ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಅಭಿಮಾನಿಗಳ ಪಾಲಿನ ಅಪ್ಪು, ಪುನೀತ್ ರಾಜ್‌ಕುಮಾರ್ ನಿಧನರಾಗಿ ಇಂದಿಗೆ ಒಂದು ವರ್ಷ. ಕಳೆದ ವರ್ಷ ಇದೇ ದಿನ ತೀವ್ರ ಹೃದಯಾಘಾತದಿಂದ ಪುನೀತ್ ನಿಧನ ಹೊಂದಿದಾಗ ಅವರ ಕುಟುಂಬ ಮಾತ್ರವೇಕೆ ಇಡೀ ಕರುನಾಡು ನಲುಗಿಹೋಗಿತ್ತು. ತಮ್ಮ ಮನೆ ಮಗನನ್ನು ಕಳೆದುಕೊಂಡ ದುಃಖ ಕನ್ನಡಿಗರನ್ನು ಕಾಡಿತ್ತು.
ಪವರ್ ಸ್ಟಾರ್, ಅಭಿಮಾನಿಗಳ ಪಾಲಿನ ಅಪ್ಪು ಹಠಾತ್ ಕಣ್ಮರೆಯಾಗಿ, ಗತಿಸಿಹೋಗಿ ಇಂದಿಗೆ ಒಂದು ವರ್ಷ. ಕಳೆದ ವರ್ಷ ಇದೇ ದಿನ ಅಕ್ಟೋಬರ್ 29ರಂದು ತೀವ್ರ ಹೃದಯಾಘಾತದಿಂದ ಪುನೀತ್ ನಿಧನ ಹೊಂದಿದಾಗ ಅವರ ಕುಟುಂಬ ಮಾತ್ರವೇಕೆ ಇಡೀ ಕರುನಾಡು ನಲುಗಿಹೋಗಿತ್ತು. ತಮ್ಮ ಮನೆ ಮಗನನ್ನು ಕಳೆದುಕೊಂಡ ದುಃಖ ಕನ್ನಡಿಗರನ್ನು ಕಾಡಿತ್ತು.
ಸ್ಮರಣೆ ಪ್ರಯುಕ್ತ ಸದಾಶಿವನಗರದ ನಿವಾಸಕ್ಕೆ ಚಿತ್ರರಂಗದ ಗಣ್ಯರು, ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರು ಭೇಟಿ ನೀಡಿ ಪುನೀತ್ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅವರೊಂದಿಗಿನ ಒಡನಾಟ ಸ್ಮರಿಸಿಕೊಂಡರು.
ನೋವು, ಕಣ್ಣೀರು, ಆಕ್ರಂದನದ ಮಧ್ಯೆ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯುತ್ತಿದೆ. ಇಂದು ಬೆಳಗ್ಗೆ ನಿವಾಸದಿಂದ ಪುನೀತ್ ರಾಜ್‌ಕುಮಾರ್ ಇಷ್ಟಪಡುವ ತಿಂಡಿ ತಿನಿಸುಗಳನ್ನು ತಂದು ಕಂಠೀರವ ಸ್ಟುಡಿಯೊದಲ್ಲಿರುವ ಸಮಾಧಿ ಮುಂದಿಟ್ಟ ರಾಜ್ ಕುಮಾರ್ ಕುಟುಂಬಸ್ಥರು ಕಣ್ಣೀರಿಡುತ್ತಾ ತಮ್ಮ ಮನೆ ಸದಸ್ಯನ ಒಂದು ವರ್ಷದ ಸ್ಮರಣೆಯನ್ನು ಆಚರಿಸಿದರು. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಣ್ಣೀರು ಹಾಕುತ್ತಲೇ ತಮ್ಮ ಪತಿಯ ಫೋಟೋ ಮುಂದೆ ಪ್ರಾರ್ಥನೆ ಸಲ್ಲಿಸಿದರು.
ಪೂಜೆಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಪುತ್ರಿಯರಾದ ವಂದಿತಾ, ಧ್ರುತಿ, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ, ಪುತ್ರಿ ವಂದಿತಾ ಸೇರಿದಂತೆ ಇಡೀ ಕುಟುಂಬ, ಬಂಧು-ಬಳಗದವರು ಭಾಗಿಯಾಗಿದ್ದರು. ಇನ್ನೊಂದೆಡೆ, ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳ ದಂಡೇ ಆಗಮಿಸುತ್ತಿದೆ. ಇಂದು ಆಗಮಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಏರ್ಪಡಿಸಲಾಗಿದೆ. ಸರಿಸುಮಾರು 2 ಲಕ್ಷಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಇನ್ನೊಂದೆಡೆ ಕಳೆದ ಮಧ್ಯರಾತ್ರಿಯಿಂದ ಇಂದು ಮಧ್ಯರಾತ್ರಿಯವರೆಗೆ 24 ಗಂಟೆಗಳ ನಿರಂತರ ಗೀತ ನಮನ ಕಾರ್ಯಕ್ರಮ ನಡೆಯುತ್ತಿದೆ.
ಸಾಧುಕೋಕಿಲ ತಂಡದಿಂದ ಗಾನ ನಮನ
ಹಾಸ್ಯನಟ ಮತ್ತು ಸಂಗೀತ ನಿರ್ದೇಶಕ ಸಾಧುಕೋಕಿಲ ಮತ್ತು ತಂಡದಿಂದ ಪುನೀತ್ ರಾಜಕುಮಾರ್ ಸಮಾಧಿಯ ಮುಂದೆ ಮನರಂಜನಾ ಕಾರ್ಯಕ್ರಮ ಜರುಗುತ್ತಿದೆ. ಸಾಧು ಕೋಕಿಲಾ ಹಾಗೂ ಅವರ ತಂಡ 24 ಗಂಟೆಗಳ ಕಾಲ ನಿರಂತರ ಸಂಗೀತ ಕಾರ್ಯಕ್ರಮ ಉಣಬಡಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಗೌರವಾರ್ಥ ಈ ಕಾರ್ಯಕ್ರಮವನ್ನು ಸಾಧುಕೋಕಿಲ ಮತ್ತು ತಂಡ ಹಮ್ಮಿಕೊಂಡಿದೆ.
ವರ್ಷದ ಸ್ಮರಣೆ ಪ್ರಯುಕ್ತ ಡಾ. ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಸಮಾಧಿಯನ್ನು ವಿವಿಧ ಹೂವುಗಳು ಮತ್ತು ಬೆಳಕುಗಳಿಂದ ಅಲಂಕಾರ ಮಾಡಲಾಗುತ್ತಿದೆ. ಕಂಠೀರವ ಸ್ಟುಡಿಯೋದ ಮುಂಭಾಗದ ರಸ್ತೆಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬಾವುಟಗಳು ರಾರಾಜಿಸುತ್ತಿವೆ.
ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಪೊಲೀಸರು ಭಾರೀ ಭದ್ರತೆಯನ್ನು ಕಲ್ಪಿಸಿದ್ದಾರೆ.