ಮುಂಬಯಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ ಸಚಿವ, ಎನ್ಸಿಪಿ ನಾಯಕ ನವಾಬ್ ಮಲಿಕ್ರನ್ನು ವಿಶೇಷ ಪಿಎಂಎಲ್ಎ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇಡಿ ವಶದಲ್ಲಿದ್ದ ನವಾಬ್ ಮಲಿಕ್ ರನ್ನು ಇಂದು ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ಅವರ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಫೆಬ್ರವರಿ 23ರಂದು ಜಾರಿ ನಿರ್ದೇಶನಾಲಯ (ಇಡಿ)ವು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ರನ್ನು ಬಂಧಿಸಿ, ತಮ್ಮ ವಶದಲ್ಲಿ ಇರಿಸಿಕೊಂಡಿತ್ತು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನವಾಬ್ ಮಲಿಕ್ ರನ್ನು ಬಂಧಿಸಲಾಗಿತ್ತು.
ಜಾರಿ ನಿರ್ದೇಶನಾಲಯ(ಇಡಿ) ಫೆಬ್ರವರಿ 23 ರಂದು ನವಾಬ್ ಮಲಿಕ್ ರನ್ನು ದಕ್ಷಿಣ ಮುಂಬೈನಲ್ಲಿರುವ ತನಿಖಾ ಸಂಸ್ಥೆಯ ಕಚೇರಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಅವರನ್ನು ಬಂಧಿಸಿತ್ತು. ಅಲ್ಲದೆ ಹೆಚ್ಚಿನ ವಿಚಾರಣೆಗಾಗಿ ಮಲಿಕ್ ಅವರನ್ನು ಮಾರ್ಚ್ 7ರ ವರೆಗೆ ತನ್ನ ವಶಕ್ಕೆ ಪಡೆದಿತ್ತು.
20 ವರ್ಷಗಳ ಹಿಂದೆ ಮುಂಬೈನ ಕುರ್ಲಾದಲ್ಲಿ ಮೂರು ಎಕರೆ ಜಾಗಕ್ಕಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪರ್ಕರ್ ಗೆ ನವಾಬ್ ಮಲಿಕ್ 55 ಲಕ್ಷ ರೂ. ನಗದು ನೀಡಿದ್ದರು ಎಂದು ಇಡಿ ಕಳೆದ ವಿಚಾರಣೆಯಲ್ಲಿ ತನ್ನ ವರದಿಯಲ್ಲಿ ತಿಳಿಸಿತ್ತು.
ಅಕ್ರಮ ಹಣ ವರ್ಗಾವಣೆಯಲ್ಲದೆ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬೇನಾಮಿ ಆಸ್ತಿಯನ್ನು ತೊಡಗಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ಇಡಿ ಮೂಲಗಳು ಹೇಳಿವೆ. ಇದೇ ಪ್ರಕರಣದಲ್ಲಿ ಫೆಬ್ರವರಿ 18ರಂದು ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ನನ್ನೂ ಸಹ ಇಡಿ ಬಂಧಿಸಿತ್ತು. ಮತ್ತೋರ್ವ ಪಾತಕಿ ಛೋಟಾ ಶಕೀಲ ಸಹಚರ ಸಲೀಂ ಖುರೇಷಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.