ಪರೀಕ್ಷೆ ಕೇಂದ್ರದಲ್ಲಿ ಮೊಬೈಲ್ ಡಿಪಾಸಿಟ್‌ಗೆ ಹಣ ವಸೂಲಿ: ಪರೀಕ್ಷಾರ್ಥಿಗಳ ಆಕ್ರೋಶ

ಬೆಂಗಳೂರು: ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಡಿಪಾಸಿಟ್‌ಗೆ ಹಣ ಪಡೆದಿದ್ದಕ್ಕಾಗಿ ಪರೀಕ್ಷಾರ್ಥಿಗಳು ಮತ್ತು ಸಿಬ್ಬಂದಿ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಎನ್‌ಟಿಎ ಮತ್ತು ಯುಜಿಸಿ ಸಹಭಾಗಿತ್ವದಲ್ಲಿ ನಡೆಯುವ ನೆಟ್, ಜೆಆರ್‌ಎಫ್ ಪರೀಕ್ಷೆಯು ನಗರದ ಪೀಣ್ಯ 1ನೇ ಹಂತದಲ್ಲಿರುವ ಬಿಟ್‌ಬೈಟೆಕ್ ಸೊಲ್ಯೂಷನ್‌ನಲ್ಲಿ ಬುಧವಾರ ನಡೆಯಿತು.

ಇದನ್ನೂ ಓದಿ:NEET-JEE ಪರೀಕ್ಷೆ ಮುಂದೂಡಬೇಡಿ: ಶಿಕ್ಷಣ ತಜ್ಞರಿಂದ ಕೇಂದ್ರಕ್ಕೆ ಪತ್ರ

ಈ ಪರೀಕ್ಷೆ ಕೇಂದ್ರಕ್ಕೆ ಬಂದಿದ್ದ 150ಕ್ಕೂ ಹೆಚ್ಚು ಅಭ್ಯರ್ಥಿಗಳ ಪೈಕಿ ಬಹುತೇಕರು ಮೊಬೈಲ್, ಬ್ಯಾಗ್‌ಗಳನ್ನು ತಂದಿದ್ದರು. ಪರೀಕ್ಷೆ ಆರಂಭವಾಗುವುದಕ್ಕಿಂತ ಮೊದಲು ಎಲ್ಲ ಅಭ್ಯರ್ಥಿಗಳು ಮೊಬೈಲ್‌ಗಳನ್ನು ಪರೀಕ್ಷಾ ಸಿಬ್ಬಂದಿ ಬಳಿ ಡೆಪಾಸಿಟ್ ಮಾಡಿದ್ದರು. ಪರೀಕ್ಷೆ ಮುಗಿದ ನಂತರ ಆ ಮೊಬೈಲ್‌ಗಳನ್ನು ವಾಪಸ್ ಕೊಡಬೇಕಾದರೆ ಪ್ರತಿಯೊಬ್ಬರೂ 20 ರುಪಾಯಿ ಕೊಡಬೇಕೆಂದು ಪರೀಕ್ಷಾ ಸಿಬ್ಬಂದಿ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ‘ನಾವೇಕೆ ದುಡ್ಡು ಕೊಡಬೇಕು? ನಮ್ಮ ಬಳಿ ದುಡ್ಡು ಇಲ್ಲ’ ಎಂದು ಹೇಳಿದ್ದಾರೆ. ಆಗ ಪರೀಕ್ಷಾ ಸಿಬ್ಬಂದಿ ‘ದುಡ್ಡು ಕೊಡುವವರೆಗೂ ನಿಮ್ಮ ಮೊಬೈಲ್‌ಗಳನ್ನು ವಾಪಸ್ ಕೊಡುವುದಿಲ್ಲ’ ಎಂದು ಹೇಳಿದ್ದಾರೆ. ಇದರಿಂದ ಕೆರಳಿದ ಪರೀಕ್ಷಾರ್ಥಿಗಳು ‘ ತಂದಿರುವ ಬ್ಯಾಗ್ ಮತ್ತು ಮೊಬೈಲ್‌ಗಳನ್ನು ಎಲ್ಲಿ ಇಡಬೇಕು’ ಎಂದು ಪ್ರಶ್ನಿಸಿದ್ದಾರೆ. ಆಗ ‘ದುಡ್ಡು ಕೊಟ್ಟರೆ ನಾವು ಇಟ್ಟುಕೊಳ್ಳುತ್ತೇವೆ, ಇಲ್ಲವಾದರೆ ಹೊರಗೆ ಇಡಿ’ ಎಂದು ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ಪರೀಕ್ಷಾರ್ಥಿಗಳು ಪರೀಕ್ಷೆ ಕೇಂದ್ರದಲ್ಲಿ ಮೊಬೈಲ್ ಡೆಪಾಸಿಟ್‌ಗೂ ಹಣ ಪಡೆದದ್ದು ಇದೆ ಮೊದಲು ಎಂದು ಎನ್‌ಟಿ‌ಎಗೆ ಹಿಡಿಶಾಪ ಹಾಕಿದರು.

ಪರೀಕ್ಷೆ ನೋಂದಣಿ ಶುಲ್ಕವಾಗಿ ನಾವು 1000 ರು. ಪಾವತಿಸಿರುತ್ತೇವೆ. ಆದರೂ ಪರೀಕ್ಷೆ ಕೇಂದ್ರದಲ್ಲಿ 20 ರೂಪಾಯಿ ಮೊಬೈಲ್ ಡೆಪಾಸಿಟ್‌ಗೆ ಪಡೆದರು. ಈ ಹಿಂದೆಯೂ ಸಹ ನಾವು ನೆಟ್ ಪರೀಕ್ಷೆ ಮತ್ತು ಹಲವು ಸರ್ಕಾರಿ ಪರೀಕ್ಷೆಗಳನ್ನು ಬರೆದಿದ್ದೇವೆ.ಅಲ್ಲೆಲ್ಲೂ ಮೊಬೈಲ್ ಡಿಪಾಸಿಟ್‌ಗೆ ಹಣ ಪಡೆದಿರಲಿಲ್ಲ. ಎನ್‌ಟಿಎ ಕೂಡಲೇ ಗಮನ ಹರಿಸಬೇಕು.  ಈ ಪರೀಕ್ಷಾ ಕೇಂದ್ರದಲ್ಲಿ 150 ಜನರಿಗೆ ಒಂದೇ ಶೌಚಾಲಯವಿದೆ. ಅಭ್ಯರ್ಥಿಗಳು ಪರೀಕ್ಷೆಯ ಅರ್ಧ ಸಮಯವನ್ನು ಶೌಚಾಲಯದ ಬಾಗಿಲಲ್ಲೇ ಕಳೆಯುವಂತಾಯಿತು. ಸೂಕ್ತ ಸೌಲಭ್ಯಗಳಿರುವ ಕೇಂದ್ರಗಳನ್ನು ಎನ್‌ಟಿ‌ಎ ಆಯ್ಕೆ ಮಾಡಬೇಕು. ಇಲ್ಲವಾದರೆ ಅಭ್ಯರ್ಥಿಗಳಿಗೆ ವಿನಾಕಾರಣ ತೊಂದರೆಯಾಗುತ್ತದೆ ಎಂದು  ಪರೀಕ್ಷಾರ್ಥಿಗಳಾದ ಅನಿಲ್ ಕುಮಾರ್ ಮತ್ತು ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *