ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು

ಮಲ್ಲಿಕಾರ್ಜುನ ಕಡಕೋಳ

ಮೂಡಲಪಾಯ ಯಕ್ಷಗಾನ : ಇತ್ತೀಚಿನ ಬೆಳವಣಿಗೆಗಳು ಈ ವಿಷಯ ಕುರಿತು ಮೊನ್ನೆ ಜನವರಿ ೨೪ ರಂದು ದಿನಪೂರ್ತಿ ವಿಚಾರ ಸಂಕಿರಣ ಜರುಗಿತು. ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಜರುಗಿದ ಈ ವಿಚಾರ ಸಂಕಿರಣ ಹಲವು ಮಹತ್ವದ ಸಾಂಸ್ಕೃತಿಕ ಆಯಾಮಗಳನ್ನು ಪಡೆದುಕೊಂಡಿತ್ತು. ಹಲವು ಶತಮಾನಗಳಷ್ಟು ಹಳತಾದ ಪ್ರಾಚೀನ ಕಲೆ ಮೂಡಲಪಾಯ ಬಯಲಾಟ ನಿರ್ಲಕ್ಷ್ಯಕ್ಕೀಡಾಗಿದೆ. ಅದೇ ಪಡುವಲಪಾಯದ ಕರಾವಳಿಯ ಯಕ್ಷಗಾನ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಂಡಿರುವುದು ನಾವೆಲ್ಲರೂ ಒಪ್ಪಲೇಬೇಕಾದ ಸಾಂಸ್ಕೃತಿಕ ಹೆಗ್ಗಳಿಕೆ. ಅದೊಂದು ಸಂಸ್ಕೃತಿಯ ಉದ್ಯಮದಂತೆ ಬೆಳೆದು ನಿಂತಿದೆ.

ಕರಾವಳಿ ಪ್ರದೇಶದಲ್ಲಿ ಮೂರುಸಾವಿರಕ್ಕೂ ಹೆಚ್ಚು ಯಕ್ಷಗಾನದ ವೃತ್ತಿಪರ ತಂಡಗಳಿವೆ. ಹತ್ತು ವರ್ಷಕ್ಕಾಗುವಷ್ಟು ಆಟಗಳ ಮುಂಗಡ ಆರ್ಡರ್ ಗಳು ಆ ತಂಡಗಳ ಕೈಯಲ್ಲಿ ಸಮೃದ್ಧವಾಗಿವೆ. ಇದೆಲ್ಲಾ ಕೇವಲ ಒಂದು ಶತಮಾನ ಅಂತರದ ಪವಾಡಸದೃಶ ಬೆಳವಣಿಗೆ. ಕರಾವಳಿಯ ಯಕ್ಷಗಾನಕ್ಕೆ ಅಂತಹದ್ದೊಂದು ವಿಶ್ವಮಾನ್ಯತೆ ದಕ್ಕಲು ಮತ್ತು ಬೃಹತ್ತಾಗಿ ಲೋಕಾದ್ಯಂತ ಬೆಳೆದು ರಷ್ಯಾದ ಬ್ಯಾಲೆದ ಎತ್ತರಕ್ಕೇರಲು ಕಾರಣರಾದವರು ಶಿವರಾಮ ಕಾರಂತರು ಮತ್ತು ಕರಾವಳಿಯ ಸಮಸ್ತ ವಿದ್ಯಾವಂತರು. ಕಾರಂತರ ಕಾಲದ ಅಲ್ಲಿನ ಎಲ್ಲಜನರ ಜಾತ್ಯತೀತ ನಿಲುವು ಮತ್ತು ಸಾಂಸ್ಕೃತಿಕ ಬದ್ಧತೆ. ಆದರೆ ಪ್ರಸಕ್ತ ವಿದ್ಯಮಾನಗಳೇ ಬೇರೆ. ಯಕ್ಷಗಾನಕ್ಕೂ ಕೋಮುದಳ್ಳುರಿಯ ಸೋಂಕು ತಗುಲ ತೊಡಗಿದೆಯೆಂಬ ಆತಂಕ ಕೆಲವರದು.

ಅದೇನೇ ಇರಲಿ ವರ್ತಮಾನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಕಾರ್ಕಳದ ವಿ. ಸುನಿಲಕುಮಾರವರೆಗೂ ಪ್ರಾದೇಶಿಕ ಪ್ರೀತಿ ಹರಿದು ಬಂದಿದೆ. ಅಂತೆಯೇ ಅವರು ಕಾರ್ಕಳಕ್ಕೆ ಯಕ್ಷ ರಂಗಾಯಣ ತಂದುಕೊಂಡರು. ಕೋಟಿ ಚನ್ನಯ ಥೀಮ್ ಪಾರ್ಕ್ ತಂದುಕೊಂಡರು. ಅದೊಂದು ರೀತಿಯ ಸಾಂಸ್ಕೃತಿಕ ರಾಜಕಾರಣವೆಂದರೂ ಅಡ್ಡಿಯೇನಿಲ್ಲ. ತಮ್ಮ ನೆಲದ ಅವರ ಸಾಂಸ್ಕೃತಿಕ ಪ್ರೀತಿ ನಿಜಕ್ಕೂ ಶ್ಲಾಘನೀಯ. ಘಟ್ಟದ ಈಚೆಯ ಬಯಲುಸೀಮೆಯ ಯಾವೊಬ್ಬ ರಾಜಕಾರಣಿಗೂ ಅಂತಹ ಸಾಂಸ್ಕೃತಿಕ ಬದ್ಧತೆಗಳಿಲ್ಲ. ನಮಗೆ ಸಾಂಸ್ಕೃತಿಕ ನಾಯಕತ್ವದ ತೀವ್ರ ಕೊರತೆ. ಅಂತೆಯೇ ಅವತ್ತಿನ ಸಮಾರೋಪ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಯ್. ಆರ್. ಎಸ್. ಅಧಿಕಾರಿ ಜಯರಾಮ್‌ ರಾಯಪುರ ಮಾತಾಡಿ ಬಯಲು ಸೀಮೆಯ ಈ ಎಲ್ಲ ಕೊರತೆಗಳನ್ನು ನೀಗಿಸಲು ಮಂಡ್ಯದ ಕರ್ನಾಟಕ ಸಂಘದ ಜಯಪ್ರಕಾಶ್ ಗೌಡ ಸಾಂಸ್ಕೃತಿಕ ನಾಯಕತ್ವ ವಹಿಸಿಕೊಳ್ಳಲು ಮುಂದಾಗಬೇಕೆಂಬ ಒತ್ತಾಸೆ ವ್ಯಕ್ತ ಪಡಿಸಿದರು.

ಕರಾವಳಿ ನೆಲದ ಜನರ ಯಕ್ಷಗಾನದ ಕಡುಪ್ರೀತಿಗೆ ತಾಯ್ತನದ ಒಲುಮೆ ಸಿದ್ಧಿಸಿದೆ. ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ಸರ್ವರೂ ಉಲ್ಲೇಖಿಸಿದ ಇಂತಹದೇ ಮಾತುಗಳು. ಕರಾವಳಿಯ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎರಡು ಪ್ರಭೇದಗಳ ಸಮನ್ವಯ ಪ್ರೇಮ ಮತ್ತು ಸಾಮರಸ್ಯ ನಾವೆಲ್ಲರೂ ಕಲಿಯಬೇಕಾದ ಮಾದರಿ ಪಾಠವೂ ಆಗಬೇಕಿದೆ.

ಮೂಡಲಪಾಯ, ದೊಡ್ಡಾಟ, ಅಟ್ಟದಾಟ, ತೋಂಗ, ಕೇಳಿಕೆ ಇವೆಲ್ಲವೂ ಒಂದೇ ತಾಯಿಯ ಮಕ್ಕಳ ಹೆಸರುಗಳು. ಈ ಮಕ್ಕಳ ಗುಣ ಸ್ವರೂಪಗಳಲ್ಲಿ ಅಪೂರ್ವ ಸಾಮ್ಯತೆಗಳಿವೆ. ಕಲಬುರ್ಗಿ, ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕಾರವಾರದ ಅರ್ಧಭಾಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ದೊಡ್ಡಾಟದ ಪ್ರಾದೇಶಿಕ ವಂಶವಾಹಿನಿಯಲ್ಲಿ ಸಣ್ಣ ಪುಟ್ಟ ಫರಕುಗಳು ಸಹಜ. ಹದಿನೇಳನೆಯ ಶತಮಾನದ ಆರಂಭದಲ್ಲಿ ಶಹಾಪುರದ ರಸ್ತಾಪುರ ಭೀಮಕವಿ ದೊಡ್ಡಾಟದ ಆರು ಬಯಲಾಟ ರಂಗಕೃತಿಗಳನ್ನು ರಚಿಸಿದ ದಾಖಲೆಗಳಿವೆ. ಬಹುಶಃ ಆಗ ಯಕ್ಷಗಾನದ ಅಸ್ಮಿತೆಯೇ ಇರಲಿಲ್ಲ.? ಕರಾವಳಿಯ ಇವತ್ತಿನ ಮೂರು ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಉಳಿದೆಲ್ಲವೂ ಮೂಡಲಪಾಯ ದೊಡ್ಡಾಟದ ಆಡುಂಬೊಲ. ಹೆಚ್ಚೆಂದರೆ ಹಾಡುಗಾರಿಕೆಯಲ್ಲಿ ಕಪ್ಪೆರಡು ಅಥವಾ ನಾಲ್ಕು, ಭಾಗವತ ಅರ್ಥಾತ್ ಕಥೆಗಾರ, ಮುಖವೀಣೆ ಅರ್ಥಾತ್ ಶಹನಾಯ್ ಕೂಚು ಹಾಕುವಲ್ಲೂ ಕೂದಲೆಳೆಯಷ್ಟೇ ವ್ಯತ್ಯಾಸ. ಈ ವ್ಯತ್ಯಾಸಗಳ ನಡುವೆ ಸಮನ್ವಿತ ಸಮನ್ವಯತೆಯ ಅಗತ್ಯವಿದೆ. ಅದು ಹಚ್ಚಿಟ್ಟ ಕರ್ಪೂರ. ಅಲ್ಲಿ ಇದ್ದಿಲು ಇಲ್ಲವೇ ಇಲ್ಲಣ ಹುಡುಕಲಾಗದು.

ದಕ್ಷಿಣ ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿ ‘ಮೂಡಲಪಾಯ ಯಕ್ಷಗಾನ’ ಹೆಸರಲ್ಲಿ ಅದು ಹೆಚ್ಚು ಪ್ರಚಲಿತ. ಮುಖ್ಯವಾಗಿ ಕರಾವಳಿಯ ಮೂರು ಜಿಲ್ಲೆಯ ಯಕ್ಷಗಾನಕ್ಕೆ ಅಕಾಡೆಮಿ ಸ್ಥಾಪನೆಯಾಗಿರುವುದು ಸ್ವಾಗತಾರ್ಹ. ಹಾಗೆಯೇ ಹೆಚ್ಚು ಜಿಲ್ಲೆಗಳಲ್ಲಿ ತನ್ನ ಪಾರಮ್ಯ ಮೆರೆದಿರುವ ಮೂಡಲಪಾಯ ಯಕ್ಷಗಾನಕ್ಕೆ ಅಕಾಡೆಮಿ ಸ್ಥಾಪನೆ ಆಗ ಬೇಕಿರುವುದು ನ್ಯಾಯೋಚಿತ. ಈ ಸಂದರ್ಭದಲ್ಲಿ ಹಿರಿಯ ವಿಮರ್ಶಕರಾದ ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಯಕ್ಷಕವಿ ಕೆಂಪಣ್ಣಗೌಡರ ಕುರಿತಾದ ಸಂಶೋಧನಾ ಕೃತಿ ಪ್ರಕಟಿಸುವ ಮೂಲಕ ಮೂಡಲಪಾಯದ ಪ್ರಾಚೀನತೆ ಮತ್ತು ಚಾರಿತ್ರಿಕ ಮಹತ್ವ ಪಡೆದುಕೊಂಡಿದೆ. ಹಿ. ಚಿ. ಬೋರಲಿಂಗಯ್ಯನವರು ಕರಾವಳಿ ಯಕ್ಷಗಾನದ ಮುನ್ನೋಟಗಳು ಮೂಡಲಪಾಯಕ್ಕೆ ಮಾದರಿಯಾಗಬೇಕಾದ ಸೂಕ್ಷ್ಮತೆಯ ಒಳನೋಟಗಳನ್ನು ವಿಚಾರ ಸಂಕಿರಣದ ಸಮಾರೋಪ ನುಡಿಗಳಲ್ಲಿ ಬಿಂಬಿಸಿದರು.

ವಿದ್ವಾಂಸರುಗಳಾದ ಕೆ. ಆರ್. ಸಂಧ್ಯಾರೆಡ್ಡಿ, ದೇವೇಂದ್ರ ಬೆಳಿಯೂರು, ಪಿ. ಚಂದ್ರಿಕಾ, ಸಂಧ್ಯಾ ಹೆಗಡೆ, ಚೇತನಾ, ವಿದ್ಯಾರಶ್ಮಿ ಪೆಲತ್ತಡ್ಕ, ಚಿಕ್ಕಣ್ಣ ಯಣ್ಣೆಕಟ್ಟೆ, ರವಿ ಮಡೋಡಿ, ನರಸೇಗೌಡ, ಕೆಂಪಮ್ಮ, ಗೋವಿಂದರಾಜು, ಪೋಲಿಸ್ ಪಾಟೀಲ, ಕೃಷ್ಣಮೂರ್ತಿ, ರಂಗ ಜಿಜ್ಞಾಸುಗಳಾದ ಮಲ್ಲಿಕಾರ್ಜುನ ಕಡಕೋಳ, ಸಿ.ಕೆ. ರಾಮೇಗೌಡ ಅನೇಕ ಭಾಗವತರು ಭಾಗವಹಿಸಿದ್ದರು. ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು, ಅಭಿನವ ಪ್ರಕಾಶನ, ಯಕ್ಷಗಾನ ಅಕಾಡೆಮಿ, ಕನ್ನಡ ಜನಶಕ್ತಿ ಕೇಂದ್ರಗಳ ಸಹಯೋಗದ ಈ ಕಾರ್ಯಕ್ರಮವನ್ನು ಶಶಿಧರ ಬಾರಿಘಾಟ್ ಮತ್ತು ನ. ರವಿಕುಮಾರ ನಡೆಸಿಕೊಟ್ಟರು.

ಕನ್ನಡ ಸಾಹಿತ್ಯ ಚರಿತ್ರೆಕಾರರು ಮೂಡಲಪಾಯದಂತಹ ಜನಪದ ಸಂಸ್ಕೃತಿ ಪ್ರಕಾರವನ್ನು ಕಡೆಗಣ್ಣಿನಿಂದ ಕಂಡಿದ್ದಾರೆ ಎಂಬುದನ್ನು ನರಹಳ್ಳಿಯವರು ವಿಚಾರ ಸಂಕಿರಣದ ತಮ್ಮ ಉದ್ಘಾಟನಾ ಭಾಷಣದಲ್ಲಿ ವಿವರಿಸಿದರು. ಅದೇ ಪ್ರಕಾರ ಕರ್ನಾಟಕದ ತುಂಬೆಲ್ಲಾ ವ್ಯಾಪಕವಾಗಿರುವ ತತ್ವಪದಗಳು ಮತ್ತು ವೃತ್ತಿರಂಗಭೂಮಿಗೂ ಅದೇ ಗತಿಯಾಗಿದೆ.

ನಮ್ಮ ಕಾವ್ಯ ಮೀಮಾಂಸಕರು ನಿರ್ಲಕ್ಷ್ಯ ಮಾಡಿದರೇನಂತೆ ಲೋಕ ಮೀಮಾಂಸಕರಲ್ಲಿ ಈ ಎಲ್ಲಾ ಕಲಾ ಪ್ರಕಾರಗಳು ಗುರುತರ ಸ್ಥಾನ ಗಳಿಸಿವೆ. ಪ್ರಜಾಪ್ರಭುತ್ವದಲ್ಲಿ  ಜನಮಾನಸದ ವಿಮರ್ಶೆಗೂ ಕಿಮ್ಮತ್ತಿದೆ. ಸರಕಾರ ಇಂತಹ ಕಿಮ್ಮತ್ತಿನ ನಾಲಗೆಗಳಿಗೂ ಕಿವಿಯಾಗಬೇಕು.

ಈಗ್ಗೆ ಮೂವತ್ತಾರು ವರುಷಗಳ (೧೯೮೭) ಹಿಂದೆ ಅಂದಿನ ಚಿತ್ರದುರ್ಗ ಜಿಲ್ಲೆ ದಾವಣಗೆರೆ ಬಳಿಯ ಕೊಂಡಜ್ಜಿ ಗ್ರಾಮದಲ್ಲಿ ನಾನು ಮತ್ತು ಟಿ. ಬಿ. ಸೊಲಬಕ್ಕನವರ, ಮಲ್ಲಿಕಾರ್ಜುನ ಜಾದವ ಸೇರಿ ಹತ್ತು ದಿನಗಳ ಕಾಲದ ದೊಡ್ಡಾಟೋತ್ಸವ ಏರ್ಪಡಿಸಿದ್ದೆವು. ಆಗ ನಾವು ಛಾಪಿಸಿದ ಉದ್ದನೆಯ ಆಮಂತ್ರಣವೇ ದೊಡ್ಡಾಟದ ಪ್ರತೀಕವಾಗಿತ್ತು. ಪ್ರತಿ ದಿನವೂ ದೊಡ್ಡಾಟ ಕುರಿತು ವಿಚಾರ ಸಂಕಿರಣ, ಹತ್ತು ಮಂದಿ ಹಿರಿಯ ಕಲಾವಿದರಿಗೆ ಸನ್ಮಾನ. ಸಂಜೆಗೆ ದೊಡ್ಡಾಟ ಪ್ರದರ್ಶನ. ಹಾಗೆ ಹತ್ತು ದಿನಗಳಲ್ಲಿ ಹತ್ತು ಆಟಗಳು, ನೂರು ಮಂದಿ ದೊಡ್ಡಾಟದ ಹಿರಿಯ ಕಲಾವಿದರನ್ನು ಗೌರವಿಸಿದ ಸಂತಸ ನಮ್ಮದು.

ಕೊಂಡಜ್ಜಿ ಗ್ರಾಮದಲ್ಲೇ ಐವತ್ತಕ್ಕೂ ಹೆಚ್ಚು ಮಂದಿ ಕಲಾವಿದರಿದ್ದರು. ಅದರಲ್ಲೂ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದ ಅಜ್ಜಪ್ಪನಂತೂ ಹಲವು ಅನನ್ಯತೆಗಳ ಕಲಾವಿದ. ಆತ ಸ್ತ್ರೀ ಕುಣಿತದ ಮಹಾ ಮೇಧಾವಿ, ದೊಡ್ಡಾಟದ ಕಥೆಗಾರ, ಮದ್ದಲೆಗಾರನೂ ಹೌದು. ಇಂದಿಗೂ ನಮ್ಮ ನಡುವಿನ ಕೊಂಡಜ್ಜಿ ಗ್ರಾಮದ ಪಾಪಣ್ಣ ದೊಡ್ಡಾಟದ ಅಪರೂಪದ ಪ್ರತಿಭೆ. ಇವರು ಸ್ತ್ರೀ ಪಾತ್ರದಾರಿ ಮತ್ತು ಮದ್ದಲೆ ನುಡಿಸುವಲ್ಲಿ ಪರಿಣಿತರು. ಉಡುಪಿಯ ಜಾನಪದ ಸಂಶೋಧನಾ ಕೇಂದ್ರವು ಅಜ್ಜಪ್ಪನವರನ್ನು ಕರೆದು ವಾರಕಾಲ ಪ್ರಾತ್ಯಕ್ಷಿಕೆಗಳನ್ನೇ ಏರ್ಪಡಿಸಿತ್ತು. ಆಗ ಮದ್ದಲೆ ನುಡಿಸಿದ್ದು ಪಾಪಣ್ಣ. ಕೊಂಡಜ್ಜಿಯ ದೊಡ್ಡಾಟ ಉತ್ಸವದಲ್ಲಿ ಒಂದು ರಾತ್ರಿ ಮಹಿಳಾ ತಂಡದ ರಂಗಪ್ರಯೋಗವಿತ್ತು. ನನಗೆ ನೆನಪಿರುವಂತೆ ಅದು ಕರಿಭಂಟನ ಕಾಳಗವೇ ಆಗಿತ್ತು.

ಅದಾದ ಕೆಲವು ತಿಂಗಳ ತರುವಾಯ ರಾಜ್ಯಮಟ್ಟದಲ್ಲಿ ಸೊಲಬಕ್ಕನವರ ಸಾರಥ್ಯದಲ್ಲಿ ಕರ್ನಾಟಕ ದೊಡ್ಡಾಟ ಟ್ರಸ್ಟ್ ಸ್ಥಾಪನೆ ಮತ್ತು ಅದರ ಹೋರಾಟದ ಚಟುವಟಿಕೆಗಳ ಮುಂದುವರಿಕೆ. ಮೂವತ್ತಾರು ವರ್ಷಗಳ ಹಿಂದಿನ ಶ್ರಮದ ಪ್ರತಿಫಲವೇ ಈಗ ಬಾಗಲಕೋಟೆಯಲ್ಲಿ ಸ್ಥಾಪನೆಯಾಗಿರುವ ಕರ್ನಾಟಕ ಬಯಲಾಟ ಅಕಾಡೆಮಿ. ಬಯಲಾಟ ಅಕಾಡೆಮಿ ಸ್ಥಾಪನೆಯಾಗಿ ಹತತ್ರ ಹತ್ತು ವರ್ಷಗಳು ಕಳೆಯುತ್ತಾ ಬಂದಿವೆ. ದೊಡ್ಡಾಟದ ಸ್ಥಿತಿಮಾತ್ರ ಮುಂಚೆ ಹೇಗಿತ್ತೋ ಈಗಲೂ ಹಾಗೇ ಇದೆ. ಬಯಲಾಟ ಅಕಾಡೆಮಿ ಪ್ರಶಸ್ತಿಗಳನ್ನು ನೀಡುವುದು ಬಿಟ್ಟರೆ ಬೇರಾವ ಸೃಜನಾತ್ಮಕ ಕೆಲಸಗಳನ್ನು ಮಾಡಿಲ್ಲ.

ಅಷ್ಟಕ್ಕೂ ಸರಕಾರದ ಅಕಾಡೆಮಿಗಳಿಂದ ಯಾವುದೇ ಕಲೆಯು ಅಭಿವೃದ್ಧಿ ಮತ್ತು ಔನ್ನತ್ಯ ಹೊಂದಬಲ್ಲದೆಂಬುದು ಸುಳ್ಳು ಎಂಬುದಕ್ಕೆ ಬಹುಪಾಲು ಅಕಾಡೆಮಿಗಳೇ ಸಾಕ್ಷಿ. ಅದಕ್ಕೆ ಬದಲು ಜಯಪ್ರಕಾಶ ಗೌಡರ ಸಾರಥ್ಯದ ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು ತನ್ನ ಸ್ವಂತ ಶ್ರಮದ ಮೇಲೆ ಮಾಡುತ್ತಿರುವ ಕೆಲಸಕ್ಕಿರುವ ಕಳಕಳಿ ಸರಕಾರದ ಅಕಾಡೆಮಿಗಳಿಗೆ ಖಂಡಿತಾ ಇರುವುದಿಲ್ಲ. ಆದರೆ ಬೆನ್ನ ಹಿಂದಿನ ಬೆಳಕಿನಿಂತೆ ವಿಠಲಮೂರ್ತಿ ಹಾಗೂ ಈಗಿನ ಜಯರಾಮ ರಾಯಪುರ ಅವರಂತಹ ಜನಸಂಸ್ಕೃತಿ ಪರ ಉನ್ನತ ಅಧಿಕಾರಿಗಳು ದೊರಕುವುದು ಅಪರೂಪ. ಸಮಾರೋಪದ ನಂತರ ಪುಟ್ಟಸ್ವಾಮಿ ಮತ್ತು ಅಜಯ್ ತಂಡದ “ದೇವಿಮಹಾತ್ಮೆ” ಮೂಡಲಪಾಯದ ಪ್ರಾತ್ಯಕ್ಷಿಕೆ ಇತ್ತು.

Donate Janashakthi Media

One thought on “ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು

  1. ಮಾನ್ಯರೇ,
    ನಾನು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹಳ್ಳಿಯವ. ಬಾಲ್ಯದಲ್ಲಿ ಭಜನೆ, ತತ್ವಪದ, ವಚನ, ಬಯಲಾಟ , ಬುರ್ರ ಕಥೆ ಮತ್ತು ಕಂಪನಿ ನಾಟಕ ನೋಡುತ್ತ ಬೆಳೆದೆ. ನಮ್ಮ ಹಳ್ಳಿಗಳನ್ನು ಈ ಸಾಂಸ್ಕೃತಿಕ ಪರಂಪರೆ ಬಿಟ್ಟು ನೋಡಲು ಸಾಧ್ಯವಿದ್ದಿಲ್ಲ. ಐದನೇ ತರಗತಿಗೆ ಇಂದಿನ ಕೊಪ್ಪಳ ಜಿಲ್ಲೆಯ ಕುಷ್ಟಗಿಗೆ ಹೋದಾಗ ದೊಡ್ಡಾಟ, ಡಪ್ಪಿನಾಟ ಸಣ್ಣಾಟ, ಗೊಂದಲಿಗರ ಕಥೆ ಪರಿಚಯವಾಯಿತು. ಈ ಭಾಗದ ಗೊಂದಲಿಗರ ಕಥೆಗಳು ನನಗೆ ಹುಚ್ಚು ಹಿಡಿಸಿದ್ದವು. ಎಲ್ಲಿಯಾದರೂ ಕಥೆ ಇದ್ದರೆ ತಪ್ಪದೆ ಹಾಜರ್. ನನ್ನ ಹೈಸ್ಕೂಲು ಮಾಸ್ತರರು ಈ ಗೊಂದಲಿಗರ ರೀತಿ ಪಾಠ ಮಾಡಿದರೆ ಯಾರು ಫೇಲ್ ಆಗುವುದಿಲ್ಲ ಹಾಗೆಯೇ ಯಾರು ಕ್ಲಾಸ್ ಗೆ ಚಕ್ಕರ್ ಹಾಕುವುದಿಲ್ಲ ಎಂದು ಭಾವಿಸಿದ ದಿನಗಳವು.
    ನಮ್ಮುರಿನ ಬಯಲಾಟದ ಹಿಂದಿನ ಕಸರತ್ತಿನಲ್ಲಿ ವಿದ್ಯಾವಂತರಾದ ಕೆಲವು ಜನ ಸಕ್ರೀಯರಾಗಿದ್ದೇವು. ಅದರಲ್ಲಿ ಮಾಲಿಗೌಡರ ವಿರುಪಾಕ್ಷಪ್ಪ ಮಾಸ್ಟರ್ ಪ್ರಮುಖರು.
    ಅನಕ್ಷರಸ್ಥ ಪಾತ್ರಧಾರಿಗಳಿಗೆ ಮಾತು ಕಲಿಸುವ ಜವಾಬ್ದಾರಿ ಕೆಲವು ಜನ ವಹಿಸಿದ್ದರು.
    ಬಯಲಾಟ ನಿಜಕ್ಕೂ ಊರಿನ ಸಡಗರ, ಊರಿನ ಹಬ್ಬ.
    ಇಂದು ಊರಲ್ಲಿ ಸಾಕಷ್ಟು ಜನ ವಿದ್ಯಾವಂತರು. ಬಯಲಾಟ ಕಳೆದುಕೊಂಡು ಬಹಳ ದಿನಗಳಾಗಿವೆ.
    ಆಗೊಮ್ಮೆ ಈಗೊಮ್ಮೆ ಆಗುವ ಸುದ್ದಿ ಸಿಗುತ್ತದೆ.ಆದರೆ ಅದರ ಮೂಲ ಸ್ವರೂಪ ಸ್ವಾದ ಸವಿಯಲು ಸಾಧ್ಯವಾಗಿಲ್ಲ.
    ಕಾರಣ ನಮ್ಮೆಲ್ಲರ ನಿರ್ಲಕ್ಷ್ಯ. ಈ ಭಾಗದ ಕಲೆ, ಕಲಾವಿದರನ್ನು ಕಡೆಗಣಿಸಿ ಬೇರೆ ಭಾಗದತ್ತ ಮುಖಮಾಡಿ ಕೊಂಡಾಡುವ ನಮ್ಮ ಜನರು ಮತ್ತು ಜನಪ್ರತಿನಿಧಿಗಳು ನಮ್ಮತನದ ಸಾಂಸ್ಕೃತಿಕ ಲೋಕದ ಆತ್ಮಹತ್ಯೆಗೆ ಕಾರಣರಾಗಿದ್ದೇವೆ.
    ಕರಾವಳಿ ಜನತೆಯ ಕಲಾ ಕಕ್ಕುಲಾತಿ ನಮಗೇಕೆ ಇಲ್ಲ?
    ನಮಗೆ ನಮ್ಮ ಮನೆಯ ದೀಪ ಕಪ್ಪಾಗಿ ಕಾಣುವ ರೋಗ ಯಾಕೆ ಬಡದಿದೆ? ಇದಕ್ಕೆ ಮದ್ದು ಎಲ್ಲಿದೆ?

Leave a Reply

Your email address will not be published. Required fields are marked *