ಅಭಿವೃದ್ಧ ಭಾರತ ಕಟ್ಟಲು ಭದ್ರ ಬುನಾದಿ ಹಾಕುವ ಅಮೃತ ಕಾಲದ ಮೊದಲ ಬಜೆಟ್ -ಪ್ರಧಾನಿ ಪ್ರಶಂಸೆ ಆದರೂ ಮನರೇಗಕ್ಕೆ, ಆಹಾರ ಸಬ್ಸಿಡಿಗೆ, ಗ್ರಾಮೀಣ ಅಭಿವೃದ್ಧಿಗೆ ಹಣಕಡಿತ!

ನವದೆಹಲಿ: ಕೇಂದ್ರ ಹಣಕಾಸು ಮಂತ್ರಿಗಳು ಫೆಬ್ರುವರಿ 1ರಂದು ಮಂಡಿಸಿದ 2023-24ರ ಬಜೆಟ್‍ ಅಮೃತ ಕಾಲದ ಮೊದಲ ಬಜೆಟ್ ಎಂದು ಅವರು ವರ್ಣಿಸಿದ್ದಾರೆ. ಈ ಬಜೆಟಿನಲ್ಲಿ ಏಳು ಆದ್ಯತೆಗಳನ್ನು ಗುರುತಿಸಿದ್ದು ಇವು ಅಮೃತಕಾಲದಲ್ಲಿ ಭಾರತಕ್ಕೆ ಮಾರ್ಗದರ್ಶನ ನೀಡುವ; ಸಪ್ತರ್ಷಿಗಳು’ ಎಂದೂ ಅವರು ವರ್ಣಿಸಿದ್ದಾರೆ. 7 ಲಕ್ಷ ರೂ. ವಾರ್ಷಿಕ ಆದಾಯದ ವರೆಗೆ ಈಗ ಆದಾಯ ತೆರಿಗೆ ಇರುವುದಿಲ್ಲ ಎಂದು ಪ್ರಕಟಿಸಿದ್ದಾರೆ.

ಪ್ರಧಾನ ಮಂತ್ರಿಗಳು ಅಮೃಥ ಕಾಲದ ಈ ಮೊದಲ ಬಜೆಟ್ ಸಮೃದ್ಧಿಯ ಆಕಾಂಕ್ಷೆ ಹೊತ್ತಿರುವ ಸಮಾಜದ, ರೈತರ ಮತ್ತು ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, ಅಭಿವೃದ್ಧ ಭಾರತ ಕಟ್ಟಲು ಒಂದು ಭದ್ರ ಬುನಾದಿ ಹಾಕುವ ಬಜೆಟ್‍ ಎಂದು ಪ್ರಶಂಸಿಸಿದ್ದಾರೆ.

ಆದರೆ  ಮೇಲುಮೇಲಿನ ಪ್ರಕಟಣೆಗಳನ್ನು ಬದಿಗಿಟ್ಟು ಆಳಕ್ಕೆ ಹೋಗಿ ವಿಶ್ಲೇಷಿಸಿದರೆ ಇದು ಒಂದೆಡೆಯಲ್ಲಿ ಹಣಕಾಸು ಕೊರತೆ ಎಂಬುದನ್ನು ತಗ್ಗಿಸಲು ಸರಕಾರದ ಖರ್ಚುಗಳಲ್ಲಿ ಕಡಿತ ಮಾಡಿರುವುದು, ಇನ್ನೊಂದೆಡೆಯಲ್ಲಿ ಶ್ರೀಮಂತರಿಗೆ ಇನ್ನಷ್ಟು ತೆರಿಗೆ ರಿಯಾಯ್ತಿಗಳನ್ನು ನೀಡಿರುವುದನ್ನು ಕಾಣಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.

ಹಣಕಾಸು ಕೊರತೆ ಕಳೆದ ಹಣಕಾಸು ವರ್ಷದಲ್ಲಿ ಜಿಡಿಪಿಯ 6.4% ಇತ್ತು. ಈ ಬಜೆಟಿನಲ್ಲಿ ಆದಾಯ ತೆರಿಗೆಗಳನ್ನು ಕಡಿತ ಮಾಡಿದ ನಂತರವೂ ಅದನ್ನು 5.9%ಕ್ಕೆ ಇಳಿಸಲಾಗಿದೆ. ಅಂದರೆ ಕೊವಿಡ್‍ ನಂತರದ ಆರ್ಥಿಕ ಚೇತರಿಕೆ ಇನ್ನೂ ನಿಧಾನಗತಿಯಲ್ಲಿರುವಾಗಲೂ, ಆರ್ಥಿಕ ಹಿಂಜರಿತ ಜನಗಳನ್ನು ತೀವ್ರವಾಗಿ ಬಾಧಿಸಬಹುದಾದ ಸಂದರ್ಭದಲ್ಲೂ ಜನಗಳಿಗೆ ಪರಿಹಾರ ಒದಗಿಸಬಹುದಾದ ಸರಕಾರದ ಖರ್ಚುಗಳಲ್ಲಿ ಕಡಿತ ಮಾಡಲಾಗಿದೆ ಎಂದು ಬಜೆಟ್‍ ವಿಶ್ಲೇಷಕರು ಹೇಳುತ್ತಾರೆ.

  • ವಿವಿಧ ಜನಕಲ್ಯಾಣ ಯೋಜನೆಗಳಿಗೆ ಸರಕಾರದ ಖರ್ಚು ಕಳೆದ ಬಜೆಟಿನಲ್ಲಿ ಜಿಡಿಪಿಯ 15.33% ಇದ್ದರೆ, ಈ ಬಜೆಟಿನಲ್ಲಿ ಅದು 14.92%ಕ್ಕೆ ಇಳಿದಿದೆ.
  • ಗ್ರಾಮೀಣ ಬಡವರಿಗೆ ಕೊವಿಡ್‍ ಕಾಲದಲ್ಲೂ ತುಸುವಾದರೂ ಪರಿಹಾರ ನೀಡಿದ್ದ ಜಗತ್ತಿನ ಅತಿ ದೊಡ್ಡ ಉದ್ಯೋಗ ಯೋಜನೆಯೆನಿಸಿದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ  ನೀಡಿರುವ ಹಣದಲ್ಲಿ 33% ಕಡಿತವಾಗಿರುವುದು ಇದನ್ನು ಎತ್ತಿ ತೋರಿದೆ. ಕಳೆದ ಬಜೆಟಿನಲ್ಲಿ ಇದಕ್ಕೆ 73,000 ಕೋಟಿ ರೂ. ಗಳನ್ನು ನೀಡಲಾಗಿತ್ತು, ಅದು ಸಾಲದಾದುದರಿಂದ ಅದನ್ನು ಹೆಚ್ಚಿಸಬೇಕಾಯಿತು, 2022-23ರ ಪರಿಷ್ಕೃತ ಅಂದಾಜಿನ ಪ್ರಕಾರ ಅದು 89,400 ರೂ. ಆದರೂ 2023-24 ರಬಜೆಟಿನಲ್ಲಿ ಅದನ್ನು 60, 000 ಕೋಟಿ ರೂ.ಗೆ ಇಳಿಸಲಾಗಿದೆ. ಇದು 2020-21ರ ಬಜೆಟ್ ‍ನೀಡಿಕೆಗಿಂತಲೂ ಕಡಿಮೆ.
  • ಆಹಾರ ಸಬ್ಸಿಡಿಗಳಲ್ಲೂ 31% ಕಡಿತವಾಗಿದೆ. ಕಳೆದ ವರ್ಷದ ಬಜೆಟ್‍ ಕೂಡ 2,06,831 ಕೋಟಿ ರೂ. ಕೊಟ್ಟಿತ್ತು. ಅದು ಸಾಲದಾಗಿ, 2023 ರಪರಿಷ್ಕೃತ ಬಜೆಟಿನ ಪ್ರಕಾರ ಅದು 2,87,194 ಕೋಟಿ ರೂ. ಆಗಿದೆ. ಆದರೂ ಈ ಬಜೆಟಿನಲ್ಲಿ ಅದನ್ನು 1,97, 350 ಕೋಟಿ ರೂ.ಗೆ ಇಳಿಸಲಾಗಿದೆ.
  • ಗ್ರಾಮೀಣ ಅಭಿವೃದ್ಧಿಗೆ ಕಳೆದ ವರ್ಷದ ಪರಿಷ್ಕೃತ ಬಜೆಟ್‍ 2,43,317 ಕೋಟಿ ರೂ. ನೀಡಿತ್ತು. ಈ ಬಜೆಟಿನಲ್ಲಿ ಅದನ್ನೂ 2,38,204 ಕೋಟಿ ರೂ.ಗೆ ಇಳಿಸಲಾಗಿದೆ.
  • ಪ್ರಧಾನ ಮತ್ರಿ ಪೋಷಣ ಯೋಜನೆ ಎಂಬ ಮಧ್ಯಾಹ್ನದ ಊಟ ಯೋಜನೆಗೆ  ಕಳೆದ  ಬಜೆಟಿನ ಪರಿಷ್ಕೃತ ಅಂದಾಜು 12,800 ಕೊಟಿ ರೂ.ಇದ್ದರೆ ಈ ಬಜೆಟ್ ‍ನೀಡಿರುವುದು 11, 600 ಕೋಟಿ ರೂ.
  • ಈ ಬಜೆಟ್‍ ರೈತರ ಕನಸನ್ನು ಈಡೇರಿಸುತ್ತದೆ ಎಂದರೂ, ಈ ಹಿಂದೆ ಅವರ ಆದಾಯವನ್ನು ದ್ವಿಗುಣಗೊಳಿಸುವ ಮಾತಾಡಿದ್ದರೂ, ಕಳೆದ  ಬಜೆಟಿನಲ್ಲಿ  68,000 ಕೋಟಿ ರೂ. ಪಡೆದಿದ್ದ ಪಿಎಂ ಕಿಸಾನ್‍ ಯೋಜನೆ ೀ ಬಾರಿ ಪಡೆದಿರುವುದು 60,000 ಕೋಟಿ ರೂ.
  • ಐಸಿಡಿಎಸ್ ಯೋಜನಾ ಕಾರ್ಯಕರ್ತರಿಗೆ ಈಗಲೂ ನೀಡಲಾಗುತ್ತಿರುವ ಅಲ್ಪ ಸಂಭಾವನೆಯಲ್ಲಿ ಯಾವುದೇ ಏರಿಕೆ ಕಾಣುತ್ತಿಲ್ಲ.
  • ಲಿಂಗ  ಬಜೆಟ್ ಒಟ್ಟು ಖರ್ಚಿನ ಶೇಕಡಾ 9 ಮಾತ್ರ.
  • 16 ಶೇಕಡಾ ಜನಸಂಖ್ಯೆಯಿ ರುವ   ಪರಿಶಿಷ್ಟ ಜಾತಿ ಬಜೆಟಿಗೆ  ಕೇವಲ 3.5 ಶೇ,    ಮತ್ತು 8.6 ಶೇ.ಷ್ಟಿರುವ ಪರಿಶಿ ಷ್ಟಬುಡಕಟ್ಟುಳಿಗೆ  ಕೇವಲ 2.7 ಶೇಕಡಾ.

ನಮ್ಮ ಜನಸಂಖ್ಯೆಯ ಬಹುಪಾಲು ಜನರ ಜೀವನೋಪಾಯದ ಮೇಲೆ ಮತ್ತಷ್ಟು ದಾಳಿಗಳನ್ನು ಹೆಚ್ಚಿಸುವ ಇಂತಹ ಬಜೆಟನ್ನು “ಜನಕೇಂದ್ರಿತ” ಬಜೆಟ್ ಎಂದು ಕರೆಯಲು ಸಾಧ್ಯವೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಸಾಂಕ್ರಾಮಿಕ ರೋಗದಿಂದ ಉಂಟಾದ ವಿನಾಶದ ಹೊರತಾಗಿಯೂ ರೂ. ಕಳೆದ ವರ್ಷ ಆರೋಗ್ಯಕ್ಕಾಗಿ ಮೀಸಲಿಟ್ಟ 9255 ಕೋಟಿ ರೂ. ಖರ್ಚಾಗದೆ ಉಳಿದಿದೆ. ಅಂತೆಯೇ, ಶಿಕ್ಷಣ ಬಜೆಟ್‌ನಲ್ಲಿ 4297 ಕೋಟಿ ಖರ್ಚಾಗದೇ ಉಳಿದಿದೆ.

ಬಂಡವಾಳ ವೆಚ್ಚಗಳಲ್ಲಿ ಗಣನೀಯ ಹೆಚ್ಚಳ ಮಾಡಲಾಗಿದೆ, ಇದು ಉದ್ಯೋಗ ಸೃಷ್ಟಿಗೆ ಅನುವು ಮಾಡಿಕೊಡುತ್ತದೆ ಎಂಬ  ಸರ್ಕಾರದ ಹೇಳಿಕೆ ಕೇವಲ ತೋರಿಕೆ , ಏಕೆಂದರೆ 2022-2023 ರಲ್ಲಿ  ಸಾರ್ವಜನಿಕ ಉದ್ಯಮದ ಸಂಪನ್ಮೂಲಗಳನ್ನು ಒಳಗೊಂಡಂತೆ ಒಟ್ಟು ಬಂಡವಾಳ ವೆಚ್ಚಗಳು ಕೇವಲ 9.6 ಶೇಕಡಾ ಹೆಚ್ಚಿವೆ ಎಂದು ಪರಿಷ್ಕೃತ ಅಂದಾಜುಗಳೇ ತೋರಿಸುತ್ತವೆ, ಇದು ಜಿಡಿಪಿ ಹೆಚ್ಚಳಕ್ಕಿಂತ ಕೇಳಮಟ್ಟದಲ್ಲಿಯೇ ಇದೆ, ಅಂದರೆ ಜಿಡಿಪಿಯ ಶೇಕಡಾವಾಗಿ ಇಳಿದಿದೆ .

ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ರೂ. 5 ರಿಂದ 7 ಲಕ್ಷ ರೂ. ಗೆ ಏರಿಸಿರುವುದು  ಸಂಬಳದಾರ ವಿಭಾಗಗಳಿಗೆ ಸ್ವಲ್ಪ ಪರಿಹಾರವನ್ನೇನೋ ನೀಡುತ್ತದೆ. ಆದಾಗ್ಯೂ,  ಹಣದುಬ್ಬರ ಮತ್ತು ಸಾಮಾಜಿಕ ವಲಯದ ವೆಚ್ಚದಲ್ಲಿ ಕಡಿತದಿಂದ ಜನರು ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಅಗತ್ಯ ಸೇವೆಗಳಿಗೆ ಹೆಚ್ಚು ಖರ್ಚು ಮಾಡಬೇಕಾಗಿ ಬರುತ್ತದೆ ಎಂಬುದನ್ನು ಗಣನೆಗೆ ತಗೊಂಡರೆ ಇದು ನಿಜವಾದ ಅರ್ಥದಲ್ಲಿ  ಹೆಚ್ಚಳವೆನಿಸಲಾರದು ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಬಜೆಟ್ ರಾಜ್ಯ ಸರ್ಕಾರಗಳಿಗೆ ಸಂಪನ್ಮೂಲ ವರ್ಗಾವಣೆಯನ್ನು ಹಿಸುಕುವ ಮೂಲಕ ಹಣಕಾಸು ಒಕ್ಕೂಟ ತತ್ವದ ಮೇಲೆ ಮತ್ತಷ್ಟು ದಾಳಿಗಳನ್ನು ಹೇರುವುದನ್ನು ಮುಂದುವರೆಸಿದೆ ಎಂದು  ಟೀಕಿಸಿದೆ. ಈ ವರ್ಗಾವಣೆಗಳು 2022-23 ರಲ್ಲಿ 8.4 ಶೇಕಡಾ ಹಣದುಬ್ಬರ ದರದ ಹೊರತಾಗಿಯೂ 2021-22 ರ ಮಟ್ಟದಲ್ಲೇ ಇವೆ ಎಂದು 2022-23 ರ ಪರಿಷ್ಕೃತ ಅಂದಾಜು ತೋರಿಸುತ್ತದೆ. ಅಲ್ಲದೆ ಸಾಲ ಪಡೆಯಲು ರಾಜ್ಯ ಸರ್ಕಾರಗಳಿಗೆ ಮತ್ತಷ್ಟು ಷರತ್ತುಗಳನ್ನು ವಿಧಿಸಲಾಗಿದೆ ಎಂದು ಅದು ನೆನಪಿಸಿದೆ.

ಶ್ರೀಮಂತರಿಗೆ ತೆರಿಗೆ ರಿಯಾಯಿತಿಗಳು ಮತ್ತು ಒಟ್ಟಾರೆ ತೆರಿಗೆ ಪ್ರಸ್ತಾವನೆಗಳು 2023-24ರಲ್ಲಿ 35,000 ಕೋಟಿ ರೂ ಆದಾಯ ನಷ್ಟಕ್ಕೆ ಕಾರಣವಾಗುತ್ತವೆ ಎಂದು ಹಣಕಾಸು ಸಚಿವರೇ ಮಾಹಿತಿ ನೀಡಿದ್ದಾರೆ ಎಂಬ ಸಂಗತಿಯತ್ತವೂ ಸಿಪಿಐ(ಎಂ) ಗಮನ ಸೆಳೆದಿದೆ.

Donate Janashakthi Media

Leave a Reply

Your email address will not be published. Required fields are marked *