ಚೆನ್ನೈ: ಪೆಟ್ರೋಲ್-ಡೀಸೆಲ್ ಬೆಲೆಗಳ ಹೆಚ್ಚಳದಿಂದಾಗಿ ಕೇಂದ್ರ ಸರ್ಕಾರವು ಬರೊಬ್ಬರಿ 26 ಲಕ್ಷ ಕೋಟಿ ರೂಪಾಯಿ ಕಬಳಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ತೈಲ ಬೆಲೆ ಏರಿಕೆ ಕುರಿತ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಪ್ರತಿಪಕ್ಷಗಳ ಆಡಳಿತವಿರುವ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಜಾರ್ಖಂಡ್ ಮತ್ತು ತಮಿಳುನಾಡು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಬೇಕು ಎಂದು ಪ್ರಧಾನಿ ಮೋದಿ ಎರಡು ದಿನಗಳ ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಸಭೆಯಲ್ಲಿ ರಾಜ್ಯ ಸರ್ಕಾರಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಇದನ್ನು ಓದಿ: ಅಬಕಾರಿ ಸುಂಕ ಕಡಿತ ಮಾಡಲು ಬಿಜೆಪಿಯೇತರ ರಾಜ್ಯಗಳ ಮೇಲೆ ಒತ್ತಡ ಹಾಕಿದ ಪ್ರಧಾನಿ ಮೋದಿ
ತಮಿಳುನಾಡು ರಾಜ್ಯ ವಿಧಾನಸಭೆಯಲ್ಲಿ ಪ್ರಧಾನಿಯವರ ಮನವಿಯ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಯಾರು ಬೆಲೆ ಕಡಿಮೆ ಮಾಡುತ್ತಾರೆ, ಯಾರು ಬೆಲೆ ಹೆಚ್ಚಿಸುತ್ತಾರೆ ಎಂಬುದು ತಮಿಳುನಾಡು ಜನತೆಗೆ ಚೆನ್ನಾಗಿ ಗೊತ್ತು ಎಂದು ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿನ ಚರ್ಚೆಯ ಕುರಿತು ಟ್ವೀಟ್ ಮಾಡಿದ ಸ್ಟಾಲಿನ್, ಕೇಂದ್ರದ ಬಿಜೆಪಿ ಸರ್ಕಾರ ಚುನಾವಣೆ ಮುಗಿದ ತಕ್ಷಣ ಇಂಧನ ಬೆಲೆ ಹೆಚ್ಚಿಸುವ ಅಭ್ಯಾಸವನ್ನು ಹೊಂದಿದೆ. 5 ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮುನ್ನ ಇಂಧನ ಬೆಲೆ ಇಳಿಕೆ ಮಾಡಿ, ಫಲಿತಾಂಶ ಪ್ರಕಟವಾದ ಬಳಿಕ ಮತ್ತೆ ಬೆಲೆ ಏರಿಕೆ ಮಾಡಿದೆ. ಇದು ಕೇಂದ್ರದ ದೊಡ್ಡ ನಾಟಕ. ಯಾರು ಬೆಲೆ ಕಡಿಮೆ ಮಾಡುತ್ತಾರೆ, ಯಾರು ಬೆಲೆ ಹೆಚ್ಚಿಸುತ್ತಾರೆ ಎಂಬುದು ತಮಿಳುನಾಡು ಜನತೆಗೆ ಚೆನ್ನಾಗಿ ಗೊತ್ತು ಎಂದು ಕಿಡಿಕಾರಿದ್ದಾರೆ.
“ಕಳೆದ ಎಂಟು ವರ್ಷಗಳಲ್ಲಿ ಕಚ್ಚಾ ತೈಲ ಬೆಲೆ ಕುಸಿದಾಗ ಕೇಂದ್ರ ಸರ್ಕಾರವು 26 ಲಕ್ಷ ಕೋಟಿ ರೂ.ಗಳನ್ನು ಕಬಳಿಸಿದೆ. ಈಗ ಇಂಧನ ಬೆಲೆ ಏರಿಕೆಯಾದಾಗ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ದೂಷಿಸುವುದು ಒಂದು ಹಿಡಿ ಅಕ್ಕಿಯಿಂದ ಕುಂಬಳಕಾಯಿಯನ್ನು ಮುಚ್ಚುವ ಪ್ರಯತ್ನಕ್ಕೆ ಸಮಾನ’’ ಎಂದು ಸ್ಟಾಲಿನ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.