ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಲೋಕಸಭೆ ಚುನಾವಣೆಗೆ ರಾಜಕೀಯ ಅಜೆಂಡಾಗಳನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಭಾನುವಾರ ಆರೋಪಿಸಿದ್ದಾರೆ. ಅಯೋಧ್ಯೆಯ ರಾಮಮಂದಿರದ ‘ಪ್ರಾಣ-ಪ್ರತಿಷ್ಠಾ’ದ ಮುನ್ನಾದಿನದಂದು ಮಾತನಾಡಿದ ಶಶಿ ತರೂರ್, ಈ ಇಡೀ ಕಾರ್ಯಕ್ರಮವು ಬಿಜೆಪಿಯ ಪ್ರಚಾರದ ಭಾಗವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಚೀನಾದಿಂದ ಭಾರತದ ಗಡಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯ ವಿಷಯದ ಮೇಲೆ ಹೋರಾಡಿದರು, ಆದರೆ ನೋಟು ಅಮಾನ್ಯೀಕರಣದ ಸಮಯದಲ್ಲಿ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರಿಂದ 2019 ರಲ್ಲಿ ಸಮಸ್ಯೆಯನ್ನು ‘ರಾಷ್ಟ್ರೀಯ ಭದ್ರತೆ’ ಎಂದು ಬದಲಾಯಿಸಲಾಯಿತು ಎಂದು ಶಶಿ ತರೂರ್ ಹೇಳಿದ್ದಾರೆ.
ಇದನ್ನು ಓದಿ : ಆಕ್ಸ್ ಫಾಮ್ ವರದಿ : ಜಾಗತಿಕ ಬಡತನ ಹೋಗಲಾಡಿಸಲು 229 ವರ್ಷ ಬೇಕಾದೀತು
ಚೀನಾದಿಂದ ಭಾರತವನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾದ ಕಾರಣ, ಪ್ರಧಾನಿ ಮೋದಿ ಮತ್ತೆ 2024 ರ ಲೋಕಸಭೆ ಚುನಾವಣೆಗೆ ಮುನ್ನ ರಾಜಕೀಯ ಕಾರ್ಯಸೂಚಿಯನ್ನು ಬದಲಾಯಿಸುತ್ತಿದ್ದಾರೆ. ಆದ್ದರಿಂದ ಈ ಬಾರಿ, ಅವರು ಹೊಂದಿರುವ ಏಕೈಕ ವಿಷಯವೆಂದರೆ ಹಿಂದೂ ಹೃದಯ ಸಾಮ್ರಾಟ್. ಅದು ಅವರ ಪ್ರಚಾರ ಭಾಗವಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿಯ ಅಜೆಂಡಾ ಯಾವಾಗಲೂ ರಾಜಕೀಯವಾಗಿದೆ ಎಂದು ಹೇಳಿದ ಶಶಿ ತರೂರ್, ಜನವರಿ 22 ರಂದು ಪ್ರಧಾನಿ ಅಯೋಧ್ಯೆಯಲ್ಲಿ ಸಮಾರಂಭವನ್ನು ನೆರವೇರಿಸಲಿದ್ದಾರೆ. ನಂತರ ಫೆಬ್ರವರಿಯಲ್ಲಿ ಅವರು ಅಬುಧಾಬಿಯಲ್ಲಿ ದೇವಸ್ಥಾನ ಉದ್ಘಾಟಿಸುತ್ತಾರೆ. ನಂತರ ಚುನಾವಣೆ ಘೋಷಿಸುತ್ತಾರೆ. ನಾನು ಅದನ್ನು ಮೊದಲೇ ಹೇಳಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿಯುವ ಕಾಂಗ್ರೆಸ್ ನಾಯಕರ ನಿರ್ಧಾರ ಕುರಿತು ಮಾತನಾಡಿದ ಶಶಿ ತರೂರ್, ತಮ್ಮ ಪಕ್ಷವು ಪ್ರತಿಯೊಬ್ಬ ವ್ಯಕ್ತಿಯ ಧಾರ್ಮಿಕ ನಂಬಿಕೆಗಳನ್ನು ಯಾವಾಗಲೂ ಗೌರವಿಸುತ್ತದೆ. ಆದರೆ, ಇದು ರಾಜಕೀಯ ಕಾರ್ಯಕ್ರಮ ಎಂದು ಕಾಂಗ್ರೆಸ್ ಭಾವಿಸಿದೆ ಎಂದು ಹೇಳಿದ್ದಾರೆ. ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಸಂದರ್ಭದಲ್ಲಿ ನಾಳೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತೀರಾ ಎಂದು ಕೇಳಿದಾಗ ಶಶಿ ತರೂರ್ ಅವರು, ದೇವಸ್ಥಾನಕ್ಕೆ ಹೋಗುವುದು ಪ್ರಾರ್ಥನೆ ಮಾಡಲು ಹೊರತು ರಾಜಕೀಯ ಮಾಡಲು ಅಲ್ಲ ಎಂದು ಹೇಳಿದ್ದಾರೆ.
ಇದನ್ನು ನೋಡಿ : ಏರುತ್ತಲೇ ಇದೆ ಅಪಘಾತಗಳ ಸಂಖ್ಯೆ! ಪ್ರತಿ ಗಂಟೆಗೆ 53 ಅಪಘಾತ, 19 ಸಾವು!! Janashakthi Media