ನವದೆಹಲಿ: ಹಣ ಪಡೆದು ಪ್ರಶ್ನೆ ಕೇಳಿದ್ದಾರೆ ಎಂಬ ಆರೋಪದಲ್ಲಿ ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ಶುಕ್ರವಾರ ಉಚ್ಚಾಟಿಸಲಾಗಿದೆ. ಲೋಕಸಭೆಯ ನೀತಿಸಂಹಿತೆ ಸಮಿತಿಯು ಈ ಹಿಂದೆ ಅವರನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡಿತ್ತು ಮತ್ತು ಅಧ್ಯಕ್ಷ ವಿನೋದ್ ಸೋಂಕರ್ ಅವರು ಮಂಡಿಸಿದ ವರದಿಯಲ್ಲಿ ಸಮಿತಿಯು ಕಾಲಮಿತಿಯಲ್ಲಿ ಸರ್ಕಾರದಿಂದ ತೀವ್ರವಾದ ಕಾನೂನು, ಸಾಂಸ್ಥಿಕ ತನಿಖೆಗೆ ಶಿಫಾರಸು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೊಹುವಾ ಅವರು ಇದು ಬಿಜೆಪಿಯ ಅಂತ್ಯದ ಆರಂಭ. ನಾವು ಮರಳಿ ಬರಲಿದ್ದೇವೆ ಎಂದು ಹೇಳಿದ್ದಾರೆ.
ಶುಕ್ರವಾರ ಸಂಸತ್ತನ್ನುದ್ದೇಶಿಸಿ ಮಾತನಾಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, “ಸಂಸದೆ ಮೊಹುವಾ ಮೊಯಿತ್ರಾ ಅವರ ನಡವಳಿಕೆಯು ಸಂಸದರಾಗಿ ಅನೈತಿಕ ಮತ್ತು ಅಸಭ್ಯವಾಗಿದೆ ಎಂಬ ನೈತಿಕ ಸಮಿತಿಯ ತೀರ್ಮಾನಗಳನ್ನು ಈ ಸದನವು ಒಪ್ಪಿಕೊಳ್ಳುತ್ತದೆ. ಹಾಗಾಗಿ ಅವರು ಸಂಸದರಾಗಿ ಮುಂದುವರಿಯುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಾಡಿ ಜನರಿಗೆ ಡೋಲಿಯೇ ಆಂಬುಲೆನ್ಸ್ | ನಿದ್ದೆಯಲ್ಲಿ ಜಿಲ್ಲಾಡಳಿತ
ಮಹುವಾ ಅವರು ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಅದಾನಿ ಜೊತೆಗೆ ಆಡಳಿತಾರೂಢ ಬಿಜೆಪಿಯೊಂದಿಗಿನ ಸಂಬಂಧಗಳ ಕಟು ಟೀಕಾಕಾರರಾಗಿದ್ದಾರೆ. ತನ್ನ ಸಂಸದ ಸ್ಥಾನದಿಂದ ವಜಾ ಮಾಡಿದ ನಿಮಿಷಗಳ ನಂತರ ಅದರ ಬಗ್ಗೆ ಪ್ರತಿಕ್ರಿಯಿಸಿರುವ ಮೊಹುವಾ ಮೊಯಿತ್ರಾ ಅವರು, ಹೊಸ ಸಂಸತ್ತಿನ ಕಟ್ಟಡದ ಮೆಟ್ಟಿಲುಗಳ ಮೇಲೆ ಪ್ರಬಲವಾದ ಭಾಷಣ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, “ನನಗೆ 49 ವರ್ಷ. ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ, ಸಂಸತ್ತಿನ ಹೊರಗೆ ಮತ್ತು ಬೀದಿಗಳಲ್ಲಿ ನಾನು ನಿಮ್ಮೊಂದಿಗೆ ಹೋರಾಡುತ್ತೇನೆ. ನಾನು ಎಲ್ಲಿಯೂ ಯಾವುದೇ ಪುರಾವೆ ಅಥವಾ ಯಾವುದೇ ನಗದು, ಯಾವುದೇ ಉಡುಗೊರೆಗಳನ್ನು ಪಡೆದಿಲ್ಲ. ನನ್ನ ಲೋಕಸಭೆಯ ಪೋರ್ಟಲ್ ಲಾಗಿನ್ ಅನ್ನು ನಾನು ಹಂಚಿಕೊಂಡಿದ್ದೇನೆ ಎಂಬ ಆಧಾರದ ಮೇಲೆ ಉಚ್ಚಾಟನೆ ಮಾಡಲಾಗಿದೆ. ಆದರೆ ಲಾಗಿನ್‌ಗಳ ಹಂಚಿಕೆಯನ್ನು ನಿಯಂತ್ರಿಸಲು ಯಾವುದೇ ನಿಯಮಗಳಿಲ್ಲ” ಎಂದು ಹೇಳಿದ್ದಾರೆ.
ಸರ್ಕಾರ ನಾಳೆ ಸಿಬಿಐ ಅನ್ನು ನನ್ನ ಮನೆಗೆ ಕಳುಹಿಸಿ, ಮುಂದಿನ ಆರು ತಿಂಗಳ ಕಾಲ ನನಗೆ ಕಿರುಕುಳ ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಅದಾನಿ ಗ್ರೂಪ್‌ನೊಂದಿಗಿನ ಅದರ ಸಂಬಂಧಗಳ ಟೀಕೆಯಿಂದ ಹಿಂದೆ ಸರಿಯಲು ಅವರು ನಿರಾಕರಿಸಿದ್ದಾರೆ. “ಇದು ಬಿಜೆಪಿಯ ಅಂತ್ಯದ ಆರಂಭ. ನಾವು ಮರಳಿ ಬರಲಿದ್ದೇವೆ ಮತ್ತು ನಿಮ್ಮ (ಬಿಜೆಪಿ) ಅಂತ್ಯವನ್ನು ನಾವು ನೋಡಲಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿವಿ ರಾಮನ್ ನಗರ | ಕಗ್ಗದಾಸ್ ಪುರ ಮುಖ್ಯ ರಸ್ತೆಯ ಕಾಮಗಾರಿ ನಿಧಾನಗತಿ, ಸಾರ್ವಜನಿಕರ ಪರದಾಟ
ನೀತಿಸಂಹಿತೆ ಸಮಿತಿಯ ವರದಿಯ ಪ್ರಕಾರ, ಮಹುವಾ ವಿರುದ್ಧ ಸಮಿತಿಯು ಲೋಕಸಭೆ ಸ್ಪೀಕರ್‌ಗೆ ಮೂರು ಶಿಫಾರಸುಗಳನ್ನು ಮಾಡಿತ್ತು, ಸಮಿತಿಯು ಅದನ್ನು ಕೂಲಂಕಷವಾಗಿ ಪರಿಶೀಲಿಸಿದೆ ಎಂದು ಹೇಳಿದೆ. ಸಮಿತಿಯು ಮಹುವಾ ಅವರ ನಡವಳಿಕೆಯನ್ನು “ಅನೈತಿಕ” ಎಂದು ಕರೆದಿದ್ದು, ಅನಧಿಕೃತ ವ್ಯಕ್ತಿಗಳಿಗೆ ಲೋಕಸಭೆಯ ಪೋರ್ಟಲ್‌ನ ಲಾಗಿನ್ ಮಾಹಿತಿಗಳನ್ನು ಹಂಚಿಕೊಳ್ಳುವುದು “ಸದನದ ಅವಹೇಳನ” ಎಂದು ಅದು “ರಾಷ್ಟ್ರೀಯ ಭದ್ರತೆ” ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
“ಮಹುವಾ ಮೊಯಿತ್ರಾ ಅವರ ಕಡೆಯಿಂದ ಗಂಭೀರ ದುಷ್ಕೃತ್ಯಗಳು ಕಠಿಣ ಶಿಕ್ಷೆಗೆ ದಾರಿ ಮಾಡುತ್ತದೆ. ಆದ್ದರಿಂದ ಸಮಿತಿಯು ಸಂಸದೆ ಮಹುವಾ ಮೊಯಿತ್ರಾ ಅವರನ್ನು ಹದಿನೇಳನೇ ಲೋಕಸಭೆಯ ಸದಸ್ಯತ್ವದಿಂದ ಹೊರಹಾಕುವಂತೆ ಶಿಫಾರಸು ಮಾಡಿದೆ. ಮಹುವಾ ಮೊಯಿತ್ರಾ ಅವರ ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಕ್ರಿಮಿನಲ್ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಸಮಿತಿಯು ಕಾಲಮಿತಿಯಲ್ಲಿ ಭಾರತ ಸರ್ಕಾರದಿಂದ ತೀವ್ರವಾದ, ಕಾನೂನು, ಸಾಂಸ್ಥಿಕ ತನಿಖೆಗೆ ಶಿಫಾರಸು ಮಾಡುತ್ತದೆ,” ಎಂದು ನೀತಿಸಂಹಿತೆ ಸಮಿತಿ ವರದಿ ಹೇಳಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಹುವಾ ಅವರ ನಡವಳಿಕೆಯ ಬಗ್ಗೆ ತನಿಖೆಗೆ ಕೋರಿದ ನಂತರ ಸಮಿತಿಯ ತನಿಖೆ ಪ್ರಾರಂಭವಾಗಿತ್ತು. ಉದ್ಯಮಿ ದರ್ಶನ್ ಹಿರಾನಂದಾನಿ ಅವರು ಮೊಹುವಾ ಅವರಿಗೆ ಪ್ರಶ್ನೆಗಳನ್ನು ಲಂಚ ನೀಡಿದ್ದಾರೆ ಎಂದು ಆರೋಪಿಸಿ ಅವರನ್ನು ಸಂಸತ್ತಿನಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದ್ದರು. ಅಷ್ಟೆ ಅಲ್ಲದೆ, ಮೊಹುವಾ ಮೊಯಿತ್ರಾ ಅವರು ಉಡುಗೊರೆಗಳಿಗೆ ಬದಲಾಗಿ ತನ್ನ ಸಂಸದೀಯ ಖಾತೆಯ ಲಾಗಿನ್ ಮಾಹಿತಿಯನ್ನು ಉದ್ಯಮಿಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ನಿಶಿಕಾಂತ್ ಆರೋಪಿಸಿದ್ದರು.
ವಿಡಿಯೊ ನೋಡಿ: ಸೌಹಾರ್ದ ಕರ್ನಾಟಕ ಸರಣಿ ಕಾರ್ಯಕ್ರಮ : “ಸೌಹಾರ್ದ ಪರಂಪರೆ ಮತ್ತು ಕನ್ನಡ ತತ್ವಪದಕಾರರು” – ಡಾ.ಮಲ್ಲಿಕಾರ್ಜುನ ಕಡಕೋಳ