ಮೋದಿ ಸರ್ಕಾರ ದಲಿತರು- ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ: ರಣದೀಪ್ ಆರೋಪ

ಹಾಸನ: ನಗರದಲ್ಲಿ ಗುರುವಾರ ದಂದು ನಡೆದ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದಿವಾಸಿಗಳು, ರೈತರು, ಕಾರ್ಮಿಕರು, ದಲಿತರು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ” ಎಂದು ಆರೋಪಿಸಿದರು. ಮೋದಿ 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ಧರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಮೇಲೆ ವೃಥಾರೋಪ ಮಾಡುವ ಮೂಲಕ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ರೈತರು, ಅಲ್ಪಸಂಖ್ಯಾತರು, ದಲಿತರ ರಕ್ಷಣೆ ಶ್ರಮಿಸುತ್ತಿರುವ ಪಕ್ಷದ ನಾಯಕರ ಮೇಲೆ ಇಲ್ಲಸಲ್ಲದ ಆರೋಪ, ಕೇಸು ದಾಖಲಿಸಿ ದಬ್ಬಾಳಿಕೆ ನಡೆಸುತ್ತಿದೆ ಎಂದು ದೂರಿದರು. ಮೋದಿ

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿದೆ ಎಂಬುದು ನಿಜ. ಅವರೂ ಕೂಡ ದೇಶದ ಪ್ರತಿನಿಧಿಗಳೇ, ಇಲ್ಲೇ ಹುಟ್ಟಿ ಬೆಳೆದವರು, ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ಶ್ರಮಿಸುತ್ತಿದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಆ ಸಮುದಾಯವನ್ನು ತುಚೀಕರಿಸುವ ಮೂಲಕ ಹಗೆತನ ಸಾಧಿಸುತ್ತಿದೆ. ಮೋದಿ 

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲು: ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳ ಬಲ ಕುಸಿದು ಕ್ರಮೇಣ ನಾಶವಾಗುತ್ತವೆ

ಬಿಜೆಪಿಯವರು ಎರಡು-ಮೂರು ತಂಡ ಕಟ್ಟಿಕೊಂಡು ವಕ್ಸ್ ಹೋರಾಟ ಆರಂಭಿಸಿದ್ದಾರೆ. ನಮ್ಮ ಅವಧಿಯಲ್ಲಿ 1400 ನೋಟಿಸ್ ನೀಡಿದ್ದೇವೆ. ಆದರೆ, ಬಸವರಾಜ ಬೊಮ್ಮಾಯಿ ಅವಧಿಯಲ್ಲಿ 2400 ನೋಟಿಸ್ ಕೊಡಲಾಗಿದೆ. ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೀರಾ, ಅವರಿಗೆ ಯಾವ ಉತ್ತರ ಕೊಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೋದಿ 

ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಸಿಎಂ ಹಾಗೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ-ಜೆಡಿಎಸ್ ಹೊಂಚು ಹಾಕುತ್ತಿವೆ. ನೀವೆಷ್ಟೇ ಪ್ರಯತ್ನ ಮಾಡಿದರೂ ಸರ್ಕಾರವನ್ನು ಅಲುಗಾಡಿಲು ಆಗುವುದಿಲ್ಲ. ಈಗಾಗಲೇ ಮೂರು ಚುನಾವಣೆಗಳಲ್ಲಿ ಜನರೇ ತಕ್ಕಪಾಠ ಕಲಿಸಿದ್ದಾರೆ ಎಂದರು.

ಗ್ಯಾರೆಂಟಿ ಯೋಜನೆ ಅನುಷ್ಠಾನವು ಬಿಜೆಪಿ-ಜೆಡಿಎಸ್‌ಗೆ ಹೊಟ್ಟೆ ಹುರಿ ತಂದಿಟ್ಟಿದೆ. ಆದರೆ, ನಿಮ್ಮದೇ ಪಕ್ಷದವರು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಯನ್ನು ನಕಲು ಮಾಡಿದ್ದಾರೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಕಾರ್ಯಕರ್ತರಿಗೆ ಸ್ಥಾನಮಾನ ಬೇಕು

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಕಾರ್ಯಕರ್ತರ ಪರಿಶ್ರಮದಿಂದ ಅಧಿಕಾರಕ್ಕೆ ಬಂದಿದ್ದೇವೆ. ಅವರಿಗೆ ಸೂಕ್ತ ಸ್ನಾನಮಾನ ಕೊಡುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು. ಆರೋಪಗಳ ಮೂಲಕ ಬಿಜೆಪಿ ಒಡೆದಾಳುವ ನೀತಿ ಅನುಸರಿಸುತ್ತಿದೆ.

ಇಂತಹ ಷಡ್ಯಂತ್ರಗಳಿಗೆ ಯಾರೂ ಕಿವಿಗೊಡಬಾರದು. ನಮ್ಮ ಗುರಿ 2028ರ ವಿಧಾನಸಭೆ ಚುನಾವಣೆ ಮೇಲೆ ಇರಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ರಾಜಕಾರಣದಲ್ಲಿ ಕಳಂಕರಹಿತರಾಗಿರುವ ಸಿಎಂ ಸಿದ್ದರಾಮಯ್ಯ ಮೇಲೆ ಬಿಜೆಪಿ-ಜೆಡಿಎಸ್ ಕಳಂಕ ಹೊರಿಸುವ ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ. ಮೈತ್ರಿ ಪಕ್ಷದ ಷಡ್ಯಂತ್ರಗಳಿಗೆ ಈಗಾಗಲೇ ಉಪಚುನಾವಣೆಯಲ್ಲಿ ಜನರು ತಕ್ಕಶಾಸ್ತಿ ಮಾಡಿದ್ದಾರೆ.

ಹಾದಿ ಬೀದಿಯಲ್ಲಿ ಜಗಳ ಮಾಡಿಕೊಳ್ಳುತ್ತಿರುವ ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರಿಗೆ ಕಾಂಗ್ರೆಸ್ ಪಕ್ಷದವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲೆಯಲ್ಲಿ ಯಾರೊಬ್ಬರು ಹೆಣ್ಣು ಮಕ್ಕಳ ತಂಟೆಗೆ ಹೋಗಬಾರದು. ಹೋದವರಿಗೆ ದೌಪದಿ ತಂಟೆಗೆ ಹೋದ ದುಶ್ಯಾಸನ, ದುರ್ಯೋಧನನಿಗೆ ಗತಿಯೇ ಆಗಲಿದೆ. ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲಾಗಿರುವ ದೌರ್ಜನ್ಯ ನೆನಪಿಸಿಕೊಂಡರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ನನ್ನ ರಕ್ತ ಕುದಿಯುತ್ತದೆ ಎಂದು ಪರೋಕ್ಷವಾಗಿ ಗೌಡರ ಕುಟುಂಬದ ಕುಡಿ ಮಾಜಿ ಸಂಸದ ಪುಜ್ವಲ್ ರೇವಣ್ಣ ಸರಣಿ ಲೈಂಗಿಕ ಹಗರಣ ಬಗ್ಗೆ ಕಿಡಿಕಾರಿದರು.

ಜೆಡಿಎಸ್ ತನ್ನ ಚಿಹ್ನೆಯಲ್ಲಿ ಮಹಿಳೆ ತಲೆ ಮೇಲೆ ಹೊರೆ ಹೊರಿಸಿದೆ. ಆದರೆ, ಕಾಂಗ್ರೆಸ್ ಆ ಹೊರೆಯನ್ನು ಇಳಿಸಿ ಅವರ ಸಬಲೀಕರಣಕ್ಕಾಗಿ ಗ್ಯಾರೆಂಟಿ ಯೋಜನೆ ಕೊಟ್ಟಿದೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ, ಆರ್ಥಿಕ ಸಮಾನತೆ, ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ. ಶ್ರಮಿಕರು, ರೈತರು, ಯುವಕರು, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ನವ ಕರ್ನಾಟಕ ನಿರ್ಮಿಸುತ್ತಿದೆ. ನಾವು ಗ್ಯಾರೆಂಟಿ ಯೋಜನೆ ನೀಡುವಾಗ ಯಾವುದೇ ಜಾತಿ, ಮತ, ವೋಟ್ ಬ್ಯಾಂಕ್ ನೋಡಿಲ್ಲ. ಅದಕ್ಕಾಗಿಯೇ ಜೆಡಿಎಸ್- ಬಿಜೆಪಿ ನಾಯಕರಿಗೆ ಹೊಟ್ಟೆಯುರಿ ಬಂದಿದೆ ಎಂದು ಆರೋಪಿಸಿದರು.

ಸಮಾವೇಶದಲ್ಲಿ ಕೆ ಎಚ್ ಮುನಿಯಪ್ಪ, ಎಚ್ ಕೆ ಪಾಟೀಲ್, ಕೆ ಎನ್ ರಾಜಣ್ಣ, ಭೈರತಿ ಸುರೇಶ್, ಡಾ ಎಚ್ ಸಿ ಮಹದೇವಪ್ಪ, ಚಲುವರಾಯಸ್ವಾಮಿ, ಜಮೀರ್ ಅಹಮದ್, ಕೆ ಜೆ ಜಾರ್ಜ್‌ ಸೇರಿದಂತೆ ಹಿರಿಯ ಸಚಿವರು ಹಾಗೂ ಶಾಸಕರು, ಪಕ್ಷದ ಪ್ರಮುಖರು ಭಾಗವಹಿಸಿದ್ದರು.

ಇದನ್ನೂ ನೋಡಿ: ಒಂದು ದೇಶ ಒಂದು ಚುನಾವಣೆ : ಸಮಸ್ಯೆ ಸವಾಲುಗಳು – ಬಿ.ಎಲ್ ಶಂಕರ್ Janashakthi Media

Donate Janashakthi Media

Leave a Reply

Your email address will not be published. Required fields are marked *