ಲಖನೌ: ನಮ್ಮ ದೇಶದಲ್ಲಿ ಪಾನ್ ಮಸಾಲ ಜಗಿದು ಎಲ್ಲೆಂದರಲ್ಲಿ ಉಗುಳಿ ನಗರವನ್ನು ಗಲೀಜು ಮಾಡುವವರನ್ನು ನೋಡಿದ್ದೇವೆ. ರಸ್ತೆ ಬದಿ, ಬಸ್ ಸ್ಟಾಪ್, ಥಿಯೇಟರ್, ಗೋಡೆ, ಕಾಂಪೌಂಡ್ ಗಳಿಗೂ ಉಗುಳಿ ಗಬ್ಬೆಸುವವರೂ ನಮಗೆ ಗೊತ್ತು. ಆದರೆ ಜನರಿಗೆ ಮಾದರಿಯಾಗಬೇಕಾದ ಜನಪ್ರತಿನಿಧಿಗಳೇ ಪಾನ್ ಮಸಾಲ ಜಗಿದು ವಿಧಾನ ಸೌಧದದೊಳಗೆ ಉಗುಳುವುದನ್ನು ನೋಡಿದ್ದೀರಾ? ಲಖನೌ
ಉತ್ತರ ಪ್ರದೇಶದ ಶಾಸಕರೊಬ್ಬರು ಪಾನ್ ಮಸಾಲ ಜಗಿದು ವಿಧಾನ ಸೌಧದೊಳಗೇ ಉಗುಳುವ ಮೂಲಕ ನಾಚಿಗೆಗೇಡಿನ ವರ್ತನೆ ತೋರಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಸ್ಪೀಕರ್ ಸತೀಶ್ ಮಹಾನ ಮಂಗಳವಾರ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಶಾಸಕರೊಬ್ಬರು ಪಾನ್ ಮಸಾಲ ಜಗಿದು ಅದನ್ನು ವಿಧಾನಸೌಧದ ಸಭಾಂಗಣದಲ್ಲೇ ಉಗುಳಿದ್ದಾರೆ ಎಂದಿದ್ದಾರೆ. ಲಖನೌ
ಮಂಗಳವಾರ ಸದನ ಪ್ರಾರಂಭವಾಗುವ ಮೊದಲು ಸದಸ್ಯರನ್ನುದ್ದೇಶಿಸಿ ಮಾತನಾಡಿದ ಸತೀಶ್ ಮಹಾನ, ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಆ ಪ್ರದೇಶವನ್ನು ಪರಿಶೀಲಿಸಿ ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಹಾಲ್‌ನೊಳಗೆ ಯಾರು ಉಗುಳಿದ್ದು ಎನ್ನುವುದು ತಮ್ಮ ಅರಿವಿಗೆ ಬಂದಿದ್ದರೂ ಅವರಿಗಾಗುವ ಅವಮಾನ ತಪ್ಪಿಸಲು ಸಾವರ್ಜನಿಕವಾಗಿ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಫಿಲಂ ಫೆಸ್ಟಿವಲ್‌ಗೆ ಒಲ್ಲೆ ಎಂದ ರಶ್ಮಿಕಾ ಮಂದಣ್ಣ: ಸಾರ್ವಜನಿಕವಾಗಿ ಸಾಕ್ಷ್ಯ ಬಿಡುಗಡೆ ಮಾಡುತ್ತೇನೆ- ರವಿ ಗಣಿಗ
ಸ್ಪೀಕರ್ ಹೇಳಿದ್ದೇನು?
“ಇಂದು ಬೆಳಗ್ಗೆ ಶಾಸಕರೊಬ್ಬರು ಪಾನ್ ಮಸಾಲಾ ಸೇವಿಸಿ ವಿಧಾನಸಭೆಯ ಹಾಲ್‌ನಲ್ಲೇ ಉಗುಳಿದ್ದಾರೆ ಎಂದು ನನಗೆ ಮಾಹಿತಿ ಸಿಕ್ಕಿತು. ಆದ್ದರಿಂದ ನಾನು ಅದನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡೆ. ಯಾರು ಈ ಕೃತ್ಯ ಎಸಗಿದ್ದು ಎನ್ನುವುದನ್ನು ನಾನು ಸಿಸಿಟಿವಿ ಕ್ಯಾಮೆರಾದಲ್ಲಿ ನೋಡಿದ್ದೇನೆ. ಆದರೆ ನಾನು ಯಾರನ್ನೂ ಅವಮಾನಿಸಲು ಬಯಸುವುದಿಲ್ಲ. ಹೀಗಾಗಿ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಇದು ಇನ್ನು ಪುನರಾವರ್ತನೆಯಾಗಬಾರದು. ಅಸೆಂಬ್ಲಿಯನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ. ತಪ್ಪು ಎಸಗಿದವರು ಅವರಾಗಿ ಒಪ್ಪಿಕೊಳ್ಳಬೇಕು” ಎಂದು ಹೇಳಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಾಚಿಗೆಗೇಡಿನ ವರ್ತನೆ ತೋರಿದ ಶಾಸಕರ ಹೆಸರು ಬಹಿರಂಗಪಡಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಬುದ್ಧಿ ಹೇಳಬೇಕಾದ ಜನಪ್ರತಿನಿಧಿಗಳೇ ಹೀಗೆ ವರ್ತಿಸಿದರೆ ಜನ ಸಾಮಾನ್ಯರ ಪಾಡೇನು? ಎಂದು ಕೆಲವರು ಪ್ರಶ್ನಿಸಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತಾಗಿದೆ ಎಂದು ಇನ್ನು ಕೆಲವರು ಕಿಡಿ ಕಾರಿದ್ದಾರೆ.
ಯಾಕಾಗಿ ಶಾಸಕರ ಹೆಸರನ್ನು ಗುಟ್ಟಾಗಿ ಇಡಬೇಕು? ಅವರ ಹೆಸರನ್ನು ಬಹಿರಂಗಪಡಿಸಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ʼʼಉಗುಳಿದವರಿಂದಲೇ ಸ್ವಚ್ಛಗೊಳಿಸಿ ಮತ್ತು ಅದರ ವಿಡಿಯೊವನ್ನು ಬಹಿರಂಗಪಡಿಸಿʼʼ ಎಂದು ಒಬ್ಬರು ಹೇಳಿದ್ದಾರೆ. ʼʼಶಾಸಕನ ವಿರುದ್ಧ ಕಠಿಣ ಕ್ರಮ ಅಗತ್ಯʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼಇದನ್ನು ಸ್ವಚ್ಛಗೊಳಿಸಿದ ಕಾರ್ಮಿಕನಿಗೆ ಮಾಮೂಲಿಗಿಂತ 10 ಪಟ್ಟು ಅಧಿಕ ಹಣ ನೀಡಬೇಕು. ಉಗುಳಿದ ಶಾಸಕನಿಂದಲೇ ಈ ಹಣವನ್ನು ವಸೂಲಿ ಮಾಡಬೇಕುʼʼ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಕೋಲಾಹಲವನ್ನೇ ಸೃಷ್ಟಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.
ಇದನ್ನೂ ನೋಡಿ: ಶ್ರಮಜೀವಿಗಳ ಹೋರಾಟ 3ನೇ ದಿನಕ್ಕೆ | ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪ್ರತಿಭಟನೆ |CITU