ಭಾರತದ ರೈತರ ದನಿಗಳಿಗೆ ಕಿವಿಗೊಡಿ, ಡಬ್ಲ್ಯುಟಿಒದ ಎಂಸಿ12 ರಲ್ಲಿ ರೈತರ ಹಿತಗಳನ್ನು ಕಾಪಾಡಿ-ಪ್ರಧಾನ ಮಂತ್ರಿಗಳಿಗೆ ಎಐಕೆಎಸ್ ಪತ್ರ

ಜೂನ್ 12ರಿಂದ 15 ರವರೆಗೆ ಜಿನೇವಾದಲ್ಲಿ ‘ವಿಶ್ವ ವ್ಯಾಪಾರ ಸಂಘಟನೆ’(ಡಬ್ಲ್ಯುಟಿಒ)ಯ ಹನ್ನೆರಡನೇ ಮಂತ್ರಿಮಟ್ಟದ ಸಮ್ಮೇಳನ(ಎಂಸಿ12) ನಡೆಯಲಿದೆ. ಇದರಲ್ಲಿ ಭಾರತದ ರೈತರ ದನಿಗಳಿಗೆ ಕಿವಿಗೊಡಬೇಕು, ಅವರ ಹಿತಾಸಕ್ತಿಗಳನ್ನು ರಕ್ಷಿಸುವ ಗಟ್ಟಿ ನಿಲುವುಗಳನ್ನು ತಳೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದೆ.

ತೀವ್ರ ಕೃಷಿ ಬಿಕ್ಕಟ್ಟಿನಲ್ಲಿ ನರಳುತ್ತಿದ್ದ ಭಾರತದ ರೈತರನ್ನು ಕೊವಿಡ್-19 ಮತ್ತಷ್ಟು ಹಿಂಡಿ-ಹಿಪ್ಪೆ ಮಾಡಿದೆ. ಲಾಗುವಾಡುಗಳ ವಿಪರೀತ ಬೆಲೆಯೇರಿಕೆಗಳು ಒಂದೆಡೆಯಲ್ಲಿ, ಕೃಷಿ ಉತ್ಪನ್ನಗಳಿಗೆ ತಕ್ಕ ಫಲ ನೀಡದ ಬೆಲೆಗಳು ಇನ್ನೊಂದೆಡೆಯಲ್ಲಿ ರೈತರನ್ನು ಸಾಲದ ಬಲೆಗೆ ತಳ್ಳುತ್ತಿವೆ. ರೈತರ ಈ ಪರಿಸ್ಥಿತಿಯಲ್ಲಿ ದೇಶದ ಆಹಾರ ಭದ್ರತೆಯ ಅಗತ್ಯಗಳನ್ನು ಪೂರೈಸುವುದು ಕೂಡ ಕಷ್ಟಕರವಾಗುತ್ತದೆ. ಮಂತ್ರಿಮಟ್ಟದ ಸಭೆಯಲ್ಲಿ ಭಾರತದ ಪಾತ್ರ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಐಕೆಎಸ್ ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ಹೇಳಿದೆ.

ಈ ಸಮ್ಮೇಳನ ಕೃಷಿ ಮತ್ತು ಆಹಾರ ಭದ್ರತೆಗೆ ಸಂಬಂಧಪಟ್ಟ ಬಹಳ ಮಹತ್ವದ ಪ್ರಶ್ನೆಗಳನ್ನು ಚರ್ಚಿಸಲಿದೆ. ಈ ಚರ್ಚೆಗಳಿಂದ ಮೂಡಿ ಬರಬಹುದಾದ ಕಾನೂನುಪ್ರಕಾರ ಪಾಲಿಸಲೇ ಬೇಕಾದ ಒಪ್ಪಂದಗಳು ಕೋಟ್ಯಂತರ ಭಾರತೀಯ ರೈತರಿಗೆ ಕೇಡುಂಟು ಮಾಡಬಹುದು. ಆದ್ದರಿಂದ ಭಾರತ ಸರಕಾರ ನಮ್ಮ ದೇಶದ ರೈತರ ದನಿಗಳಿಗೆ ಕಿವಿಗೊಡುವುದು ಮತ್ತು ಅವನ್ನು ಈ ಸಮ್ಮೇಳನದಲ್ಲಿ ಬಿಂಬಿಸುವುದು ಅತ್ಯಗತ್ಯವಾಗಿದೆ. ಡಬ್ಲ್ಯುಟಿಒ ದಲ್ಲಿ ‘ಸಾರ್ವಜನಿಕ ದಾಸ್ತಾನು ಪ್ರಶ್ನೆಗೆ ಶಾಶ್ವತ ಪರಿಹಾರ’(ಪಿಎಸ್‌ಹೆಚ್) ಮತ್ತು ‘ವಿಶೇಷ ರಕ್ಷಕ ವ್ಯವಸ್ಥೆ’(ಎಸ್‌ಎಸ್‌ಎಂ) ಈ ಪ್ರಶ್ನೆಗಳನ್ನು ಈ ಮೊದಲೇ ಎತ್ತಲಾಗಿದ್ದು ಭಾರತದಂತಹ ಮೂರನೇ ಜಗತ್ತಿನ ದೇಶಗಳಿಗೆ ಬಹುಮುಖ್ಯವಾದ ಈ ಪ್ರಶ್ನೆಗಳನ್ನು ಶ್ರೀಮಂತ ಪಾಶ್ಚಿಮಾತ್ಯ ದೇಶಗಳು ಬದಿಗೊತ್ತಲು ಪ್ರಯತ್ನಿಸುತ್ತ ಬಂದಿವೆ. ತಮ್ಮ ದೊಡ್ಡ ರೈತರಿಗೆ ಭಾರೀ ಸಬ್ಸಿಡಿಗಳನ್ನು ಕೊಡುವ ಈ ದೇಶಗಳು ಭಾರತದಂತಹ ದೇಶಗಳು ತಮ್ಮ ರೈತರಿಗೆ ಕೊಡುವ ಅಲ್ಪ ಬೆಂಬಲ ಬೆಲೆಗಳ ವಿರುದ್ಧ ಆಕ್ಷೇಪಗಳನ್ನು ಎತ್ತುತ್ತ ಬಂದಿವೆ. ಈ ಬಾರಿಯೂ ಅದೇ ಪ್ರಯತ್ನ ನಡೆಯುತ್ತಿದೆ. ಬಡ ದೇಶಗಳ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಪ್ರಯತ್ನಗಳಿಗೆ ಅಡ್ಡಗಾಲು ಹಾಕುತ್ತಲೇ ತಮ್ಮ ಮಾರುಕಟ್ಟೆ ಬಲವನ್ನು ಹೆಚ್ಚಿಸಿಕೊಳ್ಳಲು ‘ವ್ಯಾಪಾರ ಮತ್ತು ಆಹಾರ ಭದ್ರತೆಯ ಘೋಷಣೆ’ ಅಂಗೀಕರಿಸುವಂತೆ ಮಾಡುವ ಯೋಜನೆ ಹಾಕಿವೆ ಎಂದು ವರದಿಯಾಗಿದೆ.

ಈ ಹಿಂದೆ ಭಾರತ ಸರಕಾರ ಈ ಪ್ರಶ್ನೆಗಳ ಮೇಲೆ ಅಭಿವೃದ್ಧಿಶೀಲ ದೇಶಗಳನ್ನು ಅಣಿನೆರೆಸುವಲ್ಲಿ ಒಂದು ಪಾತ್ರವನ್ನು ವಹಿಸಿತು. ಈ ಬಾರಿಯೂ ಈ ವಿಷಯದಲ್ಲಿ ಅದು ಗಟ್ಟಿ ನಿಲುವು ತಳೆಯಬೇಕು. ಭಾರತದ ರೈತರು ಇತ್ತೀಚೆಗೆ ಭಾರತ ಸರಕಾರ ತಂದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ಮಾಡಿರುವುದನ್ನು ಈ ಸಂದರ್ಭದಲ್ಲಿ ಎಐಕೆಎಸ್ ನೆನಪಿಸಿದೆ. ಈ ಕೃಷಿ ಕಾಯ್ದೆಗಳು ಡಬ್ಲ್ಯುಟಿಒ ಆದೇಶಪಾಲನೆಗೆ ತಂದ ಕಾಯ್ದೆಗಳು. ಈ ಹೋರಾಟದಲ್ಲಿ ಸಾರ್ವಜನಿಕ ಧಾನ್ಯ ಖರೀದಿ ಮತ್ತು ರೈತರಿಗೆ ಕನಿಷ್ಟ ಬೆಂಬಲ ಬೆಲೆ ಪ್ರಮುಖ ಪ್ರಶ್ನೆಗಳಾಗಿ ಮುನ್ನೆಲೆಗೆ ಬಂದಿದ್ದವು. ಭಾರತದ ರೈತರ ಈ ದನಿಗಳಿಗೆ ಸರಕಾರ ಕಿವಿಗೊಡಬೇಕು. ದ್ವಿಗುಣ ಶಕ್ತಿಯಿಂದ ಅಭಿವೃದ್ಧಿಶೀಲ ದೇಶಗಳನ್ನು ಅಣಿನೆರೆಸಬೇಕು. ಪಿಎಸ್‌ಹೆಚ್ ಮತ್ತು ಎಸ್‌ಎಸ್‌ಎಂ ಪ್ರಶ್ನೆಗಳ ಬಗ್ಗೆ ದೃಢ ನಿಲುವು ತಳೆಯಬೇಕು ಮತ್ತು ಶ್ರೀಮಂತ ದೇಶಗಳು ಕೊಡುತ್ತಿರುವ ಸಬ್ಸಿಡಿಗಳಿಗೆ ಸವಾಲು ಹಾಕಬೇಕು ಎಂದು ಎಐಕೆಎಸ್ ಆಗ್ರಹಿಸಿದೆ.

 ಈ ಮಧ್ಯಂತರ ಕ್ರಮಗಳೊಂದಿಗೆ ಡಬ್ಲ್ಯುಟಿಒ ದಲ್ಲಿ ನಾವು ಭಾಗವಹಿಸುವುದರಿಂದ ಸಿಗುವ ಪ್ರಯೋಜನಗಳು ಮತ್ತು ಅದಕ್ಕೆ ತೆರಬೇಕಾದ ಬೆಲೆಗಳ ಒಂದು ಸ್ವತಂತ್ರ ವಿಶ್ಲೇಷಣೆ ನಡೆಬೇಕು, ಅಂತಿಮವಾಗಿ ಇದರಿಂದ ಹೊರಬರುವ ಕ್ರಮಗಳ ಬಗ್ಗೆ ಯೋಚಿಸಬೇಕು ಎಂದೂ ಎಐಕೆಎಸ್ ಹೇಳಿದೆ. ಏಕೆಂದರೆ ಈ ಸಂಘಟನೆಯ ಮೂಲಕ ನಮ್ಮಂತಹ ದೇಶಗಳ ಮೇಲೆ ಅಸಮ ಮತ್ತು ಅನ್ಯಾಯದ ನಿಯಮಗಳನ್ನು ಹೇರುತ್ತಲೇ ಶ್ರೀಮಂತ ದೇಶಗಳು ಮತ್ತು ದೊಡ್ಡ ಕೃಷಿ ವ್ಯಾಪಾರೀ ಸಂಸ್ಥೆಗಳಿಗೆ ಅನುಕೂಲಕರವಾದ ನಿಯಮಗಳನ್ನು ಮಾಡಲಾಗುತ್ತಿದೆ. ಈ ಸಂದರ್ಭದಲಿ, ಈ ಸಮಸ್ತ ನವ-ಉದಾರವಾದಿ ಆರ್ಥಿಕ ಧೋರಣೆಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ಕೃಷಿಯನ್ನು ಡಬ್ಲ್ಯುಟಿಒ ಮತ್ತು ಅಸಮ ‘ಮುಕ್ತ ವ್ಯಾಪಾರ ಒಪ್ಪಂದ’ಗಳಿಂದ ಹೊರಗಿಡಬೇಕು ಎಂಬ ತನ್ನ ಮೂಲಭೂತ ನಿಲುವನ್ನು ಎಐಕೆಎಸ್ ಪುನರುಚ್ಚರಿಸಿದೆ.

ಭಾರತ ಸರಕಾರ ರೈತರ ನಿಲುವುಗಳನ್ನು ಗಮನಕ್ಕೆ ತಗೊಳ್ಳುತ್ತದೆ ಮತ್ತು ಜಿನೇವಾದಲ್ಲಿ ನಡೆಯಲಿರುವ ಎಂಸಿ12ರಲ್ಲಿ ಭಾರತದ ರೈತರು ಮತ್ತು ಜನಸಮೂಹಗಳ ಹಿತಗಳನ್ನು ಬಿಂಬಿಸುತ್ತದೆ ಎಂಬ ಆಶಾಭಾವನೆಯನ್ನು ಅಖಿಲ ಭಾರತ ಕಿಸಾನ್ ಸಭಾ ಪ್ರಧಾನಿಗಳಿಗೆ ಬರೆದ ಈ ಪತ್ರದಲ್ಲಿ ವ್ಯಕ್ತಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *