–ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಎಐಕೆಎಸ್ ಒತ್ತಾಯ
“3 ಕರಾಳ ಕೃಷಿ ಕಾನೂನುಗಳ ವಿರುದ್ಧ 380 ದಿನಗಳ ಐತಿಹಾಸಿಕ ಹೋರಾಟದಲ್ಲಿ 735 ರೈತರು ಹುತಾತ್ಮರಾದರು. ಆ ಧೀರ ಭಾರತೀಯರ ಹತ್ಯೆಯ ಕಳಂಕದಿಂದ ಪ್ರಧಾನಿ ಮೋದಿ ಮತ್ತು ಅವರ ಬಂಟರು ಕೈ ತೊಳೆದುಕೊಳ್ಳಲು ಸಾಧ್ಯವಿಲ್ಲ”
ಭಾರತೀಯ ಕೃಷಿಯನ್ನು ಕಾರ್ಪೊರೇಟೀಕರಿಸುವ ಮೂಲಕ ಭಾರತೀಯ ರೈತರು ಮತ್ತು ಗ್ರಾಹಕರನ್ನು ಲೂಟಿ ಮಾಡುವ ಮೋದಿ ನೇತೃತ್ವದ ಒಕ್ಕೂಟ ಸರಕಾರ, ನೀತಿ ಆಯೋಗ ಮತ್ತು ಅದಾನಿ ನೇತೃತ್ವದ ಪ್ರಮುಖ ಕಾರ್ಪೊರೇಟ್‌ಗಳ ದುಷ್ಟ ನಂಟನ್ನು ಮತ್ತು ಒಂದು ದೊಡ್ಡ ಕುತಂತ್ರವನ್ನು ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ನ ಇತ್ತೀಚಿನ ತನಿಖೆ ಬಯಲಿಗೆಳೆದಿದೆ.
ಎರಡು ಭಾಗಗಳ ತನಿಖಾ ಸರಣಿ, “ಕೃಷಿ ಕಾಯ್ದೆಗಳ ಮುನ್ನ ಒಬ್ಬ ಅನಿವಾಸಿ ಭಾರತೀಯ(ಎನ್‍ಆರ್‍ಐ) ಬಿತ್ತಿದ ಕೃಷಿಯ ಕಾರ್ಪೊರೇಟೀಕರಣದ ಬೀಜ” ಮತ್ತು “ಕೃಷಿ ಕಾಯ್ದೆಯ ವಿರುದ್ಧ ಅದಾನಿ ಗುಂಪಿನ ದೂರು ಸರಕಾರ ಅದನ್ನುಕಾರ್ಪೊರೇಟ್‍ಗಳ ಕಳ್ಳದಾಸ್ತಾನಿಗೆ ಅವಕಾಶ ಕೊಡಲು ದುರ್ಬಲಗೊಳಿಸಿತು” ಎಂಬ ಎರಡು ತನಿಖೆಗಳ ಸರಣಿ ಭಾರತೀಯ ಕೃಷಿಯನ್ನು ಕಾರ್ಪೊರೇಟೀಕರಿಸಲು ಕಾರ್ಪೊರೇಟ್-ಮೋದಿ ಆಳ‍್ವಿಕೆ ಶಾಮೀಲಾಗಿರುವುದನ್ನು ದಸ್ತಾವೇಜುಗಗಳ ಸಾಕ್ಷ್ಯಗಳೊಂದಿಗೆ ತೋರಿಸಿಕೊಟ್ಟಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಹೇಳಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನೇತೃತ್ವದ ಐತಿಹಾಸಿಕ ಐಕ್ಯ ರೈತ ಚಳವಳಿಯು ಅಂತರರಾಷ್ಟ್ರೀಯ ಹಣಕಾಸು ಬಂಡವಾಳ-ಏಕಸ್ವಾಮ್ಯ ಬಂಡವಾಳ (ಐಎಫ್‌ಸಿ-ಎಂಸಿ) ಕೂಟ ಮತ್ತು ಅವರ ಪ್ರಚಾರ ಮೂರ್ತಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಡಿಯ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೇಶಪ್ರೇಮೀ ಹೋರಾಟವಾಗಿತ್ತು ಎಂಬ ಅಂಶವನ್ನು ಈ ಸರಣಿ ಪುನರುಚ್ಚರಿಸಿದೆ ಎಂದು ಅದು ಹೇಳಿದೆ.
ಮೂರು ಕರಾಳ ಕೃಷಿ ಕಾಯ್ದೆಗಳನ್ನು ರೂಪಿಸುವಲ್ಲಿ..
ತನಿಖೆಯ ಮೊದಲ ಭಾಗವು https://www.reporters-collective.in/projects/in-farmers-name ಶರದ್ ಮರಾಠೆ ಎಂಬೊಬ್ಬ ಸಾಫ್ಟ್‌ವೇರ್ ವ್ಯವಹಾರವನ್ನು ನಡೆಸುತ್ತಿರುವ, ಕೃಷಿ ಅಥವಾ ಯಾವುದೇ ಸಂಬಂಧಿತ ವಿಷಯಗಳಲ್ಲಿ ಪರಿಣತಿ ಎಂಬುದು ಸೊನ್ನೆಯಾಗಿದ್ದ ‘ಬಿಜೆಪಿ-ಸ್ನೇಹಿ ಅನಿವಾಸಿ ಭಾರತೀಯ ವ್ಯಾಪಾರಸ್ಥ”, ಭಾರತೀಯ ಕೃಷಿಯನ್ನು ಕಾರ್ಪೊರೇಟೀಕರಿಸುವ ಕಲ್ಪನೆಯನ್ನು ಪ್ರಾಯೋಜಿಸುವಲ್ಲಿ ಆಧಾರಗೂಟವಾಗಿ ಪ್ರಮುಖ ಪಾತ್ರ ವಹಿಸಿದ್ದ ಎಂಬುದನ್ನು ತೋರಿಸುತ್ತದೆ: “ಮಾರುಕಟ್ಟೆ ಚಾಲಿತ, ಕೃಷಿಗೆ ಜೋಡಿಸಿದ ಮೇಡ್ ಇನ್ ಇಂಡಿಯಾ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವುದು” ಎಂಬ ಪರಿಕಲ್ಪನಾ ಟಿಪ್ಪಣಿಯನ್ನು ಮರಾಠೆ ಅಕ್ಟೋಬರ್ 2017 ರಲ್ಲಿ ಆಗಿನ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮತ್ತು ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಿದರು. ಅದರಲ್ಲಿ “ಭವಿಷ್ಯದಲ್ಲಿ ರೈತರು ತಮ್ಮ ಕೃಷಿ ಭೂಮಿಯನ್ನುಕಾರ್ಪೊರೇಟ್-ಶೈಲಿಯ ಕೃಷಿ ವ್ಯಾಪಾರ ಕಂಪನಿಗಳಿಗೆ ಗುತ್ತಿಗೆ ನೀಡುತ್ತಾರೆ. ಮತ್ತು ಅವರ ಗಾಲಿಹಲ್ಲುಗಳಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾರೆ” ಎಂಬ ಕಲ್ಪನೆಯನ್ನು ಬಿತ್ತಲಾಗಿತ್ತು.
ಈ ಟಿಪ್ಪಣಿಯನ್ನು ಆಧರಿಸಿ, ನೀತಿ ಆಯೋಗವು 2018 ರ ಜನವರಿಯೊಳಗೆ ಅಶೋಕ್ ದಳವಾಯಿ ಮುಖ್ಯಸ್ಥರಾಗಿದ್ದ ವಿಶೇಷ ಕಾರ್ಯಪಡೆ (STF) ಅನ್ನು ರಚಿಸಿತು. ಶರದ್ ಮರಾಠೆ ಮತ್ತು ಹೆಚ್ಚಾಗಿ ಆತನೇ ಹೆಕ್ಕಿ ತೆಗೆದ ಇತರ “ತಜ್ಞರು” ಈ ಕಾರ್ಯಪಡೆಯಲ್ಲಿದ್ದರು. ಇದೇ ಅಶೋಕ್ ದಳವಾಯಿ ಈ ಮೊದಲು13 ಏಪ್ರಿಲ್ 2016 ರಂದು ಪ್ರಧಾನ ಮಂತ್ರಿಯವರು ರಚಿಸಿದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕುರಿತ ಒಂದು ಹೆಚ್ಚು ಔಪಚಾರಿಕವಾದ ಅಂತರ-ಸಚಿವಾಲಯ ಸಮಿತಿಯ (IMC) ಅಧ್ಯಕ್ಷರಾಗಿದ್ದರು ಎಂಬುದು ಕುತೂಹಲಕಾರಿ ಯಾಗಿದೆ ಎಂದು ಎಐಕೆಎಸ್ ಟಿಪ್ಪಣಿ ಮಾಡಿದೆ. 2016 ರ ಫೆಬ್ರವರಿ 28 ರಂದು ಉತ್ತರ ಪ್ರದೇಶದಲ್ಲಿ ರೈತರ ರ್ಯಾಲಿಯಲ್ಲಿ ನರೇಂದ್ರ ಮೋದಿಯವರು ಸ್ವಾತಂತ್ರ್ಯದ 75 ವರ್ಷಗಳು ಪೂರೈಸುವ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದರ ಹಿನ್ನೆಲೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಶಿಫಾರಸುಗಳ ಮೇಲಿನ IMC ಯ ಸ್ವರೂಪ ಮೂಲತಃ ದೊಡ್ಡ ಬಂಡವಳಿಗರ ಪರವಾದದ್ದಾದರೂ, ಅದಕ್ಕೊಂದು ಉಚಿತತೆಯ ಬಣ್ಣ ಕೊಡಲು “ವಿವಿಧ ಸಕ್ರಿಯ ಕಾರ್ಯಕರ್ತರು, ಅರ್ಥಶಾಸ್ತ್ರಜ್ಞರು ಮತ್ತು ಉದ್ಯಮದ ಪ್ರಮುಖ” ರೊಂದಿಗೆ ಆ ಸಮಿತಿ ‘ಸಮಾಲೋಚನೆ’ಗಳನ್ನೂ ನಡೆಸಿತ್ತು. ಆದರೆ 2018ರಲ್ಲಿ ರಚಿಸಿದ ದಳವಾಯಿ ನೇತೃತ್ವದ ಎಸ್‌ಟಿಎಫ್ ನ ಅಜೆಂಡಾ ನೇರವಾಗಿತ್ತು; ಅದು ಕೇವಲ “ಅದಾನಿ ಗುಂಪು, ಪತಂಜಲಿ ಆಯುರ್ವೇದ, ಮಹೀಂದ್ರಾ ಗುಂಪುವ ಮತ್ತು ಬಿಗ್‌ಬಾಸ್ಕೆಟ್, ಐಟಿಸಿಯಂತಹ ದೊಡ್ಡ ಕಾರ್ಪೊರೇಟ್‌ಗಳೊಂದಿಗೆ ಮಾತ್ರ ಸಮಾಲೋಚನೆ ನಡೆಸಿತು. ಇದು ದೊಡ್ಡ ಬಂಡವಳಿಗ ಸಮೂಹಗಳ ಮುಖವಾಣಿಯಾಗಿ “ಕೃಷಿಯಿಂದ ಕೃಷಿ ಉದ್ಯಮಕ್ಕೆ ಸರಿಯಲು ಇದೀಗ ಸರಿಯಾದ ಸಮಯ” ಎಂಬ ದೃಢ ನಂಬಿಕೆಯಿಂದಲೇ ಕೆಲಸ ಮಾಡಿತು. ಈ ಎಸ್‌ಟಿಎಫ್‌ನ ಶಿಫಾರಸುಗಳು ಕಾರ್ಪೊರೇಟ್ ಪರವಾಗಿಯೇ ಇದ್ದವು. ನಿಜ, ಅವನ್ನುಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ. ಈ ಶಿಫಾರಸುಗಳೇ ಮೋದಿ ಸರಕಾರದ ಮೂರು ಕರಾಳ ಕೃಷಿ ಕಾನೂನುಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಈ ತನಿಖೆ ಸೂಚಿಸುತ್ತದೆ.
ಇದನ್ನೂ ಓದಿ:ಚುನಾಯಿತ ಸರ್ವಾಧಿಕಾರ ವ್ಯವಸ್ಥೆ ತಡೆಯಬಹುದೇ?
ಅಗತ್ಯ ಸರಕುಗಳ ಕಾಯ್ದೆಯ ರದ್ಧತಿಗೆ…
ತನಿಖೆಯ ಎರಡನೇ ಭಾಗವು http://(https://www.reporters-collective.in/trc/adani-group-complained-against-farm-law-govt- diluted-it-to-allow-hoarding-by-corporates) ಹೇಗೆ ಗುತ್ತೇದಾರಿ ಬಂಡವಳಿಗರ ಸಮೂಹಗಳು, ವಿಶೇಷವಾಗಿ “ಅದಾನಿ ಸಮೂಹ ಏಪ್ರಿಲ್ 2018 ರಲ್ಲಿ ಕೃಷಿ ಸರಕುಗಳ ದಾಸ್ತಾನಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಪರೋಕ್ಷವಾಗಿ ಸರ್ಕಾರದೊಂದಿಗೆ ವಶೀಲಿಬಾಜಿ ಮಾಡಿವೆ” ಎಂಬುದನ್ನು ಬಯಲಿಗೆ ತರುತ್ತದೆ. ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಪ್ರಕಾರ, ಕೃಷಿ ಸುಗ್ರೀವಾಜ್ಞೆಗಳು ಜಾರಿಯಾಗುವ ಎರಡೂವರೆ ವರ್ಷಗಳ ಹಿಂದೆಯೇ, ನೀತಿ ಆಯೋಗ ರಚಿಸಿದ ರೈತರ ಆದಾಯವನ್ನು 2022 ರ ವೇಳೆಗೆ ದ್ವಿಗುಣಗೊಳಿಸುವ ಗುರಿಯ ಕಾರ್ಯಪಡೆಯ ಒಂದು ಸಭೆಯಲ್ಲಿ ಅದಾನಿ ಸಮೂಹದ ಪ್ರತಿನಿಧಿ “ಅಗತ್ಯ ಸರಕುಗಳ ಕಾಯಿದೆಯು ಕೈಗಾರಿಕೆಗಳು/ಉದ್ಯಮಿಗಳಿಗೆ ದೊಡ್ಡ ಅಡ್ಡಿ ಎಂದು ಸಾಬೀತಾಗುತ್ತಿದೆ” ಎಂದು ಹೇಳಿದ್ದರು. ಇದು ಈ “ಅಗತ್ಯ ಸರಕುಗಳ ಕಾಯಿದೆಯ ರದ್ದತಿಗಾಗಿ ಅದಾನಿ ಸಮೂಹದ ಅಧಿಕೃತ ಪ್ರತಿಪಾದನೆಯ ಮೊದಲ ದಾಖಲಾದ ನಿದರ್ಶನ” ಎಂದು ತನಿಖೆ ಹೇಳಿದೆ. ಮೋದಿ ಆಡಳಿತವು ಇದನ್ನು ಕರಾಳ ಕೃಷಿ ಕಾಯ್ದೆಗಳ ಕರಡನ್ನು ರೂಪಿಸುವಾಗ ಎಚ್ಚರಿಕೆಯಿಂದ ಮತ್ತು ನಿಷ್ಠೆಯಿಂದ ಅಳವಡಿಸಿಕೊಂಡಿತು ಎಂದು ಎಐಕೆಎಸ್ ಹೇಳಿದೆ.
ಸರ್ಕಾರದ ಎಲ್ಲಾ ಸ್ಥಾಪಿತ ಕಾರ್ಯವಿಧಾನಗಳನ್ನು ಬುಡಮೇಲು ಮಾಡಿ ದೊಡ್ಡ ಉದ್ಯಮಿಗಳು ಮತ್ತು ಅವರ ಎನ್‌ಆರ್‌ಐ ಸಹಯೋಗಿಗಳು ರೈತ-ವಿರೋಧಿಯಾದ ಕರಾಳ ಕೃಷಿ ಕಾನೂನುಗಳನ್ನು ಮುಂದೊತ್ತಲು ಹೇಗೆ ಸಂಚು ರೂಪಿಸಿದ್ದಾರೆ ಎಂಬುದನ್ನು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿಯನ್ನು ಸ್ಥಾಪಿಸಬೇಕು ಎಂದು ಎಐಕೆಎಸ್ ಈ ಹಿನ್ನೆಲೆಯಲ್ಲಿ ಒತ್ತಾಯಿಸಿದೆ. ಕರಾಳ ಕಾನೂನುಗಳ ವಿರುದ್ಧ 380 ದಿನಗಳ ಐತಿಹಾಸಿಕ ಹೋರಾಟದಲ್ಲಿ 735 ರೈತರು ಹುತಾತ್ಮರಾದರು. ಧೀರ ಭಾರತೀಯ ರೈತರ ಇಂತಹ ಹತ್ಯೆಗಳ ಸಂಚಿನಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಂಟರು ಕೈ ತೊಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.
ಪತ್ರಕಾರಿತೆಯ ಈ ಮಹತ್ವದ ಮಧ್ಯಪ್ರವೇಶಕ್ಕಾಗಿ ‘ದಿ ರಿಪೋರ್ಟರ್ಸ್ ಕಲೆಕ್ಟಿವ್‌ನ್ನು ಅಖಿಲ ಭಾರತ ಕಿಸಾನ್ ಸಭಾ ಶ್ಲಾಘಿಸಿದೆ. ಭಾರತೀಯ ಕೃಷಿಯನ್ನು ಕಾರ್ಪೊರೇಟೀಕರಿಸುವ ಯಾವುದೇ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಯತ್ನಗಳಿಗೆ ಕೈಹಾಕಬಾರದು, ಹಾಗೆ ಕೈಹಾಕಿದರೆ ರೈತಾಪಿಗಳ ಒಗ್ಗಟ್ಟಿನ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಮೋದಿ ಆಡಳಿತವನ್ನು ಅದು ಎಚ್ಚರಿಸಿದೆ.
ಪ್ರಧಾನಿಗಳ ‘ತಪಸ್ಸಿನ ‘ ನಿಜಸ್ವರೂಪ?
ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ರೈತರು ನಡೆಸಿದ ಹೋರಾಟದ ಫಲವಾಗಿ ನವಂಬರ್ 19, 2021ರಂದು ಕೊನೆಗೂ ಪ್ರಧಾನಿಗಳು ಈ ಮೂರು ಕೃಷಿ ಕಾಯ್ದೆಗಳನ್ನು ಹಿಂಗೆದುಕೊಳ್ಳುವಾಗ “ನಾನು ಇಂದು ದೇಶವಾಸಿಗಳಲ್ಲಿ ಕ್ಷಮೆ ಕೋರುತ್ತಾ, ಮನಸಾರೆ ಮತ್ತು ಪವಿತ್ರ ಹೃದಯದಿಂದ ಹೇಳಬಯಸುತ್ತೇನೆ-ಬಹುಶಃ ನಮ್ಮ ತಪಸ್ಸಿನಲ್ಲಿ ಯಾವುದೋ ಕೊರತೆಯಿದ್ದಿರಬಹುದು, ಅದರಿಂದಾಗಿ ದೀಪದ ಬೆಳಕಿನಂತಹ ಸತ್ಯವನ್ನು ಸ್ವತಃ ರೈತ ಬಾಂಧವರಿಗೆ ತಿಳಿ ಹೇಳಲು ನಮಗೆ ಆಗಿಲ್ಲ” ಎಂದು ಹೇಳಿದ್ದರು. ಇದನ್ನು ನೆನಪಿಸುತ್ತ ಪ್ರಖ್ಯಾತ ಹಿಂದಿ ಪತ್ರಕರ್ತ ರವೀಶ ಕುಮಾರ್ ದೀಪದ ಬೆಳಕಿನಷ್ಟು ಸ್ಪಷ್ಟವಾಗಿದ್ದ ಆ ಸತ್ಯವನ್ನು, ಆ ತಪಸ್ಸಿನ ನಿಜ ಹೂರಣವನ್ನು ರಿಪೋರ್ಟರ್ಸ್ ಕಲೆಕ್ಟಿವ್ ನ ಪತ್ರಕರ್ತ ಶ್ರೀಗಿರೀಶ ಜಾಲೀಹಾಳ ಈಗ ಬಯಲಿಗೆಳೆದಿದ್ದಾರೆ ಎಂದು ಟಿಪ್ಪಣಿ ಮಾಡಿದ್ದಾರೆ. ರೈತರ ಬೆನ್ನ ಹಿಂದೆ ನಡೆದ ಪ್ರಧಾನಿಗಳ ಅಥವ ಕಾರ್ಪೊರೇಟ್‍ಗಳ ’ತಪಸ್ಸು’ ಎಂತಹದು ಎಂದು ಹಲವು ಅರ್ಥಶಾಸ್ತ್ರಜ್ಞರಿಗೂ ಅರ್ಥವಾಗಿರಲಿಲ್ಲ, ಆದರೆ ರೈತರಿಗೆ ಬಹಳ ಬೇಗನ ಅರಿವಿಗೆ ಬಂತು ಎಂದು ಅವರು ಹೇಳಿದ್ದಾರೆ.