ಮೋದಿ ಸರ್‌ನೇಮ್ ವಿವಾದ : ಜೈಲು ಶಿಕ್ಷೆ ಪ್ರಶ್ನಿಸಿ ರಾಹುಲ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ

ಹಮದಾಬಾದ್ : ಮೋದಿ ಸರ್‌ನೇಮ್ ವಿವಾದದಲ್ಲಿ ತಮಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿರುವ ಸೂರತ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯಿಂದ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಹಿಂದೆ ಸರಿದಿದ್ದಾರೆ.

ನ್ಯಾಯಮೂರ್ತಿ ಗೀತಾ ಗೋಪಿ ಅವರು ಈ ಪ್ರಕರಣವನ್ನು ಬೇರೆ ನ್ಯಾಯಪೀಠಕ್ಕೆ ವಹಿಸುವಂತೆ ಮುಖ್ಯ ನ್ಯಾಯಮೂರ್ತಿಗೆ ವರ್ಗಾವಣೆ ಮಾಡುವಂತೆ ರಿಜಿಸ್ಟ್ರಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಹೊಸ ನ್ಯಾಯಮೂರ್ತಿಯ ನಿಯೋಜನೆ ಎರಡು ದಿನಗಳಲ್ಲಿ ಆಗಬಹುದು ಎಂದು ರಾಹುಲ್ ಗಾಂಧಿ ಪರ ವಕೀಲ ಪಿಎಸ್ ಚಪನೇರಿ ತಿಳಿಸಿದ್ದಾರೆ. ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯಲು ಅವರು ಕಾರಣ ಬಹಿರಂಗಪಡಿಸಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವಾಗ ಮೋದಿ ಸರ್‌ನೇಮ್ ಇರುವವರೆಲ್ಲ ಕಳ್ಳರು ಎಂಬ ಅರ್ಥದಲ್ಲಿ ಮಾತನಾಡಿದ್ದಕ್ಕೆ ಮಾನಹಾನಿ ಪ್ರಕರಣದಲ್ಲಿ ಸೂರತ್‌ನ ವಿಚಾರಣಾ ನ್ಯಾಯಾಲಯದಿಂದ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ರಾಹುಲ್ ಗಾಂಧಿ ಅವರು, ಈ ತೀರ್ಪನ್ನು ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ ಶಿಕ್ಷೆಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿತ್ತು. ಹೀಗಾಗಿ ರಾಹುಲ್ ಅವರು ಮಂಗಳವಾರ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮಾನಹಾನಿ ಅಪರಾಧ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಅವರನ್ನು ಕಳೆದ ತಿಂಗಳು ಸಂಸತ್ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತುಗೊಳಿಸದ ಅಥವಾ ರದ್ದುಗೊಳಿಸದ ಹೊರತು ಅವರು ಮತ್ತೆ ಲೋಕಸಭೆ ಸದಸ್ಯತ್ವವನ್ನು ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಜತೆಗೆ ಮುಂದೆ ಎಂಟು ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸುವಂತೆ ಕೂಡ ಇಲ್ಲ.

ಇದನ್ನೂ ಓದಿ : ಮೋದಿ ಉಪನಾಮ ಹೇಳಿಕೆ : ಪಾಟ್ನಾ ಹೈಕೋರ್ಟ್​ನಿಂದ ರಾಹುಲ್​ ಗಾಂಧಿಗೆ ರಿಲೀಫ್

ತೀರ್ಪಿನಿಂದ ಹಾನಿಯಾಗಿದೆ : ಶಿಕ್ಷೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಆದೇಶದಲ್ಲಿ ಸೂರತ್ ಸೆಷನ್ಸ್ ನ್ಯಾಯಾಲಯ ಲೋಪ ಎಸಗಿದೆ. ಇದು ತಮಗೆ ಅಪಾರ ಹಾಗೂ ಸರಿಪಡಿಸಲಾಗದ ಹಾನಿ ಉಂಟುಮಾಡಿದೆ ಎಂದು ಗುಜರಾತ್ ಹೈಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಮುನ್ನ ಈ ತಿಂಗಳ ಆರಂಭದಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ ರಾಹುಲ್ ಗಾಂಧಿ, ವಿಚಾರಣಾ ನ್ಯಾಯಾಲಯವು ತಮ್ಮನ್ನು ಕಠಿಣವಾಗಿ ನಡೆಸಿಕೊಂಡಿದೆ. ತಮ್ಮ ಸಂಸದನ ಸ್ಥಾನದಿಂದ ಅಗಾಧವಾಗಿ ಪ್ರಭಾವಿತಗೊಂಡಿದೆ ಎಂದು ಆರೋಪಿಸಿದ್ದರು. ಈ ನಿರ್ಧಾರವು ತಮಗೆ ಸರಿಪಡಿಸಲಾಗದಷ್ಟು ಹಾನಿ ಉಂಟುಮಾಡಿದೆ ಎಂದು ಹೇಳಿದ್ದರು.

Donate Janashakthi Media

Leave a Reply

Your email address will not be published. Required fields are marked *