ಬೆಂಗಳೂರು: ಕಾಂಗ್ರೆಸ್ ಶಾಸಕ ರಾಜು ಕಾಗೆ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಗವಿಯಪ್ಪ ತಿರುಗಿ ಬಿದ್ದಿದ್ದು, ಅನುದಾನ ವಿಚಾರ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಕ್ಷೇತ್ರ ಅಭಿವೃದ್ಧಿ ಮಾಡಲು ಹಣ ಇಲ್ಲ. ನಮ್ಮದೇ ಸರ್ಕಾರ ಇದ್ದರೂ ಅನುದಾನ ಬಿಡುಗಡೆ ಆಗುತ್ತಿಲ್ಲ, ನಮ್ಮ ಸಚಿವರೇ ನಮಗೆ ಕಿಮ್ಮತ್ತು ಕೊಡುತ್ತಿಲ್ಲ. ಇದೇ ರೀತಿ ಮುಂದುವರಿದೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ಶಾಸಕ ಗವಿಯಪ್ಪ ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಯಾವ ಪುರುಷಾರ್ಥಕ್ಕಾಗಿ ಶಾಸಕನಾಗಿರಬೇಕು ನಮ್ಮದೇ ಕ್ಷೇತ್ರದ ಜನರ ಸಮಸ್ಯೆಗಳಿಗೆ ನನ್ನಿಂದ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಈ ರೀತಿ ಹೇಳಿಕೊಳ್ಳಬೇಕಾದರೆ, ಪರಿಸ್ಥಿತಿ ಏನಾಗಿರಬೇಕು ಹೇಳಿ ಎಂದು ತಿಳಿಸಿದ್ದಾರೆ. ಗವಿಯಪ್ಪ
ಇದನ್ನೂ ಓದಿ : ದೊಡ್ಡಬಳ್ಳಾಪುರ | ಕೊಚ್ಚೆ ನೀರು ರಸ್ತೆಗೆ ; ದಲಿತರ ಕಾಲೋನಿಯನ್ನು ನಿರ್ಲಕ್ಷಿಸುತ್ತಿರುವ ಗ್ರಾಮ ಪಂಚಾಯಿತಿ
ಈ ಹಿಂದೆ ಇದ್ದ ಬಿಜೆಪಿ ಶಾಸಕ ಆನಂದ್ ಸಿಂಗ್ ತಂದ ಅನುದಾನದಲ್ಲಿಯೇ ಒಂದೂವರೆ ವರ್ಷ ಕೆಲಸ ನಡೆದಿದೆ. ಈಗಲಾದರೂ ನಮಗೆ ಕೆಲಸ ಮಾಡಲು ಅನುದಾನ ಬೇಕಲ್ವಾ? ಕೆಕೆಆರ್ಡಿಬಿಯಿಂದ ನೂತನ ವಿಜಯನಗರ ಜಿಲ್ಲೆಗೆ ಒಟ್ಟು 348 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ವಿಜಯನಗರ ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಿಗೆ 60, 70 ಕೋಟಿ ರೂ. ಅನುದಾನ ನೀಡಿದ್ದಾರೆ. ವಿಜಯನಗರ ಕ್ಷೇತ್ರಕ್ಕೆ ಕೇವಲ 22 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ 12 ಕೋಟಿ ರೂ. ಅನುದಾನ ನೀಡಿದ್ದೇನೆ. ಉಳಿದ 8 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದಲ್ಲಿ ಏನು ಕೆಲಸ ಮಾಡಲು ಸಾಧ್ಯವಾಗುತ್ತೆ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದವೂ ಅಸಮಾಧಾನ ಹೊರ ಹಾಕಿರುವ ಅವರು, ಜಿಲ್ಲೆಗೆ ಬರುವ ಅನುದಾನದಲ್ಲಿ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಉಸ್ತುವಾರಿ ಸಚಿವರು ಶೇ.25ರಷ್ಟು ಅನುದಾನ ಮೀಸಲಿಡಬೇಕು. ಅದು ಜಿಲ್ಲಾ ಉಸ್ತುವಾರಿ ಸಚಿವರ ಕೈಯಲ್ಲಿ ಇರುತ್ತದೆ. ನಮ್ಮ ಜಿಲ್ಲಾ ಉಸ್ತುವಾರಿ ಜಮೀರ್ ಅಹ್ಮದ್ ಅವರು ಅದನ್ನು ಮಾಡಿಲ್ಲ. ಬೇಕಾದರೆ ಅವರ ವಿವೇಚನೆಗೆ ಬಂದಂತೆ ಅನುದಾನ ಬಳಸಲಿ. ನಾನು ಏನೂ ಕೇಳಲ್ಲ. ಒಟ್ಟಿನಲ್ಲಿ ನನ್ನ ಕ್ಷೇತ್ರದಲ್ಲಿ ಕೆಲಸ ಆಗಬೇಕು ಎಂದು ಅಸಮಾಧಾನ ಹೊರ ಹಾಕಿದರು.
ಇದನ್ನೂ ನೋಡಿ : ದೇವೇಗೌಡ್ರೆ.. ನಿಮ್ಮನ್ನು ಸಿಎಂ ಮಾಡಿದ್ದು ಯಾರು? ಸಿದ್ದರಾಮಯ್ಯ ಪ್ರಶ್ನೆ Janashakthi Media