ಬಡ ಬೀದಿಬದಿ ವ್ಯಾಪಾರಿಗಳಿಗಾಗಿ ಇರುವ ಯೋಜನೆಯನ್ನು ಸರಕಾರವೇ ದುರುಪಯೋಗ ಮಾಡುತ್ತಿದೆ ಎಂದು ಸಂಘವು ಆರೋಪಿಸಿತ್ತು
ಮಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಸ್ವ-ನಿಧಿ ಸಾಲ ಯೋಜನೆಯನ್ನು ಮಂಗಳೂರು ಮಹಾನಗರ ಪಾಲಿಕೆ ಅನರ್ಹರಿಗೆ ನೀಡಿ ಯೋಜನೆಯ ದುರುಪಯೋಗ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಾಲಿಕೆಯ ಕಮಿಷನರ್ ಆನಂದ ಸಿ.ಎಲ್., ”ಆರೋಪಿಸುವವರಿಗೆ ಯೋಜನೆಯ ಬಗ್ಗೆ ಸರಿಯಾದ ಮಾಹಿತಿಯಿಲ್ಲವೆಂದು ತೋರುತ್ತಿದೆ” ಎಂದು ಜನಶಕ್ತಿ ಮೀಡಿಯಾಗೆ ಬುಧವಾರ ಹೇಳಿದರು.
ಪಾಲಿಕೆಯ ಸಾಲ ಮೇಳದ ಕುರಿತು ಇತ್ತಿಚೆಗೆ ಹೇಳಿಕೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್, “ನಗರದಲ್ಲಿ 1053 ಜನರನ್ನು ಬೀದಿಬದಿ ವ್ಯಾಪಾರಿಗಳು ಎಂದು ಗುರುತಿಸಿದ್ದರೂ ಬೀದಿ ವ್ಯಾಪಾರಿಗಳಲ್ಲದ 4000 ಜನರಿಗೆ ಈಗಾಗಲೆ ಸಾಲ ನೀಡಲಾಗಿದ್ದು, ಮತ್ತೆ 3000 ಜನರಿಗೆ ಸಾಲ ಮೇಳದ ಮೂಲಕ ಸಾಲ ನೀಡಲಾಗುತ್ತಿದೆ. ಬಡ ಬೀದಿಬದಿ ವ್ಯಾಪಾರಿಗಳಿಗಾಗಿ ಇರುವ ಯೋಜನೆಯನ್ನು ಸರಕಾರವೇ ದುರುಪಯೋಗ ಮಾಡುತ್ತಿದೆ” ಎಂದು ಆರೋಪ ಮಾಡಿದ್ದರು.
ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಆನಂದ ಸಿ.ಎಲ್., “ಆರೋಪಿಸುವವರಿಗೆ ಯೋಜನೆಯ ಬಗ್ಗೆ ಸರಿಯಾದ ಮಾಹಿತಿಯಿಲ್ಲವೆಂದು ತೋರುತ್ತಿದೆ. ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ರಾಷ್ಟ್ರಮಟ್ಟದಲ್ಲಿ ಜಾರಿಯಾಗಿದ್ದಾಗಿದೆ. ಇದರಲ್ಲಿ ಇಷ್ಟೆ ಜನರಿದ್ದಾರೆ ಎಂದೇನಿಲ್ಲ. ಯೋಜನೆಯ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ, ಮೀನು ವ್ಯಾಪಾರಿಗಳಿಗೆ, ಬಳೆ ವ್ಯಾಪಾರಿಗಳಿಗೆ, ಬಟ್ಟೆ ವ್ಯಾಪಾರಿಗಳಿಗೆ, ಬಲೂನ್ ವ್ಯಾಪಾರಿಗಳಿಗೆ, ಪಾನ್ ಶಾಪ್‌ಗಳಿಗೆ, ತಳ್ಳು ಗಾಡಿಯ ವ್ಯಾಪಾರಿಗಳು ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಸಾಲ ನೀಡುತ್ತಿದ್ದೇವೆ” ಎಂದು ತಿಳಿಸಿದರು.
ಸಾಲ ಮೇಳದ ಮೂಲಕ ಚುನಾವಣಾ ತಯಾರಿ ನಡೆಸುವವರಿಗೆ ಸಹಾಯ ಮಾಡಲಾಗುತ್ತಿದೆ ಎಂದು ಆರೋಪಕ್ಕೆ ಪ್ರತಿಕ್ರಿಯಿಸಿದ ಆನಂದ್, “ನಾನು ಇಲ್ಲಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳಷ್ಟೆ ಆಗಿದೆ. ಯೋಜನೆಯು ಸರ್ಕಾರದ್ದಾಗಿದ್ದು, ಸುಮಾರು 5 ವರ್ಷಗಳ ಹಿಂದೆಯೆ ಜಾರಿಯಾಗಿದೆ. ಅದನ್ನು ಜಾರಿ ಮಾಡುವುದಷ್ಟೆ ನನ್ನ ಕೆಲಸ. ರಾಜಕೀಯ ವಿಚಾರದ ಬಗ್ಗೆ ನನ್ನದು ನೋ ಕಮೆಂಟ್” ಎಂದು ಹೇಳಿದರು.
ಕಮಿಷನರ್ ಪ್ರತಿಕ್ರಿಯೆಗೆ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆಕ್ರೋಶ ವ್ಯಕ್ತಪಡಿಸಿದರು. “7000 ಜನರಿಗೆ ಸಾಲ ನೀಡಲು ಟಾರ್ಗೆಟ್ ನೀಡಲಾಗಿದೆ. ಮನೆಮನೆಗೆ ಹೋಗಿ ಸಾಲ ಪಡೆಯಿರಿ ಎಂದು ಕೇಳಿಕೊಳ್ಳಲಾಗುತ್ತಿದೆ. ಇವರಿಗೆಲ್ಲಾ ಬೀದಿಬದಿ ವ್ಯಾಪಾರಿಗಳ ಗುರುತಿನ ಚೀಟಿ ಎಲ್ಲಿಂದ ನೀಡುತ್ತೀರಾ? ವ್ಯಾಪಾರ ಮಾಡಲು ಜಾಗ ಎಲ್ಲಿಂದ ಕೊಡುತ್ತೀರಿ? ಬೀದಿಬದಿ ವ್ಯಾಪಾರಿಗಳ ಗುರುತಿನ ಚೀಟಿ ಕೊಡಿ ಎಂದು ಮತ್ತು ಪಟ್ಟಣ ವ್ಯಾಪಾರ ಸಮಿತಿ ಸಭೆ ಕರೆಯಿರಿ ಎಂದು ಕಳೆದ ಎರಡು ವರ್ಷಗಳಿಂದ ಮಹಾನಗರ ಪಾಲಿಕೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಅದನ್ನು ಪಾಲಿಕೆ ಮಾಡುತ್ತಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಸುಳ್ಳು ಮೊಕದ್ದಮೆ ವಾಪಸ್ ಪಡೆಯಲು ಒತ್ತಾಯ: ಬೀದಿಬದಿ ವ್ಯಾಪಾರಿಗಳಿಂದ ಮಂಗಳೂರು ಮಹಾನಗರ ಪಾಲಿಕೆ ಚಲೋ
“ಪಾಲಿಕೆ ಒಂದು ಕಡೆ ಸರ್ಕಾರದ ಯೋಜನೆಯೆಂದು ಸಾಲ ನೀಡುತ್ತಿದೆ, ಮತ್ತೊಂದು ಕಡೆ ಪೊಲೀಸರ ಲಾಠಿಯ ಮೂಲಕ ಬೀದಿಬದಿ ವ್ಯಾಪಾರಿಗಳನ್ನು ಓಡಿಸಿ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ. ಇದು ಪಾಲಿಕೆಯ ಇಬ್ಬಗೆಯ ನೀತಿ ಹಾಗೂ ಲೋಕಸಭೆ ಚುನಾವಣೆಗೆ ನಡೆಸುತ್ತಿರುವ ತಯಾರಿ. ಸ್ಮಾರ್ಟ್ ಸಿಟಿ, ನಗರ ಸೌಂದರ್ಯದ ಹೆಸರಿನಲ್ಲಿ ದಿನನಿತ್ಯ ಕಿರುಕುಳ ನೀಡಲಾಗುತ್ತಿದೆ. ಮಹಾನಗರ ಪಾಲಿಕೆ ಗುರುತಿಸಿದ ಅಧೀಕೃತ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲ” ಎಂದರು.
“ಈಗಾಗಲೆ ಗುರುತಿಸಿರುವ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಪಾಲಿಕೆ ಮುಂದಾಗುತ್ತಿಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿ ನಡೆಸಿ ಸಭೆಯಲ್ಲಿ ಈ ಬಗ್ಗೆ ಕೇಳಿದ್ದರು. ಬೀದಿಬದಿ ವ್ಯಾಪಾರಿಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದಾರೆ ಎಂದು ಈ ಗುರುತಿನ ಚೀಟಿ ನೀಡಲು ಬಿಡುತ್ತಿಲ್ಲ. ಇದಕ್ಕೆ ರಾಜಕೀಯ ಒತ್ತಡವೆ ಕಾರಣ. ಇಷ್ಟೆ ಅಲ್ಲದೆ, ರಾಜಸ್ಥಾನ ಹಾಗೂ ಯುಪಿ ಕಡೆಯ ಒಂದಷ್ಟು ವ್ಯಕ್ತಿಗಳು ನಗರದ ಬೀದಿಬದಿ ತುಂಬಾ ಪಾನಿಪುರಿ, ಕುಲ್ಫಿ ಹಾಗೂ ಇಲೆಕ್ಟ್ರಾನಿಕ್ ಅಂಗಡಿಗಳನ್ನು ಇಟ್ಟು ಉತ್ತರ ಭಾರತದ ಕಡೆಯವರನ್ನು ಕೆಲಸಕ್ಕೆ ನೇಮಿಸಿ ಹಲವಾರು ಅಂಗಡಿ ನಡೆಸುತ್ತಿದ್ದಾರೆ. ಇವರ ಅಂಗಡಿ ನಡೆಯಲು ಪಾಲಿಕೆಗೆ ಲಂಚ ನೀಡಲಾಗುತ್ತದೆ” ಎಂದು ಇಮ್ತಿಯಾಝ್ ಆರೋಪಿಸಿದರು.
ವಿಡಿಯೊ ನೋಡಿ: ಸೌಜನ್ಯ ಸಾವಿನ ರಹಸ್ಯ : ಭಾಗ 2 – CCTV ಕಣ್ಣುಗಳನ್ನು ಕುರುಡು ಮಾಡಿದವರು ಯಾರು? Janashakthi Media