ಮೋದಿ ಹೆಸರನ್ನು ಟೀಕಿಸಿದ ರಾಹುಲ್‌ ಗಾಂಧಿಗೆ 2 ವರ್ಷ ಜೈಲು; ತೀರ್ಪು ನೀಡಿದ ಕೋರ್ಟಿನಿಂದಲೇ ಜಾಮೀನು

ಕೆ.ಶಶಿಕುಮಾರ್, ಮೈಸೂರು

ಸೂರತ್:‌ `ಎಲ್ಲಾ ಕಳ್ಳರು ಮೋದಿ ಎಂಬ ಹೆಸರನ್ನು ಸಾಮಾನ್ಯ ಉಪನಾಮವನ್ನಾಗಿ ಮಾಡಿಕೊಂಡಿರುವುದು ಹೇಗೆ?’ ಎಂದು ಭಾಷಣವೊಂದರಲ್ಲಿ ಪ್ರಶ್ನಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಗುಜರಾತಿನ ಸೂರತ್‌ ನ್ಯಾಯಾಲಯವು ದೋಷಿ ಎಂದು ಪರಿಗಣಿಸಿ ಎರಡು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.

2019ರಲ್ಲಿ ಲೋಕಸಭಾ ಚುನಾವಣೆಗಳು ನಡೆದ ಸಂದರ್ಭದಲ್ಲಿ ಕಾಂಗ್ರೆಸ್‌ ಪರ ಚುನಾವಣಾ ಪ್ರಚಾರಕ್ಕಿಳಿಸಿದ್ದ ರಾಹುಲ್‌ ಗಾಂಧಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಮೋದಿ ಎಂಬ ಹೆಸರಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಅವರ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. ರಾಹುಲ್‌ ಗಾಂಧಿ ಮಾಡಿದ್ದ ಟೀಕೆಗಳನ್ನು ಆಧರಿಸಿ ಗುಜರಾತಿನ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಪೂರ್ಣೇಶ್‌ ಮೋದಿ ಅವರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.

ಇದನ್ನು ಓದಿ: ‘ಮೋದಿ’ ಉಪನಾಮಕ್ಕೆ ಅಪಮಾನ ಪ್ರಕರಣ: ರಾಹುಲ್ ಗಾಂಧಿ ತಪ್ಪಿತಸ್ಥ

ನಾಲ್ಕು ವರ್ಷಗಳ ಹಿಂದಿನ ಈ ಪ್ರಕರಣ ಕುರಿತು ಇಂದು ತೀರ್ಪು ನೀಡಿರುವ ನ್ಯಾಯಾಲಯವು ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ಪ್ರಕಟಿಸಿ 2 ವರ್ಷಗಳ  ಜೈಲು ಶಿಕ್ಷೆ ವಿಧಿಸಿದೆ. ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ರಾಹುಲ್ ಗಾಂಧಿಗೆ 15 ಸಾವಿರ ರೂ.ಗಳ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನ್ಯಾಯಾಲಯವು ಕಳೆದ ವಾರ ಎರಡೂ ಕಡೆಯ ಅಂತಿಮ ವಾದಗಳನ್ನು ಆಲಿಸಿದ್ದು ರಾಹುಲ್ ಗಾಂಧಿಯ ಅವರು ಕೊನೆಯದಾಗಿ 2021ರ ಅಕ್ಟೋಬರ್‌ನಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ಸೂರತ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇಂದು ಆ ಮೊಕದ್ದಮೆಯ ತೀರ್ಪುನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಚ್‌.ಎಚ್. ವರ್ಮಾ ಅವರು ಪ್ರಕಟಿಸಿದರು.

ಇದನ್ನು ಓದಿ: ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿ ಅಧಿಸೂಚನೆ

ಪ್ರಕರಣದ ಹಿನ್ನೆಲೆ

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ರಾಹುಲ್‌, ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು. ರಾಹುಲ್‌ ಗಾಂಧಿ ಅವರು ತಮ್ಮ ಹೇಳಿಕೆಯ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಮೋದಿ ಎಂಬ ಉಪನಾಮ ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಅವರು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಇದೀಗ ಸದರಿ ಪ್ರಕರಣ ಕುರಿತು ತೀರ್ಪು ಹೊರಬಿದ್ದಿದ್ದು ರಾಹುಲ್‌ ಗಾಂಧಿ ಅವರನ್ನು ದೋಷಿ ಎಂದು ಪರಿಗಣಿಸಿದ ನ್ಯಾಯಾಲಯವು ಎರಡು ವರ್ಷಗಳ ಶಿಕ್ಷೆಯನ್ನೂ ವಿಧಿಸಿರುವುದು ಬಿಜೆಪಿಯವರ ಪಾಲಿಗೆ ಒಂದು ಜಯ ಸಿಕ್ಕಂತಾಗಿದೆಯಲ್ಲದೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ವಿರುದ್ಧ ಬಳಸಲು ಒಂದು ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ. ಈ ಬ್ರಹ್ಮಾಸ್ತ್ರದ ಪ್ರಯೋಗದೊಂದಿಗೆ ನಡೆಯುವ ಪ್ರಹಾರವನ್ನು ಕಾಂಗ್ರೆಸ್‌ ಮತ್ತು ಸ್ವತಃ ರಾಹುಲ್‌ ಗಾಂಧಿ ಹೇಗೆ ಎದುರಿಸಿ ನಿಲ್ಲಬಲ್ಲರು ಎಂಬುದನ್ನು ಕಾದು ನೋಡಬೇಕಷ್ಟೇ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *