ಇದು ಮೋದಿ ಟೆಲಿಪ್ರೊಂಪ್ಟರ್ ಕಥೆ.!!

ಪ್ರಮೋದ್ ಹೊಸ್ಬೇಟ್‌

ಮೋದಿಜೀಯವರಿಗೆ ಟೆಲಿಪ್ರೊಂಪ್ಟರ್ ಕೈಕೊಟ್ಟಾಗ ಹಿಂಗೆಲ್ಲ ಆಗಿಬುಡುತ್ತೆ. ಪ್ರತಿಬಾರಿಯೂ ಸರಿದೂಗಿಸುತ್ತಿದ್ದ ಪ್ರಧಾನಿಯವರಿಗೆ ಈ ಬಾರಿ ಸಾಧ್ಯವಾಗಲಿಲ್ಲ. ಅದಕ್ಕಾಗಿ ಅವರು ಕಕ್ಕಾಬಿಕಿಯಾಗಿ ಅತ್ತಿತ್ತ ನೋಡಿ, ಪೇಚಿಗೆ ಸಿಲುಕಿ, ಎಲ್ಲರಿಂದಲೂ ಟ್ರೋಲ್‌ ಆಗುವಂತಾಯ್ತು. ಅಂದಹಾಗೆ ಈ ಟೆಲಿಪ್ರೊಂಪ್ಟರ್‌ ಅಂದ್ರೆ ಏನು? ಯಾರೆಲ್ಲ ಬಳಸುತ್ತಾರೆ, ರಾಜಕಾರಣಿಗಳು ಇದನ್ನು ಬಳಸುವುದಕ್ಕೆ ಆರಂಭ ಮಾಡಿದ್ದು ಯಾಕೆ. ಈ ಕುರಿತಾಗಿ ತಾಂತ್ರಿಕ ತಜ್ಞ, ಲೇಖಕ ಪ್ರಮೋದ್‌ ಹೊಸ್ಬೇಟ್‌ ಬರೆದಿರುವ ಲೇಖನ.  ಅಂದಹಾಗೆ ಈ ಲೇಖನವನ್ನು ಅವರು ಬರೆದದ್ದು 2019 ರಲ್ಲಿ.

ಟೆಲಿಪ್ರೊಂಪ್ಟರ್ (Teleprompter) ಯಂತ್ರ ಇತ್ತೀಚೆಗೆ ಇಂಡಿಯಾ ದೇಶದಲ್ಲಿ ದೊಡ್ದ ಸುದ್ದಿಯಲ್ಲಿದೆ. ಜನ ಸಾಮಾನ್ಯರಿಗೆ ಈ ಟೆಲಿಪ್ರೊಂಪ್ಟರ್ ಯಂತ್ರದ ಬಗ್ಗೆ ಜಾಸ್ತಿ ಮಾಹಿತಿ ಇರಲು ಸಾದ್ಯವಿಲ್ಲ! ಯಾಕಂದ್ರೆ ಅವರು ಅದನ್ನು ಬಳಸುದಿಲ್ಲ. ಈ ಟೆಲಿಪ್ರೊಂಪ್ಟರ್ ಯಂತ್ರವನ್ನು 1950 ರಲ್ಲೇ ರೂಪಿಸಲಾಗಿತ್ತು. ಆ ಕಾಲದಲ್ಲಿ ಟಿವಿಯಲ್ಲಿ ವಾರ್ತೆ ಓದುತ್ತಿರುವ ವಾಚಕರು, ಕೈಯಲ್ಲಿ ಪೇಪರ್ ಇಟ್ಟು, ಬಗ್ಗಿ ಸುದ್ದಿಯನ್ನು ಓದಬೇಕಾಗಿತ್ತು. ಈ ಪದ್ದತಿಯನ್ನು ಬದಲಾಯಿಸಲು ಒಂದು ನವೀನ ತಂತ್ರವನ್ನು ಆವಿಷ್ಕಾರ ಮಾಡಲಾಯಿತು. ವಾರ್ತಾ ವಾಚಕರ ಮುಂದೆ ಒಂದು ಕಂಪ್ಯೂಟರ್ ಪರದೆಯನ್ನು ಇಡಲಾಯಿತು. ಆ ಪರದೆಯಲ್ಲಿ ಸುದ್ದಿಗಳು ಮೂಡುತ್ತಿದ್ದವು. ವಾಚಕರು ಆ ಪರದೆಯನ್ನು ನೋಡಿ ಸುದ್ದಿ ಓದುತಿದ್ದರು. ಆ ಪರದೆಯಲ್ಲಿ ಬರುತಿದ್ದ ಬರೆಹಗಳನ್ನು ವಾಚಕರ ಅನುಕೂಲಕ್ಕೆ ತಕ್ಕಂತೆ ಮೇಲೆ-ಕೆಳಗೆ ತರಲು ಹಿಂಬದಿಯಲ್ಲಿ ಟೆಕ್ನಿಶಿಯನ್ ಗಳಿದ್ದರು. ಟಿವಿ ನೋಡುತ್ತಿರುವ ಜನರಿಗೆ ವಾರ್ತಾ ವಾಚಕ ನೇರವಾಗಿ ತಮ್ಮ ಮುಖ ನೋಡಿ ಮಾತಾಡುವ ಹಾಗೆ ಕಾಣ್ತಾ ಇತ್ತು.
ಹೀಗೆ TV ವಾಚಕರಿಗೆ ಅಂತಾ ರೂಪಿಸಲ್ಪಟ್ಟ ಈ ಟೆಲಿಪ್ರೊಂಪ್ಟರ್ ಯಂತ್ರ ನಂತರ ಚತುರ ರಾಜಕಾರಣಿಗಳ ಕೈಗೆ ಸೇರಿಬಿಡ್ತು. ಅದರ ವಿನ್ಯಾಸ ಮತ್ತು ತಂತ್ರಜ್ಞಾನವೂ ಬದಲಾಯಿತು. ಯಾರ ಕಣ್ಣಿಗೂ ಕಾಣದ ತೆಳ್ಳನೆಯ ಗಾಜಿನ ಪಾರದರ್ಶಕ ಹಾಳೆಯಲ್ಲಿ ವಿಷಯಗಳನ್ನು ಓದಿ ಭಾಷಣ ಮಾಡುವಾಗ ಮುಂದೆ ನಿಂತ ಜನರಿಗೆ ಇದು ತಿಳಿಯುತ್ತಲೇ ಇರಲಿಲ್ಲ!! ಜನರೆಲ್ಲಾ “ಏನ್ ಭಾಷಣ ಗುರು, ಪೇಪರ್ ನೋಡದೆ ಹೆಂಗೆಲ್ಲಾ ವಿಷಯ ಹೇಳ್ ಬಿಟ್ರು ನೋಡಿ… ಏನ್ ಮೆಮೋರಿ ಪವರ್ ಗುರು ಅವ್ರದ್ದು ..” ಅಂತಾ ನಿಬ್ಬೆರಗಾಗುತ್ತಿದ್ದರು. ಒಬಾಮ, ಟ್ರಂಪ್ ಮತ್ತು ಕೆಲವು ವಿದೇಶಿ ರಾಜಕಾರಣಿಗಳು ನಿಯಮಿತವಾಗಿ ಈ ಟೆಲಿಪ್ರೊಂಪ್ಟರ್ ಯಂತ್ರವನ್ನು ಉಪಯೋಗಿಸುತ್ತಿದ್ರೆ, ಭಾರತದಲ್ಲಿ ಟೆಲಿಪ್ರೊಂಪ್ಟರ್ ಅನ್ನು ವ್ಯಾಪಕವಾಗಿ ಬಳಸುವುದು ನಮ್ಮ ಪ್ರಧಾನ ಮಂತ್ರಿ ಮೋದಿಜಿ.
****************

ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ

ನಮ್ಮ ಪ್ರಧಾನಿಗಳಿಗೆ ಉತ್ತಮ ವಾಗ್ಮಿ ಅಂತಾ ಬಿರುದು ಬೇರೆ ಇದೆ. ಯಾವ ಭಾಷೆಯಲ್ಲಾದರೂ ಸರಿ, ಅವ್ರು ಗಂಟೆಗಟ್ಟಲೆ ಚೀಟಿಯನ್ನು ನೋಡದೆ ಭಾಷಣ ಮಾಡ್ತಾರೆ ಅಂತಾ ಜನ ನಂಬಿದ್ದಾರೆ. ಪ್ರಧಾನಿ ಮೋದಿಯವರಿಗೆ ಹಿಂದಿ ಭಾಷೆ ಮೇಲೆ ಉತ್ತಮ ಹಿಡಿತ ಇದೆ. ಆದ್ರೆ ಇಂಗ್ಲಿಷ್ ಅವ್ರಿಗೆ ಕಬ್ಬಿಣದ ಕಡಲೆ. ಅದ್ರೂ ವಿದೇಶದಲ್ಲಿ ಅವರು ಇಂಗ್ಲಿಷ್ ನಲ್ಲಿ ಭಾಷಣ ಮಾಡುವಾಗ ಚೀಟಿ ಓದಿ ಭಾಷಣ ಮಾಡಲು ಅವ್ರಿಗೆ ಮುಜುಗರ. ಅದ್ಕೆ ಅವ್ರು ಚೀಟಿ ಬದಲು ಟೆಲಿಪ್ರೊಂಪ್ಟರ್ ನಲ್ಲಿ ಭಾಷಣ ಓದ್ತಾರೆ. ಮನಮೋಹನ್ ಸಿಂಗ್ ರಂತಹ ಆಕ್ಸ್ ಫರ್ಡ್ ಮೇಧಾವಿ, ಸುಲಲಿತವಾಗಿ ಇಂಗ್ಲಿಷ್ ನಲ್ಲಿ ಮಾತಾಡಲು ಬಂದರೂ ಅಮೆರಿಕಾದ ಸಂಸತ್ತಿನಲ್ಲಿ ಭಾಷಣವನ್ನು ಚೀಟಿಯಲ್ಲಿ ಬರೆದಿಟ್ಟು ಓದಲು ನಾಚಿಕೆ ಪಡುವುದಿಲ್ಲ! ಆದ್ರೆ ಮೋದಿಯವರಿಗೆ ಅಮೆರಿಕಾದ ಸಂಸತ್ತಿನಲ್ಲಿ ಟೆಲಿಪ್ರೊಂಪ್ಟರ್ ಬೇಕು. ಇದು ಬರೇ ಚಪಲ ಮಾತ್ರವಲ್ಲ ಒಂದು ರೀತಿಯ PR ತಂತ್ರವೂ ಹೌದು. ಯಾಕಂದ್ರೆ ಮನೆಯ ಟಿವಿಯಲ್ಲಿ ನೋಡುತ್ತಿರುವ ಸಾಮಾನ್ಯ ಜನರಿಗೆ ಇವರು ಭಾಷಣ ಒದ್ತಾರೆ ಅಂತಾ ಖಂಡಿತಾ ತಿಳಿಯೋಲ್ಲ! ಅವರು, “ಸಾಹೇಬ್ರು ಎಷ್ಟು ಚೆನ್ನಾಗಿ ಇಂಗ್ಲಿಷ್ ಮಾತಾಡ್ತಾರಲ್ಲಾ” ಅನ್ಕೊಳ್ತಾರೆ.

*************

ಇದನ್ನೂ ಓದಿ : ಪ್ರಧಾನಿ ವಿಡಿಯೋ ವೈರಲ್ : ನಿಜಕ್ಕೂ ಟೆಲಿಪ್ರಾಂಪ್ಟರ್ ಕೈ ಕೊಟ್ಟಿದ್ದಾ! ಅಥವಾ ತಾಂತ್ರಿಕ ಸಮಸ್ಯೆಯಾ?

 

ಇತ್ತೀಚೆಗೆ ಮೋದಿಯವರು ದಿನಕ್ಕೆ ನಾಲ್ಕಾರು ರ‍್ಯಾಲಿಗಳನ್ನು ಉದ್ದೇಶಿಸಿ ಮಾತಾಡ್ತಾರೆ. ಹಾಗಾಗಿ ಮೋದಿಯವರಿಗೆ ಅಂತಾ ಸಿದ್ದಪಡಿಸಿದ ವಿಶೇಷ ವೇದಿಕೆಯ ಭಾಷಣ ಮಾಡುವ ಸ್ಥಳದಲ್ಲಿ ಮೊದಲೇ ಟೆಲಿಪ್ರೊಂಪ್ಟರ್ ವ್ಯವಸ್ಥೆಯನ್ನು ಸಿದ್ದಪಡಿಸಬೇಕಾಗುತ್ತೆ. ಇದಕ್ಕಾಗಿ ದೊಡ್ಡ ಸಂಖ್ಯೆಯ ವಿಶೇಷ ಸಿಬ್ಬಂದಿಗಳು ಬೇಕು. ಅವರು ಮೋದಿಯವರು ಭಾಷಣ ಮಾಡುವ ಮೈಕ್ ಪಕ್ಕದ ಸ್ಥಳದಲ್ಲಿ ಎರಡು ತೆಳ್ಳನೆಯ ಗಾಜಿನ ಪಾರದರ್ಶಕ ಹಾಳೆಗಳನ್ನು ಎಡ ಮತ್ತು ಬಲ ಭಾಗದಲ್ಲಿ ಇಡುತ್ತಾರೆ. ಅವು ಎಷ್ಟು ತೆಳ್ಳಗಾಗಿವೆ ಅಂದ್ರೆ, ಅವು ಜನರ ಬರೀ ಕಣ್ಣಿಗೆ ಕಾಣುವುದೇ ಇಲ್ಲ. ಆ ಗಾಜಿನ ಹಾಳೆಗಳ ಹಿಂಬದಿಗೆ ಕ್ಯಾಮೆರಾ ಇಡುತ್ತಾರೆ. ಹಾಗಾಗಿ ಮೋದಿಯವರು ಆ ತೆಳ್ಳನೆಯ ಗಾಜಿನ ಪಾರದರ್ಶಕ ಹಾಳೆಗಳನ್ನು ನೋಡದೆ, ಕ್ಯಾಮೆರಾವನ್ನೇ ನೋಡಿದ ಹಾಗೆ ಗೋಚರವಾಗುತ್ತದೆ. ಆ ಗಾಜಿನ ಹಾಳೆಯ ಮುಂಭಾಗದಲ್ಲಿ ಭಾಷಣದ ಮೂಲಪಾಠ ಪ್ರದರ್ಶನ ಗೊಳ್ಳುತ್ತದೆ. ಮೋದಿಯವರು ಅದನ್ನು ಓದಬೇಕು. ಒಂದೇ ಕಡೆ ನೋಡಿ ಓದಿದರೆ ಜನರಿಗೆ doubt ಬರುತ್ತೆ ಅಲ್ಲಾ.. ! ಅದ್ಕೆ ಎಡ, ಬಲ ಅಂತಾ ಎರಡು ಗಾಜಿನ ಹಾಳೆಗಳನ್ನು ಇಡುತ್ತಾರೆ. ಅದ್ಕೆ ಸ್ವಲ್ಪ ಸಮಯ ಎಡ ಭಾಗ, ಸ್ವಲ್ಪ ಸಮಯ ಬಲ ಭಾಗ ಅಂತಾ ಆಚೆ -ಈಚಿನ ಹಾಳೆಗಳನ್ನು ನೋಡಿ ಮೋದಿ ಯವರು ಭಾಷಣ ಮಾಡ್ತಾರೆ. ವೇದಿಕೆಯ ಹಿಂಬದಿಯ ವಿಶೇಷ ಕೊಠಡಿಯಲ್ಲಿ ಟೆಲಿಪ್ರೊಂಪ್ಟರ್ ಸಿಬ್ಬಂದಿ ಕುಳಿತಿರುತ್ತಾರೆ . ಕಂಪ್ಯೂಟರ್ ನಲ್ಲಿ ಲೋಡ್ ಮಾಡಿದ ಭಾಷಣವನ್ನು ಸಮರ್ಪಕವಾಗಿ ಮೋದಿ ಮುಂದೆ ಇರುವ ಗಾಜಿನ ಹಾಳೆಗಳಲ್ಲಿ ಭಾಷಣದ ಮೂಲಪಾಠ ಬರುವ ಹಾಗೆ adjust ಮಾಡುವುದು ಅವ್ರ ಕೆಲಸ. ಇದಕ್ಕಾಗಿ ಅವರು ವಿಶೇಷವಾದ ಸಾಫ್ಟ್ ವೇರ್ ಕೂಡ ಬಳಸುತ್ತಾರೆ..! ಒಂದು ವೇಳೆ ಅರ್ಧದಲ್ಲಿ ಟೆಲಿಪ್ರೊಂಪ್ಟರ್ ಯಂತ್ರ ಕೈ ಕೊಟ್ಟರೆ ? ಅದಕ್ಕಾಗಿ Plan B ಅಂತಾ ಇರುತ್ತೆ. ಭಾಷಣದ ಪ್ರಿಂಟ್ ಮಾಡಿದ ಕಾಗದದ ಹಾಳೆಗಳನ್ನು ಸಿಬ್ಬಂದಿಗಳು ಮೊದಲೇ ಮೋದಿಯ ಭಾಷಣದ ಡೆಸ್ಕ್ ನಲ್ಲಿ ಇಡುತ್ತಾರೆ.. !
****************
ಹಿಂದಿಯಲ್ಲಿ ಸುಲಲಿತವಾಗಿ ಭಾಷಣ ಮಾಡುವ ಮೋದಿಯವರು ಇತ್ತೀಚೆಗೆ ಯಾಕೆ ಹಿಂದಿಯಲ್ಲಿ ಕೂಡಾ ವ್ಯಾಪಕವಾಗಿ ಟೆಲಿಪ್ರೊಂಪ್ಟರ್ ಬಳಸುತ್ತಾರೆ ಅಂತಾ ನಿಮಗೆ ಆಶ್ಚರ್ಯವಾಗಬಹುದು. ಇತ್ತೀಚೆಗೆ ದಿನಾಲೂ ನಾಲ್ಕೈದು ಭಾಷಣ ಮಾಡಬೇಕಾದ ಆನಿವಾರ್ಯತೆ ಮೋದಿಯವರಿಗಿದೆ. ವಯಸ್ಸು ಬೇರೆ ಅವ್ರಿಗೆ ಆದ ಪರಿಣಾಮ ಮುಂಚಿನ ಹಾಗೆ ನೆನಪಿನ ಶಕ್ತಿ ಇಲ್ಲ. ಕೆಲವು ಸಮಯಗಳಿಂದ ಅವ್ರು ಭಾಷಣ ಮಾಡುವಾಗ ತುಂಬಾ ಪ್ರಮಾದಗಳನ್ನು ಮಾಡಿದ್ದರು. ಮಹಾತ್ಮ ಗಾಂಧೀಜಿಯವರಿಗೆ ಮೋಹನ್ ದಾಸ್ ಅನ್ನುವ ಬದಲು ಮೋಹನ್ ಲಾಲ್ ಗಾಂಧಿ ಅಂತಾ ಕರೆದಿದ್ದರು. ಹೀಗೆ ಇತಿಹಾಸ ಸಂಬಂಧವಾಗಿ ಹತ್ತು ಹಲವು ತಪ್ಪು ಮಾಹಿತಿಗಳನ್ನು ಭಾಷಣ ಸಮಯದಲ್ಲಿ ಹೇಳಿದ್ರು. ಇದನ್ನು ತಡೆಯಲು ಅವ್ರ PR ತಂಡ ಹಿಂದಿಯಲ್ಲಿ ಭಾಷಣ ಮಾಡುವಾಗ ಕೂಡ ಟೆಲಿಪ್ರೊಂಪ್ಟರ್ ಇಡುತ್ತಾರೆ. ಅಂದ ಹಾಗೆ ಹಿಂದಿಯಲ್ಲಿ ಭಾಷಣ ಮಾಡುವಾಗ ಇಂಗ್ಲಿಷ್ ನಲ್ಲಿ ಮಾಡಿದಂತೆ ಸಂಪೂರ್ಣ ಭಾಷಣ ಓದಿ ಹೇಳುದಿಲ್ಲ. ಪ್ರಮುಖವಾದ points ಗಳು ಮಾತ್ರ ಅವರ ಸ್ಕ್ರೀನ್ ಮುಂದೆ ಬರುತ್ತೆ! ಅದಕ್ಕೆ ಮಸಾಲೆ ಹಾಕಿ ಮೋದಿಯವರು ತಮ್ಮ ಶೈಲಿಯಲ್ಲಿ ವಿಸ್ತರಿಸಿ ಹೇಳ್ತಾರೆ.

ಕೆಲವೊಮ್ಮೆ ಹೀಗೆ ಹಿಂದಿಯಲ್ಲಿ ಭಾಷಣ ಮಾಡುವಾಗ correct ಆದ slide ಟೆಲಿಪ್ರೊಂಪ್ಟರ್ ನಲ್ಲಿ ಬರುದಿಲ್ಲ!! ಅದನ್ನು ಹಿಂಬದಿಯ ಸಿಬ್ಬಂದಿಗೆ ಸರಿಪಡಿಸಲು ಹೇಳುವುದು ಹೇಗೆ ? ಸಂಜ್ಞೆ ಬೇಕಲ್ಲಾ ? ಮೋದಿ ಭಾಷಣ ನಿಲ್ಲಿಸಿ ಲೋಟದಿಂದ ಸ್ವಲ್ಪ ನೀರು ಕುಡಿಯುತ್ತಾರೆ… ಆಗ ವೇದಿಕೆಯ ಮುಂಭಾಗದಲ್ಲಿ ಕುಳಿತ ಜನರು “ಮೋದಿ ಮೋದಿ..” ಅಂತಾ ಕೂಗ್ತಾರೆ… ! ಅಷ್ಟೊತ್ತಿಗೆ ಟೆಲಿಪ್ರೊಂಪ್ಟರ್ ಸಿಬ್ಬಂದಿ ಸರಿಯಾದ slide ಸ್ಕ್ರೀನ್ ಮೇಲೆ ಬರುವಂತೆ ಮಾಡ್ತಾರೆ… !! ಮೋದಿ ಭಾಷಣ ಮುಂದುವರಿಸುತ್ತಾರೆ … ! ಇದು ಮೋದಿ ಟೆಲಿಪ್ರೊಂಪ್ಟರ್ ಕಥೆ.!!

ಪ್ರಮೋದ್ ಹೊಸ್ಬೇಟ್‌
Donate Janashakthi Media

Leave a Reply

Your email address will not be published. Required fields are marked *