ಜಿ ರಾಮ್ ಜಿ ಮಸೂದೆ ಹಿಂಪಡೆಯಲು ಆಗ್ರಹ
ಬೆಂಗಳೂರು: ಬೆಂಗಳೂರು: ‘ಕೇಂದ್ರ ಸರ್ಕಾರ ಹೊಸತಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ (ವಿಬಿ– ಜಿ ರಾಮ್ ಜಿ) ಕಾಯ್ದೆಯನ್ನು ಹಿಂಪಡೆದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಕಾಯ್ದೆಯನ್ನು ಮರುಸ್ಥಾಪಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.
ನಗರದಲ್ಲಿ ಜನವರಿ 3ರಂದು ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆ ಮೂಲಕ ಕಳೆದ 20 ವರ್ಷಗಳಿಂದ ದೇಶದ ಗ್ರಾಮೀಣ ಕೂಲಿಕಾರರು ಮತ್ತು ಸಣ್ಣ ರೈತರ ಜೀವನೋಪಾಯಕ್ಕೆ ಆಧಾರವಾಗಿದ್ದ ಹಾಗೂ ಉದ್ಯೋಗವನ್ನು ಸ್ಥಳೀಯವಾಗಿಯೇ ಕೇಳಿ ಪಡೆಯುವ ಹಕ್ಕು ನೀಡಿದ್ದ ಮನರೇಗಾ ಕಾಯ್ದೆಯನ್ನು, ಮೋದಿ ಸರ್ಕಾರವು ಜನರ ಜೊತೆ ಚರ್ಚೆ ಮಾಡದೆ, ರಾಜ್ಯಗಳ ಜೊತೆ ಸಮಾಲೋಚನೆ ಮಾಡದೆ, ಅಭಿಪ್ರಾಯವನ್ನೂ ಪಡೆಯದೆ ಸರ್ವಾಧಿಕಾರಿ ಧೋರಣೆಯ ಮೂಲಕ ಧ್ವಂಸ ಮಾಡಿದೆ ಎಂದು ಆರೋಪಿಸಿದ್ದಾರೆ.
ಮೋದಿ ಸರ್ಕಾರವು ಡಿಸೆಂಬರ್, 17 ರಂದು ಕೇವಲ 8 ಗಂಟೆಗಳ ಕಾಲ ಚರ್ಚೆ ಮಾಡುವ ಮೂಲಕ ಸದನವನ್ನು ಬುಲ್ಡೋಜ್ ಮಾಡಿ ಡಿಸೆಂಬರ್, 18 ರಂದು ಈ ಮನೆಹಾಳು ಕಾಯ್ದೆಯನ್ನು ಪಾಸ್ ಮಾಡಿಕೊಂಡರು. ಆ ಮೂಲಕ ದೇಶದ 12.16 ಕೋಟಿ ಕಾರ್ಮಿಕರನ್ನು, ಅವರಲ್ಲಿ ಶೇ.53.61 ರಷ್ಟು ಸಂಖ್ಯೆಯಲ್ಲಿದ್ದ 6.21 ಕೋಟಿ ಮಹಿಳೆಯರ ಬದುಕನ್ನು ಹಾಗೂ ಶೇ.17 ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ.11 ರಷ್ಟು ಪರಿಶಿಷ್ಟ ಪಂಗಡದ ನರೇಗಾ ಕೂಲಿ ಕಾರ್ಮಿಕರ ಬದುಕಿಗೆ ಬೆಂಕಿ ಇಟ್ಟಿದೆ ಎಂದರು.
ಇದನ್ನೂ ಓದಿ: ಪೂರ್ವಾನುಮತಿ ಇಲ್ಲದೆ ಕೆಲಸಕ್ಕೆ ಗೈರಾಗುವುದು ದುರ್ನಡತೆ: ಹೈಕೋರ್ಟ್
ಕರ್ನಾಟಕದಲ್ಲಿ 2025-26 ರಲ್ಲಿ ಉತ್ತಮ ಮಳೆಯಾದ ಸಂದೃಭದಲ್ಲೂ 71.18 ಲಕ್ಷ Active ನರೇಗಾ ಕೂಲಿ ಕಾರ್ಮಿಕರಿದ್ದಾರೆ. ಅದರಲ್ಲಿ 36.75 ಲಕ್ಷ (ಶೇ.51.6) ಮಹಿಳೆಯರು ಇದ್ದಾರೆ. ಈ ಎಲ್ಲರ ಉದ್ಯೋಗದ ಹಕ್ಕನ್ನು ಮೋದಿ ಸರ್ಕಾರ ನೀರು ಪಾಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರು ನೆಮ್ಮದಿಯಿಂದ ಜೀವಿಸುವ ಯಾವುದೇ ಕಾನೂನು ಆಗಲಿ, ಕಾರ್ಯಕ್ರಮವಾಗಲಿ, ಯೋಜನೆಯಾಗಲಿ ಅದನ್ನು ಹೇಗೆ ನಾಶ ಮಾಡಬೇಕು ಎಂಬುದನ್ನು ಅಧ್ಯಯನ ಮಾಡಿ ಕೊಡುವುದೆ ಬಿಜೆಪಿಯ ಮಾರ್ಗದರ್ಶಕರಾಗಿರುವ ಆರ್.ಎಸ್.ಎಸ್. ಮುಂತಾದ ಸಂಘಟನೆಗಳ ಕೆಲಸವೂ ಆಗಿರುವಂತಿದೆ.
ಹಿಂದೆ ಆಡಳಿತ ನಡೆಸಿದ್ದ ಯುಪಿಎ ಸರ್ಕಾರವು ಉದ್ಯೋಗದ ಹಕ್ಕು, ಶಿಕ್ಷಣದ ಹಕ್ಕು, ಆಹಾರದ ಹಕ್ಕು, ಅರಣ್ಯವಾಸಿಗಳ ಕಾಡಿನ ಮೇಲಿನ ಹಕ್ಕು, ಮಾಹಿತಿ ಹಕ್ಕು ಮುಂತಾದ ಜನಪರವಾದ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಆದರೆ ಮೋದಿ ಸರ್ಕಾರ ಸುಳ್ಳು ಪ್ರಚಾರ ಮಾಡಿ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ಹಕ್ಕುಗಳನ್ನು ಜನರಿಗೆ ಒದಗಿಸುವ ಕಾಯ್ದೆಗಳನ್ನು ನಿರಂತರವಾಗಿ ದುರ್ಬಲಗೊಳಿಸುತ್ತಾ, ಕಡೆಯದಾಗಿ ಕಿತ್ತು ಹಾಕುತ್ತಾ ಬಂದಿದೆ. ಜನರ ಕಲ್ಯಾಣಕ್ಕಾಗಿ ಒಂದು ಕ್ಷಣವೂ ಯೋಜನೆ ಮಾಡದ ಜನವಿರೋಧಿ ಸರ್ಕಾರವಾಗಿರುವ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ನಿರಂತರವಾಗಿ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ ಎಂದರು.
ದೇಶದ ಸಣ್ಣ ರೈತರು, ಕೂಲಿ ಕಾರ್ಮಿಕರು, ತಾವು ವಾಸಿಸುವ ಜಾಗದಲ್ಲಿದ್ದುಕೊಂಡೆ, ತಮ್ಮ ಸಮೀಪದ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ತಮ್ಮ ಕೃಷಿ ಕೆಲಸಗಳ ಜೊತೆಯಲ್ಲಿ ಮನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಕುಟುಂಬವನ್ನು ಹಾಗೂ ತಮ್ಮ ಗ್ರಾಮಗಳ ಆರ್ಥಿಕತೆಯನ್ನು ಕಟ್ಟಿ ಬೆಳೆಸುತ್ತಿದ್ದರು. ಆದರೆ, ಅವುಗಳನ್ನೆಲ್ಲ ಧ್ವಂಸ ಮಾಡಿರುವ ಮೋದಿ ಸರ್ಕಾರವು ಜನರನ್ನು ಕಾರ್ಪೊರೇಟ್ ಕೃಷಿ ಕಂಪನಿಗಳಿಗೆ ಅಗ್ಗದ ಕೂಲಿ ಆಳುಗಳನ್ನು ಒದಗಿಸಲು ಸಂಚು ರೂಪಿಸಿದೆ. ಅದರ ಪ್ರತಿ ಫಲವೆ ಈ ಹೊಸ ಕಾಯ್ದೆ ಎಂದರು.
ಈ ಹಿಂದೆ, ಯೋಜನೆಗಳನ್ನು ಜಾರಿ ಮಾಡುವಾಗ ಪಾರ್ಲಿಮೆಂಟಿನಲ್ಲೆ ಬಿಜೆಪಿ ವಿರೋಧಿಸಿತ್ತು. ಫುಡ್ ಗ್ಯಾರಂಟಿ ಬಿಲ್ ಅನ್ನು ವೋಟ್ ಗ್ಯಾರಂಟಿ ಬಿಲ್ ಎಂದು ಗೇಲಿ ಮಾಡಿದ್ದರು.
ಸಶಕ್ತವಾದ ಗ್ರಾಮೀಣ ಭಾರತವನ್ನು ನಿರ್ಮಾಣ ಮಾಡಬೇಕು, ಗ್ರಾಮೀಣ ಆರ್ಥಿಕತೆ ಸುಧಾರಿಸಿದರೆ ದೇಶವು ಪ್ರಗತಿ ಪಥದಲ್ಲಿ ಮುನ್ನಡೆಯುತ್ತದೆ ಎಂಬ ಗಾಂಧೀಜಿಯವರ ಕನಸುಗಳನ್ನು ಪ್ರೇರಣೆಯಾಗಿಟ್ಟುಕೊಂಡು ಯುಪಿಎ ಸರ್ಕಾರವು ಯೋಜನೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂದು ನಾಮಕರಣ ಮಾಡಿ ಸಮರ್ಥವಾಗಿ ಜಾರಿಗೊಳಿಸಿತ್ತು. ಮೋದಿ ಸರ್ಕಾರವು ಈ ಹನ್ನೊಂದೂವರೆ ವರ್ಷಗಳಲ್ಲಿ ಹಿಂದಿನ ಸರ್ಕಾರಗಳು ಜಾರಿಗೊಳಿಸಿದ್ದ ಸುಮಾರು 30 ಕ್ಕೂ ಹೆಚ್ಚು ಯೋಜನೆಗಳ ಹೆಸರುಗಳನ್ನು ಬದಲಾಯಿಸಿ ಅವುಗಳ ಕತ್ತು ಹಿಸುಕಿದೆ. ಉದಾಹರಣೆಗೆ ನಿರ್ಮಲ ಭಾರತ್ ಯೋಜನೆಯನ್ನು ಸ್ವಚ್ಛ ಭಾರತ್ ಎಂದು, ಇಂದಿರಾ ಆವಾಜ್ ಯೋಜನೆಯನ್ನು ಪ್ರಧಾನ ಮಂತ್ರಿ ಆವಾಜ್ ಯೋಜನೆ ಎಂದು ಬದಲಾಯಿಸಿತು.
ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಹಿಂದಿನ ಸರ್ಕಾರಗಳು ರೂಪಿಸಿದ್ದ ಬಹುಪಾಲು ಯೋಜನೆಗಳನ್ನು ಬುಡಮೇಲು ಮಾಡಿ ಅವುಗಳನ್ನು ಹಾಳು ಮಾಡಿದ್ದೆ ಮೋದಿ ಸರ್ಕಾರ ಕಳೆದ ಹನ್ನೊಂದುವರೆ ವರ್ಷಗಳಲ್ಲಿ ಮಾಡಿದ್ದ ದೊಡ್ಡ ಸಾಧನೆ ಎಂದರು.
ಉತ್ತಮವಾಗಿ ಕೆಲಸ ಮಾಡುವ ಗ್ರಾಮ ಪಂಚಾಯತಿಗಳು ವರ್ಷಕ್ಕೆ ಸರಾಸರಿ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನಗಳನ್ನು ಬಳಸಿಕೊಂಡು ದೇಶದಲ್ಲಿ ಕೋಟ್ಯಂತರ ಆಸ್ತಿಗಳನ್ನು ಸೃಜನೆ ಮಾಡಿವೆ.
ದೇಶದಲ್ಲಿ ಬರಗಾಲವಿದ್ದ ವರ್ಷವಾದ 2024-25 ರಲ್ಲಿ 19.28 ಕೋಟಿ ಜನ ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದರು. ಕರ್ನಾಟಕದಲ್ಲಿ 1.35 ಕೋಟಿ ಕಾರ್ಮಿಕರು ನರೇಗಾ ಯೋಜನೆಯ ಮೂಲಕ ತಮ್ಮ ಬದುಕು ಬೀದಿ ಪಾಲಾಗದಂತೆ ನೋಡಿಕೊಂಡಿದ್ದರು. ಈಗ ಇವರೆಲ್ಲರ ಮೇಲೆ ಮೋದಿ ಸರ್ಕಾರ ತನ್ನ ಕ್ರೂರ ಕಣ್ಣುಗಳನ್ನು ಹಾಕಿದೆ ಎಂದು ಕಿಡಿಕಾರಿದರು.
ಮೋದಿ ಸರ್ಕಾರವು ಜನರು ಎಲ್ಲಿ ದಂಗೆ ಏಳುತ್ತಾರೋ ಎಂದು ಹೆದರಿ ಪ್ರತಿ ದಿನವೂ ಹೊಸ ಹೊಸ ಸುಳ್ಳುಗಳನ್ನು ಹೆಣೆಯುವ ಕೆಲಸ ಮಾಡುತ್ತಿದೆ. ತಮ್ಮ ಕುರುಡು ಹಿಂಬಾಲಕರ ಸೋಷಿಯಲ್ ಮೀಡಿಯಾಗಳಲ್ಲಿ ಈ ಯೋಜನೆಯ ಕುರಿತು ಸುಳ್ಳು ಸುಳ್ಳೆ ಭ್ರಮೆಗಳನ್ನು ಹುಟ್ಟಿಸಲು ಪ್ರಯತ್ನಿಸುತ್ತಿದೆ. ಆದರೆ, ಜನರು ಗೋವಿನ ಮುಖದಲ್ಲಿರುವ ಗೋಮುಖ ವ್ಯಾಘ್ರತನವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ.
ಹಾಗಾಗಿ, ಹಿಂದೆ ರೈತರ ಆಂದೋಲನ ನಡೆದ ಮಾದರಿಯಲ್ಲೆ ಈ ದುಷ್ಟ ಕಾನೂನಿನ ವಿರುದ್ಧವೂ ಆಂದೋಲನ ಪ್ರಾರಂಭವಾಗಲಿದೆ. ಹಿಂದೆ ಉತ್ತರ ಭಾರತದ ರೈತರು ಮಾತ್ರ ಬೀದಿಗಿಳಿದಿದ್ದರು. ಈಗ ರೈತರ ಜೊತೆಯಲ್ಲಿ ಗ್ರಾಮೀಣ ಕೂಲಿಕಾರರು, ಮಹಿಳೆಯರು ಬೀದಿಗೆ ಇಳಿಯಲು ಸಜ್ಜಾಗಿದ್ದಾರೆ. ಇದನ್ನು ಆದಷ್ಟು ಶೀಘ್ರ ಮೋದಿ ಸರ್ಕಾರವು ಅರ್ಥ ಮಾಡಿಕೊಂಡು ಮೊದಲಿದ್ದ ಮನರೇಗಾ ಕಾಯ್ದೆಯನ್ನು ಇನ್ನಷ್ಟು ಸಶಕ್ತಗೊಳಿಸುವ ಮೂಲಕ ಮರುಜಾರಿಗೊಳಿಸಬೇಕು. ಈ ಹೊಸ ಕಾಯ್ದೆಯನ್ನು ರದ್ದು ಮಾಡಬೇಕೆಂದು ನಮ್ಮ ಸರ್ಕಾರವು ಆಗ್ರಹಿಸುತ್ತದೆ ಎಂದು ಹೇಳಿದರು.
ಈಗಾಗಲೇ ನಾನು ಡಿಸೆಂಬರ್ 30ರಂದೆ ಈ ಕಾಯ್ದೆಯು ಸಂವಿಧಾನದ ಆರ್ಟಿಕಲ್ 258 ಮತ್ತು 280 ಕ್ಕೆ ವಿರುದ್ಧವಾಗಿದೆ. ಜನರ ಉದ್ಯೋಗದ ಹಕ್ಕುಗಳನ್ನು ಕಸಿಯುತ್ತದೆ ಹಾಗೂ ರಾಜ್ಯಗಳು ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತವೆ. ನಿರುದ್ಯೋಗ ಪ್ರಮಾಣವನ್ನು ಹೆಚ್ಚಿಸಿದಂತಾಗುತ್ತದೆ. ವಿಕೇಂದ್ರೀಕರಣದ ಮೂಲಕ ಗ್ರಾಮ ಪಂಚಾಯತಿಗಳೇ ಫಲಾನುಭವಿಗಳನ್ನು ಆಯ್ಕೆ ಮಾಡುವುದನ್ನು ರದ್ದುಗೊಳಿಸಿ ಸಂವಿಧಾನದ 73 ನೇ ತಿದ್ದುಪಡಿಯ ಆಶಯಗಳನ್ನು ನಾಶ ಮಾಡಿದಂತಾಗುತ್ತದೆ ಎಂದು ಪ್ರತಿಭಟನಾಪೂರ್ವಕವಾಗ ಪತ್ರವನ್ನು ಬರೆದಿದ್ದೇನೆ ಎಂದರು.
ಸರ್ವಾಧಿಕಾರಿ ಧೋರಣೆಯ ಮೋದಿ ಸರ್ಕಾರವು ಹಿಟ್ಲರ್ ಮತ್ತು ಮುಸಲೋನಿ ಸ್ವಭಾವವನ್ನು ಮೈಗೂಡಿಸಿಕೊಂಡಿರುವುದರಿಂದ ಈ ಯಾವುದೂ ಸಹ ಅರ್ಥ ಮಾಡಿಕೊಳ್ಳುತ್ತಿಲ್ಲ.
ವೋಟ್ ಚೋರಿಯ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಕಾಂಗ್ರೆಸ್ ಪಕ್ಷ ಅಭಿಯಾನ ಹಮ್ಮಿಕೊಂಡಿದ್ದಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಸರ್ಕಾರ ಕುತಂತ್ರ ಮಾಡಿದಂತಿದೆ. ಈ ಹೊಸ ಕಾಯ್ದೆಯ ಹೆಸರಿನಲ್ಲಿ ರಾಮನ ಹೆಸರನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ರಾಮನ ಹೆಸರು ಹೇಳುತ್ತಲೇ ಇಡೀ ದೆಹಲಿಯಿಂದ ಹಿಡಿದು ಗುಜರಾತ್ ವರೆಗೆ ಹಬ್ಬಿದ್ದ ಅರಾವಳಿ ಪರ್ವತದ ಸಂಪತ್ತನ್ನು ದೋಚಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಮುಗ್ಧ ಆದಿವಾಸಿಗಳು ವಾಸಿಸುತ್ತಿದ್ದ ಮಧ್ಯ ಭಾರತದ ಕಾಡುಗಳನ್ನು ಧ್ವಂಸ ಮಾಡಿ, ಅಲ್ಲಿ ಗಣಿಗಾರಿಕೆ ಮಾಡಲು ಅದಾನಿ-ಅಂಬಾನಿಯವರ ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡಲು ಹೊರಟಿದ್ದಾರೆ. ಹಾಗಾಗಿ ಯಾವ ಕಾರಣಕ್ಕೂ ಇವರು ಜನಪರವಾದ ಆಡಳಿತ ಕೊಡಲು ಸಾಧ್ಯವೇ ಇಲ್ಲ. ನೀರು, ಗಾಳಿ, ಮಣ್ಣು, ಶಿಕ್ಷಣ, ಉದ್ಯೋಗದ ಹಕ್ಕುಗಳನ್ನು ಕಸಿದು ಲೂಟಿ ಮಾಡಲು ಹೊರಟಿದ್ದಾರೆ.
ಅನಿವಾರ್ಯವಾಗಿ ನಾವೂ ಸಹ ಸಂವಿಧಾನದ ವ್ಯಾಪ್ತಿಯಲ್ಲಿಯೆ ಇನ್ನಷ್ಟು ತೀವ್ರವಾಗಿ ಪ್ರತಿಭಟಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಆರ್.ಎಸ್.ಎಸ್. ಮತ್ತು ಬಿಜೆಪಿ ಸೇರಿ ಏಕಕಾಲದಲ್ಲಿ ಶೇ.53 ರಷ್ಟಿರುವ ಮಹಿಳಾ ನರೇಗಾ ಕೂಲಿ ಕಾರ್ಮಿಕರು, ಶೇ.28 ರಷ್ಟಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕಾರ್ಮಿಕರು, 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ವಿಕಲಚೇತನರು ಸೇರಿದಂತೆ ಗ್ರಾಮೀಣ ಆರ್ಥಿಕತೆಯ ಆಧಾರ ಸ್ತಂಭವಾಗಿದ್ದ ನರೇಗಾ ಯೋಜನೆಯನ್ನು ಕೊಂದಿದ್ದಾರೆ. ಅದೇ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದು ಹಾಕುವ ಮೂಲಕ ಗೋಡ್ಸೆಯ ನಂತರ ಎರಡನೇ ಬಾರಿ ಬಿಜೆಪಿಯು ಗಾಂಧಿಯನ್ನು ಹತ್ಯೆ ಮಾಡಿದಂತಾಗಿದೆ.
ಮನುಸ್ಮೃತಿಯು ಮಹಿಳೆಯರು, ದಲಿತರು ಹಾಗೂ ಶೂದ್ರರ ಕೈಯಲ್ಲಿ ಹಣ ಇರಬಾರದು ಹಾಗೂ ಅವರು ಸಂಪೂರ್ಣ ಸೇವಕರಾಗಿ ಇರಬೇಕೆಂದು ಹೇಳುತ್ತದೆ. ಮೋದಿ ಸರ್ಕಾರವು ಮನುಸ್ಮೃತಿಯಿಂದ ಪ್ರೇರಣೆ ಪಡೆದ ಆರ್.ಎಸ್.ಎಸ್ ನಿಂದ ಮಾರ್ಗದರ್ಶನ ಪಡೆಯುತ್ತಿರುವುದರಿಂದ ಇಂತಹ ದೇಶ ವಿರೋಧಿ, ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ ಎಂದರು.
ಮಾಧ್ಯಮಗಳು ಈ ವಿವರಗಳನ್ನು ಜನರಿಗೆ ವಿವರವಾಗಿ ತಿಳಿಸಿಕೊಡುವ ಕೆಲಸ ಮಾಡಬೇಕಿದೆ. ನರೇಗಾ ಕೂಲಿ ಕಾರ್ಮಿಕರು, ರೈತರು, ಸೇರಿದಂತೆ ಸಮಸ್ತ ಗ್ರಾಮೀಣ ಪ್ರದೇಶಗಳ ಜನರು ಮೋದಿ ಸರ್ಕಾರದ ದುಷ್ಟತನವನ್ನು ಅರ್ಥಮಾಡಿಕೊಂಡು ಅದನ್ನು ಸೋಲಿಸಬೇಕಿದೆ.
ಮಾಧ್ಯಮಗಳು ಈ ಹೊಸ ಕಾಯ್ದೆ ಮತ್ತು ಹಳೆ ಕಾಯ್ದೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಜನರಿಗೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡಲಿ ಎನ್ನುವ ಉದ್ದೇಶದಿಂದ ಸಂಕ್ಷಿಪ್ತವಾಗಿ ಎರಡೂ ಕಾಯ್ದೆಗಳ ವ್ಯತ್ಯಾಸವನ್ನು ಹಾಗೂ ಮನರೇಗಾ ಹೇಗೆ ಜನಪರವಾಗಿತ್ತು, ಮೋದಿಯವರ ವಿಬಿ ಜಿ ರಾಮ್ ಜಿ ಕಾಯ್ದೆ ಹೇಗೆ ಜನವಿರೋಧಿಯಾಗಿದೆ ಎನ್ನುವುದಕ್ಕೆ ಈ ಮಾಹಿತಿಗಳು ನೆರವಾಗುತ್ತವೆ ಎಂದು ಹೇಳಿದರು.
ಇದನ್ನೂ ನೋಡಿ: ಉತ್ತರ ಪ್ರದೇಶದ ಬುಲ್ಡೋಜರ್ ನೀತಿ ಕರ್ನಾಟಕಕ್ಕೂ ಬೀಸಿತೆ!? Janashakthi Media
