ಚಾಮರಾಜನಗರ: ವಿಧಾನಸಭೆ ಚುನಾವಣೆಯ ಉದ್ದೇಶವನ್ನೇ ಮುಂದುಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು (ಏಪ್ರಿಲ್ 9) ರಂದು ನಾಳೆ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣವಾದ ಬಂಡೀಪುರದಲ್ಲಿ ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಭೇಟಿ ನೀಡಲಿದ್ದಾರೆ ಎಂಬ ಕಾರಣಕ್ಕೆ ಭದ್ರತೆಯ ದೃಷ್ಟಿಯಿಂದ ಬಂಡೀಪುರ ವ್ಯಾಪ್ತಿಯಲ್ಲಿ ಸಫಾರಿ, ರೆಸಾರ್ಟ್, ಹೋಂಸ್ಟೇಗಳನ್ನು ಬಂದ್ ಮಾಡಲಾಗಿದೆ. ಇದರ ಜೊತೆಗೆ ಪ್ರಧಾನಿ ಮೋದಿ ಬಂಡೀಪುರಕ್ಕೆ ಬರುತ್ತಿರುವುದು ಖಾತ್ರಿಯಾಗುತ್ತಿದ್ದಂತೆಯೇ ಬಂಡೀಪುರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತೆ ಕಾಣುವಂತಾಗಿದೆ.
ಹಲವು ವರ್ಷಗಳಿಂದ ಎರಡು ಬದಿಗಳಲ್ಲೂ ಕಳೆಗಿಡಗಳು ಬೆಳೆದು ನಿಂತು ಸವಾರರಿಗೆ ತೊಂದರೆ ಆಗುತ್ತಿತ್ತು. ಪರಿಸರ ಸೂಕ್ಷ್ಮ ಪರಿಸರ ವಲಯದಲ್ಲೂ ಪ್ಲಾಸ್ಟಿಕ್ ಕಂಡುಬಂದಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಮೇಲುಕಾಮನಹಳ್ಳಿಯಲ್ಲಿ ನಿರ್ಮಾಣ ಆಗಿರುವ ಹೆಲಿಪ್ಯಾಡ್ನಿಂದ ರಸ್ತೆ ಮಾರ್ಗವಾಗಿ ಬಂಡೀಪರಕ್ಕೆ ಹೋಗುವುದರಿಂದ ರಸ್ತೆಯ ಎರಡು ಬದಿಗಳಲ್ಲೂ ಸ್ವಚ್ಛಗೊಳಿಸಲಾಗಿದೆ. ಈ ನಡೆ ಸಾಮಾನ್ಯ ದಿನಗಳಲ್ಲಿ ಏಕಿಲ್ಲ ಎಂದು ಅಲ್ಲಿಯ ಜನರು ಪ್ರಶ್ನಿಸಿದ್ದಾರೆ.
ಇನ್ನೂ ಮೋದಿಗೆ ಭದ್ರತೆ ನೀಡುತ್ತೇವೆ ಎನ್ನುವ ಕಾರಣಕ್ಕಾಗಿಯೇ ಬಂಡೀಪುರ ವ್ಯಾಪ್ತಿಯಲ ಸಫಾರಿ, ರೆಸಾರ್ಟ್, ಹೋಂಸ್ಟೇಗಳು ಬಂದ್ ಆಗಿರುವುದರಿಂದ ಪ್ರವಾಸಿಗರು ನಿರಾಸೆ ಅನುಭವಿಸಿರುವುದರ ಜೊತೆಗೆ, ರೆಸಾರ್ಟ್, ಹೋಂ ಸ್ಟೇ ಮಾಲೀಕರಿಗೂ ಆದಾಯಕ್ಕೂ ಬ್ರೇಕ್ ಹಾಕಿದಂತಾಗಿದೆ.
ಬಹುಮುಖ್ಯವಾಗಿ ಬಂಡೀಪುರದ ಕಾಡಂಚಿನ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಪೋಡುಗಳ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಿದ್ದು ಅಲ್ಲಿಯ ವಾಸಿಗಳಿಗೆ ಹೊಟ್ಟಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವಂತಾಗಿದೆ. ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ಇಳಿಯಲು ಹೆಲಿಪ್ಯಾಡ್ ನಿರ್ಮಿಸಲಾಗಿರುವ ಮೇಲುಕಾಮನಹಳ್ಳಿ ಗ್ರಾಮದಲ್ಲಿ ‘ನಮ್ಮ ಸಂಘ’ದ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಏಜೆನ್ಸಿ ಇದ್ದು, ಭದ್ರತೆಯ ದೃಷ್ಟಿಯಿಂದ ಏಜೆನ್ಸಿಯನ್ನೂ ಮುಚ್ಚಿಸಲಾಗಿದೆ. ಶುಕ್ರವಾರದಿಂದ ಕಾಡಂಚಿನ, ಪೋಡುಗಳ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಲಾಗಿದ್ದು ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಎಲ್ಲಿಯ ಸ್ಥಳೀಯರು.
ಬಂಡೀಪುರ ವ್ಯಾಪ್ತಿಯ 110 ಹಳ್ಳಿಗಳಿಗೆ ಸಮ್ಮ ಸಂಘವು ಅಡುಗೆ ಅನಿಲ ಸಿಲಿಂಡರ್ ಪೂರೈಸುತ್ತಿದೆ. ಗಿರಿಜನರ ಪೋಡುಗಳು, ಕಾಡಂಚಿನ ಗ್ರಾಮಗಳೇ ಇಲ್ಲಿ ಹೆಚ್ಚಾಗಿವೆ. ಅಂದಾಜು 40 ಸಾವಿರದಷ್ಟು ಗ್ರಾಹಕರಿದ್ದಾರೆ. ಬಂಡೀಪುರ ವ್ಯಾಪ್ತಿಯಲ್ಲೇ 20 ಸಾವಿರದಷ್ಟು ಸಂಪರ್ಕಗಳಿವೆ. ಪ್ರತಿ ದಿನ ಕನಿಷ್ಠ 300 ಸಿಲಿಂಡರ್ಗಳನ್ನು ಗ್ರಾಹಕರಿಗೆ ಪೂರೈಸಲಾಗುತ್ತದೆ. ಶುಕ್ರವಾರ ಬೆಳಿಗ್ಗೆಯಿಂದ ಏಜೆನ್ಸಿ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದೆ. ಮೂರು ದಿನಗಳ ಕಾಲ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ.
ಇದನ್ನೂ ಓದಿ : ಮೋದಿ ಆಗಮ ಕಾರಣದಿಂದಾಗಿ ಬಂಡೀಪುರ ರಾಷ್ಟ್ರೀಯ ಹೆದ್ದಾರಿಗೆ ಸ್ವಚ್ಛತಾ ಭಾಗ್ಯ, ಪರಿಸರ ಸೂಕ್ಷ್ಮ ವಲಯದಲ್ಲಿ ಹೆಲಿಪ್ಯಾಡ್ ನಿರ್ಮಾಣ!
ಆದಾಯಕ್ಕೂ ನಷ್ಟ: ಬೇಸಿಗೆ ರಜೆ ಆರಂಭವಾಗುತ್ತಿರುವುದರಿಂದ ಈ ಸಮಯದಲ್ಲಿ ಬಂಡೀಪುರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಬಂಡೀಪುರದಲ್ಲಿ ಸಫಾರಿ ಅಲ್ಲದೆ, ಅರಣ್ಯ ಇಲಾಖೆಯ ವಸತಿ ಗೃಹಗಳಿವೆ. ಮೇಲುಕಾಮನಹಳ್ಳಿ, ಮಂಗಲ ಗ್ರಾಮಗಳ ವ್ಯಾಪ್ತಿಯಲ್ಲಿ ರೆಸಾರ್ಟ್ಗಳು, ಹೋಂ ಸ್ಟೇಗಳು ಇವೆ. ಪ್ರಧಾನಿಯವರ ಭೇಟಿಯ ಕಾರಣದಿಂದ ಬಂಡೀಪುರ ವ್ಯಾಪ್ತಿಯಲ್ಲಿ ಗುರುವಾರದಿಂದ ಸಫಾರಿಯನ್ನು ಹಾಗೂ ರೆಸಾರ್ಟ್, ಹೋಂ ಸ್ಟೇ, ಲಾಡ್ಜ್ಗಳಲ್ಲಿ ಕೊಠಡಿ ಕಾಯ್ದಿರಿಸುವಿಕೆ, ತಂಗುವಿಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಗುರುವಾರದಿಂದಲೇ ಎಲ್ಲವೂ ಬಂದ್ ಆಗಿವೆ. ಆನ್ಲೈನ್ ಮೂಲಕ ಟಿಕೆಟ್ ಕಾಯ್ದಿಸಿದ್ದವರಿಗೆ ರೆಸಾರ್ಟ್, ಹೋಂ ಸ್ಟೇಗಳ ಮಾಲೀಕರು ಹಣ ವಾಪಸ್ ಮಾಡಿದ್ದಾರೆ.
ರಸ್ತೆ ಬದಿ ಗ್ರಿಲ್: ಮೋದಿ ಅವರು ಹೆಲಿಕಾಪ್ಟರ್ನಿಂದ ಇಳಿದು ಕಾರಿನಲ್ಲಿ ಬಂಡೀಪುರದತ್ತ ಸಾಗುವ ರಸ್ತೆಯ ಎರಡೂ ಕಡೆಗಳಲ್ಲಿ ಭದ್ರತಾ ದೃಷ್ಟಿಯಿಂದ ಗ್ರಿಲ್ಗಳನ್ನು ಅಳವಡಿಸಲಾಗಿದ್ದು, ಜಾನುವಾರುಗಳ ಓಡಾಟಕ್ಕೆ ತೊಂದರೆಯಾಯಿತು. ಪ್ರಧಾನಿ ಭದ್ರತೆಗಾಗಿ ತಮಿಳುನಾಡು ಹಾಗೂ ಕರ್ನಾಟಕದ 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಾಹನಗಳಿಗೆ ನಿರ್ಬಂಧ: ಈ ಮಧ್ಯೆ, ತಮಿಳುನಾಡಿನ ಕಡೆಗೆ ಸಂಚರಿಸುವ ಭಾರಿ ವಾಹನಗಳ ಸಂಚಾರವನ್ನು ಶುಕ್ರವಾರ ಸಂಜೆ 4ರಿಂದ ನಿರ್ಬಂಧಿಸಲಾಗಿದೆ. ಉಳಿದೆಲ್ಲ ಖಾಸಗಿ ವಾಹನಗಳ ಸಂಚಾರವನ್ನು ಶನಿವಾರ ಸಂಜೆ 4ರಿಂದ ಜಿಲ್ಲಾಡಳಿತ ನಿರ್ಬಂಧಿಸಲಿದೆ. ಊಟಿ ಕಡೆಗೆ ಹೋಗುವವರು ಕೇರಳದ ಸುಲ್ತಾನ್ ಬತ್ತೇರಿ ಮೂಲಕ ಗೂಡಲೂರಿಗೆ ತೆರಳಿ ನಂತರ ಸಾಗಬೇಕು. ಅಂದಾಜು 80 ಕಿ.ಮೀಗಳಷ್ಟು ಸುತ್ತು ಹಾಕಬೇಕಾದ ಅನಿವಾರ್ಯ ಮೋದಿ ಆಗಮನ ಕಾರಣದಿಂದ ಉಂಟಾಗಿದೆ.
ಪ್ರಧಾನಿ ಮೋದಿ ಅವರು ಚುನಾವಣಾ ಕಾರಣದಿಂದಾಗಿ ರಾಜ್ಯಕ್ಕೆ ಮತ್ತೆ ಮತ್ತೆ ಭೇಟಿ ನೀಡುತ್ತಿದ್ದು, ಅವರು ಹೋದ ಬಂದ ಕಡೆಯಲೆಲ್ಲಾ ಭದ್ರತೆ ಕಾಯ್ದುಕೊಳ್ಳಬೇಕೆಂಬ ನೆಪದಿಂದ ರಸ್ತೆಗಳನ್ನು ಬಂದ್ ಮಾಡುವುದು ಒಂದರ್ಥದಲ್ಲಿ ಸರಿಯಾದರೂ ಈ ರಸ್ತೆ ಬಂದ್ಗಳ ಸಾರ್ವಜನಿಕ ಜೀವಕ್ಕೆ ತೊಂದರೆಯಾಗುತ್ತಲೇ ಬಂದಿದೆ. ವಾಹನ ಸಂಚಾರದ ಮಾರ್ಗಗಳನ್ನು ಬದಲಾಯಿಸುವುದು ಜನಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡುತ್ತಿರುವುಲ್ಲದೇ , ಶಾಲಾ-ಕಾಲೇಜುಗಳಿಗೆ ರಜೆ ನೀಡುತ್ತಾ ವಿದ್ಯಾರ್ಥಿಗಳ ಓದಿಗೆ ತೊಡಕು ಉಂಟುಮಾಡುವುದಲ್ಲದೆ, ಇದೀಗ ಧಾನಿಯವರ ಹೆಲಿಕಾಪ್ಟರ್ ಇಳಿಯುವುದಕ್ಕೆ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಬಳಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ.. ಈ ಪ್ರದೇಶ ಪರಿಸರ ಸೂಕ್ಷ್ಮ ವಲಯದಲ್ಲಿ ಬರುತ್ತಿದ್ದು, ನಿಯಮದ ಅನುಸಾರ ಹೆಲಿಪ್ಯಾಡ್ ನಿರ್ಮಾಣಕ್ಕೆ ಅವಕಾಶ ಇಲ್ಲ. ಆದರೆ ಮೋದಿ ಆಗಮನ ಕಾರಣಕ್ಕಾಗಿ ವ್ಯವಸ್ಥೆ ಮಾಡಿರುವುದು ಕೂಡ ಜನವಿರೋಧಕ್ಕೆ ಕಾರಣವಾಗಿದೆ. ಒಂದರ್ಥದಲ್ಲಿ ಪರಿಸರ ವಿನಾಶಕ್ಕೂ ಎಡೆಮಾಡಿಕೊಡುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.