ಬೆಂಗಳೂರು : ಇಂದಿನಿಂದ ಆರಂಭವಾಗಿರುವ ವಿಧಾನ ಮಂಡಲದ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ಸಂದರ್ಭದಲ್ಲೇ ಭದ್ರವತಿ ಶಾಸಕ ಸಂಗಮೇಶ್ ಪ್ರತಿಭಟಿಸುವ ಭರದಲ್ಲಿ ಅಂಗಿ ಬಿಚ್ಚಿ ಅನುಚಿತವಾಗಿ ವರ್ತಿಸಿದ್ದರ ಪರಿಣಾಮವಾಗಿ ಒಂದು ವಾರ ಅವರನ್ನು ಅಧಿವೇಶನದಲ್ಲಿ ಭಾಗವಹಿಸದಂತೆ ಅಮಾನತು ಮಾಡಲಾಗಿದೆ.
ವಿಧಾನಸಭೆ ಆರಂಭವಾಗುತ್ತಿದ್ದಂತೆ ಚರ್ಚೆಗೆ ಬಂದ ʻಒಂದು ದೇಶ ಒಂದು ಚುನಾವಣೆʼ ಕುರಿತು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ವಿಧಾನಸಭೆಯ ಸದನಲ್ಲಿ ಗದ್ದಲ ಉಂಟಾಗಿತ್ತು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರವರು ಪ್ರತಿಭಟನೆ ಮುಂದುವರೆದ ಪರಿಣಾಮ, ನಿಮ್ಮ ಸ್ಥಾನದಲ್ಲಿ ಕುಳಿತು ಚರ್ಚಿಸಿರಿ, ಇಲ್ಲದಿದ್ದರೆ ಸದನದಿಂದ ಹೊರ ಕಳುಹಿಸಬೇಕಾಗುತ್ತದೆ ಎಂದು ಹೇಳಿದರು. ಸದನದ ಕಲಾಪಗಳು ಸುಗಮವಾಗಿ ನಡೆಯದಂತಾಗಿದ್ದಕ್ಕೆ 15 ನಿಮಿಷವನ್ನು ಮುಂದೂಡಿದರು.