ಸಿಪಿಐ(ಎಂ) ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿಯಾಗಿ ಮೊಹಮ್ಮದ್ ಸಲೀಂ ಮರು ಆಯ್ಕೆ

ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ-ಮಾರ್ಕ್ಸ್ ವಾದಿಯ ಪಶ್ಚಿಮ ಬಂಗಾಳದ 27ನೇ ರಾಜ್ಯ ಸಮ್ಮೇಳನದಲ್ಲಿ ಮೊಹಮ್ಮದ್ ಸಲೀಂ ಅವರನ್ನು ಎರಡನೇ ಬಾರಿಗೆ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ಫೆಬ್ರವರಿ 22 ರಿಂದ 25 ರವರೆಗೆ ಹೂಗ್ಲಿ ಜಿಲ್ಲೆಯ ಡಂಕುಣಿಯಲ್ಲಿ ನಡೆದ ಸಮ್ಮೇಳನದಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

67 ವರ್ಷದ ಮೊಹಮ್ಮದ್ ಸಲೀಂ ಬಂಗಾಳಿ ರಾಜಕೀಯದಲ್ಲಿ ಅನುಭವಿ ಹೋರಾಟಗಾರ ಮತ್ತು ಶ್ರೇಷ್ಠ ವಾಗ್ಮಿ ಎಂದು ಹೆಸರುವಾಸಿಯಾಗಿದ್ದಾರೆ. ವಿದ್ಯಾರ್ಥಿ ಮತ್ತು ಯುವಜನ ಚಳವಳಿಯ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ಸಲೀಂ, ಬಂಗಾಳಿ, ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಕೋಲ್ಕತ್ತಾದ ಗಿಡಾರ್‌ ಪುರದವರಾದ ಅವರು 2015 ರಿಂದ ಪಕ್ಷದ ಪೊಲಿಟ್ ಬ್ಯೂರೊ ಸದಸ್ಯರಾಗಿದ್ದಾರೆ.

ಸಲೀಂ ಅವರ ರಾಜಕೀಯ ಪ್ರಯಾಣ

ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ(SFI) ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದ ಸಲೀಂ, ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ ಐ)ದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಗುಲ್ಬರ್ಗ ವಿಶ್ವವಿದ್ಯಾಲಯ ಮೇಲೆ ಲೋಕಾಯುಕ್ತದ 5 ತಂಡಗಳು ದಾಳಿ

ಅವರ ರಾಜಕೀಯ ಪ್ರಯಾಣದಲ್ಲಿ ಗಮನಾರ್ಹ ಮೈಲಿಗಲ್ಲುಗಳು ಹೀಗಿವೆ:  1990 ರಿಂದ ಎರಡು ಬಾರಿ ರಾಜ್ಯಸಭೆಗೆ ಆಯ್ಕೆ – 2001-2004 ರವರೆಗೆ ಬಂಗಾಳ ಸಚಿವ ಸಂಪುಟದ ಸದಸ್ಯರಾಗಿ – 2004 ಮತ್ತು 2014 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆ – 1998 ರಿಂದ ಪಕ್ಷದ ಕೇಂದ್ರ ಸಮಿತಿಯ ಸದಸ್ಯರಾಗಿದ್ದಾರೆ.

ಐತಿಹಾಸಿಕ ಸಮ್ಮೇಳನ

ಈ ಸಮ್ಮೇಳನವು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಒಂದು ಮಹತ್ವದ ತಿರುವು ನೀಡಿತು. ಹಿರಿಯ ನಾಯಕ ಬಿಮನ್ ಬಸು ಅವರು ಧ್ವಜಾರೋಹಣ ನೆರವೇರಿಸುದರೊಂದಿಗೆ ಸಮ್ಮೇಳನವು ಪ್ರಾರಂಭವಾಯಿತು. ಪೊಲಿಟ್ ಬ್ಯೂರೊ ಸದಸ್ಯರು ಮತ್ತು ಸಂಯೋಜಕರಾದ ಪ್ರಕಾಶ್ ಕಾರಟ್ ಸಮ್ಮೇಳನವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಈ ಸಮ್ಮೇಳನದಲ್ಲಿ ಪೊಲಿಟ್ ಬ್ಯೂರೊ ಸದಸ್ಯರುಗಳಾದ ಮಾಣಿಕ್ ಸರ್ಕಾರ್, ಬೃಂದಾ ಕಾರಟ್, ಸೂರ್ಯಕಾಂತ ಮಿಶ್ರಾ, ಎಂ.ಎ. ಬೇಬಿ, ತಪನ್ ಸೇನ್, ಅಶೋಕ್ ದಾವ್ಲೆ, ನಿಲೋತ್ಪಲ್ ಬಸು, ಮತ್ತು ರಾಮಚಂದ್ರ ಥೋಮ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು.

ಬೃಹತ್ ಸಮಾರೋಪ ರ್ಯಾಲಿ

ಸಮ್ಮೇಳನದ ಸಮಾರೋಪ ಸಮಾರಂಭವು ಫೆಬ್ರವರಿ 25 ರಂದು ಡಂಕುಣಿಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮಕ್ಕೆ ಕೆಲವು ಗಂಟೆಗಳ ಮೊದಲು ಕ್ರೀಡಾಂಗಣವು ಜನರಿಂದ ತುಂಬಿತ್ತು. ಬುರ್ದ್ವಾನ್ ಮತ್ತು ಹೌರಾದಿಂದ ಸಾವಿರಾರು ಜನರು ಸೇರಿದ್ದರಿಂದ, ಡಂಕುಣಿಯ ಇತಿಹಾಸದಲ್ಲಿ ಇದುವರೆಗಿನ ಅತಿ ದೊಡ್ಡ ಜನಸಂದಣಿಯಾಗಿತ್ತು.

ಹತ್ತು ಅಂಶಗಳ ಯೋಜನೆಗೆ ಅನುಮೋದನೆ

ಪಕ್ಷವನ್ನು ರಾಜಕೀಯವಾಗಿ ಮತ್ತು ಸಂಘಟನಾತ್ಮಕವಾಗಿ ಬಲಪಡಿಸಲು ಮತ್ತು ಜನರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಚಳುವಳಿಯನ್ನು ಬಲಪಡಿಸಲು ಕಾರಣವಾಗುವ ಹತ್ತು ಅಂಶಗಳ ಯೋಜನೆಯನ್ನು ಸಮ್ಮೇಳನವು ಸರ್ವಾನುಮತದಿಂದ ಅನುಮೋದಿಸಿತು. “ಆರ್‌ಎಸ್‌ಎಸ್-ಬಿಜೆಪಿ ಕೋಮು ವಿಕೋಪ ಮತ್ತು ತೃಣಮೂಲ ಕಾಂಗ್ರೆಸ್‌ ನ ಪ್ರಜಾಪ್ರಭುತ್ವ ವಿರೋಧಿ ಆಡಳಿತವನ್ನು ಕೊನೆಗೊಳಿಸೋಣ” ಎಂಬ ಬಲವಾದ ಘೋಷಣೆಯೊಂದಿಗೆ ಸಮ್ಮೇಳನ ಮುಕ್ತಾಯವಾಯಿತು. ರಾಜಕೀಯ-ಸಾಂಸ್ಥಿಕ ಹೇಳಿಕೆಯ ಜೊತೆಗೆ, “ಬಂಗಾಳದ ಭವಿಷ್ಯವನ್ನು ಸುರಕ್ಷಿತಗೊಳಿಸಲು ಪಕ್ಷವನ್ನು ಹೇಗೆ ಬಲಪಡಿಸುವುದು” ಎಂಬ ಪ್ರತ್ಯೇಕ ದಾಖಲೆಯನ್ನು ಸಹ ಸಮ್ಮೇಳನದಲ್ಲಿ ಅನುಮೋದಿಸಲಾಯಿತು. ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಎಡ ಚಳುವಳಿಯನ್ನು ಮತ್ತೆ ಬಲಪಡಿಸುವ ಗುರಿಯೊಂದಿಗೆ ನಡೆದ ಈ ಸಮ್ಮೇಳನವು ಮುಂಬರುವ ದಿನಗಳಲ್ಲಿ ರಾಜ್ಯದ ರಾಜಕೀಯ ರಂಗದಲ್ಲಿ ಪ್ರಮುಖ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ.

ಇದನ್ನೂ ನೋಡಿ: ಕೋಲಾರ :- ರಾಜ್ಯಮಟ್ಟದ ಜಾನಪದ ಉತ್ಸವಕ್ಕೆSCSP/TSP ಹಣ ದುರ್ಬಳಕೆ – ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದ ಹೋರಾಟಗಾರರು

Donate Janashakthi Media

Leave a Reply

Your email address will not be published. Required fields are marked *