ಹೈದರಾಬಾದ್ : ಹೈದರಾಬಾದ್‌ನಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದ್ದು, ಈ ನಡುವೆಯೇ, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯು ವಿರೋಧ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಆತಿಥ್ಯ ನೀಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಮುಂದಾಗಿದೆ. ಇದೇ ವೇಳೆ ತೆಲಂಗಾಣದ ಜನತೆ ಮೋದಿಯವರ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
‘ಮಿಸ್ಟರ್ ನರೇಂದ್ರ ಮೋದಿ ನಾವು ಕೇವಲ ಬ್ಯಾಂಕ್ ಅನ್ನು ಮಾತ್ರ ಕೊಳ್ಳೆ ಹೊಡೆದೆವು. ನೀವು ಇಡೀ ದೇಶವನ್ನು ಕೊಳ್ಳೆ ಹೊಡೆದಿದ್ದೀರಿ’ ಎಂದು ಬರೆದಿರುವ ಪೋಸ್ಟರ್‌ಗಳನ್ನು ಹಿಡಿದು ಜನಪ್ರಿಯ ವೆಬ್ ಸೀರಿಸ್ ‘ಮನಿಹೈಸ್ಟ್’ ಬಟ್ಟೆಗಳನ್ನು ಧರಿಸಿ ಹೈದರಾಬಾದ್ ಆಗಮಿಸಿರುವ ಮೋದಿಯನ್ನು ಸ್ವಾಗತಿಸುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಮೋದಿಗೆ ಮೂರನೇ ಬಾರಿ ಸ್ವಾಗತ ನಿರಾಕರಿಸಿದ ಕೆಸಿಆರ್ : ಪ್ರಧಾನಿ ನರೇಂದ್ರ ಮೋದಿ ಕಳೆದ ಆರು ತಿಂಗಳಲ್ಲಿ ಮೂರನೇ ಬಾರಿಗೆ ತೆಲಂಗಾಣಕ್ಕೆ ಆಗಮಿಸುತ್ತಿದ್ದು, ಒಂದು ಬಾರಿಯೂ ಪ್ರದಾನಿ ಅವರನ್ನು ಆಹ್ವಾನಿಸದೇ ಆಕ್ರೋಶವನ್ನು ಹೊರಹಾಕಿದ್ದಾರೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗಿಂತ ಹೆಚ್ಚು ಸಾಧನೆ ಮಾಡಿದಾಗ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿಯ ಮುಖಂಡರಿಗೆ ಒಂದು ಸುತ್ತಿನ ಶಾಕ್ ಹೊಡೆದಿತ್ತು. ಕರೀಂನಗರ ಜಿಲ್ಲೆಯ ಹುಜುರಾಬಾದ್ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ TRS ಅಭ್ಯರ್ಥಿ ಬಿಜೆಪಿ ವಿರುದ್ದ ಸೋಲುಂಡಿದ್ದರು. ಇದು ಕೆಸಿಆರ್ ಅವರ ಭದ್ರಕೋಟೆಯ ಕ್ಷೇತ್ರ ಎನ್ನುವುದು ಗಮನಿಸಬೇಕಾದ ವಿಚಾರ. ಇದರ ನಂತರ ಹಲವು ಸಮೀಕ್ಷೆಗಳು ಬಿಜೆಪಿಯ ಪ್ರಾಭಲ್ಯತೆ ಹೆಚ್ಚುತ್ತಿರುವ ವರದಿಯನ್ನು ನೀಡಿದ್ದವು. ಆ ಕಾರಣಕ್ಕಾಗಿಯೇ ಕೆಸಿಆರ್ ಮೋದಿ ಜೊತೆಗೆ ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜಕೀಯದಲ್ಲಿ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಸಿಎಂ ಕೆ.ಚಂದ್ರಶೇಖರ ರಾವ್ ತಾನು ಕೇಂದ್ರಕ್ಕೆ, ಮಗನಿಗೆ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡುವ ಸ್ಪಷ್ಟ ಗುರಿಯನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಬಿಜೆಪಿ ವಿರುದ್ದ ಕಾಂಗ್ರೆಸ್ ಹೊರತಾದ ಮೂರನೇ ರಂಗ ಸ್ಥಾಪನೆಗೆ ಮಮತಾ ಬ್ಯಾನರ್ಜಿ ಜೊತೆಗೂಡಿ ಅವಿರತ ಪ್ರಯತ್ನವನ್ನು ಮಾಡುತ್ತಿದ್ದಾರೆ. ತಮ್ಮ ಎರಡೂ ಗುರಿಯೂ ನಿರ್ದಿಷ್ಟವಾದ ಯೋಜನೆಯಂತೆ ನಡೆಯದಿರುವುದು ಕೆಸಿಆರ್ ಚಿಂತೆಗೆ ಕಾರಣವಾಗುತ್ತಿದೆ.