ರೈತರ ಮತ್ತು ಸಾಮಾನ್ಯರ ಬಗ್ಗೆ ಮೋದಿ ಸರ್ಕಾರಕ್ಕೆ ಸಂವೇದನೆ ಇಲ್ಲ: ಸೋನಿಯಾ ಗಾಂಧಿ

ನವದೆಹಲಿ: ಮೋದಿ ಸರ್ಕಾರಕ್ಕೆ ರೈತರು ಮತ್ತು ಸಾಮಾನ್ಯ ಜನರ ಬಗ್ಗೆ ಸಂವೇದನೆ ಇಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯು ಪ್ರತಿ ಕುಟುಂಬದ ಮಾಸಿಕ ಬಜೆಟ್ ಅನ್ನು ಸುಡುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಚರ್ಚೆಗಳಿಲ್ಲದೇ, ಸಲಹೆ ಸೂಚನೆಗಳಿಲ್ಲದೇ ಪ್ರಜಾಸತ್ತಾತ್ಮಕ ವಿರೋಧಿಯಾಗಿಯೇ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ್ದಾರೆ ಎಂದ ಅವರು, ರೈತರು, ಗಡಿ ಭದ್ರತೆ ಮತ್ತು ಅಮಾನತುಗೊಂಡ ಸಂಸದರ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಕಳೆದ 13 ತಿಂಗಳಿನಿಂದ ಅನ್ನದಾತರು ಮತ್ತು ಸಂಘಟನೆಗಳು ರೈತ ವಿರೋಧಿ ಕರಾಳ ಕಾನೂನುಗಳನ್ನು ರದ್ದುಪಡಿಸಬೇಕೆಂದು ಪ್ರತಿಭಟನೆ ಕೈಗೊಂಡಿವೆ. ಇವರ ಈ ಪ್ರಯತ್ನಕ್ಕೆ ಕಾಂಗ್ರೆಸ್‌ ಕೂಡ ಸಾಥ್‌ ನೀಡಿದೆ. ಇದರ ಜೊತೆಗೆ ರೈತರ ದೃಢತೆ, ಒಗ್ಗಟ್ಟು, ಶಿಸ್ತು, ದುರಹಂಕಾರಿ ಸರ್ಕಾರವನ್ನು ನೆಲಚ್ಚುವಂತೆ ಮಾಡುವಲ್ಲಿನ ಅವರ ಸಮರ್ಪಣಾ ಭಾವಕ್ಕೆ ಮತ್ತು ಅವರ ಮಹಾನ್‌ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಅಭಿನಂದಿಸಿದರು.

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಬೆಲೆಯನ್ನು ಕಡಿಮೆ ಮಾಡುವುದರ ಕುರಿತಾಗಿ ತೆಗೆದುಕೊಂಡಿರುವ ನಿಲುವು ಅಸಮರ್ಪಕವಾಗಿದೆ. ಸರ್ಕಾರ ಈ ಕುರಿತಾಗಿ ಸ್ವಯಂ ನಿರ್ಧಾರ ತೆಗೆದುಕೊಳ್ಳಲು ಎಲ್ಲಾ ರೀತಿಯ ಅಧಿಕಾರ ಇದ್ದರೂ ಸಹ ಸುಂಕ ಕಡಿತ ಜವಾಬ್ದಾರಿಯನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯ ಸರ್ಖಾರಗಳಿಗೆ ವಹಿಸಿದೆ. ಅಲ್ಲದೇ ಜನರಿಗೆ ಉಪಯೋಗಕ್ಕೆ ಬಾರದ ವ್ಯರ್ಥ ಯೋಜನೆಗಳಿಗಾಗಿ ಹೆಚ್ಚು ವೆಚ್ಚ ಮಾಡುತ್ತಿದೆ ಎಂದು ಸೋನಿಯಾ ಗಾಂಧಿ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಇಂದು ಸಹ ರಾಜ್ಯಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ವಿರೋಧ ಪಕ್ಷಗಳು ಅಡ್ಡಿಪಡಿಸಿದವು. ಸಂಸದರ ಅಮಾನತು ಪ್ರಶ್ನಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯಿಂದಾಗಿ ಸದನ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಸದನವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು.

ಮತ್ತೊಂದೆಡೆ ಸಂಸತ್​​ನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಅಮಾನತುಗೊಂಡ ಸಂಸದರು ಧರಣಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜೈರಾಮ್ ರಮೇಶ್ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಪ್ರತಿಭಟನಾ ನಿರತ ಸಂಸದರೊಂದಿಗೆ ಜೊತೆಯಾದರು.

Donate Janashakthi Media

Leave a Reply

Your email address will not be published. Required fields are marked *