ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಐದು ಗ್ಯಾರೆಂಟಿ ಯೋಜನೆಗಳ ಪೈಕಿ ಮೂರನೇ ಗ್ಯಾರೆಂಟಿಯಾದ ಅನ್ನಭಾಗ್ಯ ಯೋಜನೆಗೆ ಹಣ ವರ್ಗಾವಣೆ ಮೂಲಕ ಸೋಮವಾರ ಅಧಿಕೃತ ಚಾಲನೆ ದೊರೆಯಲಿದೆ. ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬದ ಸದಸ್ಯರಿಗೆ ಪ್ರಸ್ತುತ ವಿತರಿಸುತ್ತಿರುವ 5 ಕೆ.ಜಿ ಅಕ್ಕಿ ಜತೆಗೆ ಹೆಚ್ಚುವರಿ 5 ಕೆ.ಜಿ ಕ್ಕಿ ನೀಡುವುದಾಗಿ ಹೇಳಲಾಗಿತ್ತು. ಅಕ್ಕಿ ಲಭ್ಯವಾಗ ಕಾರಣ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ದರ ತಿಂಗಳಿಗೆ 170.ರೂ ಗಳಂತೆ ಕುಟುಂಬದ ಸದಸ್ಯರ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಮಾಡವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಇಂದು (ಸೋಮವಾರ) ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಈ ಕುರಿತು ಸಮಾರಂಭ ನಡೆಯಲಿದೆ.
ನಗದು ರೂಪದಲ್ಲಿ ಇರದೇ, ಹಣವು ನೇರ ನಗದು ವರ್ಗಾವಣೆ ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಆಗಲಿದೆ. ಅಂತ್ಯೋದಯ ಅನ್ನ ಯೋಜನೆ ಎಎವೈ, ಬಿಪಿಎಲ್ ಪಡಿತರ ಚೀಟಿ ಹೊದಿರುವವರ ಕುಟುಂಬದ ಮುಖ್ಯಸ್ಥರ ಖಾತೆಗಳ ಮಾಹಿತಿಯನ್ನು ಈಗಾಗಲೇ ಪಡೆಯಲಾಗಿದೆ. ಸೋಮವಾರದಿಂದ ಜುಲೈ ತಿಂಗಳ ಕಂತಿನ ಹಣವನ್ನು ವರ್ಗಾಯಿಸಲಾಗುವುದು ಎಂದು ಸರ್ಕಾರದ ಪ್ರಕಟಣೆ ಹೇಳಿದೆ . ಹೆಚ್ಚುವರಿ ಅಕ್ಕಿ ಸಿಗುವವರೆಗೆ ಮಾತ್ರ ಹಣ ವರ್ಗಾವಣೆ ನಡೆಯಲಿದೆ ಎಂದು ಇತ್ತೀಚೆಗೆ ಸರ್ಕಾರ ಸ್ಪಷ್ಟಪಡಿಸಿತ್ತು.
ಅಕ್ಕಿ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ಹಣ ವರ್ಗಾಯಿಸುವ ಪ್ರಕ್ರಿಯೆಗೆ ಇಂದು ಚಾಲನೆ ಸಿಗಲಿದೆ. ಈ ಮೂಲಕ ಪಡಿತರದಾರರಿಗೆ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ 170 ರೂ ಹಣವನ್ನು ತಾತ್ಕಾಲಿಕವಾಗಿ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರ ವರ್ಗಾಯಿಸಲಿದೆ.
ಇದನ್ನೂ ಓದಿ:‘ಅನ್ನಭಾಗ್ಯ’ : ಅಕ್ಕಿ ಬದಲು ಹಣ – ಸಂಪುಟದ ಮಹತ್ವದ ತೀರ್ಮಾನ
1.28 ಕೋಟಿ ಕುಟುಂಬಗಳಿಗೆ ಪ್ರಯೋಜನೆ: ರಾಜ್ಯದಲ್ಲಿ 1.28 ಕೋಟಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರು ಇರುವುದನ್ನು ಗುರುತಿಸಲಾಗಿದೆ. ಇವುಗಳಲ್ಲಿ ಪ್ರತಿಶತ 99 ರಷ್ಟು ಕಾರ್ಡುಗಳು ಆಧಾರ್‌ನೊಂದಿಗೆ ಜೋಡಣೆಯಾಗಿವೆ. ಶೇ.82 ರಷ್ಟು ಪಡಿತರ ಚೀಟಿಗಳು ಅಂದರೆ 1.06 ಕೋಟಿ ಪಡಿತರ ಚೀಟಿಗಳು, ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಜೋಡಣೆಯಾಗಿವೆ. ಈ ಖಾತೆಗಳಿಗೆ ನಗದು ವರ್ಗಾವಣೆಯನ್ನ ನೇರವಾಗಿ ಮಾಡಲಾಗುತ್ತದೆ. ಬ್ಯಾಂಕ್ ಖಾತೆ ಹೊಂದಿಲ್ಲದ ಸುಮಾರು 22 ಲಕ್ಷ ಕಾರ್ಡುದಾರರಿಗ ಖಾತೆ ತೆರೆಯುವಂತೆ ಸರ್ಕಾರ ಮಾಹಿತಿ ನೀಡಲಿದೆ. 1.27 ಕೋಟಿ ಕಾರ್ಡುಗಳಲ್ಲಿ ಒಬ್ಬ ಸದಸ್ಯರನ್ನು ಕುಟುಂಬದ ಮುಖ್ಯಸ್ಥರು ಮಹಿಳೆಯರು ಹಾಗೂ ಶೇ.5 ರಷ್ಟು ಪುರುಷರಾಗಿದ್ದಾರೆ. ಈ ಯೋಜನೆಯಡಿ ಈ ಎಲ್ಲ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಸಿಗಲಿದೆ. ಜೊತೆಗೆ ಬ್ಯಾಂಕ್ ಖಾತೆಗೆ 170 ರೂ ನೇರ ವರ್ಗಾವಣೆ ಆಗಲಿದೆ. ನಾಲ್ಕು ಜನರಿಗಿಂತ ಹೆಚ್ಚಿರುವ ಅಂತ್ಯೋದಯ ಕುಟುಂಬಗಳಿಗೂ ಯೋಜನೆಯ ಪ್ರಯೋಜನೆ ಲಭ್ಯ.
ಅನ್ನಭಾಗ್ಯ ಹಣ ಸಿಗಲು ಏನು ಮಾಡಬೇಕು?: ಪಪಡಿತರ ಚೀಟಿಗೆ ಆಧಾರ್, ಬ್ಯಾಂಕ್ ಖಾತೆ ಜೋಡಣೆ ಮತ್ತು ಇಕೆವೈಸಿ ಮಾಡಿಸುವುದು ಅಗತ್ಯ. ಆಧಾರ್ ಮತ್ತು ಇಕೆವೈಸಿ ಮಾಡಿಸದಿದ್ದರೆ ಈ ಯೋಜನೆ ಸಿಗಲ್ಲ. ಆದ್ದರಿಂದ ಈಗಾಗಲೇ ಶೇ.99 ರಷ್ಟು ಪಡಿತರ ಕುಟುಂಬಗಳು ಆಧಾರ್ ಜೋಡಣೆ ಮಾಡಿಸಿವೆ. ಇನ್ನು 22 ಲಕ್ಷ ಕುಟುಂಬಗಳು ಬ್ಯಾಂಕ್ ಖಾತೆ ಮಾಡಿಸಬೇಕಿದೆ.
ಅನ್ನಭಾಗ್ಯ ಯೋಜನೆಯಡಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ನೇರವಾಗಿ ವರ್ಗಾಯಿಸುತ್ತೇವೆ. ಮುಂದಿನ 10 ದಿನಗಳಲ್ಲಿ ಎಲ್ಲಾರಿಗೂ ಹಣ ವರ್ಗವಣೆ ಆಗಲಿದೆ. ಈವರೆಗೆ ಶೇ.90 ರಷ್ಟು ಅಕೌಂಟ್ ಲಿಂಕ್ ಆಗಿವೆ. ಇನ್ನೂ ಅಂದಾಜು ಶೇ.10 ರಷ್ಟು ಆಗಬೇಕಿದ್ದು,ಎಲ್ಲರಿಗೂ ಹಣ ವರ್ಗಾಯಿಸುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದರು.
ಕಾಂಗ್ರೆಸ್‌ನ ಪಂಚ ಗ್ಯಾರೆಂಟಿಗಳು: ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಐದು ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿತ್ತು. ಮಹಿಳೆಯರಿಗೆ ಉಚಿತ ಬಸ್ ಪಯಾಣ, ಶಕ್ತಿ ಯೋಜನೆ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಸಂಪರ್ಕದ ಗೃಹಜ್ಯೋತಿ ಯೋಜನೆ, 10ಕೆಜಿ ಅಕ್ಕಿ ವಿತರಿಸುವ ಅನ್ನಭಾಗ್ಯ, ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ. ವಿತರಿಸುವ ಗೃಹಲಕ್ಷ್ಮೀ ಮತ್ತು ಪದವೀಧರ ನಿರುದ್ಯೋಗಿಗಳಿಗಾಗಿ ಯುವನಿಧಿ, ಯೋಜನೆಯನ್ನು ಅಧಿಕಾರಕ್ಕೇರಿದ ಬಳಿಕ ಜಾರಿಗೆ ತರುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಅದರಂತೆ ಈಗಾಗಲೇ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಹಾಗೆಯೇ ಈ ತಿಂಗಳಿನಿಂದಲೇ ಗೃಹಜ್ಯೋತಿ ಯೋಜನೆ ಕೂಡ ಆರಂಭವಾಗಿದೆ. ಇದೀಗ ಅನ್ನಭಾಗ್ಯ ಯೋಜನೆಗೂ ಅಧಿಕೃತವಾಗಿ ಜಾರಿಗೆ ಬರುತ್ತಿದೆ.