ಮೋದಿ ಸರಕಾರದ ವೈಫಲ್ಯಗಳ ವಿರುದ್ದ ಸುದ್ದಿ ಮಾಡಿದ್ರೆ ಇಡಿ ದಾಳಿ ಮಾಡ್ತಾರೆ, ರೈತರಿಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ರೆ ಕೇಸ್ ಹಾಕ್ತಾರೆ? ಮೋದಿ ಸಾಹೇಬರ ಬೆದರಿಸೋ ಕೆಲಸಕ್ಕೆ ಜನ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ರೈತ ಹೋರಾಟದ ಕುರಿತು ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಹಂಚಿಕೊಂಡಿದ್ದ ಟೂಲ್‌ಕಿಟ್ ಪ್ರಕರಣದಲ್ಲಿ ಬಂಧನವಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನಕ್ಕೆ ವ್ಯಾಪಕ ವಿರೊಧವ್ಯಕ್ತವಾಗುತ್ತಿದೆ. ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆ ವ್ಯಕ್ತವಾಗುತ್ತಿದೆ.
ದಿಶಾ ರವಿಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸುವ ದಿಲ್ಲಿ ನ್ಯಾಯಾಲಯದ ನಿರ್ಧಾರದ ಬಗ್ಗೆ ಕಾನೂನು ತಜ್ಞರು ಪ್ರಶ್ನೆಗಳನ್ನು ಎತ್ತಿದ್ದಾರೆ. ಹಿರಿಯ ವಕೀಲೆ ರೆಬೆಕಾ ಜಾನ್, ಮ್ಯಾಜಿಸ್ಟ್ರೇಟ್ ಆದೇಶವು ಆಘಾತಕಾರಿ ರೀತಿಯಲ್ಲಿ ನ್ಯಾಯಾಂಗ ಕರ್ತವ್ಯಗಳನ್ನು ಕೈಬಿಟ್ಟಿದೆ ಎಂದು ಹೇಳಿದ್ದಾರೆ.
“ಈ ಟೂಲ್ ಕಿಟ್ ನ ನಿಮ್ಮಲ್ಲಿರುವ ಯಾವುದೇ ಆವೃತ್ತಿಯಲ್ಲಿ ಯಾವ ಸಾಲು ಒಂದು ಅಪರಾಧವಾಗುತ್ತದೆ ಎಂದು ನಮಗೆ ಹೇಳಬಲ್ಲಿರಾ?” ಎಂದು ಸುಪ್ರೀಂ ಕೋರ್ಟ್ ವಕೀಲ ಕೊಲಿನ್ ಗೊನ್ಸಾಲ್ವೆಸ್ ಪ್ರಶ್ನಿಸಿದ್ದಾರೆ. ಸಂಶಯ ಪಿಶಾಚಿಯಾಗಿರುವ ಮೊದಿ ಸರಕಾರ ಯುವ ಕ್ರಿಯಾಶೀಲರುಗಳಿಗೆ ಕಿರುಕುಳ ಕೊಡುವುದನ್ನು ಕೊನೆಗೊಳಿಸಬೇಕು. ದಿಶಾ ರವಿಯ ವಿರುದ್ಧ ಹಾಕಿರುವ ಆರೋಪಗಳನ್ನು ಹಿಂದಕ್ಕೆ ಪಡೆಯಬೇಕು, ಆಕೆಯನ್ನು ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ. ದಿಶಾ ಬಂಧನ ಕಾನೂನು ವಿರೋಧಿಯಾಗಿದ್ದು, ರಾಜ್ಯದ ಪೊಲೀಸರಿಗೆ ಮಾಹಿತೆ ಇಲ್ಲದೆ ದಿಶಾರವರನ್ನು ಬಂಧಿಸಿದ್ದು ಸರಿಯಾದ ಕ್ರಮವಲ್ಲ ಎಂದು ವಕೀಲ ವಿನಯ ಶ್ರೀನಿವಾಸ ಆರೋಪಿಸಿದ್ದಾರೆ.
ಜನಪರ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿರುವ ನ್ಯೂಸ್ ಕ್ಲಿಕ್ ಮೇಲೆ ನಡೆದ ಇಡಿ ದಾಳಿಗೆ ದೇಶ ವಿದೇಶದಲ್ಲಿ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ. ವಿಮರ್ಶಾತ್ಮ ಪತ್ರಿಕೋಧ್ಯಮವನ್ನು ಕೇಂದ್ರ ಸರಕಾರ ಬೆದರಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನ್ಯೂಸ್ ಕ್ಲಿಕ್ ಹಿಂದಿನಿಂದಲೂ ಸರಕಾರ ಭ್ರಷ್ಟಚಾರಗಳನ್ನು ಬಯಲಿಗೆಳೆದು ಸುದ್ದಿ ಮಾಡುತ್ತಿದೆ. ವಿಶೇಷವಾಗಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಕುರಿತು ಸಮಗ್ರವಾಗಿ ವರದಿ ಮಾಡುತ್ತಿದೆ, ಸರಕಾರದ ವೈಫಲ್ಯಗಳ ಜನರ ಮುಂದೆ ಬಿಚ್ಚಿಡುತ್ತಿದೆ. ಆದರೆ ಮೋದಿ ಸರಕಾರ ನ್ಯೂಸ್ ಕ್ಲಿಕ್ ಮೇಲೆ ತನಿಖೆಯ ಹೆಸರಿನಲ್ಲಿ 113 ಗಂಟೆಗಳ ವಿಚಾರಣೆ ನಡೆಸಿದ್ದು ಅಮಾನವೀಯ ಎಂದು ಚಿಂತಕ ಬಿ. ಶ್ರೀಪಾಧ್ ಭಟ್ ಆರೋಪಿಸಿದ್ದಾರೆ.
“ಸುದ್ದಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರಮುಖವಾದ” ಕೆಲವು ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂವಹನ ಸಾಧನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ, ಕೆಲಸಗಳು ನಡೆಯದಂತೆ ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಈ ಕಿರುಕುಳದ ಹೊರತಾಗಿಯೂ, ನ್ಯೂಸ್ಕ್ಲಿಕ್, ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಿದೆ ಮತ್ತು ಅದನ್ನು ಮುಂದುವರಿಸಲಿದೆ. ನಾವು ಕಾನೂನಿನ ಪ್ರಕಾರ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ನಮಗೆ ಮುಚ್ಚಿಡಲು ಏನೂ ಇಲ್ಲ, ಈ ರೀತಿಯ ದಾಳಿಗಳಿಗೆ ಹೆದರುವುದಿಲ್ಲ ಎಂದು ನ್ಯೂಸ್ ಕ್ಲಿಕ್ ನ ಆಡಳಿತ ಮಂಡಳಿ ತಿಳಿಸಿದೆ.
ಮೋದಿ ಸರಕಾರ ಎಲ್ಲಾ ಮಾಧ್ಯಮಗಳು, ಗೋದಿ ಮೀಡಿಯಾಗಳಂತೆ ಎಲ್ಲವು ಇವರ ಕೆಲಸಗಳನ್ನು ಹೊಗಳಿ ಕೊಂಡಾಡಬೇಕು ಎಂದು ಬಯಸುತ್ತಿದೆ. ಮಾಧ್ಯಮಗಳು ಮಾಧ್ಯಮವಾಗಿ ಕೆಲಸ ಮಾಡಬೇಕು, ವಸ್ತುನಿಷ್ಟ ಸುದ್ದಿಯನ್ನು ಕೊಡುವುದು ಮಾಧ್ಯಮಗಳ ಕೆಲಸ, ಸರಕಾರದ ತಪ್ಪುಗಳನ್ನು ತೋರಿಸಿದಾಗ, ವಿಮರ್ಶಿಸಿ ಸುದ್ದಿ ಮಾಡಿದಾಗ ಅದನ್ನು ಸ್ವೀಕರಿಸಬೇಕು. ತಪ್ಪಿದ್ದರೆ ಸ್ಪಷ್ಟೀಕರಣ ನೀಡಬೇಕು ಅದು ಬಿಟ್ಟು ಇಡಿ ದಾಳಿ, ಬಂಧನ ಮಾಡುವುದು ಸರಿಯದ ಕ್ರಮವಲ್ಲ ಎಂಬುದನ್ನು ಮೋದಿ ಸರಕಾರ ಅರಿಯಬೇಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವುದು, ಸಂವಿಧಾನದ ನಾಲ್ಕನೆ ಅಂಗ ಎಂದು ಕರೆಯಿಸಿಕೊಳ್ಳುವ ಮಾಧ್ಯಮಗಳ ದಾಳಿ ನಡೆಸುವುದನ್ನು ಮೋದಿ ಸರಕಾರ ನಿಲ್ಲಿಸಬೇಕಿದೆ.