ಲಸಿಕೆ ಮಾರಾಟ ಪ್ರಕರಣ – ಶಾಸಕ‌ ರವಿ ಸುಬ್ರಮಣ್ಯ ವಿರುದ್ದ ದೂರು ದಾಖಲು

ಬೆಂಗಳೂರು: ‘ಉಚಿತವಾಗಿ ನೀಡಬೇಕಾದ ಕೋವಿಡ್‌ ಲಸಿಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಜನರಿಗೆ ಮಾರಾಟ ಮಾಡಲಾಗುತ್ತಿದೆ. ಬಸವನಗುಡಿ ಕ್ಷೇತ್ರದ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಹಣ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಚ್‌.ಎಂ.ವೆಂಕಟೇಶ್‌ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ಶನಿವಾರ ದೂರು ನೀಡಿದ್ದಾರೆ.

‘ಲಸಿಕೆ’ ಪಡೆಯುವ ಬಗ್ಗೆ ವಿಚಾರಿಸಲು ಹೊಸಕೆರೆಹಳ್ಳಿಯ ಎ.ವಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆ ಮಾಡಿರುವ ವೆಂಕಟೇಶ್‌, ಅಲ್ಲಿನ ಸಿಬ್ಬಂದಿಜೊತೆ ಮಾತನಾಡಿದ ಆಡಿಯೊ ತುಣುಕನ್ನೂ ದೂರಿನ ಜೊತೆ ಒದಗಿಸಿದ್ದಾರೆ. ಮಾತುಕತೆ ನಡುವೆ ರವಿ ಸುಬ್ರಹ್ಮಣ್ಯ ಹೆಸರು ಪ್ರಸ್ತಾಪವಾಗಿದೆ. ಈ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ‘ನನಗೆ ಮತ್ತು ಮಗನಿಗೆ ಲಸಿಕೆ ಬೇಕಿತ್ತು’ ಎಂದು ವೆಂಕಟೇಶ್, ನಗರದ ಎ.ವಿ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿಯನ್ನು ಕೇಳಿದ್ದಾರೆ. ಸಿಬ್ಬಂದಿ, ‘ನೋಂದಣಿ ಮಾಡಿಕೊಳ್ಳಿ. ಸಂದೇಶ ಬಂದರೆ ಬನ್ನಿ. ಶಾಸಕ ರವಿ ಸುಬ್ರಹ್ಮಣ್ಯ ಕಚೇರಿ ಅಥವಾ ವಾಸವಿ ಆಸ್ಪತ್ರೆಯಿಂದ ಅನುಮತಿ ಕೊಡುತ್ತಾರೆ. ಅದನ್ನು ತೆಗೆದುಕೊಂಡು ಬನ್ನಿ. ಲಸಿಕೆಗೆ ₹  900 ಶುಲ್ಕವಿದೆ. ಆ ದುಡ್ಡು ನಮಗೆ ಬರುವುದಿಲ್ಲ. ಅದು ರವಿ ಸುಬ್ರಹ್ಮಣ್ಯ ಕಚೇರಿಗೆ ಹೋಗುತ್ತದೆ. ನಮಗೆ ಇನ್ನು ಲಸಿಕೆ ಬಂದಿಲ್ಲ. ಅವರ ಕಡೆಯವರೇ ಆಸ್ಪತ್ರೆಗೆಬಂದು ಲಸಿಕೆ ಹಾಕಿ ಹೋಗುತ್ತಿದ್ದಾರೆ. ಅವರೇ ಮಾರ್ಕೆಟ್ ಸಹ ಮಾಡುತ್ತಿದ್ದಾರೆ. ನಮ್ಮ ಆಸ್ಪತ್ರೆ ಸಿಬ್ಬಂದಿ ಸಹ ಹಣ ಕೊಟ್ಟು ಲಸಿಕೆ ಹಾಕಿಸಿಕೊಂಡಿದ್ದೇವೆ’ ಎಂದಿರುವುದು ಆಡಿಯೊದಲ್ಲಿದೆ.

‘ಸರ್ಕಾರದ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಕೊರತೆ ಇದೆ. ನಿಮಗೆ ಹೇಗೆ ಲಸಿಕೆ ಸಿಕ್ಕಿತು. ಬಿಬಿಎಂಪಿಯವರು ಉಚಿತವಾಗಿ ಲಸಿಕೆ ಕೊಡುತ್ತಿದ್ದಾರಲ್ಲ. ಜೊತೆಗೆ, ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಹಣ ಏಕೆ ಪಡೆಯುತ್ತಿದ್ದೀರಾ. ನಾವು ಬಡವರು. ನಿಗದಿತ ದರ ಪಡೆಯಿರಿ’ ಎಂದು ಸಾಮಾಜಿಕ ಕಾರ್ಯಕರ್ತ ಕೋರಿದ್ದರು. ಅದಕ್ಕೆ ಸಿಬ್ಬಂದಿ, ‘ಆಗುವುದಿಲ್ಲ ಸರ್. ಬಿಬಿಎಂಪಿಯವರಿಂದಲೇ ಇಲ್ಲಿ ಲಸಿಕೆ ಹಾಕಲಾಗುತ್ತಿದೆ. ಶಾಸಕರ ಅನುಮತಿ ತೆಗೆದುಕೊಂಡು ಬನ್ನಿ’ ಎಂದು ಕರೆ ಕಡಿತಗೊಳಿಸಿದ್ದಾರೆ.

ಡಿಸಿಪಿಗೂ ದೂರು: ‘ಖಾಸಗಿ ಆಸ್ಪತ್ರೆ ಕೋವಿಡ್ ಲಸಿಕೆ ಅಭಿಯಾನದ ಜಾಹೀರಾತು ನೀಡುತ್ತಿದ್ದ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಮಾರುತ್ತಿದ್ದಾರೆ ಎನ್ನಲಾದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು, ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರಿಗೆ ದೂರು ನೀಡಿದ್ದಾರೆ.

ಕಾನೂನು ಹೋರಾಟ ನಡೆಸುತ್ತೇನೆ: ರವಿ ಸುಬ್ರಹ್ಮಣ್ಯ ನಾನು ಯಾವುದೇ ರೀತಿಯಲ್ಲಿ ಲಸಿಕೆ ಹಂಚಿಕೆಯಲ್ಲಿ ಹಣ ಪಡೆದಿಲ್ಲ. ಆ ಆಡಿಯೋದಲ್ಲಿ ಇರುವ ಮಹಿಳೆ ಆಸ್ಪತ್ರೆಯ ಸಿಬ್ಬಂದಿಯೇ ಅಲ್ಲ. ಈ ಬಗ್ಗೆ ಆಸ್ಪತ್ರೆಯವರು ಕೂಡ ಸ್ಪಷ್ಟನೆ ನೀಡಿದ್ದಾರೆ. ಜನ ಈ ರೀತಿಯಾಗಿ ಸಂಕಷ್ಟದಲ್ಲಿರುವಾಗ, ಲಸಿಕೆ ಹೆಸರಿನಲ್ಲಿ 700 ರೂ ಪಡೆಯೋ ದುಸ್ಥಿತಿ ನನಗೆ ಬಂದಿಲ್ಲ. ಈ ಸಂಬಂಧ ನಾನು ಕಾನೂನು ಹೋರಾಟ ನಡೆಸುತ್ತೇನೆ ಎಂದು ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಉನ್ನತ ತನಿಖೆಗೆ ಕಾಂಗ್ರೆಸ್ ಆಗ್ರಹ: ಬೆಡ್ ಬ್ಲಾಕಿಂಗ್ ದಂಧೆಯ ನಂತರ ಬಿಜೆಪಿ‌ಯಿಂದ ಈಗ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ. ಉಚಿತವಾಗಿ ನೀಡಬೇಕಿದ್ದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ. ಇದಕ್ಕೆ ಬೆಂಬಲವಾಗಿ ಆರೋಗ್ಯ ಸಚಿವರೂ ಸೇರಿ ಇಡೀ ಸರ್ಕಾರವೇ ಈ ಹಗರಣದಲ್ಲಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಬಿಜೆಪಿ ಪಟಾಲಂ ಈಗ ವ್ಯಾಕ್ಸಿನ್ ಬ್ಲಾಕಿಂಗ್ ಹಗರಣ ನಡೆಸಿದೆ. ಬಿಬಿಎಂಪಿ ಲಸಿಕೆಗಳನ್ನು 900 ರೂಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಮಾರಿ ಶಾಸಕ ರವಿ ಸುಬ್ರಮಣ್ಯ & ತೇಜಸ್ವಿ ಸೂರ್ಯ 700 ರೂ. ಕಮಿಷನ್ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉನ್ನತ ತನಿಖೆಯ ಅಗತ್ಯವಿದೆ ಎಂದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *