ಬೆಳ್ತಂಗಡಿ: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ಬಂಧನ ಪ್ರಕರಣದಲ್ಲಿ ಭಾರತ ನ್ಯಾಯ ಸಂಹಿತೆಯ ಸೆಕ್ಷನ್ ಗಳನ್ನು ದುರುಪಯೋಗ ಪಡಿಸಿರುವುದು, ಎಫ್ಐಆರ್ ದಾಖಲಿಸುವ ಸಂದರ್ಭ ನಿಯಮಗಳನ್ನು ಪಾಲಿಸದೆ ಅತ್ಯುತ್ಸಾಹ ತೋರಿರುವುದು ಎದ್ದು ಕಾಣುತ್ತಿದೆ. ಇದು, ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ವಿರುದ್ಧದ ಹೋರಾಟವನ್ನು ಹತ್ತಿಕಲು ಪಟ್ಟಭದ್ರ ಶಕ್ತಿಗಳು ನಡೆಸುತ್ತಿರುವ ಷಡ್ಯಂತ್ರದ ಭಾಗ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಆರೋಪಿಸಿದೆ. ತಿಮರೋಡಿ
ಬಿಜೆಪಿ ಪದಾಧಿಕಾರಿ ಬಿ ಎಲ್ ಸಂತೋಷ್ ಕುರಿತು ಮಹೇಶ್ ಶೆಟ್ಟಿ ನೀಡಿರುವ ಹೇಳಿಕೆಯಲ್ಲಿ ಧರ್ಮಗಳ ನಡುವೆ ಸಂಘರ್ಷ ಹುಟ್ಟುಹಾಕುವ, ಪ್ರಚೋದಿಸುವ ಯಾವುದೇ ಅಂಶಗಳು ಇಲ್ಲ. ಬಿ ಎಲ್ ಸಂತೋಷ್ ಹಾಗು ಮಹೇಶ್ ಶೆಟ್ಟಿ ತಿಮರೋಡಿ ಭಿನ್ನ ಧರ್ಮಗಳಿಗೆ ಸೇರಿದವರೂ ಅಲ್ಲ. ಹಾಗಿರುವಾಗ ‘ವ್ಯಕ್ತಿಗತ ಮಾನಹಾನಿ’ ಗೆ ಸೀಮಿತವಾದ ಪ್ರಕರಣದಲ್ಲಿ ‘ಧರ್ಮಗಳ ನಡುವೆ ಸಂಘರ್ಷ ಹುಟ್ಟು ಹಾಕುವ’ ಜಾಮೀನು ರಹಿತ ಸೆಕ್ಷನ್ ಅನ್ನು ಪೊಲೀಸರು ಹಾಕಲು ಸಾಧ್ಯ ಆದದ್ದು ಹೇಗೆ ? ನಿಯಮ ಮೀರಿ ಹಾಗೆ ಹಾಕುವ ಉದ್ದೇಶ ಏನು? ಎಂದು ಕಾರ್ಯದರ್ಶಿ ಬಿ ಎಮ್ ಭಟ್ ಪ್ರಶ್ನಿಸಿದರು.
ಇದನ್ನೂ ಓದಿ: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಹಣಕಾಸಿನ ಅವ್ಯವಹಾರ: ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಸಿಐಟಿಯು ಆಗ್ರಹ
ಹಾಗೆಯೆ, ಈ ಪ್ರಕರಣದಲ್ಲಿ ಮಾನಹಾನಿಗೆ ಒಳಗಾದ ಬಿ ಎಲ್ ಸಂತೋಷ್ ದೂರು ನೀಡಬೇಕಿತ್ತು. ಆದರೆ, ಬಿ ಎಲ್ ಸಂತೋಷ್ ವಿರುದ್ದ ನೀಡಿರುವ ಹೇಳಿಕೆಗೆ ಸಂಬಂಧ ಪಟ್ಟು ಸಂಬಂಧವೆ ಇಲ್ಲದ ಮೂರನೆ ವ್ಯಕ್ತಿ ದೂರು ನೀಡಿದ್ದಾರೆ. ನೇರ ಸಂಬಂಧ ಪಡದ ಮೂರನೆ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ಹಾಕಲು ಹೇಗೆ ಸಾಧ್ಯ ? ಯಾವುದೆ ಸಾಂವಿಧಾನಿಕ ಹುದ್ದೆ, ಸರಕಾರದ ಜವಾಬ್ದಾರಿಯುತ ಹುದ್ದೆಯಲ್ಲಿ ಇರದ ವ್ಯಕ್ತಿಗೆ ಮಾನಹಾನಿ ಆದ ವಿಷಯದಲ್ಲಿ, ಸಂಬಂಧವೇ ಇಲ್ಲದ ಮೂರನೆ ವ್ಯಕ್ತಿ ಕ್ರಿಮಿನಲ್ ಸೆಕ್ಷನ್ ಅಡಿ ದೂರು ನೀಡುವ, ಅದರ ಆಧಾರದಲ್ಲಿ ಎಫ್ಐಆರ್ ಹಾಕುವ ಸಂಪ್ರದಾಯ ರಾಜ್ಯದಲ್ಲಿ ಪ್ರಾರಂಭವಾದದ್ದು ಯಾವಾಗಿನಿಂದ ಎಂದು ಸಿಪಿಐಎಂ ಪ್ರಶ್ನಿಸಿದೆ.
ವ್ಯಕ್ತಿಗತ ನಿಂದನೆ, ಮಾನಹಾನಿಯಂತಹ ಆರೋಪಗಳು ಠಾಣೆಯಲ್ಲೆ ಜಾಮೀನು ದೊರಕುವ ಸಾಮಾನ್ಯ ಪ್ರಕರಣಗಳಾಗಿವೆ. ಆದರೆ, ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಪ್ರಕರಣಗಳಲ್ಲಿ ನ್ಯಾಯಕ್ಕೆ ಆಗ್ರಹಿಸುತ್ತಿರುವ ಚಳವಳಿಗಳನ್ನು ಹತ್ತಿಕ್ಕುವ, ಧ್ವನಿಯನ್ನು ಉಡುಗಿಸುವ ಪಟ್ಟಭದ್ರ ಶಕ್ತಿಗಳು ಹಾಗು ಬಿಜೆಪಿ ಪರಿವಾರದ ಹುನ್ನಾರದ ಭಾಗವಾಗಿ ನಿಯಮಗಳನ್ನು ಉಲ್ಲಂಘಿಸಿ ದೂರು ದಾಖಲಿಸಿಕೊಂಡು, ಜಾಮೀನು ರಹಿತ ಸೆಕ್ಷನ್ ಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಸಿಪಿಐಎಂ ಆರೋಪಿಸಿದೆ. ಮಹೇಶ್ ಶೆಟ್ಟಿ ತಿಮರೋಡಿ ಬಂಧನವನ್ನು ಖಂಡಿಸುವುದಾಗಿ ತಿಳಿಸಿದೆ.
ಇದನ್ನೂ ನೋಡಿ: ಧರ್ಮಸ್ಥಳ | ಅಸಹಜ ಸಾವುಗಳು, ಅತ್ಯಾಚಾರಗಳು, ಕೊಲೆಗಳು ಮತ್ತು ಭೂಕಬಳಿಕೆ ನಂಟಿನ ಬಗ್ಗೆ ತನಿಖೆಯಾಗಲಿ – ಎಡಪಕ್ಷಗಳ ಆಗ್ರಹ
