ಸೂರತ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ 2019ರಲ್ಲಿ ದಾಖಲಾದ ಮಾನನಷ್ಟ ಮೊಕದ್ದಮೆ ಪ್ರಕರಣ ಕುರಿತು ಗುರುವಾರ ತೀರ್ಪು ನೀಡಿದ ಸೂರತ್‌ನ ಜಿಲ್ಲಾ ನ್ಯಾಯಾಲಯವು ರಾಹುಲ್ ಅವರು ತಪ್ಪಿತಸ್ಥರು ಎಂದಿದೆ. ಈ ಸಂಬಂಧ 2 ವರ್ಷ ಜೈಲು ಅಥವಾ ದಂಡ ಪಾವತಿಯ ಶಿಕ್ಷೆ ವಿಧಿಸಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಗೆ ಕರೆ ನೀಡಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ರಾಹುಲ್ ಗಾಂಧಿಯ ಮೇಲೆ ಪ್ರಕರಣ ದಾಖಲಾಗಿತ್ತು. 2021ರ ಅಕ್ಟೋಬರ್‌ನಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ರಾಹುಲ್ ಗಾಂಧಿಯ ಸೂರತ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೀಗ, ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎಚ್‌ಎಚ್ ವರ್ಮಾ, ರಾಹುಲ್ ಗಾಂಧಿಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಬಳಿಕ ಜಾಮೀನು ಮಂಜೂರು ಮಾಡಿ, 30 ದಿನಗಳ ಕಾಲ ಶಿಕ್ಷೆಯನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಏನಿದು ಪ್ರಕರಣ : 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕರ್ನಾಟಕದ ಕೋಲಾರದ ರ‍್ಯಾಲಿಯಲ್ಲಿ ‘ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ’ ಎಂದು ರಾಹುಲ್ ವ್ಯಂಗ್ಯವಾಡಿದ್ದರು. ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಕೇಸ್ ದಾಖಲಿಸಿದ್ದರು.
ಕಾಂಗ್ರೆಸ್ ನಾಯಕರ ಬೆಂಬಲ: ಇತ್ತ, ತಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಪಕ್ಷದ ಮುಖಂಡರು ಬೆಂಬಲ ನೀಡಿದ್ದಾರೆ. “ರಾಹುಲ್ಗೆ ಜಾಮೀನು ಮಂಜೂರಾಗಿದೆ. ನಮಗೆ ಕಾನೂನು, ನ್ಯಾಯಾಂಗದಲ್ಲಿ ನಂಬಿಕೆ ಇದೆ. ಕಾನೂನು ಪ್ರಕಾರವೇ ಇದರ ವಿರುದ್ಧ ಹೋರಾಡುತ್ತೇವೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರಾಹುಲ್ ಗಾಂಧಿ ಧೈರ್ಯಶಾಲಿ. ಸರ್ಕಾರದ ವಿರುದ್ಧ ಅವರು ಏಕಾಂಗಿಯಾಗಿ ಹೋರಾಡಬಲ್ಲರು. ನ್ಯಾಯಾಂಗ, ಚುನಾವಣಾ ಆಯೋಗ, ಇಡಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬಳಸಿಕೊಂಡು ನಮ್ಮ ಮೇಲೆ ಒತ್ತಡ ಹೇರುತ್ತಿದೆ. ಇದರ ವಿರುದ್ಧ ಹೋರಾಡಲಾಗುವುದು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದರು.