ಮಣಿಪುರಕ್ಕೆ ಕೈ ಕೊಟ್ಟ ಮೋದಿ

ಪ್ರಕಾಶ್ ಕಾರತ್

ಮೀಸಲು ಅರಣ್ಯಗಳಿಂದ ಒಕ್ಕಲೆಬ್ಬಿಸುವ ಕ್ರಮ ಆರಂಭಿಸುವ ಮೂಲಕ ಮಣಿಪುರದ ಬೀರೇನ್ ಸಿಂಗ್ ಸರಕಾರ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಸರಕಾರದ ಕ್ರಮದಿಂದ ದೊಡ್ಡ ಸಂಖ್ಯೆಯಲ್ಲಿ ಕುಕಿ ಕುಟುಂಬಗಳು ತೊಂದರೆಗೆ ಒಳಗಾಗಿವೆ. ಗಸಗಸೆ ಬೆಳೆ ಮೇಲೆ ದಾಳಿ ಮಾಡಿದ್ದು ಕೂಡ ಕುಕಿಗಳ ವಿರುದ್ಧದ ಆಕ್ರಮಣ ಎಂದು ಭಾವಿಸಲಾಯಿತು. ಅರಂಬಾಯ್ ತೆಂಗೋಲ್ ಮತ್ತು ಮೀತಿ ಪೀಲುನ್ ಮುಂತಾದ ಉಗ್ರಗಾಮಿ ಮೀತಿ ಗುಂಪುಗಳಿಗೆ ಆರೆಸ್ಸೆಸ್-ಬಿಜೆಪಿ ಪ್ರೋತ್ಸಾಹ ನೀಡುತ್ತಿವೆ. ಈ ಗುಂಪುಗಳು ಕುಕಿಗಳ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದು ಹೊರಗಡೆಯಿಂದ ಅಕ್ರಮವಾಗಿ ಬಂದವರು ಎಂದು ಪ್ರಚಾರ ಮಾಡುತ್ತಿವೆ.

ಬಿಜೆಪಿ ಸಂಕುಚಿತ ನೀತಿಯಿಂದ ಈಶಾನ್ಯ ರಾಜ್ಯಕ್ಕೆ ಬೆಂಕಿ

ಮಣಿಪುರ ಹೊತ್ತಿ ಉರಿಯುತ್ತಿರುವುದು ಈಶಾನ್ಯ ಭಾರತದಲ್ಲಿ ಬಿಜೆಪಿಯ ವಿಭಜನಕಾರಿ ರಾಜಕೀಯದ ಸಂಕೇತವಾಗಿ ಪರಿಣಮಿಸಿದೆ. ಕೇವಲ ನಾಲ್ಕು ತಿಂಗಳ ಹಿಂದೆ, ಅಂದರೆ ಫೆಬ್ರವರಿಯಲ್ಲಿ ನರೇಂದ್ರ ಮೋದಿ ಈಶಾನ್ಯದಲ್ಲಿ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನ ಸಭೆ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ ಯಶಸ್ಸಿನ ಬಗ್ಗೆ ದೊಡ್ಡದಾಗಿ ಕೊಚ್ಚಿಕೊಂಡಿದ್ದರು. ಈಶಾನ್ಯ ಭಾರತದ ಕ್ರೈಸ್ತರು ಬಿಜೆಪಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು.

ಮಣಿಪುರದಲ್ಲಿ ಮೇ 3 ರಂದು ಹಿಂಸಾಚಾರ ಸ್ಫೋಟಗೊಂಡು ಇದೀಗ ಏಳು ವಾರವಾಗಿದೆ. ಸಶಸ್ತ್ರ, ಘರ್ಷಣೆಗಳು, ಕೊಲೆಗಳು ಮತ್ತು ದೊಂಬಿಗಳು ರಾಜ್ಯವನ್ನು ಉಧ್ವಸ್ತಗೊಳಿಸಿವೆ. ನೂರಾರು ಮನೆಗಳು, ಸುಮಾರು 200 ಚರ್ಚ್‌ಗಳು ಮತ್ತು 17 ದೇವಾಲಯಗಳು ಬೆಂಕಿಗಾಹುತಿಯಾಗಿವೆ. ಇಂಫಾಲ್‌ನಲ್ಲಿರುವ ಕೇಂದ್ರದ ಒಬ್ಬ ಸಚಿವರ ಮನೆಯನ್ನು ಕೂಡ ಬಿಟ್ಟಿಲ್ಲ. ಸೇನೆಯೊಂದಿಗೆ 35,000 ಕೇಂದ್ರೀಯ ಸಶಸ್ತ್ರ ಪೊಲೀಸರನ್ನು ರಾಜ್ಯದಲ್ಲಿ ನಿಯೋಜಿಸಿದರೂ ಸಶಸ್ತ್ರ ಕುಕಿ ಮತ್ತು ಮೀತಿ ಗುಂಪುಗಳು ದಾಳಿ ಮಾಡುವ ಘಟನೆಗಳು ಇನ್ನೂ ನಿಲ್ಲದೆ ಮುಂದುವರಿದಿವೆ. ಮೃತರ ಸಂಖ್ಯೆ 100 ದಾಟಿದೆ ಮತ್ತು ಪರಿಹಾರ ಶಿಬಿರಗಳಲ್ಲಿ ಕನಿಷ್ಠ 50,000 ಜನರು ಆಶ್ರಯ ಪಡೆದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಿಂಸಾಚಾರದ ಕಿಚ್ಚು ರಾಜ್ಯವನ್ನು ಆವರಿಸಿದ ಸರಿಯಾಗಿ 26 ದಿನಗಳ ನಂತರ, ಮೇ 29 ರಂದು ಮಣಿಪುರಕ್ಕೆ ಭೇಟಿ ನೀಡಿದ್ದರು. ಅವರ ಭೇಟಿ ಹಾಗೂ ಪ್ರಕಟಿಸಿದ ಕ್ರಮಗಳು ಹಿಂಸಾಚಾರವನ್ನು ತಣಿಸಿಲ್ಲ. ಕಾನೂನು ಕುಸಿದುಬಿದ್ದಿರುವ ಪರಿಸ್ಥಿತಿಯನ್ನು ಎರಡೂ ಕಡೆಗಳ ಉಗ್ರಗಾಮಿಗಳು ಬಳಸಿಕೊಳ್ಳುತ್ತಿರುವುದರಿಂದ ಮೀತಿಗಳು ಮತ್ತು ಕುಕಿಗಳ ನಡುವಿನ ವಿಭಜನೆಯು ಈಗ ಸಂಪೂರ್ಣಗೊಂಡಂತಾಗಿದೆ.

ಇದನ್ನೂ ಓದಿ:ಮಣಿಪುರ ಹಿಂಸಾಚಾರ: ರಾಜೀನಾಮೆ ನೀಡುದಿಲ್ಲವೆಂದ ಮುಖ್ಯಮಂತ್ರಿ ಬಿರೇನ್ ಸಿಂಗ್

ಸೂಕ್ಷ್ಮ ಗಡಿ ರಾಜ್ಯ

ಮಣಿಪುರ ಒಂದು ಸೂಕ್ಷ್ಮ ಗಡಿ ರಾಜ್ಯವಾಗಿದೆ. 36 ಜನಾಂಗೀಯ (ಎಥ್ನಿಕ್) ಮತ್ತು ಧಾರ್ಮಿಕ ಸಮುದಾಯಗಳೊಂದಿಗಿನ ವೈವಿಧ್ಯದಿಂದಾಗಿ ಅದು ಗಮನಾರ್ಹವಾಗಿದೆ. ಆ ಪೈಕಿ ಮೂರು ಮುಖ್ಯ ಸಮುದಾಯಗಳು ಮೀತಿ ಸಮುದಾಯದವರಾಗಿದ್ದು ಇಂಫಾಲ್ ಕಣಿವೆಯಲ್ಲಿ ವಾಸವಿದ್ದಾರೆ. ಅವರು ಹಿಂದೂ ಧರ್ಮವನ್ನು ಅಥವಾ ದೇಶೀಯ ಸನಮಾಹಿ ಧರ್ಮವನ್ನು ಅನುಸರಿಸುತ್ತಾರೆ. ಕುಕಿಗಳು ಮತ್ತು ನಾಗಾಗಳು ಪ್ರಮುಖವಾಗಿ ಕ್ರೈಸ್ತ ಧರ್ಮೀಯರಾಗಿದ್ದಾರೆ. ಅವರಲ್ಲದೆ, ಸಣ್ಣ ಪುಟ್ಟ ಬುಡಕಟ್ಟು ಸಮುದಾಯಗಳು ಮತ್ತು ಇತರ ರಾಜ್ಯಗಳ ಜನರು ಇದ್ದಾರೆ.

ವಿವಿಧ ಜನಾಂಗೀಯ ಸಮುದಾಯಗಳ ಸಶಸ್ತ್ರ ಗುಂಪುಗಳ ಉಗ್ರಗಾಮಿ ಚಟುವಟಿಕೆಗಳಿಂದಾಗಿ ಮಣಿಪುರ ಹಲವು ದಶಕಗಳಿಂದ ಸಂತ್ರಸ್ತವಾಗಿದೆ. ಹಿಂದೆ ರಾಜ್ಯದಲ್ಲಿ ನಾಗಾಗಳು ಮತ್ತು ಕುಕಿಗಳ ನಡುವೆ ಘರ್ಷಣೆಗಳಾಗಿದ್ದವು. 2017 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದರೊಂದಿಗೆ ಕ್ರೈಸ್ತರಾಗಿರುವ ಕುಕಿಗಳ ವಿರುದ್ಧ ಮೀತಿಗಳನ್ನು ಒಂದು ಹಿಂದೂ ಶಕ್ತಿಯನ್ನಾಗಿ ಕ್ರೋಡೀಕರಿಸಲು ಆರ್‌ಎಸ್‌ಎಸ್ ಮತ್ತು ಅದರ ಸಂಘಟನೆಗಳು ಸಕ್ರಿಯವಾಗಿ ಕೆಲಸ ಆರಂಭಿಸಿದವು. ಇದು ಮೀತಿ-ಕುಕಿ ಸಂಘರ್ಷಕ್ಕೆ ಹಿಂದೂ-ಕ್ರೈಸ್ತ ಸಂಘರ್ಷದ ಬಣ್ಣವನ್ನೂ ನೀಡಿತು.

2021 ರಲ್ಲಿ ಮಿಲಿಟರಿ ಸರ್ವಾಧಿಕಾರ ಅಧಿಕಾರಕ್ಕೆ ಬಂದ ಮೇಲೆ ಮಿಲಿಟರಿ ದೌರ್ಜನ್ಯದ ಕಾರಣ ಮ್ಯಾನ್ಮಾರ್‌ನಿಂದ ಓಡಿ ಬಂದ ಸಾವಿರಾರು ಚಿನ್ ನಿರಾಶ್ರಿತರಿಂದಾಗಿ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಚಿನ್ ಕೂಡ ಕುಕಿ ಜನಾಂಗೀಯ ಗುಂಪಿನಂಥದ್ದೇ ಜನಾಂಗೀಯ ಗುಂಪಾಗಿದೆ. ಮಿಜೋರಂ ಮತ್ತು ಮಣಿಪುರ ಎರಡೂ ರಾಜ್ಯಗಳಲ್ಲಿ ತಮ್ಮ ಗುಂಪಿಗೆ ಸೇರಿದ ಚಿನ್‌ಗಳನ್ನು ಜನಾಂಗೀಯ ಬಂಧುಗಳು ಸ್ವಾಗತಿಸಿದ್ದು ಆಶ್ರಯ ನೀಡಲಾಗಿದೆ. ಆದರೆ ಅವರಿಗೆ ನಿರಾಶ್ರಿತರ ಸ್ಥಾನಮಾನ ನೀಡಲು ಭಾರತ ಸರಕಾರ ನಿರಾಕರಿಸಿದೆ ಹಾಗೂ ಅವರು ಕಾನೂನುಬಾಹಿರ ವಲಸಿಗರೆಂದು ಘೋಷಿಸಿದೆ.

ಮೀಸಲು ಅರಣ್ಯಗಳಿಂದ ಒಕ್ಕಲೆಬ್ಬಿಸುವ ಕ್ರಮ

ಮೀಸಲು ಅರಣ್ಯಗಳಿಂದ ಒಕ್ಕಲೆಬ್ಬಿಸುವ ಕ್ರಮ ಆರಂಭಿಸುವ ಮೂಲಕ ಮಣಿಪುರದ ಬೀರೇನ್ ಸಿಂಗ್ ಸರಕಾರ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಸರಕಾರದ ಕ್ರಮದಿಂದ ದೊಡ್ಡ ಸಂಖ್ಯೆಯಲ್ಲಿ ಕುಕಿ ಕುಟುಂಬಗಳು ತೊಂದರೆಗೆ ಒಳಗಾಗಿವೆ. ಗಸಗಸೆ ಬೆಳೆ ಮೇಲೆ ದಾಳಿ ಮಾಡಿದ್ದು ಕೂಡ ಕುಕಿಗಳ ವಿರುದ್ಧದ ಆಕ್ರಮಣ ಎಂದು ಭಾವಿಸಲಾಯಿತು. ಅರಂಬಾಯ್ ತೆಂಗೋಲ್ ಮತ್ತು ಮೀತಿ ಪೀಲುನ್ ಮುಂತಾದ ಉಗ್ರಗಾಮಿ ಮೀತಿ ಗುಂಪುಗಳಿಗೆ ಆರೆಸ್ಸೆಸ್-ಬಿಜೆಪಿ ಪ್ರೋತ್ಸಾಹ ನೀಡುತ್ತಿವೆ. ಈ ಗುಂಪುಗಳು ಕುಕಿಗಳ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದು ಹೊರಗಡೆಯಿಂದ ಅಕ್ರಮವಾಗಿ ಬಂದವರು ಎಂದು ಪ್ರಚಾರ ಮಾಡುತ್ತಿವೆ.

ಬೆತ್ತಲಾದ ಬಿಜೆಪಿ ದ್ವಂದ್ವ ಆಟ

ಚುನಾವಣೆಯಲ್ಲಿ ತನಗೆ ನೆರವಾಗುವ ಉದ್ದೇಶದಿಂದ ಕೆಲವು ಕುಕಿ ಸಶಸ್ತ್ರ ಉಗ್ರಗಾಮಿ ಗುಂಪುಗಳನ್ನು ಬಿಜೆಪಿ ಪಟ್ಟಿ ಮಾಡಿದಾಗ ಅದರ ದ್ವಂದ್ವ ಆಟ ಬಯಲಾಯಿತು. ಒಂದು ಕುಕಿ ಸಶಸ್ತ್ರ ಗುಂಪಿನ ನಾಯಕ, ಯುನೈಟೆಡ್ ಕುಕಿ ಲಿಬರೇಶನ್ ಫ್ರಂಟ್ (ಯುಕೆಎಲ್‌ಎಫ್) ಅಧ್ಯಕ್ಷ ಎಸ್.ಎಸ್. ಹೊಕಿಪ್, ಕೇಂದ್ರ ಗೃಹ ಸಚಿವ ಅಮಿತ್ ಷಾಗೆ 2019 ರ ಜೂನ್‌ನಲ್ಲಿ ಒಂದು ಪತ್ರ ಬರೆದಿದ್ದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಈಶಾನ್ಯ ರಾಜ್ಯಗಳ  ಇನ್‌ಚಾರ್ಜ್ ರಾಮ್ ಮಾಧವ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ತನ್ನನ್ನು (ಹೊಕಿಪ್) ಸಂಪರ್ಕಿಸಿ 2017 ರ ಅಸೆಂಬ್ಲಿ ಚುನಾವಣೆ ಹಾಗೂ 2019 ರ ಲೋಕಸಭೆ ಚುನಾವಣೆಗಳಲ್ಲಿ ನೆರವು ಯಾಚಿಸಿದ್ದರು ಎಂದು ಷಾಗೆ ಬರೆದ ಪತ್ರದಲ್ಲಿ ಹೊಕಿಪ್ ಹೇಳಿದ್ದರು. ಇಂಫಾಲ್‌ನ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಕೋರ್ಟ್ಗೆ ಸಲ್ಲಿಸಲಾದ ಅಫಿಡವಿಟ್‌ನೊಂದಿಗೆ ಅಡಕಗೊಳಿಸಲಾದ ಈ ಪತ್ರದ ಪ್ರಕಾರ ಹಣವನ್ನು ಕೂಡ ಪಾವತಿ ಮಾಡಿರುವುದು ಸ್ಪಷ್ಟವಾಗಿದೆ. 2008 ರ `ಕಾರ್ಯಾಚರಣೆಗಳನ್ನು ಅಮಾನತುಗೊಳಿಸುವ’ ಒಪ್ಪಂದಕ್ಕೆ ಸಹಿ ಹಾಕಿದ ಸಂಘಟನೆಗಳಲ್ಲಿ ಯುಕೆಎಲ್‌ಎಫ್ ಕೂಡ ಒಂದಾಗಿದೆ.

ಬಿಜೆಪಿ ಮತ್ತು ಬೀರೇನ್ ಸಿಂಗ್ ಸರಕಾರದ ಈ ಇಬ್ಬಗೆ ಆಟವು ಅವರು ಮೀತಿ ಸಮುದಾಯದ ನಡುವೆ ಬೆತ್ತಲಾಗಲು ಕಾರಣವಾಯಿತು. ತಮ್ಮ ಎಲ್ಲಾ ಸಮಸ್ಯೆಗಳಿಗೆ ಬೀರೇನ್ ಸರಕಾರವೇ ಕಾರಣವೆಂದು ಭಾವಿಸಿದ್ದ  ಕುಕಿಗಳು ಸಂಪೂರ್ಣವಾಗಿ ಬೀರೇನ್ ಸಿಂಗ್ ಸರಕಾರದ ವಿರುದ್ಧವಿದ್ದಾರೆ. ಕುಕಿ ಗುಡ್ಡಗಾಡು ಜಿಲ್ಲೆಗಳಿಂದ ಆಯ್ಕೆಯಾಗಿರುವ 10 ಶಾಸಕರಲ್ಲಿ ಬಹುತೇಕರು ಬಿಜೆಪಿಯವರಾಗಿದ್ದು ಎಲ್ಲಾ ಹತ್ತು ಶಾಸಕರೂ ಕುಕಿ ಪ್ರದೇಶಕ್ಕಾಗಿ ಪ್ರತ್ಯೇಕ ಆಡಳಿತದ ಬೇಡಿಕೆ ಮಂಡಿಸಿದ್ದಾರೆ.

ಮೋದಿ ಬಾಬಾ ದಿವ್ಯ ಮೌನ

ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚದೆ ಮೌನ ತಾಳಿರುವುದು ಇಡೀ ಪ್ರಕರಣದ ಅತ್ಯಂತ ಹೆಚ್ಚು ಜಿಜ್ಞಾಸೆ ಮೂಡಿಸಿರುವ ವಿಚಾರವಾಗಿದೆ. ಮಣಿಪುರ ಪರಿಸ್ಥಿತಿ ಬಗ್ಗೆ ಅವರು ಒಂದು ಮಾತನ್ನೂ ಆಡಿಲ್ಲ ಅಥವಾ ಶಾಂತಿ ಮತ್ತು ಸಹಜತೆ ಮರಳಿ ಸ್ಥಾಪನೆಗೆ ಮನವಿ ಮಾಡಿಯೂ ಇಲ್ಲ. ಬಿಜೆಪಿ ಶಾಸಕರಿದ್ದ ಎರಡು ನಿಯೋಗಗಳು ಮತ್ತು ಮಣಿಪುರದ ಪ್ರತಿಪಕ್ಷಗಳ ನಿಯೋಗ ಸಹಿತ ಮೂರು ರಾಜಕೀಯ ನಿಯೋಗಗಳು ಪ್ರಧಾನಿ ಭೇಟಿಗಾಗಿ ದೆಹಲಿಯಲ್ಲಿ ಕಾದಿದ್ದು ವ್ಯರ್ಥವಾಗಿದೆ. ಮೋದಿ ಅಮೆರಿಕ ಭೇಟಿಗಾಗಿ ಹೊರಟಿದ್ದನ್ನು ಮಾತ್ರ ನೋಡಿ ಅವರು ಮಣಿಪುರಕ್ಕೆ ಮರಳಬೇಕಾಯಿತು. ಹೊಣೆಗಾರಿಕೆ ಕುರಿತ ಪ್ರಧಾನ ಮಂತ್ರಿಯ ಈ ಸಂಪೂರ್ಣ ನಿರ್ಲಕ್ಷ್ಯವು ಮಣಿಪುರದ ಎಲ್ಲಾ ಜನ ವಿಭಾಗಗಳ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯ ಸರಕಾರ ಅವ್ಯವಸ್ಥೆಯಿಂದ ಕೂಡಿದೆ ಹಾಗೂ ಅಧಿಕಾರದ ಸ್ಪಷ್ಟ ರೇಖೆಯನ್ನು ಗುರುತಿಸದಿರುವುದರಿಂದ ಮೊದಲು ಆಗಬೇಕಿರುವ ರಾಜಕೀಯ ಕೆಲಸವೆಂದರೆ ಬೀರೇನ್ ಸಿಂಗ್ ಸರಕಾರವನ್ನು ಕಿತ್ತು ಹಾಕುವುದು. ಇಂಥ ಕ್ರಮವನ್ನು ಕೈಗೊಳ್ಳದೇ ಈಶಾನ್ಯದಲ್ಲಿ ಆಡಳಿತ ನಡೆಸುತ್ತಿರುವ ಆಳುವ ಪಕ್ಷದ ಸಂಕುಚಿತ ಹಾಗೂ ಪಕ್ಷಪಾತಿ ಆಡಳಿತ ಸೃಷ್ಟಿಸಿರುವ ಗೊಂದಲದಿಂದ ಹೊರಬರಲು ಸಾಧ್ಯವಿಲ್ಲ.

ಅನು: ವಿಶ್ವ

Donate Janashakthi Media

Leave a Reply

Your email address will not be published. Required fields are marked *