ಜೂನ್.5ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ – ಹವಾಮಾನ ಇಲಾಖೆ

ಬೆಂಗಳೂರು: ಬಹು ನಿರೀಕ್ಷಿತ ಮುಂಗಾರು ಆರಂಭ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ವಿಳಂಬವಾಗಿದ್ದು, ಜೂನ್.5ಕ್ಕೆ ರಾಜ್ಯದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮೇ 27ರಂದೇ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ ಎನ್ನಲಾಗಿತ್ತು. ಆದರೆ, ಮುಂಗಾರು ಕೊಂಚ ವಿಳಂಬವಾಗಲಿದ್ದು, ಇನ್ನೆರಡು ದಿನಗಳಲ್ಲಿ ಕೇರಳಕ್ಕೆ ಮಾನ್ಸೂನ್ ಪ್ರವೇಶವಾಗುವ ಸಾಧ್ಯತೆಯಿದೆ. ತದನಂತರ ಜೂನ್.5ಕ್ಕೆ ರಾಜ್ಯದಲ್ಲೂ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು 48 ಗಂಟೆಗಳಲ್ಲಿ ದಕ್ಷಿಣ ಅರೇಬಿಯನ್ ಸಮುದ್ರದ ಕೆಲವು ಭಾಗಗಳು ಮತ್ತು ಇಡೀ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದ ಪಕ್ಕದ ಪ್ರದೇಶಗಳು ಹಾಗೂ ಕೊಮೊರಿನ್​ನ ಕೆಲವೆಡೆ ನೈಋತ್ಯ ಮುಂಗಾರು ಮತ್ತಷ್ಟು ಪ್ರವೇಶ ಪಡೆಯುವ ನಿರೀಕ್ಷೆ ಇದೆ. ಅದೇ ರೀತಿಯಾಗಿ ಈ ವಾರದಲ್ಲಿ ಕೇರಳದಲ್ಲಿ ಮಾನ್ಸೂನ್ ಆರಂಭವಾಗಲು ಪೂರಕವಾದ ವಾತಾವರಣವಿದೆ ಎಂದು ಹೇಳಿದೆ.

ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಈ ಬಾರಿ ವಾಡಿಕೆಗಿಂತ ಮೊದಲೇ ಅಂದರೆ ಮೇ 16ಕ್ಕೆ ಅಂಡಮಾನ್ ಅನ್ನು ಮುಂಗಾರು ತಲುಪಿತ್ತು. ಆದರೆ, ಆರು ದಿನಗಳ ವಿರಾಮದ ಬಳಿಕ ಈಗ ಶ್ರೀಲಂಕಾದಿಂದ ಕೇರಳದ ಕಡೆಗೆ ಚಲಿಸಲು ಪ್ರಾರಂಭಿಸಿದೆ. ಕೇರಳಕ್ಕೆ ಆಗಮಿಸುವುದು ಮಾತ್ರವೇ ಬಾಕಿ ಇದೆ ಎನ್ನಲಾಗಿದೆ.

ಮಾನ್ಸೂನ್ ಜೂನ್ 1 ರಂದು ಕೇರಳ ರಾಜ್ಯವನ್ನು ಪ್ರವೇಸಿಸಿದರೆ, ಜೂನ್ 5 ರಂದು ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಕೆಲ ಭಾಗಗಳನ್ನು ಮುಟ್ಟಲಿದೆ. ಜೂನ್ 10 ರ ವೇಳೆಗೆ ಅದು ಇಡೀ ರಾಜ್ಯವನ್ನು ಆವರಿಸುತ್ತದೆ ಎಂದು ಹವಾಮಾನ ಇಲಾಖೆ  ಅಧಿಕಾರಿಗಳು ತಿಳಿಸಿದ್ದಾರೆ.

ಅನುಕೂಲಕರ ವಾತಾವರಣವಿಲ್ಲದಿರುವುದು ಕೇರಳಕ್ಕೆ ಮುಂಗಾರು ಪ್ರವೇಶದ ವಿಳಂಬಕ್ಕೆ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾನ್ಸೂನ್ ಆಗಮನಕ್ಕೆ ಗಾಳಿಯಲ್ಲಿ ಸ್ಥಿರತೆಯ ಅಗತ್ಯವಿದೆ ಮತ್ತು ಪ್ರಸ್ತುತ ಕೇರಳದಲ್ಲಿ ಪಶ್ಚಿಮ ಮಾರುತಗಳು ಮುಂದುವರೆದಿದೆ, ಆದ್ದರಿಂದ ಅದು ಈ ದಿನ ಕೇರಳವನ್ನು ತಲುಪುತ್ತಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದಲ್ಲಿ ಹಿಮ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಅರುಣಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ತಮಿಳುನಾಡು ಮತ್ತು ಕರ್ನಾಟಕದ ಕರಾವಳಿಯಲ್ಲಿ ಅಲ್ಲಲ್ಲಿ ಗುಡುಗು ಮತ್ತು ಮಳೆ ಬೀಳುವ ಸಾಧ್ಯತೆ ಇದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿಯೂ ಮಳೆ ಬರುವ ಸಾಧ್ಯತೆ ಇದೆ ಹಾಗಾಗಿ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ವರ್ಷ ಶೇ.99ರಷ್ಟು ಮುಂಗಾರು ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಮುಂಗಾರು ಹಂಗಾಮು ರೈತರಿಗೆ ಸಂತಸ ತರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *