ಅರಣ್ಯಾಧಿಕಾರಿಗಳಿಗೆ ಅವಾಚ್ಯ ಶಬ್ದದಿಂದ ನಿಂದನೆ: ಶಾಸಕ ಸುರೇಶಗೌಡ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲು

ಮಂಡ್ಯ: ಅರಣ್ಯಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಾಗಮಂಗಲ ಶಾಸಕ ಕೆ.ಸುರೇಶ್​​ಗೌಡ ವಿರುದ್ಧ ನಾಗಮಂಗಲ ಆರ್​​ಎಫ್​ಓ ಸತೀಶ್ ದೂರು ನೀಡಿದ್ದು, ಶಾಸಕರು ಸೇರಿದಂತೆ 10 ಜನರ ವಿರುದ್ಧ ಜಿಲ್ಲೆಯ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ​ ದಾಖಲು ಮಾಡಲಾಗಿದೆ.

ನಾಗಮಂಗಲ ತಾಲೂಕಿನ ಹಾಲತಿ ಗ್ರಾಮದಲ್ಲಿ ಅರಣ್ಯ ಸಂರಕ್ಷಣೆಗೆ ಮುಂದಾಗಿದ್ದ ಅಧಿಕಾರಿಗಳಿಗೆ ಶಾಸಕ ಕೆ.ಸುರೇಶ್‌ಗೌಡ ನಿಂದನೆ ಮಾಡಿರುವುದು ಅಲ್ಲದೆ, ಗುಂಡು ಹೊಡೆಯುವ, ಬೆಂಕಿ ಹಚ್ಚುವ ಬೆದರಿಕೆಯನ್ನು ಹಾಕಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ತಮ್ಮ ಗ್ರಾಮಕ್ಕೆ ಬಿಡಬೇಡಿ, ರೈತರಿಗೆ ತೊಂದರೆ ನೀಡುವ ಯಾವುದೇ ಅಧಿಕಾರಿಗೆ ಬೆಂಕಿ ಹಚ್ಚುವಂತೆ ಸುರೇಶ್ ಗೌಡ ಸ್ಥಳೀಯ ನಿವಾಸಿಗಳಿಗೆ  ಸೂಚಿಸಿದ್ದಾರೆ.  ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಶಾಸಕರು  ದೌರ್ಜನ್ಯ ಎಸಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅರಣ್ಯ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ಶಾಸಕ ನಿಂದಿಸಿರುವಂತಹ ಘಟನೆ ನಾಗಮಂಗಲ ತಾಲೂಕಿನ ಹಾಲತಿ ಗ್ರಾಮದಲ್ಲಿ ನಡೆದಿದೆ. ಜಮೀನು ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ರೈತರ ನಡುವೆ ಘರ್ಷಣೆ ಉಂಟಾಗಿದೆ. ಈ ಸಂದರ್ಭದಲ್ಲಿ ಶಾಸಕರು ಅಧಿಕಾರಿಗಳ ವಿರುದ್ಧ ಅಸಭ್ಯ ಪದ ಬಳಕೆ ಮಾಡಿದ್ದಾರೆ. ಸರ್ವೆ ನಂ 135ರಲ್ಲಿ ಅರಣ್ಯ ಇಲಾಖೆ ನೆಡು ತೋಪು ಬೆಳೆಸಿದೆ. ಅದೇ ಜಮೀನಿಗಾಗಿ ರೈತರು ಬಗರ್ ಹುಕುಂ ಸಾಗುವಳಿ ಅರ್ಜಿ ಸಲ್ಲಿಸಿದ್ದರು.

ಜಮೀನು ವಶಪಡಿಸಿಕೊಳ್ಳಲು ಬಂದ ಅಧಿಕಾರಿಗಳ ವಿರುದ್ಧ ರೈತರ ಅಸಮಾಧಾನಗೊಂಡಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿ ರೈತರನ್ನು ಅಧಿಕಾರಿಗಳು ಬೆದರಿಸಿದ್ದಾರೆ. ಅಧಿಕಾರಿಗಳ ವರ್ತನೆಗೆ ಶಾಸಕ ಸುರೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದು ಅಲ್ಲದೆ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ಅಸಮಾಧಾನ ವ್ಯಕ್ತಪಡಿಸಿದರು.

ನಾಗಮಂಗಲ ತಾಲೂಕು ಹಾಲತಿ ಗ್ರಾಮದಲ್ಲಿ 374 ಎಕರೆ ಪರಿಭಾವಿತ ಅರಣ್ಯ ಪ್ರದೇಶವಿದೆ. ಈ ಪ್ರದೇಶವನ್ನು ಯಾವುದೇ ಇಲಾಖೆಗೂ ವರ್ಗಾವಣೆ ಮಾಡಿಲ್ಲ. ಅರಣ್ಯ ಪ್ರದೇಶವಾಗಿಯೇ ಉಳಿದುಕೊಂಡಿದೆ. ವಿವಾದವೇ ಇಲ್ಲದ ಅರಣ್ಯ ಜಮೀನಿಗೆ ಜಂಟಿ ಸರ್ವೆ ಮಾಡಿಸುವ ಅಗತ್ಯವೇನಿದೆ ಎನ್ನುವುದು ಅರಣ್ಯಾಧಿಕಾರಿಗಳ ಪ್ರಶ್ನೆ. ಸುಪ್ರೀಂಕೋರ್ಟ್ ಆದೇಶಾನುಸಾರ ಅರಣ್ಯ ಪ್ರದೇಶ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಜನಪ್ರತಿನಿಗಳಾದವರು ಇದನ್ನು ಅರ್ಥ ಮಾಡಿಕೊಳ್ಳಬೇಕೇ ವಿನಃ ಅರಣ್ಯಾಧಿಕಾರಿಗಳ ಮೇಲೆ ದರ್ಪ ತೋರಿಸುವುದಲ್ಲ. ಜನರಿಗೆ ದಿಕ್ಕು ತಪ್ಪಿಸಿ ಪ್ರಚೋದನಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಅಧಿಕಾರಿಗಳ ವಿವರಣೆಯಾಗಿದೆ.

ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ಸದಸ್ಯರು ಮೈಸೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ (ಸಿಎಫ್) ಮಾಲತಿ ಪ್ರಿಯಾ ಅವರನ್ನು ಭೇಟಿ ಮಾಡಿ ಶಾಸಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.

ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು, ಅದನ್ನು ರಕ್ಷಿಸುವುದು ಅರಣ್ಯಾಧಿಕಾರಿಗಳ ಕರ್ತವ್ಯ. ಹೀಗಾಗಿ ಶಾಸಕರ ವಿರುದ್ಧ ದೂರು ದಾಖಲಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಸಿದ್ದರಾಜು ಹೇಳಿದ್ದು, ಈ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದಿದ್ದಾರೆ.

ಜೆಡಿಎಸ್ ಶಾಸಕರೊಬ್ಬರು ಅರಣ್ಯ ಸಿಬ್ಬಂದಿಯನ್ನು ನಿಂದಿಸಿರುವುದು ಕೇವಲ ಇದೊಂದು ಘಟನೆ ಮಾತ್ರವಲ್ಲ. ರಾಜ್ಯದಾದ್ಯಂತ ಅರಣ್ಯ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಪ್ರತಿದಿನವೂ ಕಿರುಕುಳ ಅಥವಾ ದೌರ್ಜನ್ಯವನ್ನು ಎದುರಿಸುತ್ತಾರೆ ಎಂದು ಹೇಳಿದ್ದಾರೆ. ಒಂದು ತಿಂಗಳಲ್ಲಿ ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳಿಂದ ಕನಿಷ್ಠ ಮೂರು ಕಿರುಕುಳ, ನಿಂದನೆ, ಸಾವು ಮತ್ತು ಅತ್ಯಾಚಾರ ಬೆದರಿಕೆ ಪ್ರಕರಣಗಳು ಬರುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *