ಧಾರವಾಡ: ಹೆಸರಾಂತ ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ವಿಚಾರಣೆಯು ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಿತು. ಇಂದು ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ. ಧಾರವಾಡದಲ್ಲಿ ಸಂಶೋಧಕ ಎಂ ಎಂ ಕಲಬುರ್ಗಿ ಅವರ ಹತ್ಯೆ ನಡೆದ ದಿನ ಅವರ ಪುತ್ರಿ ರೂಪದರ್ಶಿ ಅವರು ಮನೆಯಲ್ಲಿಯೇ ಇದ್ದರು. ವಿಚಾರಣೆ ವೇಳೆ ಕಣ್ಣೀರಿಡುತ್ತ ಆರೋಪಿಗಳನ್ನು ಗುರುತಿಸಿದರು.
ಹತ್ಯೆಗೀಡಾದ ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಮತ್ತು ಕಲಬುರ್ಗಿ ಪುತ್ರಿ ರೂಪದರ್ಶಿ ಇಂದು ಕೋರ್ಟ್ಗೆ ಹಾಜರಾಗಿದ್ದರು. ಐದು ಮಂದಿ ಆರೋಪಿಗಳಾದ ಅಮೂಲ್ ಕಾಳೆ, ಹುಬ್ಬಳ್ಳಿಯ ಅಮೀತ್ ಬದ್ದಿ, ಧಾರವಾಡದ ಗಣೇಶ್ ಮಿಸ್ಕಿನ್, ಮಹಾರಾಷ್ಟ್ರದ ವಾಸುದೇವ ಸೂರ್ಯವಂಶಿ ಹಾಗೂ ಬೆಳಗಾವಿಯ ಪ್ರವೀಣ್ ಚತೂರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಆರೋಪಿ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ನನ್ನು ರೂಪದರ್ಶಿ ಗುರುತಿಸಿದ್ದು, ಕೋರ್ಟ್‌ನಲ್ಲಿ ಭಾವುಕಳಾದ ಕಲಬುರ್ಗಿ ಪುತ್ರಿ ಹತ್ಯೆಗೀಡಾದ ತಮ್ಮ ತಂದೆಯನ್ನು ನೆನೆದು ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದರು. ಹತ್ಯೆ ನಡೆದ ದಿನದ ಮಾಹಿತಿ ನೀಡಿದರು. ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರ ವಿಚಾರಣೆಯೂ ಇಂದು ನಡೆಯಿತು.
ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಏಕಕಾಲಕ್ಕೆ ವಿಚಾರಣೆ ನಡೆಸಲು ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಇಂದಿನ ವಿಚಾರಣೆಯಲ್ಲಿ ಸಾಕ್ಷ್ಯಗಳಿಂದ ಮಾಹಿತಿ ಪಡೆಯಲಾಯಿತು. ಪ್ರಕರಣದ ಐದೂ ಆರೋಪಿಗಳನ್ನು ಸಹ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಧಾರವಾಡ ಕಲ್ಯಾಣ ನಗರ ನಿವಾಸದಲ್ಲಿ 2015ರ ಆಗಸ್ಟ್ 30ರಂದು ಡಾ ಎಂ ಎಂ ಕಲಬುರಗಿ ಅವರನ್ನು ದುಷ್ಕರ್ಮಿಗಳು ಹಣೆಗೆ ಗುಂಡಿಟ್ಟು ಕೊಲೆ ಮಾಡಿದ್ದರು. ಇಂದಿನ ವಿಚಾರಣೆ ಬಳಿಕ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿತು.