ಐಟಿಐ ಘಟಿಕೋತ್ಸವದ ವೇದಿಕೆಯಲ್ಲಿ ಮೋದಿ ಚಿತ್ರ ಮಾತ್ರವೆ ಇರಬೇಕು: ಕೇಂದ್ರ ಸರ್ಕಾರ ಆದೇಶ

ಮೈಸೂರು: 2023ನೇ ಸಾಲಿನಲ್ಲಿ ಎನ್‌ಸಿವಿಟಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಐಟಿಐ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ಘಟಿಕೋತ್ಸವ ಸಮಾರಂಭದ ವೇದಿಕೆಯ ಮೇಲೆ, “ಹಿಂದಿ, ಇಂಗ್ಲಿಷ್ ಹಾಗೂ ಪ್ರಧಾನಿ ಮೋದಿಯ ಭಾವಚಿತ್ರ”ವಿರುವ ಬ್ಯಾನರನ್ನು ಮಾತ್ರವೆ ಬಳಸಬೇಕು ಎಂದು ಸೂಚಿಸಿ ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯು ಕಾಲೇಜಿನ ಪ್ರಿನ್ಸಿಪಾಲರಿಗೆ ಸೂಚಿಸಿದೆ. ಈ ಬಗ್ಗೆ ರಾಜ್ಯದ ಐಟಿಐ ಕಾಲೇಜಿನ ಪ್ರಿನ್ಸಿಪಾಲರುಗಳು ಮತ್ತು ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಐಟಿಐ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲವನ್ನೂ ನೀಡುತ್ತಿದ್ದರೂ ರಾಜ್ಯವನ್ನು ಮತ್ತು ರಾಜ್ಯದ ಭಾಷೆಯನ್ನು ಈ ರೀತಿಯಾಗಿ ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ವೇದಿಕೆಯ ಮೇಲೆ ಹಿಂದಿ ಮತ್ತುಇಂಗ್ಲಿಷ್‌ನಲ್ಲಿ ಬರೆದರುವ ಮೋದಿ ಚಿತ್ರವಿರುವ ಬ್ಯಾನರ್‌ ಹಾಗೂ ಕೇಂದ್ರ ಸಚಿವರುಗಳಾದ ಧರ್ಮೇಂದ್ರ ಪ್ರಧಾನ್, ರಾಜೀವ್ ಚಂದ್ರಶೇಖರ್ ಮತ್ತು ಪ್ರಧಾನಿ ಮೋದಿಯ ಚಿತ್ರ ಸಹಿತ ಸಂದೇಶವಿರುವ ಸ್ಟಾಂಡ್‌ಬೈ ಬ್ಯಾನರ್‌ಗಳನ್ನು ಮೈಸೂರು ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕ(ಟಿ)ರಾದ ಎಸ್‌. ಮಂಜುಳಾ ಅವರು ಐಟಿಐ ಕಾಲೇಜಿನ ಪ್ರಿನ್ಸಿಪಾಲರುಗಳಿಗೆ ಈ ಮೇಲ್ ಮಾಡಿದ್ದಾರೆ. ಇದರ ಚಿತ್ರಗಳು ಜನಶಕ್ತಿ ಮೀಡಿಯಾಗೆ ಲಭ್ಯವಾಗಿದೆ.

ಇದನ್ನೂ ಓದಿ: ವಿರೋಧ ಪಕ್ಷದ ನಾಯಕನಿಲ್ಲ ಎಂಬ ಸಂಗತಿಯನ್ನು ಜನತೆ ಹಾಗೂ ಬಿಜೆಪಿ ಪಕ್ಷ ಬಹುತೇಕ ಮರೆತೇ ಹೋಗಿದ್ದಾರೆ: ಕಾಂಗ್ರೆಸ್

ಜಂಟಿ ನಿರ್ದೇಶಕರು ಐಟಿಐ ಕಾಲೇಜಿನ ಪ್ರಿನ್ಸಿಪಾಲರಿಗೆ ಕಳುಹಿಸಿದ ಆದೇಶದಲ್ಲಿ, ಘಟಿಕೋತ್ಸವ ಸಮಾರಂಭಕ್ಕೆ ಬ್ಯಾನರ್‌ ಅನ್ನು ಡೈರೆಕ್ಟರೇಟ್ ಜನರಲ್ ಆಫ್ ಟ್ರೈನಿಂಗ್ ಕಳುಹಿಸಿದ್ದು, ಅದನ್ನು 12-10-2023 ರಂದು ನಡೆಯಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಬಳಸಬೇಕು. ಅಲ್ಲದೆ ಬ್ಯಾನರ್‌ನಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಎಂದು ಸೂಚಿಸಿದ್ದಾರೆ.

2023ನೇ ಸಾಲಿನಲ್ಲಿ ಎನ್‌ಸಿವಿಟಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಐಟಿಐ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲು ದಿನಾಂಕ ಅಕ್ಟೋಬರ್ 12ರಂದು ನಿಗದಿಪಡಿಸಿ ಎಲ್ಲ ಸಂಸ್ಥೆಗಳು ಅದೇ ದಿನವೇ ಪ್ರಮಾಣ ಪತ್ರ ನೀಡಬೇಕೆಂದು ಕೇಂದ್ರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯು ಇ-ಮೇಲ್ ಮೂಲಕ ತಿಳಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಅನಧಿಕೃತ ಲೋಡ್‌ಶೆಡ್ಡಿಂಗ್ | ಗ್ರಾಮೀಣ, ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಐಟಿಐ ಕಾಲೇಜಿನ ಪ್ರಿನ್ಸಿಪಾಲರೊಬ್ಬರು, “ಎರಡು ಬ್ಯಾನರ್ ಗಳ ಚಿತ್ರಗಳನ್ನು ಕಳಿಸಿ ಇವುಗಳನ್ನ ಬದಲಾಯಿಸದೆ ಸಮಾರಂಭ ನಡೆಸಬೇಕು ಎಂದು ತಿಳಿಸಲಾಗಿದೆ. ಒಂದು ಬ್ಯಾನರ್‌ನಲ್ಲಿ ಪ್ರಧಾನಿ ಇರುವ ಹಾಗೂ ಇನ್ನೊಂದರಲ್ಲಿ ಕೇಂದ್ರದ ಕೌಶಲ್ಯ ಅಭಿವೃದ್ಧಿ ಇಲಾಖೆಯ ಮಂತ್ರಿ ಇರುವ ಬ್ಯಾನರ್ ಮಾಡಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮುದ್ರಿಸಲಾಗಿದೆ. ಇಲ್ಲಿ  ರಾಜ್ಯದ ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಕೌಶಲ್ಯ ಅಭಿವೃದ್ಧಿ ಇಲಾಖೆ, ಮತ್ತು ಪ್ರಾದೇಶಿಕ ಭಾಷೆಯನ್ನ ನಿರ್ಲಕ್ಷಿಸಲಾಗಿದ್ದು, ಇದರ ಹಿಂದಿರುವ ಅಜೆಂಡ ಹಿಂದಿಯನ್ನು ಹೇರಿಕೆ ಮಾಡುವುದು ಮತ್ತು ರಾಜ್ಯದ ಭಾಗವಹಿಸುವಿಕೆಯನ್ನು ನಿರ್ಲಕ್ಷಿಸುವುದಾಗಿದೆ” ಎಂದು ಹೇಳಿದ್ದಾರೆ.

ಕೇಂದ್ರ ಸಚಿವರುರಾದ ಧರ್ಮೇಂದ್ರ ಪ್ರಧಾನ್, ರಾಜೀವ್ ಚಂದ್ರಶೇಖರ್ ಮತ್ತು ಪ್ರಧಾನಿ ಮೋದಿಯ ಚಿತ್ರ ಸಹಿತ ಸಂದೇಶವಿರುವ ಸ್ಟಾಂಡ್‌ ಬೈ ಬ್ಯಾನರ್‌

ಕೇಂದ್ರ ಸರ್ಕಾರ ಎಲ್ಲದರಲ್ಲೂ ಅಗ್ಗದ ಪ್ರಚಾರ ಮಾಡಿ ರಾಜಕೀಯ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಐಟಿಐ ಕಾಲೇಜಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಪಡೆದು ರಾಜ್ಯದ ಜನರ ಭಾವನೆಗೆ ಬೆಲೆ ಕೊಡದೆ ಇರುವುದು ಯಾವ ನ್ಯಾಯ? ಕಳೆದ ವರ್ಷದಿಂದ ಈ ರೀತಿಯಾಗಿ ಆದೇಶಗಳು ಬರುತ್ತಿವೆ, ಅದಕ್ಕೂ ಹಿಂದಿನ ವರ್ಷಗಳಲ್ಲಿ ಇಂತಹ ವಿಚಿತ್ರ ಆದೇಶಗಳು ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಆದೇಶದ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಮೈಸೂರು ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕ(ಟಿ)ರಾದ ಎಸ್‌. ಮಂಜುಳಾ.  ಅವರು, ಎಲ್ಲವನ್ನೂ ಸರ್ಕಾರದ ಆದೇಶದ ಪ್ರಕಾರವೇ ಮಾಡುತ್ತಿದ್ದೇವೆ, ಇದರಲ್ಲಿ ಒಂದೇ ಒಂದು ಪದ ಕೂಡಾ ನಮ್ಮ ಸ್ವಂತದಿದ್ದಲ್ಲ ಎಂದು ತಿಳಿದಿದ್ದಾರೆ.

ಇದನ್ನೂ ಓದಿ: ನ್ಯೂಸ್‍ಕ್ಲಿಕ್ ‘ಶೋಧ’: ಇ.ಡಿ., ಐಟಿ, ದಿಲ್ಲಿ ಪೊಲಿಸ್ ನಂತರ ಈಗ ಸಿಬಿಐ

“ಇದು ನವ ದೆಹಲಿಯ ‘ಡೈರೆಕ್ಟರ್ ಜನರಲ್ ಆಫ್‌ ಟ್ರೈನಿಂಗ್’ ಕಡೆಯಿಂದ ಬಂದಿದೆ. ಅವರು ಇಡೀ ದೇಶಕ್ಕೆ ಈ ಆದೇಶ ಮಾಡಿದ್ದು, ಅದೇ ಆದೇಶವನ್ನು ನಾವು ಕಾಲೇಜುಗಳಿಗೆ ಕಳುಹಿಸಿದ್ದೇವೆ. ನಾನು ಕಳುಹಿಸಿದ ರೀತಿಯಲ್ಲೆ ಹುಬ್ಬಳಿ, ಕಲಬುರಗಿ ಸೇರಿದಂತೆ ರಾಜ್ಯದ ಇತರ ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕರು ಕೂಡಾ ಅವರ ಅಡಿಯಲ್ಲಿ ಬರುವ ಐಟಿಐ ಕಾಲೇಜುಗಳಿಗೆ ಕಳುಹಿಸುತ್ತಾರೆ. ಬ್ಯಾನರ್‌ನಲ್ಲಿನ ಒಂದೇ ಒಂದು ಪದವೂ ನಮ್ಮದಿಲ್ಲ” ಎಂದು ಎಸ್. ಮಂಜುಳಾ ಅವರು ಹೇಳಿದ್ದಾರೆ.

ಕೇಂದ್ರದ ಸ್ಕಿಲ್ ಇಂಡಿಯಾ ಸಚಿವಾಲಯದ ಅಡಿಯಲ್ಲಿ ಬರುವ ಎನ್‌ಸಿವಿಟಿ ಎಂಬ ಸಂಸ್ಥೆ ಐಟಿಐ ಕಾಲೇಜನ್ನು ಸ್ಥಾಪಿಸಲು ಅನುಮತಿ ನೀಡುತ್ತದೆ. ಆದರೆ ಕಾಲೇಜಿಗೆ ಅನುಮತಿ ನೀಡಬೇಕು ಎಂದಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಇರುವ ಸಮಿತಿ ಪರಿಶೀಲಿಸಿ ಶಿಫಾರಸು ಮಾಡಬೇಕಿದೆ. ಅದಾಗ್ಯೂ, ಐಟಿಐ ಕಾಲೇಜನ್ನು ನಡೆಸುವುದು, ಧನ ಸಹಾಯ ನಡೆಸುವುದು ಸೇರಿದಂತೆ ಕಾಲೇಜಿಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯವನ್ನು ನೀಡುವುದು ರಾಜ್ಯ ಸರ್ಕಾರವಾಗಿದೆ.

ಪರೀಕ್ಷೆಯ ಪ್ರಾಧಿಕಾರ ಕೇಂದ್ರದ ಅಧಿಕಾರವಾದರೂ, ಅದನ್ನು ನಡೆಸುವುದು ಕೂಡಾ ರಾಜ್ಯ ಸರ್ಕಾರವೆ ಆಗಿದೆ. ಉಳಿದಂತೆ ಕಾಲೇಜಿಗೆ ಅನುಮತಿ ನೀಡುವ ಕೆಲಸವನ್ನು ಮಾತ್ರವಷ್ಟೆ ಕೇಂದ್ರ ಸರ್ಕಾರ ಮಾಡುತ್ತದೆ.

ವಿಡಿಯೊ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ

Donate Janashakthi Media

Leave a Reply

Your email address will not be published. Required fields are marked *