ರಾಜ್ಯಸಭೆಯಲ್ಲಿ ಜುಲೈ 30ರಂದು ಕೇಂದ್ರ ಗೃಹ ಮಂತ್ರಿಗಳು, ಕೇಂದ್ರ ಸರಕಾರ ಏಳುದಿನಗಳ ಮುಂಚೆಯೇ, ಜುಲೈ 23ರಂದು ಕೇರಳ ಸರಕಾರಕ್ಕೆ ಭಾರೀ ಮಳೆ ಮತ್ತು ಭೂಕುಸಿತಗಳ ಸಾಧ್ಯತೆಯ ಎಚ್ಚರಿಕೆಯನ್ನು ಕೊಟ್ಟಿತ್ತು, ಅದೇ ದಿನ ಎನ್ಡಿಆರ್ಎಫ್ನ 9 ತಂಡಗಳನ್ನು ಕಳಿಸಿತ್ತು, ರಾಜ್ಯ ಸರಕಾರ ಈ ಅಲರ್ಟ್ ಗಳಿಗೆ ಕಿವಿಗೊಟ್ಟು ತೊಂದರೆಗೆ ಒಳಗಾಗಬಹುದಾದ ಸಮುದಾಯಗಳನ್ನು ವರ್ಗಾಯಿಸಿದ್ದರೆ, ಜನ ವಯನಾಡಿನಲ್ಲಿ ಪ್ರಾಣ ಕಳಕೊಳ್ಳುತ್ತಿರಲಿಲ್ಲ ಎಂದು ದೂಷಿಸಿದ್ದರು. ಅಲರ್ಟ್
ಆದರೆ ಇದು ಸತ್ಯಸಂಗತಿಗಳಿಗೆ ಹೊಂದಿಕೆಯಾಗದ ಸಂಗತಿ ಎಂದು ಇದನ್ನು ನಿರಾಕರಿಸುತ್ತ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಸ್ತವ ಸ್ಥಿತಿಯ ಬಗ್ಗೆ ವಿವರಗಳನ್ನು ಕೊಡುತ್ತ ಹೇಳಿದರು. ವಾಸ್ತವ ಸಂಗತಿಯೆಂದರೆ ಜುಲೈ 23ರಿಂದ ಜುಲೈ 28ರ ನಡುವೆ ಕೇಂದ್ರೀಯ ಹವಾಮಾನ ಇಲಾಖೆ ಕೇರಳದಲ್ಲಿ ಭಾರೀ ಮಳೆಯ ಯಾವುದೇ ಕಿತ್ತಳೆ ಅಲರ್ಟನ್ನೂ ನೀಡಲಿಲ್ಲ, ಎನ್ಡಿಆರ್ಎಫ್ನ ತಂಡಗಳನ್ನು ಕಳಿಸಲು ಕೇರಳ ಸರಕಾರವೇ ಮನವಿ ಮಾಡಿತ್ತು ಎಂದಿದ್ದರು ಮತ್ತು ಮುಂದುವರೆದು “ಇದೀಗ ಒಬ್ಬರನ್ನೊಬ್ಬರು ದೂಷಿಸುವ ಸಂದರ್ಭವಲ್ಲ, ಈಗ ನಾವು ಒಂದು ದುರಂತವನ್ನು ಎದುರಿಸುತ್ತಿದ್ದೇವೆ.
ಹಲವಾರು ಮಂದಿ ಹತಾಶ ಮತ್ತು ನಿರ್ಗತಿಕ ಸ್ಥಿತಿಯಲ್ಲಿದ್ದಾರೆ. ಉಳಿಸಬಹುದಾದವರನ್ನು ಉಳಿಸಲು, ನೆಲದಡಿಯಲ್ಲಿ ಹೂತು ಹೋದವರನ್ನು ಹುಡುಕಿ ತೆಗೆಯಲು ಕಾರ್ಯಪೃವೃತ್ತರಾಗಬೇಕಿದೆ. ಈ ಪ್ರದೇಶವನ್ನು ಹಿಂದಿನ ಸ್ಥಿತಿಗೆ ತರಲು ಮತ್ತು ಕಳೆದು ಹೋದ ಹಳ್ಳಿಯನ್ನು ಮತ್ತೆ ಕಟ್ಟಲು ಮುಂದೊತ್ತಬೇಕಾಗಿದೆ. ಇಂತಹ ಗಂಭೀರ ಕ್ಷಣದಲ್ಲಿ ಎಲ್ಲವನ್ನೂ ಒಟ್ಟಿಗೆ ಇಡುವುದು ಅತ್ಯಗತ್ಯ. ಇದಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ. ಅದಕ್ಕೆ ಎಲ್ಲರೂ ಸಹಕರಿಸಬೇಕು” ಎಂದು ವಿನಂತಿಸಿದ್ದರು. ಜುಲೈ 23ರಿಂದ ಜುಲೈ 28ರ ನಡುವೆ ಕೇಂದ್ರೀಯ ಹವಾಮಾನ ಇಲಾಖೆ ಕೇರಳದಲ್ಲಿ ಭಾರೀ ಮಳೆಯ ಯಾವುದೇ ಕಿತ್ತಳೆ ಅಲರ್ಟನ್ನು ನೀಡಲಿಲ್ಲ.
ಇದನ್ನೂ ಓದಿ: ಆಗಸ್ಟ್ 12ರವರೆಗೆ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಮಳೆ ಆರ್ಭಟ: ಹವಾಮಾನ ಇಲಾಖೆ ಮುನ್ಸೂಚನೆ
ಜುಲೈ 29ರಂದು ವಯನಾಡ್ ಜಿಲ್ಲೆಗೆ ಮಾತ್ರ ಕಿತ್ತಳೆ ಅಲರ್ಟನ್ನು ನೀಡಿತು. ವಯನಾಡಿಗೆ ಕೆಂಪು ಅಲರ್ಟನ್ನು ಮತ್ತು ಭಾರೀ ಮಳೆಯ
ಸಾಧ್ಯತೆಯನ್ನು ಜುಲೈ 30ರಂದು ಭೂಕುಸಿತದ ನಂತರವೇ ನೀಡಲಾಯಿತು ಎಂದು ನಂತರ ನಿಜಸಂಗತಿಗಳನ್ನು ಪರಿಶೀಲಿಸಿದ ‘ದಿ ಹಿಂದು’ (ಆಗಸ್ಟ್ 2) ವರದಿ ಮಾಡಿದೆ. ‘ದಿ ಹಿಂದೂ’ನಲ್ಲಿ ಪ್ರಕಟವಾಗಿರುವ ಈ ವರದಿ ಕೇಂದ್ರ ಗೃಹಮಂತ್ರಿಗಳ ದೂಷಣೆ ಎಷ್ಟು ಟೊಳ್ಳು ಎಂಬುದನ್ನು ಬಯಲಿಗೆ ತಂದಿದೆ ಎಂದು ಈಬಗ್ಗೆ ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಟಿಪ್ಪಣಿ ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ಕಾಂಗ್ರೆಸಿನ ಮುಖ್ಯ ಸಚೇತಕರಾಗಿರುವ ಜೈರಾಮ್ ರಮೇಶ್ ಈ ಮೂಲಕ, ಗೃಹಮಂತ್ರಿ ಅಮಿತ್ ಷಾ ಸದನವನ್ನು ದಿಕ್ಕು
ತಪ್ಪಿಸಿದ್ದಾರೆ ಎಂದು ಅವರ ವಿರುದ್ಧ ಹಕ್ಕುಚ್ಯುತಿ ಠರಾವನ್ನು ಆಗಸ್ಟ್ 2ರಂದು ಸಲ್ಲಿಸಿದ್ದಾರೆ. ಜುಲೈ 31 ರಂದು ರಾಜ್ಯಸಭೆಯಲ್ಲಿ ವಯನಾಡ್ ಭೂಕುಸಿತದ ಬಗ್ಗೆ ಗಮನ ಸೇಳೆಯುವ ಸೂಚನೆಗೆ ಪ್ರತಿಕ್ರಿಯೆಯಾಗಿ, ಗೃಹ ಮಂತ್ರಿಗಳು ಮುನ್ನೆಚ್ಚರಿಕೆಯ ವ್ಯವಸ್ಥೆಗಳ ಬಗ್ಗೆ ಹಲವು ದಾವೆಗಳನ್ನು ಮುಂದಿಡುತ್ತ ಕೇಂದ್ರ ಸರಕಾರ ಕೇರಳ ಸರಕಾರಕ್ಕೆ ದುರಂತದ ಬಹಳ ಮೊದಲೇ ಅಲರ್ಟ್(ಎಚ್ಚರಿಕೆ)ಗಳನ್ನು ನೀಡಿದ್ದರೂ ಕೇರಳ ಅದನ್ನು ಬಳಸಿಕೊಳ್ಳಲಿಲ್ಲ ಎಂದಿರುವ ಸಂಗತಿಯತ್ತ ಅಧ್ಯಕ್ಷ ಜಗದೀಪ್ ಧನಖರ್ ಅವರಿಗೆ ಬರೆದ ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ಈ ದಾವೆಗಳ ಸತ್ಯಾಸತ್ಯತೆಯನ್ನು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪರೀಕ್ಷಿಸಿ ನೋಡಲಾಗಿದೆ. ಆಗಸ್ಟ್ 2, 2024 ರಂದು ದಿ ಹಿಂದೂ
ಪತ್ರಿಕೆಯಲ್ಲಿ ಪ್ರಕಟವಾದ ಅಂತಹ ವಿವರವಾದ ಸತ್ಯ-ಪರೀಕ್ಷೆಯನ್ನು ಲಗತ್ತಿಸಲಾಗಿದೆ" ಎಂದು ರಮೇಶ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ, ‘ಕೇಂದ್ರ ಸರ್ಕಾರ ಮೊದಲೇ ಎಚ್ಚರಿಕೆಗಳನ್ನು ನೀಡಿತ್ತು ಎಂದು ಒತ್ತಿ ಹೇಳಿರುವುದು ಸುಳ್ಳು ಎಂದು ಸಾಬೀತಾಗಿದ್ದು, ಕೇಂದ್ರ ಗೃಹ ಸಚಿವರು ರಾಜ್ಯಸಭೆಯನ್ನು ದಿಕ್ಕು ತಪ್ಪಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದು ರಮೇಶ್ ಹೇಳಿದ್ದಾರೆ. ಸಚಿವರು ಅಥವಾ ಸದಸ್ಯರು ಸದನವನ್ನು ದಿಕ್ಕುತಪ್ಪಿಸುವುದು ಹಕ್ಕು ಚ್ಯುತಿ ಮತ್ತು ಸದನದ ಅವಹೇಳನವಾಗಿದೆ. ಇಂತಹ ಸಂದರ್ಭದಲ್ಲಿ, ಈ ವಿಷಯದಲ್ಲಿ ಕೇಂದ್ರ ಗೃಹ ಮಂತ್ರಿಗಳ ವಿರುದ್ಧ ಹಕ್ಕು ಚ್ಯುತಿ ಕಲಾಪಗಳನ್ನು ಆರಂಭಿಸಬೇಕು ಎಂದು ನಾವು ಕೇಳುತ್ತೇವೆ" ಎಂದು ಜೈರಾಂ ರಮೇಶ್ ರಾಜ್ಯ ಸಭಾ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಕೇಳಿದ್ದಾರೆ.
‘ಕೇರಳ ಪಡೆದ ಮುನ್ನೆಚ್ಚರಿಕೆಗಳೇನು?’
ವಿನಾಶ ಪೀಡಿತ ಪ್ರದೇಶಗಳಲ್ಲಿ ಕಿತ್ತಳೆ ಅಲರ್ಟ್ ಜಾರಿಯಲ್ಲಿತ್ತು. 115 ರಿಂದ 204 ಮಿ.ಮೀ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿತ್ತು. ವಾಸ್ತವವಾಗಿ ಅದಕ್ಕಿಂತ ಬಹಳ ಹೆಚ್ಚು ಮಳೆ ಸುರಿಯಿತು. ಮೊದಲ 24 ಗಂಟೆಗಳಲ್ಲಿ ಒಟ್ಟು 200 ಮಿ.ಮೀ ಮತ್ತು ನಂತರದ 24 ಗಂಟೆಗಳಲ್ಲಿ 372 ಮಿ.ಮೀ ಮಳೆಯಾಗಿದೆ. 48 ಗಂಟೆಗಳಲ್ಲಿ ಒಟ್ಟು 572 ಮಿ.ಮೀ ಮಳೆಯಾಗಿದೆ. ಇದು ಆರಂಭಿಕ ಎಚ್ಚರಿಕೆಗಿಂತ ಎಷ್ಟೋ ಹೆಚ್ಚು. ಈ ದುರಂತದ ಮೊದಲು ಈ ಪ್ರದೇಶವು ಎಂದೂ ರೆಡ್ ಅಲರ್ಟಿನಲ್ಲಿ ಇರಲಿಲ್ಲ. ಆದರೆ ಈ ಘಟನೆಯ ನಂತರ, ಬೆಳಿಗ್ಗೆ ಆರು ಗಂಟೆಗೆ ಈ ಪ್ರದೇಶದಲ್ಲಿ ರೆಡ್ ಅಲರ್ಟ್ ಪ್ರಕಟಿಸಲಾಯಿತು ಎಂದು ಕೇರಳ ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು. ಅಲರ್ಟ್
ದಿ ಹಿಂದೂ’ ದೈನಿಕ ಆಗಸ್ಟ್ 2ರಂದು ಪ್ರಕಟವಾದ What early warning did Kerala have? ( ಕೇರಳ ಪಡೆದ ಮುನ್ನೆಚ್ಚರಿಕೆಗಳೇನು?’ ) ಎಂಬ
ವರದಿ ಕೂಡ ಹೀಗೆ ಹೇಳುತ್ತದೆ-
“ಶ್ರೀಯುತ ಷಾ ಜುಲೈ 26ರಂದು 20ಸೆ.ಮೀ.ಗಿಂತ ಹೆಚ್ಚೆಚ್ಚು ಮಳೆಯಾಗುತ್ತದೆ ಮತ್ತು ಭೂಕುಸಿತಗಳಾಗಬಹುದು ಎಂದು ಮುನ್ನೆಚ್ಚರಿಕೆ
ನೀಡಿತ್ತು ಎಂದು ರಾಜ್ಯಸಭೆಗೆ ಹೇಳಿದರು. ಆದಿನ ಐಎಂಡಿ( ಭಾರತ ಹವಾಮಾನ ಇಲಾಖೆ) ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ
ಇಂತಹ ಎಚ್ಚರಿಕೆಯೇನೂ ಇಲ್ಲ. ಹಿಂದಿನ ಆವೃತ್ತಿಗಳಲ್ಲಿ ದೃಶ್ಯ ಉಪ-ಡಿವಿಷನ್ವಾರು ಹವಾಮಾನ ಎಚ್ಚರಿಕೆಗಳಲ್ಲಿ ಇದ್ದಂತೆ , ‘ಹಳದಿ’
ವಾಚ್ ಅಲರ್ಟ್ ಮಾತ್ರ ಇತ್ತು” !
ಚಿತ್ರ-1 ನೋಡಿ: ಜುಲೈ 26 ರ ಬೆಳಿಗ್ಯೆ 10 ಗಂಟೆಗೆ ಭಾರತ ಸರಕಾರದ ಹವಾಮಾನ ಇಲಾಖೆ(ಐಎಂಡಿ) ನೀಡಿದ ಮುನ್ಸೂಚನೆಯ ಪ್ರಕಾರ 26ರಿಂದ 30ರ ನಡುವೆ ಕೇರಳದ ಮಲಪ್ಪುರಂ, ಕೊಹಿಕೊಡ್ ಮತ್ತು ವಾಯನಾಡ್ ಬಿಟ್ಟು ಬೇರೆಲ್ಲ ಕಡೆಗಳಲ್ಲಿ ಹಸಿರು ಎಚ್ಚರಿಕೆ ಇತ್ತು.
ವಾಯ್ನಾಡಿನಲ್ಲೂ ಜುಲೈ 28 ಮತ್ತು 30ರಂದು ಹಸಿರು ಅಲರ್ಟ್ ಮತ್ತು ಉಳಿದ 3ದಿನಗಳಲ್ಲಿ ಹಳದಿ ಅಲರ್ಟ್ ಇತ್ತಷ್ಟೇ.
ಚಿತ್ರ – 1
‘ದಿ ಹಿಂದೂ’ ವರದಿಯ ಇತರ ಅಂಶಗಳು ಹೀಗಿವೆ:
- ಜುಲೈ 29ರಂದು ಐಎಂಡಿ ಪತ್ರಿಕಾಹೇಳಿಕೆ ಅಂದು ಕೇರಳ ಮತ್ತು ಮಾಹೆಯಲ್ಲಿ “ಅಲ್ಲಲ್ಲಿ ಭಾರಿ ಮಳೆಯಾಗುವ ಸಂಭವವಿದೆ” ಎಂದು
ಹೇಳಿತ್ತು. ಭೂಕುಸಿತ ಜುಲೈ 30ರ ಮುಂಜಾವಿನಲ್ಲಿ ಸಂಭವಿಸಿತು. ಕೆಂಪು ಎಚ್ಚರಿಕೆ ನೀಡಿದ್ದು ಜುಲೈ 30ರ ಅಪರಾಹ್ನ 1.10ರ
ಹೇಳಿಕೆಯಲ್ಲಷ್ಟೆ. ಆವೇಳೆಗಾಗಲೇ ಭೂಕುಸಿತಗಳು ಸಂಭವಿಸಿದ್ದವು. - ಐಎಂಡಿಯ ಉಪಸಂಸ್ಥೆಯಾದ ಅಗ್ರೊಮೆಟ್ ಜುಲೈ26ರಂದು ನೀಡಿದ ಮುನ್ಸೂಚನೆಯಲ್ಲಿ ಜುಲೈ 30ರಂದು 15ಎಂಎಂ. ಮಳೆಯ
ಮುನ್ಸೂಚನೆ ನೀಡಿತ್ತು. ಐಎಂಡಿ ವರ್ಗೀಕರಣದ ಪ್ರಕಾರ 15ಎಂಎಂಮಳೆ ಆತಂಕದ ಮುನ್ಸೂಚನೆ ಅಲ್ಲ. ಆದರೆ ಅಂದು ಅತ್ಯಂತ ಭಾರೀ ಮಳೆ ಸುರಿದು ಭೂಕುಸಿತಗಳು ಸಂಭವಿಸಿದವು. - ಐಎಂಡಿಯ ತಿರುವನಂತಪುರ ಕೇಂದ್ರ ಕೂಡ ಜುಲೈ 25ರಂದು ನೀಡಿದ ಮುನ್ಸೂಚನೆ ಜುಲೈ 26ರಿಂದ ಆಗಸ್ಟ್ 1 ನಡುವೆ ಕೇರಳ ಮತ್ತು ಮಾಹೆಯಲ್ಲಿ “ ಒಟ್ಟಾಗಿಸಾಮಾನ್ಯಕ್ಕಿಂತ ಹೆಚ್ಚು ಮಳೆ ಆಗುತ್ತದೆ” ಎಂದಿತ್ತು, ಆದರೆ ಯಾವುದೇ ಅಲರ್ಟ್ಗಳನ್ನು ನೀಡಲಿಲ್ಲ, ಅಥವಯಾವುದೇ ಎಚ್ಚರಿಕೆಗಳನ್ನು ಕೊಡಲಿಲ್ಲ.
ಜುಲೈ 26ರಂದು ತಿರುವನಂತಪುರ ಹವಾಮಾನ ಕೇಂದ್ರ ದ ಜಿಲ್ಲಾ ಮಳೆಮುನ್ಸೂಚನೆ “ಹಗುರದಿಂದ ಸಾಧಾರಣ” ಎಂದಿತ್ತು. ಐಎಂಡಿ, ಭೂಕುಸಿತಗಳಿಗೆ ಸಂಬಂಧಪಟ್ಟ ಎಚ್ಚರಿಕೆಗಳನ್ನು ಕೊಡುವ ಭೂವೈಜ್ಞಾನಿಕ ಸರ್ವೆ ಭಾರತದ ಸಂಸ್ಥೆ(ಜಿಎಸ್ಐ)ಮತ್ತು ನದಿ ಪ್ರವಾಹ ಸಂಬಂಧಿ ಎಚ್ಚರಿಕೆಗಳನ್ನು ನೀಡುವ ಕೇಂದ್ರೀಯ ಜಲ ಆಯೋಗದ ಮುನ್ಸೂಚನೆಗಳು ಕರಾರುವಾಕ್ಕಾಗಿರಲಿಲ್ಲ ಎಂದು ಮುಖ್ಯಮಂತ್ರಿಗಳು
ರಾಜ್ಯಸಭೆಯಲ್ಲಿ ಕೇಂದ್ರ ಗೃಹಮಂತ್ರಿಗಳ ಹೇಳಿಕೆಯ ನಂತರ ಟಿಪ್ಪಣಿ ಮಾಡಿದರು ಎಂದು ಹೇಳುತ್ತ ಮೇಲೆ ಹೇಳಿದ ‘ದಿ ಹಿಂದೂ’ ವರದಿ
ವಿಜಯನ್ರವರು ಭಾರತ ಸರಕಾರದ “ಪ್ರಾಯೋಗಿಕ ಮಳೆಯಿಂದಾಗುವ ಭೂಕುಸಿತಗಳ ಮುನ್ಸೂಚನೆಯ ಬುಲೆಟಿನ್” ಜುಲೈ 29ರಂದು
ವಾಯನಾಡ್ ಜಿಲ್ಲೆಗೆ ಎರಡು ದಿನಗಳಿಗೆ ನೀಡಿದ ಮುನ್ಸೂಚನೆಯನ್ನು ಹಂಚಿಕೊಂಡರು, ಅದು ಭೂಕುಸಿತಗಳು ಸಂಭವಿಸುವ “ಸಾಧ್ಯತೆಕಡಿಮೆ” ಎಂದಿತ್ತು ಎಂದು ಹೇಳಿದೆ. ಚಿತ್ರ – 2 ನೋಡಿ:
ಚಿತ್ರ – 2
ಇದರಲ್ಲಿ ದಿನ 1 ಕ್ಕೆ (ಜುಲೈ 29, 14-30ರಿಂದ ಜುಲೈ 30 14-30ರ ವರೆಗೆ) ಮತ್ತು ದಿನ 2 ಕ್ಕೆ(ಜುಲೈ 30, 14-30ರಿಂದ ಜುಲೈ 31, 14-30ರ
ವರೆಗೆ) ಕ್ಕೆ ಹಸಿರು ಮುನ್ಸೂಚನೆ ನೀಡಿತ್ತು. ಅಂದರೆ ಭೂಕುಸಿತಗಳ ಸಾಧ್ಯತೆ ಬಹಳ ಕಡಿಮೆ.!
ಈ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ ಎಂದು ‘ದಿ ಹಿಂದೂ’ ವರದಿಯಲ್ಲಿ ಹೇಳಲಾಗಿದೆ.
ಐಎಂಡಿ ಮುಖ್ಯಸ್ಥ ಮೃತ್ಯುಂಜಯ್ ಮಹಾಪಾತ್ರ ಕೂಡ ಆಗಸ್ಟ್ 1ರಂದು ಭಾರತೀಯ ಹವಾಮಾನ ಇಲಾಖೆಯು ಭಾರತದ ಪಶ್ಚಿಮ
ಕರಾವಳಿಯಲ್ಲಿ ಗಮನಾರ್ಹ ಮಳೆಯ ಚಟುವಟಿಕೆಯ ಬಗ್ಗೆ ನಿಯಮಿತ ಮುನ್ಸೂಚನೆಗಳನ್ನು ನೀಡಿತು ಮತ್ತು ಜುಲೈ 30 ರ ಮುಂಜಾನೆ ಕೇರಳಕ್ಕೆ ರೆಡ್ ಅಲರ್ಟ್ ನೀಡಿತು ಎಂದಿರುವುದಾಗಿ ವರದಿಯಾಗಿದೆ. ಜುಲೈ 30 ಮುಂಜಾನೆಗಾಗಲೇ ವಯನಾಡ್ ಜಿಲ್ಲೆ ಭೂಕುಸಿತದಿಂದ 200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
2014ರ ನಂತರವೇ ಎಂಬ ಮತ್ತೊಂದು ಅಸತ್ಯ
ಲೋಕಸಭೆಯಲ್ಲಿ ಮಾತನಾಡುತ್ತ ಕೇಂದ್ರ ಗೃಹಮಂತ್ರಿಗಳು ಇನ್ನೂ ಒಂದು ವಿಷಯ ಎತ್ತಿದರು. “2014 ರ ಮೊದಲು ವಿಪತ್ತುಗಳಿಗೆ ಸ್ಪಂದಿಸಲು ಒಂದೇ ದಾರಿಯಿದ್ದದ್ದು-ಅದೆಂದರೆ ಪರಿಹರ ಮತ್ತು ಪುನರ್ವಸತಿ” ಎಂದು ಅವರು ಹೇಳಿದರು. ಆದರೆ ಇದು ಸರಿಯಲ್ಲ ಎಂದು ಕೂಡ ಈ ‘ಹಿಂದೂ’ ವರದಿ ಹೇಳುತ್ತದೆ.
2012ರಲ್ಲಿ ಭಾರತದ ಮಾನ್ಸೂನ್ ಮುನ್ಸೂಚನೆಯ ಸಾಮರ್ಥ್ಯವನ್ನು ಉತ್ತಮಪಡಿಸಲು ‘ರಾಷ್ಟ್ರೀಯ ಮಾನ್ಸೂನ್ ಮಿಷನ್’ (ಎಂಎಂ)
ಎಂಬುದನ್ನು ರಚಿಸಲಾಯಿತು. 2017ರಲ್ಲಿ ಇದರ ಮೊದಲ ಘಟ್ವವನ್ನು(ಎಂಎಂ-1) ಯಶಸ್ವಿಯಾಗಿ ಮುಗಿಸಲಾಯಿತು ಎಂದು ಭೂವಿಜ್ಞಾನಗಳ ಮಂತ್ರಾಲಯ ಹೇಳಿದೆ. ಸಪ್ಟಂಬರ್ 2017ರಲ್ಲಿ ಎಂಎಂ-2 ಶುರುವಾಯಿತು. ಇದರಲ್ಲಿ ಮಾಡೆಲ್ ಅಭಿವೃದ್ಧಿಪಡಿಸುವ ಚಟುವಟಿಕೆಗಳನ್ನು ಮುಂದುವರೆಸುತ್ತಲೇ, ಹವಾಮಾನ ವೈಪರೀತ್ಯಗಳ ಮುನ್ಸೂಚನೆ ನೀಡಲು ಮತ್ತು ಮಾನ್ಸೂನ್ ಮುನ್ಸೂಚನೆಗಳ ಆಧಾರದಲ್ಲಿ, ವಿಶೇಷವಾಗಿ, ಕೃಷಿ, ಜಲಶಾಸ್ತ್ರ ಮತ್ತು ವಿದ್ಯುತ್ ವಲಯದಲ್ಲಿ, ಹವಾಮಾನಕ್ಕೆ ಸಂಬಂಧಿಸಿದ ಸಾಧನೋಪಕರಣಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಗಮನ ಕೇಂದ್ರೀಕರಿಸಲು ನಿರ್ಧರಿಸಲಾಯಿತು ಎಂದು ‘ದಿ ಹಿಂದೂ’ ವರದಿ ಹೇಳುತ್ತದೆ.
ಈ ಎಂಎಂ-2 ವಾಯುಮಂಡಲ ಮತ್ತು ಹವಾಮಾನ ಸಂಶೋಧನೆ-ಮಾಡೆಲಿಂಗ್ , ವೀಕ್ಷಣೆಯ ವ್ಯವಸ್ಥೆಗಳು ಮತ್ತು ಸೇವೆಗಳು (ಅಕ್ರೋಸ್-
ಎಸಿಆರ್ಒಎಸ್ಎಸ್) ಎಂಬುದರ ಭಾಗ. 2 ಎಂದಿರುವ ಈ ವರದಿ, ಇದಕ್ಕೆ ಹಣನೀಡಿಕೆ 2024ರ ಬಜೆಟಿನಲ್ಲಿ 50 ಕೋಟಿ ರೂ.ಗೆ ಕುಸಿಯಿತು ಎಂಬ ಮಾಹಿತಿಯನ್ನೂ ಕೊಡುತ್ತದೆ!
ಅಂದರೆ ಈ ವಿಷಯದಲ್ಲೂ ಸಂಸತ್ತಿನ ದಿಕ್ಕು ತಪ್ಪಿಸಲಾಗಿದೆಯೇ?
ಕೇರಳ ಮುಖ್ಯಮಂತ್ರಿಗಳು ಜುಲೈ 31ರಂದು ನೀಡಿದ ಹೇಳಿಕೆಯಲ್ಲಿ “ಹವಾಮಾನ ಬದಲಾವಣೆ ನಮ್ಮ ಪರಿಸರದಲ್ಲಿ ಮಹತ್ವದ
ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳನ್ನು ಎದುರಿಸಲು ಮತ್ತು ಹೊಂದಿಕೊಳ್ಳಲು ನಾವು ಮುಂದಾಗಿ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಇಂತಹ ಪ್ರಶ್ನೆಗಳು ಎದುರಾದಾಗ, ತೊಡಗಿಸಿಕೊಳ್ಳುವುದು ನಮ್ಮ ಕೆಲಸವಲ್ಲ ಎಂದು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದೇ? ಕೇಂದ್ರ ಸರಕಾರ ಈ ಪ್ರಶ್ನೆಯನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು. ಹವಾಮಾನ ಬದಲಾವಣೆಯನ್ನು ಎದುರಿಸುವ ಭಾಗವಾಗಿ ಮುಂಬರುವ ಅನಾಹುತಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು” ಎಂದೂ ಸೂಚಿಸಿದ್ದರು.
ಆಗಸ್ಟ್ 3ರಂದು ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಮತ್ತೊಮೆ ಪಿಣರಾಯಿ ವಿಜಯನ್ ಹವಾಮಾನ ಮುನ್ಸೂಚನೆಯ ಮಾದರಿಗಳನ್ನು ಮತ್ತಷ್ಟು ಆಧುನೀಕರಿಸಬೇಕು, ಸ್ಥಳ-ನಿರ್ದಿಷ್ಟವಾಗಿರಬೇಕು ಮತ್ತು ಕರಾರುವಾಕ್ಕಾಗಿರಬೇಕು, ಅದರಿಂದಾಗಿ ವಿಪತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಬೇಕು ಎಂದಿದ್ದಾರೆ. ಮೋಡಸ್ಫೋಟ, ಒಂದು ನಿರ್ದಿಷ್ಟ ಸ್ಥಳದಲ್ಲಿ ಭಾರೀ ಮಳೆಯಿಂದ ಜಲಪ್ರಳಯ ಇವೆಲ್ಲದರ ಮುನ್ಸೂಚನೆ ಕಷ್ಟವೇ, ವಿಶೇಷವಾಗಿ ಹವಾಮಾನ ಬದಲಾವಣೆಯ ಸಂದರ್ಭದಲ್ಲಿ. ಆದರೂ ನಮ್ಮ ದೇಶದ ಹವಾಮಾನ ಮುನ್ಸೂಚನಾ ವ್ಯವಸ್ಥೆಗಳನ್ನು ಆಧುನೀಕರಿಸುವುದು ಅತ್ಯಗತ್ಯ ಎಂದು ಹೇಳಿದ ಅವರು ಕೇರಳಕ್ಕೆ ನಿರ್ದಿಷ್ಟವಾದ ಹವಾಮಾನ ಮುನ್ಸೂಚನಾ ಮಾದರಿಗಳನ್ನು ಅಭಿವೃದ್ಧಿ ಪಡಿಸಲು ಕೊಟ್ಟಾಯಂ ನಲ್ಲಿರುವ ಹವಮಾನ ಬದಲಾವಣಾ ಅಧ್ಯಯನ ಸಂಸ್ಥೆಗೆ ಸಂಪನ್ಮೂಲಗಳು ಮತ್ತು ಸಿಬ್ಬಂದಿಯನ್ನು ಒದಗಿಸಲು ಕೇರಳ ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ: ವಯನಾಡ್ ಭೂಕುಸಿತ : ‘ಪುಟ್ಟ ಮಕ್ಕಳಿಗೆ ಎದೆಹಾಲು ಬೇಕಿದ್ದರೆ ತಿಳಿಸಿʼ | Janashakthi Media |wayanad landslide