವರು. ನಿಗಮ ಮಂಡಳಿಗಳ ನೇಮಕ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಮ್ಮ ಮಾತಿಗೆ ಚೂರೂ ಬೆಲೆ ಕೊಡುತ್ತಿಲ್ಲ. ಒಂದೂ ಮಾತು ಕೇಳುತ್ತಿಲ್ಲ. ನಮ್ಮನ್ನ ನಂಬಿಕೊಂಡು ನಮ್ಮ ಜೊತೆ ಹಲವು ಘಟಾನುಘಟಿ ನಾಯಕರೂ ಬಿಜೆಪಿಗೆ ಬಂದಿದ್ದಾರೆ. ಅವರಲ್ಲಿ ಕೆಲವರಿಗಾದರೂ ನಿಗಮ ಮಂಡಳಿಗಳಲ್ಲಿ ಅವಕಾಶ ಸಿಗಲಿಲ್ಲವೆಂದರೆ ಹೇಗೆ? ಮುಂಬರುವ  ಪಂಚಾಯತ್  ಚುನಾವಣೆಗಳಲ್ಲಿ ಒಮ್ಮನಸಿನಿಂದ ಕೆಲಸ ಮಾಡುವುದಾದರೂ  ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತ ಬಿಜೆಪಿ ನಾಯಕರು ನಾಯಕತ್ವ ಬದಲಾವಣೆ ಇಲ್ಲ ಎನ್ನುತ್ತಿದ್ದರೆ, ಇನ್ನೊಂದು ಕಡೆ ಸಿಎಂ ಸ್ಥಾನಕ್ಕೆ ಒಂದೊಂದೆ ಹೆಸರನ್ನು ತೇಲಿಬಿಡುತ್ತಿದ್ದಾರೆ. ವಿಜಯೇಂದ್ರ ರಾಜಕೀಯ ಭವಿಷ್ಯಕ್ಕಾಗಿ ಸಿಎಂ ಸ್ಥಾನ ತೊರೆಯುವಂತೆ ಯಡಿಯೂರಪ್ಪ ಅವರಿಗೆ  ಹೈಕಮಾಂಡ್‍ ಸಲಹೆ ಮಾಡಿದೆ ಎಂದು ರಾಜಕೀಯ ವಲಯದಲ್ಲಿ ಗುಸುಗುಸು ಆರಂಭವಾಗಿದೆ. ಈ ಸಲಹೆ ಬಂದ ಮೇಲೆ ಯಡಿಯೂರಪ್ಪ ರಾಜಕೀಯ ಕುರಿತ ಯಾವ ಹೇಳಿಕೆಗಳನ್ನು ಮಾಧ್ಯಮದ ಮುಂದೆ ನೀಡುತ್ತಿಲ್ಲ. ದೆಹಲಿಯ ಮೂರು  ಭೇಟಿ ನಂತರವೂ ಬರಿಕೈಯಲ್ಲಿ ಬರುತ್ತಿರುವ ಸೂಚನೆ ಎಂದರೆ ನಾಯಕತ್ವ ಬದಲಾವಣೆ ಎಂದು ಹೇಳಲಾಗುತ್ತಿದೆ.

 

 

Donate Janashakthi Media

Leave a Reply

Your email address will not be published. Required fields are marked *