ಪರಿಷತ್ ಚುನಾವಣೆ : ದಾಖಲೆ ಮತದಾನ – ಡಿ.14ಕ್ಕೆ ಫಲಿತಾಂಶ

ಬೆಂಗಳೂರು : ಕರ್ನಾಟಕದಲ್ಲಿನ 25 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. 14 ರಂದು ಫಲಿತಾಂಶ ಪ್ರಕಟವಾಗಲಿದೆ.

ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಇತರೆ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಬಹುತೇಕ ಕಡೆಗಳಲ್ಲಿ ಶೇಕಡಾ 90ಕ್ಕೂ ಅಧಿಕ ಪ್ರಮಾಣದಲ್ಲಿ ಮತದಾನ ನಡೆದಿದೆ. ಕೆಲವೆಡೆ ಮತದಾನ ಪ್ರಕ್ರಿಯೆಯಲ್ಲಿ ಅಡಚಣೆ ಉಂಟಾದ ಘಟನೆಗಳು ನಡೆದಿವೆ.

ಈ ಪರಿಷತ್ ಚುನಾವಣೆಯ ಫಲಿತಾಂಶ ಮೂರೂ ಪ್ರಮುಖ ರಾಜಕೀಯ ಪಕ್ಷಗಳಿಗೆ ಅತ್ಯಂತ ಮಹತ್ವವಾದದ್ದು. ಅದರಲ್ಲೂ ಬಿಜೆಪಿ ಕನಿಷ್ಠ 13 ಸ್ಥಾನಗಳನ್ನು ಗೆದ್ದು ಮೇಲ್ಮನೆಯಲ್ಲಿ 75ಕ್ಕೂ ಅಧಿಕ ಸದಸ್ಯ ಬಲ ಪಡೆದು ಬಹುಮತ ಪಡೆಯುವ ಹುಮ್ಮಸ್ಸಿನಲ್ಲಿದೆ. ಕಾಂಗ್ರೆಸ್ 14 ಸೀಟುಗಳನ್ನು ಗೆಲ್ಲಬೇಕೆಂದು ಹವಣಿಸುತ್ತಿದ್ದರೆ ಜೆಡಿಎಸ್ ಸ್ಪರ್ಧಿಸಿರುವ 6 ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಜಯ ಸಾಧಿಸಬೇಕೆಂದು ಪ್ರಯತ್ನಿಸುತ್ತಿದೆ

ಶೇಕಡಾ ಮತದಾನದ ವಿವರ ಇಲ್ಲಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 99.96ರಷ್ಟು ಮತದಾನ ನಡೆದಿದೆ. ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಆಗಿದೆ. ಹಾಸನ ಜಿಲ್ಲೆಯಲ್ಲಿ ಒಟ್ಟು ಶೇಕಡಾ 99.77 ರಷ್ಟು ಮತದಾನ ನಡೆದಿದೆ. ಇಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆದಿದ್ದ ಚುನಾವಣೆ ಮುಕ್ತಾಯವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಂಜೆ 4ಗಂಟೆ ವರೆಗೂ ಶೇಕಡಾ 99.97 ರಷ್ಟು ಮತದಾನ ಆಗಿದೆ. ವಿಧಾನ ಪರಿಷತ್ ಧಾರವಾಡ ಕ್ಷೇತ್ರಕ್ಕೆ ಚುನಾವಣೆ ನಡೆದಿದೆ. ಅಂತಿಮ ಮತದಾನ ವಿವರದಂತೆ, ಧಾರವಾಡ ಜಿಲ್ಲೆ ಶೇಕಡಾ 99.31, ಹಾವೇರಿ‌ ಜಿಲ್ಲೆ ಶೇಕಡಾ 99.85, ಗದಗ ಜಿಲ್ಲೆ ಶೇಕಡಾ 99.59, ಒಟ್ಟು ಶೇಕಡಾ 99.63 ರಷ್ಟು ಮತದಾನ ಆಗಿದೆ. ಎರಡು ಸ್ಥಾನಗಳಿಗೆ ಇಲ್ಲಿ ಮತದಾನ ನಡೆದಿತ್ತು.

ಕೊಡಗು ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣಾ ಮತದಾನ ಅಂತ್ಯಗೊಂಡಿದೆ. ಜಿಲ್ಲೆಯಲ್ಲಿ ಶೇಕಡಾ 99.70 ರಷ್ಟು ಮತದಾನ ಆಗಿದೆ. 687 ಮಹಿಳಾ ಮತದಾರರು, 638 ಪುರುಷ ಮತದಾರರಿಂದ ಮತ ಚಲಾವಣೆ ಮಾಡಿದ್ದಾರೆ. ಒಟ್ಟು 1325 ಮತದಾರರಿಂದ ಹಕ್ಕು ಚಲಾವಣೆ ಮಾಡಲಾಗಿದೆ. ಮಂಡ್ಯ ಪರಿಷತ್ ಚುನಾವಣೆ ನಡೆದಿದೆ. ಅದರಂತೆ, ಒಟ್ಟು ಮತದಾರರು 4032 ಆಗಿದ್ದಾರೆ. 4018 ಮತ ಚಲಾವಣೆ ಆಗಿದೆ. ಅದರಂತೆ ಶೇಕಡಾ 99.85 ಮತದಾನ ನಡೆದಿದೆ.

ಕಲಬುರಗಿ ಯಾದಗಿರಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಒಟ್ಟು ಶೇಕಡಾ 99.75 ಮತದಾನ ಆಗಿದೆ. ಒಟ್ಟು ಮತದಾರರು 7088 ಇದ್ದರು. ಈ ಪೈಕಿ, 7070 ಮಂದಿ ಮತ ಚಲಾಯಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 99.71 ರಷ್ಟು ಮತದಾನ ಆಗಿದೆ. ವಿಧಾನ ಪರಿಷತ್ ಚುನಾವಣೆ ಹಿನ್ನಲೆ ಬಳ್ಳಾರಿ ಜಿಲ್ಲೆಯಲ್ಲಿ ಮತದಾನ ಮುಕ್ತಾಯ ಆಗಿದೆ. ಜಿಲ್ಲೆಯಲ್ಲಿ ಶೇಕಡಾ 99.81ರಷ್ಟು ಮತದಾನ ಆಗಿದೆ. 4664 ಮತದಾರರ ಪೈಕಿ 4654 ಮತ ಚಲಾವಣೆ‌ ಮಾಡಲಾಗಿದೆ. 09 ಜನ ಗೈರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಪರಸ್ಪರ ಎಡೆಬಿಡದೇ ಗೆಲುವಿಗಾಗಿ ಅಲೆದಾಡಿದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು, ಬೆಂಬಲಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇನ್ನೇನಿದ್ದರೂ ಡಿಸೆಂಬರ್ 14 ರವರೆಗೂ ಸೋಲು-ಗೆಲುವುಗಳ ಲೆಕ್ಕಾಚಾರ ಮಾತ್ರ ಬಾಕಿಯಿದೆ. ಯಾರು ಗೆಲ್ಲುತ್ತಾರೆ ? ಯಾರು ಸೋಲುತ್ತಾರೆ ? ಎಂಬ ಕುತೂಹಲ ಮಾತ್ರ ಮುಂದುವರೆದಿದೆ.

Donate Janashakthi Media

Leave a Reply

Your email address will not be published. Required fields are marked *