ಬೆಂಗಳೂರು: ಅನ್ನ ಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ ನೀಡಬೇಕಿರುವ ಅಕ್ಕಿಯ ಬದಲಿಗೆ ಹಣವನ್ನು ನೀಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಜೂ. 28ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಭಾರತೀಯ ಆಹಾರ ನಿಗಮ ಅಕ್ಕಿ ಕೊಡಲು ನಿರಾಕರಿಸಿದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಅಕ್ಕಿ ಬದಲಿಗೆ ಹಣ ನೀಡಲು ನಿರ್ಧರಿಸಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ, ಹೆಚ್ಚುವರಿ ಅಕ್ಕಿ ಹೊಂದಿಸಲು ಸಾಧ್ಯವಾಗದ ಕಾರಣ 5 ಕೆ.ಜಿ ಅಕ್ಕಿಗೆ ಹಣವನ್ನು ನೀಡಲು ನಿರ್ಧರಿಸಿದೆ.
ಇದನ್ನೂ ಓದಿ:ಅಮಿತ್ ಶಾ ಭೇಟಿ ಮಾಡಿದ ಸಿದ್ದರಾಮಯ್ಯ : ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮನವಿ
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಈ ವಿಚಾರ ತಿಳಿಸಿದರು. ಸದ್ಯಕ್ಕೆ ಅಕ್ಕಿಯ ಕೊರತೆ ಇರುವ ಹಿನ್ನೆಲೆಯಲ್ಲಿ ಹಣವನ್ನು ನೀಡಲು ತೀರ್ಮಾನಿಸಲಾಗಿದೆ. ಒಂದು ಕೆಜಿ ಅಕ್ಕಿಯ ಬೆಲೆಯನ್ನು 34 ರೂ.ಗಳನ್ನು ನಿಗದಿಪಡಿಸಿ, ಪ್ರತಿಯೊಂದು ಕುಟುಂಬಕ್ಕೆ ಅಗತ್ಯವಿರುವಷ್ಟು ಅಕ್ಕಿಯ ಬದಲಿಗೆ ಹಣವನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಅನ್ನಭಾಗ್ಯ ಯೋಜನೆಯಡಿ 5.ಕೆ.ಜಿ ಅಕ್ಕಿಯನ್ನು ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದ್ದು, ಉಳಿದ ಹೆಚ್ಚುವರಿ 5 ಕೆ.ಜಿ ಅಕ್ಕಿಗೆ ₹170 ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಒಬ್ಬ ಸದಸ್ಯರಿರುವ ಕುಟುಂಬಕ್ಕೆ 5 ಕೆಜಿ, ಇಬ್ಬರು ಸದಸ್ಯರಿರುವ ಕುಟುಂಬಕ್ಕೆ 10 ಕೆಜಿ, ಐದು ಜನರಿರುವ ಕುಟುಂಬಕ್ಕೆ 25 ಕೆಜಿ ಅಕ್ಕಿಯನ್ನು ನಿಗದಿಪಡಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ. ಅದೇ ಲೆಕ್ಕದಲ್ಲಿ ಕೆಜಿ ಅಕ್ಕಿಗೆ 34 ರೂ.ಗಳಂತೆ, 5 ಕೆಜಿ ಅಕ್ಕಿ ಪಡೆಯುವ ಕುಟುಂಬಕ್ಕೆ 170 ರೂ., 10 ಕೆಜಿ ಅಕ್ಕಿಯನ್ನು ಪಡೆಯುವ ಕುಟುಂಬಕ್ಕೆ 340 ರೂ. ಹಾಗೂ 25 ಕೆಜಿ ಅಕ್ಕಿಯನ್ನು ಪಡೆಯುವ ಕುಟುಂಬಕ್ಕೆ 875 ರೂ.ಗಳನ್ನು ನೀಡಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಜುಲೈ ತಿಂಗಳಿನಿಂದಲೇ ಬಿಪಿಎಲ್ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ, ಇದು ತಾತ್ಕಾಲಿಕವಾಗಿದ್ದು ಅಕ್ಕಿಯ ದಾಸ್ತಾನು ಆಗುವವರೆಗೂ ಹಣವನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.