ಮೋದಿಯವರ ʻಪ್ಲಾನ್‌ Bʼ : ಏನೆಲ್ಲ ಗುಮಾನಿ, ಏನಿದರ ಹಕ್ಕೀಕತ್ತು?

ನಾಗೇಶ ಹೆಗಡೆ
ಜೂನ್‌ 4ರ ನಂತರ ಏನೋ ಭಾರೀ ಬದಲಾವಣೆ ಆದೀತೆಂಬ ಗುಮಾನಿ ಈಗ ಆಳುವ ಸರ್ಕಾರಕ್ಕೂ ಬಂದಂತಿದೆ. ಇಲ್ಲಿವೆ ಕೆಲವು ಕ್ಲೂಗಳು: ಮೋದಿ
  • ರಕ್ಷಣಾ ಸಂಶೋಧನಾ ಇಲಾಖೆಯ ಮುಖ್ಯಸ್ಥ ಕಾಮತ್‌ ಅವರ ಸೇವಾವಧಿಯನ್ನು ತುರ್ತಾಗಿ ಒಂದು ವರ್ಷ ವಿಸ್ತರಿಸಲಾಯಿತು. ಕಾರಣ ಏನು?
  • ಮೇ 31ಕ್ಕೆ ನಿವೃತ್ತರಾಗಬೇಕಿದ್ದ ಭೂಸೇನಾ ಮುಖ್ಯಸ್ಥ ಜ|| ಮನೋಜ್‌ ಪಾಂಡೆಗೆ ಒಂದು ತಿಂಗಳು ವಿಸ್ತರಣೆ ಕೊಡಲಾಯಿತು. ಏಕೆ?
  • ಲೋಕಪಾಲ್‌ ಕಾರ್ಯದರ್ಶಿ ಹುದ್ದೆಗೆ, ನ್ಯಾಯಾಂಗ ಕಾರ್ಯದರ್ಶಿ ಹುದ್ದೆಗೆ ಮತ್ತು ಸಿಬ್ಬಂದಿ ನೇಮಕಾತಿ ಆಯೋಗದ ಅಧ್ಯಕ್ಷರ ಹುದ್ದೆಗೆ ಅವಸರದಲ್ಲಿ ಬದಲೀ ನೇಮಕಾತಿ ಆಯಿತು. ಏನು ಕಾರಣ?

ಕಳೆದ ಒಂದು ತಿಂಗಳಲ್ಲಿ ಮೋದಿಯವರು ಬುಗುರಿಯಂತೆ ಗಿರಗಿರ ಇಡೀ ದೇಶವನ್ನು ಸುತ್ತಿದರು. ಹಿಂದಿನ ಎಲ್ಲ ಪ್ರಧಾನ ಮಂತ್ರಿಗಳ ರೋಡ್‌ಶೋ ದಾಖಲೆಗಳನ್ನು ಮುರಿಯುತ್ತ ಹೋದರು. ಚಿತ್ತ ಸ್ವಾಸ್ಥ್ಯವನ್ನು ಕಳಕೊಂಡವರ ಹಾಗೆ, ಭಕ್ತರಿಗೂ ಇರುಸುಮುರುಸು ಆಗುವ ಹಾಗೆ ಅಸಂಗತ ಹೇಳಿಕೆಗಳನ್ನು ನೀಡುತ್ತ ಹೋದರು.

ಇದನ್ನೂ ಓದಿ: ಭಾನುವಾರ ಹಿಂದೂಗಳಿಗೆ ಸೇರಿದ್ದಲ್ಲ ಎಂದ ಮೋದಿ

ನಂತರ ಮೊನ್ನೆ ಇದ್ದಕ್ಕಿದ್ದಂತೆ ದಿಲ್ಲಿಗೆ ಹಿಂತಿರುಗಿ, ಒಂದು ದಿನ ಮನೆಯಲ್ಲೇ ಉಳಿದರು.  ಅಂದು ಅಲ್ಲಿ ಅವರು ಮಾಡಿದ್ದೇನು? ಅವಸರದಲ್ಲಿ ಕಡತಯಜ್ಞ ಮಾಡುತ್ತ ಹೋದರೆ? ಇದು ಚರ್ಚೆಗೆ ಕಾರಣವಾಗಿದೆ. ಕೆಲವು ಉದಾಹರಣೆಗಳು ಹೀಗಿವೆ:

ಡಾ. ಸಮೀರ್‌ ಕಾಮತ್‌ ಸೇವಾವಧಿಯನ್ನು ವಿಸ್ತರಣೆ ಮಾಡಿದ್ದೇಕೆ? ದೇಶದ ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಕಡತಗಳನ್ನು ನೋಡಿಕೊಳ್ಳುವವರು ಅವರು.  ಅವರೇ ರಕ್ಷಣಾ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಮತ್ತು DRDO ಅಧ್ಯಕ್ಷರೂ ಹೌದು.  ಇದೇ ಬರುವ ಜೂನ್‌ ತಿಂಗಳ ಕೊನೆಯಲ್ಲಿ ಅವರು ನಿವೃತ್ತರಾಗಬೇಕಿತ್ತು.  ಈಗಂತೂ ಅವರ ಸೇವಾವಧಿನ್ನು ಅಷ್ಟು ತುರ್ತಾಗಿ ವಿಸ್ತರಿಸಬೇಕಾದ ತುರ್ತು ಎಂಥದೂ ಇರಲಿಲ್ಲ.

ಮೋದಿಯವರು ತಮ್ಮ ಅಭಿಮಾನಿಗಳ ನಿರೀಕ್ಷೆಯಂತೆ ʻಚಾರ್‌ ಸೌ ಅಥವಾ ಕಡೇಪಕ್ಷ ತೀನ್‌ಸೌ ಪಾರ್‌ʼ ದಾಟಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಮೇಲೆ ಕಾಮತ್‌ ಅವರಿಗೆ ಸೇವಾ ವಿಸ್ತರಣೆಯನ್ನು ಕೊಡಬಹುದಿತ್ತು.  ಆ ಕೆಲಸ ಈಗಲೇ ತುರ್ತಾಗಿ ಏಕೆ ಆಗಬೇಕಿತ್ತು?

ತಾನು ಮತ್ತೆ ಅಧಿಕಾರಕ್ಕೆ ಅಕಸ್ಮಾತ್‌ ಬಾರದೇ ಇದ್ದರೆ? ತಮ್ಮವರಾಗಿ ಅಲ್ಲೊಬ್ಬರು ಇರಲಿ ಎಂತಲೆ? ಅಥವಾ ಏನಾದರೂ ಮಹತ್ವದ  ಫೈಲ್‌ಗಳನ್ನು ಕಣ್ಮರೆ ಮಾಡಲೆಂದೆ? ಅಂಕಿ ಸಂಖ್ಯೆಗಳ ಮೇಲೆ ಹಸ್ತಕ್ಷೇಪ ಮಾಡಲೆಂದೆ?

ರಕ್ಷಣಾ ಸಂಶೋಧನೆಯಲ್ಲಿ DRDO ಜೊತೆಗೆ ಖಾಸಗಿಯವರಿಗೂ (ಅದಾನಿ ಕಂಪನಿಗೂ) ಭಾಗವಹಿಸಲು ಅವಕಾಶ ಕೊಡಲಾಗಿದೆ. ಬೇರೆ ದೇಶಗಳಿಂದ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವಾಗ 30% ಭಾರತೀಯ ಏಜನ್ಸಿಗಳಿಗೇ ಮೀಸಲಾತಿ ಇಡಲಾಗಿದೆ. ಅದರಲ್ಲೂ ಸಚಿವರ ಮಿತ್ರ ವರ್ಗದವರೇ ಜಾಗ ಗಿಟ್ಟಿಸಿಕೊಂಡಿದ್ದಾರೆ. ಅವರನ್ನೂ ರಕ್ಷಿಸಬೇಕಿದೆಯೆ? 58 ಸಾವಿರ ಕೋಟಿ ರಫೇಲ್‌ ವ್ಯವಹಾರದ ಬೂದಿ ಮುಚ್ಚಿದ ಕೆಂಡದಂಥ ವಿವಾದದಲ್ಲಿ ಈ ಇಲಾಖೆಯದೂ ಪಾತ್ರ ಇದೆಯೆ?

ಮೋದಿಯವರಿಲ್ಲದ  ಹೊಸ ಸರ್ಕಾರ ಬಂದರೆ ಡಾ. ಕಾಮತ್‌ ಅವರ ಸೇವಾ ವಿಸ್ತರಣೆಯನ್ನು ಕ್ಯಾನ್ಸಲ್‌ ಮಾಡುವಂತಿಲ್ಲ. ಬದಲಿಸುವ ಹಾಗೂ ಇಲ್ಲ. ಅವರು ಅಲ್ಲೇ ಕೂತಿರುತ್ತಾರೆ.

ಜೂನ್‌ 4ರ ನಂತರ ಏನೋ ಭಾರೀ ಬದಲಾವಣೆ ಆದೀತೆಂಬ ಆತಂಕ ಈಗಿನ ಉಸ್ತುವಾರಿ ಸರಕಾರಕ್ಕಿದೆಯೆ? ಭೂಸೇನಾ ಮುಖ್ಯಸ್ಥರಿಗೆ ಒಂದು ತಿಂಗಳು ಕಾಲ ಅಧಿಕಾರದಲ್ಲೇ ಮುಂದುವರಿಯಲು ಹೇಳಿದ್ದೇಕೆ? (ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ಒಮ್ಮೆ ಹೀಗಾಗಿತ್ತು. ಆ ನಂತರ ಇಂಥ ಸೇವಾ ವಿಸ್ತರಣೆಯನ್ನು ಯಾರಿಗೂ ಕೊಟ್ಟಿರಲಿಲ್ಲ.)

ಮುಖ್ಯ ಚುನಾವಣಾ ಆಯುಕ್ತರಿಗೆ Z ಕೆಟೆಗರಿ ಭದ್ರತೆಯನ್ನು (ಇದೇ ಮೊದಲ ಬಾರಿಗೆ) ಒದಗಿಸಿದ್ದೇಕೆ? ಅವರು ಹೋದಲ್ಲೆಲ್ಲ ಕಮಾಂಡೊಗಳು ಹಿಂಬಾಲಿಸುತ್ತಿರುವುದೇಕೆ?  ಸಂಸತ್‌ ಭವನದ ಭದ್ರತಾ ವ್ಯವಸ್ಥೆಯನ್ನು ಡಬಲ್‌ ಮಾಡಿದ್ದೇಕೆ? (1400 ಸಿಬ್ಬಂದಿಯುಳ್ಳ CRPF ಪಡೆಯನ್ನು ಬದಲಿಸಿ, 3300 ಸಿಬ್ಬಂದಿಯುಳ್ಳ CISF ಪಡೆಯನ್ನು ಇತ್ತೀಚೆಗೆ ನೇಮಕ ಮಾಡಲು ವಿಶೇಷ ಕಾರಣವೇನಾದರೂ ಇದೆಯೆ?)

ಅಧಿಕಾರ ಕಳೆದುಕೊಂಡ ಟ್ರಂಪ್‌ ಮಹಾಶಯನ ಪರವಾಗಿ ಆತನ ಅಭಿಮಾನಿಗಳು ಅಮೆರಿಕದ ಕ್ಯಾಪಿಟಲ್‌ ಹಿಲ್ ನ ಕಾಂಗ್ರೆಸ್‌ ಭವನಕ್ಕೆ ಹಠಾತ್‌ ನುಗ್ಗಿ ದಾಂ ಧೂಂ ದಾಂಧಲೆ ಎಬ್ಬಿಸಿದ್ದು ನಮಗೆ ಗೊತ್ತೇ ಇದೆ. ನಮ್ಮಲ್ಲೂ ಜೂನ್‌ 4ರ ಮರುದಿನ ಏನಾದರೂ ಅಪ್ರಿಯ ಘಟನೆ ನಡೆದೀತೆಂದು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಒಳ್ಳೆಯದೇನೊ ಹೌದು.  ಆದರೆ ಇತರ ಕ್ರಮಗಳಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಈ ವಿಷಯದಲ್ಲಿ ವಿಸ್ತೃತ ಚರ್ಚೆಯನ್ನು (ಹಿಂದೀ ಭಾಷೆಯಲ್ಲಿ) ಆಲಿಸಬೇಕೆಂದಿದ್ದರೆ ಈ ಕೆಳಗಿನ ಲಿಂಕ್‌ ಒತ್ತಿ.

ಅಧಿಕಾರ ಕೈಬಿಡಲಿದೆ ಎಂಬುದು ಖಾತ್ರಿಯಾದಾಗ ಅವಸರದಲ್ಲಿ ಫೈಲ್‌ಗಳಿಗೆ ಸಹಿ ಹಾಕುವುದು ಇದೇ ಮೊದಲೇನೂ ಅಲ್ಲ; ಯಡ್ಯೂರಪ್ಪನವರು ಜೈಲಿಗೆ ಹೋಗುವ ಮುನ್ನ ರಾತ್ರಿಯಿಡೀ ಇದೇ ಕೆಲಸ ಮಾಡಿದ್ದರ ಬಗ್ಗೆ ವರದಿ ಇತ್ತು. ಪರಿಸರಕ್ಕೆ ಶಾಶ್ವತ ಹಾನಿ ತರಬಲ್ಲ ಕೆಲವು ಉದ್ಯಮಗಳಿಗೂ ಅವರು ಆಗ ಸಹಿ ಹಾಕಿದ್ದರು.

ತೋಳೇರಿಸಿಕೊಂಡು ಬರುವ ಟ್ರೋಲ್‌ಗಳಿಗೆ ಇಲ್ಲಿದೆ ಸಿಹಿ ಸುದ್ದಿ:

ಕೊನೇ ನಿಮಿಷದ ಕಡತಯಜ್ಞದಲ್ಲಿ ಕಾಂಗ್ರೆಸ್‌ ಸಚಿವರೂ ಕಡಿಮೆ ಏನಿಲ್ಲ. ಹಾಗೆ ನೋಡಿದರೆ ಇವರ ಯಜ್ಞದ  ಚರಿತ್ರೆ ಇದಕ್ಕಿಂತ ಕರಾಳದ್ದಾಗಿತ್ತು.

ಖಡಕ್‌  ಪರಿಸರ ಸಚಿವರಾಗಿದ್ದ ಜಯರಾಂ ರಮೇಶರನ್ನು ಕಿತ್ತೊಗೆದು,  ಚುನಾವಣೆಗೆ ತುಸು ಮುಂಚೆ, ಸಿಂಗ್‌ ಸರ್ಕಾರ ಅವರ ಜಾಗಕ್ಕೆ ಜಯಂತಿ ನಟರಾಜ್‌ ಅವರನ್ನು ಕೂರಿಸಿತು. ಕೆಲವು ಕೊಳಕು ಉದ್ಯಮಗಳಿಗೆ ತುರ್ತು ಕ್ಲಿಯರೆನ್ಸ್‌ ಕೊಡಬೇಕಿತ್ತು. ಆದರೆ ಜಯಂತಿ ಕೂಡ ತುಸು ನಿಧಾನವೆಂದು ಅನ್ನಿಸಿತೊ ಏನೊ, ಸರ್ಕಾರ (2013ರ ಡಿಸೆಂಬರ್‌ನಲ್ಲಿ) ಅವರನ್ನು ಕಿತ್ತು ಹಾಕಿತು.  ಅವರ ಸ್ಥಾನಕ್ಕೆ-

ಪರಿಸರಕ್ಕೆ ಸಂಬಂಧವೇ ಇಲ್ಲದ (ಬದಲಿಗೆ ತದ್ವಿರುದ್ಧದ ಪೆಟ್ರೋಲಿಯಂ ಸಚಿವರಾದ) ನಮ್ಮ ವೀರಪ್ಪ ಮೊಯ್ಲಿಯವರನ್ನು ಅಲ್ಲಿ ಕೂರಿಸಿ ಅವರಿಂದ ಕಡತಯಜ್ಞ ಮಾಡಿಸಿತ್ತು.  ಪಕ್ಷಕ್ಕೆ ಶೀಘ್ರವಾಗಿ ಹಣ ಸಂಗ್ರಹಿಸಲೆಂದೊ ಏನೊ, ಪರಿಸರ ಧ್ವಂಸಕ್ಕೆ ಕಾರಣವಾಗಬಲ್ಲ ಅನೇಕ ಉದ್ಯಮಗಳಿಗೆ ಅವರು ಚಾಲನೆ ಕೊಟ್ಟರು. ಪರಸ್ಪರ ತದ್ವಿರುದ್ಧ ಖಾತೆಗಳ ಸಚಿವನಾಗಿ ತಾನು ಅದೆಂಥ ವೇಗದಲ್ಲಿ ಫೈಲ್‌ ಕ್ಲಿಯರ್‌ ಮಾಡಿದೆ ಎಂಬುದನ್ನು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರು ಕೂಡ.

ಈಗ ತುಸು ವಿರಾಮದ ಸಮಯ. ಮೋದಿಯವರು ನಾಡಿದ್ದು ಮೇ 30ರಿಂದ ಎರಡು ದಿನಗಳಮಟ್ಟಿಗೆ ಕನ್ಯಾಕುಮಾರಿಯಲ್ಲಿ ಧ್ಯಾನಕ್ಕೆ ಕೂರಲಿದ್ದಾರಂತೆ. ಅವರು ರೀಚಾರ್ಜ್‌ ಮಾಡಿಸಿಕೊಂಡು, ಪರಮಾತ್ಮನ ಇನ್ನಷ್ಟು ಅಂಶಗಳನ್ನು ತಮ್ಮಲ್ಲಿ ಆವಾಹಿಸಿಕೊಂಡು ಕ್ಷೇಮವಾಗಿ ಹಿಂತಿರುಗಲಿ; ತಮ್ಮೊಂದಿಗೆ ಮನ್ಸೂನ್‌ ಮೋಡಮಾರುತಗಳನ್ನೂ ಅವರು ಹಿತಮಿತ ಪ್ರಮಾಣದಲ್ಲಿ ತರಲಿ  ಎಂದು ಹಾರೈಸೋಣ.

ಇದನ್ನೂ ನೋಡಿ: ಈ ಬಾರಿ ಬಿಜೆಪಿಗೆ ಬಹುಮತ ಬರೋದು ಕಷ್ಟ – ಬಿ.ಎಂ.ಹನೀಫ್

Donate Janashakthi Media

Leave a Reply

Your email address will not be published. Required fields are marked *