ಬೆಂಗಳೂರು : ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಲೋಕಾರ್ಪಣೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ನಾಳೆ ಆಗಮಿಸಲಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಸರ್ಕಾರಿ ಕಾರ್ಯಕ್ರಮ ಎಂದು ಕಂಡುಬಂದರೂ ವಾಸ್ತವವಾಗಿ ಬಿಜೆಪಿ ಪ್ರಾಯೋಜಿತ ರಾಜಕೀಯ ಕಾರ್ಯಕ್ರಮವೆಂದೇ ಬಿಂಬಿತವಾಗಿದೆ. ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ 25ಕ್ಕೂ ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಮೋದಿ ಮತದಾರರ ಮನಗೆಲ್ಲುವ ಕಸರತ್ತಿಗೆ ಕೈ ಹಾಕಲಿದ್ದಾರೆ ಎನ್ನಲಾಗುತ್ತಿದೆ.
ಸುಮಾರು 16,000 ಕೋಟಿ ರೂ.ಮೌಲ್ಯದ ಯೋಜನೆಗಳ ಲೋಕಾರ್ಪಣೆ :
ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ವೇ ಉದ್ಘಾಟನೆ ಸೇರಿದಂತೆ ಸುಮಾರು 16,000 ಕೋಟಿ ರೂ. ಮೌಲ್ಯದ ಯೋಜನೆಗಳ ಲೋಕಾರ್ಪಣೆ, ಮಧ್ಯಾಹ್ನ 3:15ರ ಸುಮಾರಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೂಲಸೌಕರ್ಯ ಯೋಜನೆಗಳ ಕ್ಷಿಪ್ರಗತಿಯ ಅಭಿವೃದ್ಧಿಯು ದೇಶದಾದ್ಯಂತ ವಿಶ್ವ ದರ್ಜೆಯ ಸಂಪರ್ಕವನ್ನು ಖಾತ್ರಿಪಡಿಸುವ ಪ್ರಧಾನಿಯವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಈ ಪ್ರಯತ್ನದಲ್ಲಿ ಮುಂದೆ ಸಾಗುತ್ತಿರುವ ಪ್ರಧಾನಿಯವರು ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ವೇಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿ-275ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ 6-ಪಥವನ್ನು ಒಳಗೊಂಡಿದೆ. 118 ಕಿಮೀ ಉದ್ದದ ಈ ಯೋಜನೆಯನ್ನು ಒಟ್ಟು 8480 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಸುಮಾರು 3 ಗಂಟೆಗಳಿಂದ ಸುಮಾರು 75 ನಿಮಿಷಗಳಿಗೆ ಇಳಿಸಿದೆ. ಇದು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.ಇದೇ ವೇಳೆ ಮೈಸೂರು-ಕುಶಾಲನಗರ 4 ಲೇನ್ ಹೆದ್ದಾರಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಲಿದ್ದಾರೆ. 92 ಕಿಮೀ ಉದ್ದದ ಈ ಯೋಜನೆಯನ್ನು ಸುಮಾರು 4130 ಕೋಟಿ. ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಮಂಡ್ಯ ಕೇಸರಿಮಯ:
ಮೋದಿ ಆಗಮನದ ಹಿನ್ನಲೆಯಲ್ಲಿ ಸಕ್ಕರೆ ನಾಡು ಮಂಡ್ಯ ಕೇಸರಿಮಯವಾಗಿದ್ದು, ಮೈಸೂರು ಕರ್ನಾಟಕದಲ್ಲಿ ಈ ಬಾರಿ ಹೆಚ್ಚಿನ ಸ್ಥಾನ ಗಳಿಸುವ ಬಿಜೆಪಿ ಕಾರ್ಯತಂತ್ರಕ್ಕೆ ಪ್ರಧಾನಿಯವರ ಭೇಟಿ ಟಾನಿಕ್ ನೀಡಲಿದೆ ಎಂದು ಹೇಳಲಾಗುತ್ತಿದೆ.
ನಗರದ ಪ್ರವಾಸಿಮಂದಿರ ವೃತ್ತದಿಂದ ಪ್ರಾರಂಭವಾಗಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಮಾರ್ಗವಾಗಿ ನಂದಾ ವೃತ್ತದ ಮೂಲಕ ರೋಡ್ ಶೋ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಸಮಾವೇಶ ನಡೆಯಲಿದೆ.
ಇದನ್ನೂ ಓದಿ : ಮೋದಿ ರೋಡ್ ʼಶೋʼಕಿಗೆ ಮರಗಳಿಗೆ ಬಿತ್ತು ಕೊಡಲಿ!
ಧಾರವಾಡಕ್ಕೂ ಭೇಟಿ: ಮಂಡ್ಯ ಭೇಟಿ ನಂತರ ಧಾರವಾಡಕ್ಕೆ ತೆರಳಿರುವ ಪ್ರಧಾನಿಮೋದಿ ಅವರು, 5 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿ ಆಗಮಿಸಲಿರುವ ಮೋದಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಐಐಟಿ ಸ್ಥಳಕ್ಕೆ ತೆರಳಲಿದ್ದಾರೆ. ಧಾರವಾಡ ಐಐಟಿ ನೂತನ ಕಟ್ಟಡ, ಏಷ್ಯಾದ ಅತಿ ಉದ್ದದ ಹುಬ್ಬಳ್ಳಿಯ ರೈಲ್ವೆ ಪ್ಲಾಟಾರ್ಮ್ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಐಐಟಿ-ಧಾರವಾಡ ಕ್ಯಾಂಪಸ್ ಹೊರಗೆ ಮೈದಾನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಮೋದಿ ಅವರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಲಾದ ವಿಶ್ವದ ಅತಿ ಉದ್ದದ ರೈಲ್ವೆ ಫ್ಲಾಟ್‍ಫಾರಂ ಉದ್ಘಾಟಿಸಲಿದ್ದಾರೆ. ನಂತರ ತುಪ್ಪರಿಹಳ್ಳ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
250 ಕೋಟಿ ರೂ.ಗಳ ಜಯದೇವ ಹೃದ್ರೋಗ ಸಂಸ್ಥೆ ಮತ್ತು 144 ಗ್ರಾಮ ಪಂಚಾಯಿತಿಗಳಿಗೆ ನಲ್ಲಿ ನೀರು ಒದಗಿಸುವ 1,200 ಕೋಟಿ ರೂ.ಗಳ ಜಲಜೀವನ್ ಮಿಷನ್‍ಗೆ ಶಂಕುಸ್ಥಾಪನೆ, 42 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 295 ವಿವೇಕ್ ತರಗತಿ ಕೊಠಡಿಗಳನ್ನು ಉದ್ಘಾಟನೆ ನಂತರ ಸ್ಮಾರ್ಟ್ ಸಿಟಿ ಯೋಜನೆಯಡಿ 353 ಕೋಟಿ ರೂ. ವೆಚ್ಚದ 15 ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.
ಹುಬ್ಬಳ್ಳಿಯಲ್ಲಿ 166 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಮೋದಿ, ಹುಬ್ಬಳ್ಳಿ-ಹೊಸಪೇಟೆ ರೈಲು ಮಾರ್ಗ ವಿದ್ಯುದೀಕರಣ ಯೋಜನೆಯನ್ನು ಕೂಡ ಉದ್ಘಾಟಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶಕ್ಕೆ ಧಾರವಾಡ ಜಿಲ್ಲೆಯಿಂದಲೇ ಎರಡು ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ : ಫೆ.27ಕ್ಕೆ ಬೆಳಗಾವಿಗೆ ಮೋದಿ ಭೇಟಿ ಹಿನ್ನೆಲೆ; ಪ್ರಥಮ ಪಿಯುಸಿ ಪರೀಕ್ಷೆ ಮುಂದೂಡಿದ ಶಿಕ್ಷಣ ಇಲಾಖೆ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿಯ ರಾಷ್ಟೀಯ ನಾಯಕರುಗಳು ಆಗಮಿಸುತ್ತಿರುವುದು ರಾಜ್ಯದಲ್ಲಿ ಬಿಜೆಪಿಯನ್ನು ಭದ್ರಗೊಳಿಸಲೆಂದೇ ಎಂದು ಹೇಳಲಾಗುತ್ತಿದೆ.