ಯುವಕನೊಬ್ಬನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಮಾಡಿದ ದುಷ್ಕರ್ಮಿಗಳು; ಎಫ್‌ಐಆರ್‌ ದಾಖಲು

ಕೊಪ್ಪಳ: ಮದ್ಯದ ಅಮಲಿನಲ್ಲಿದ್ದ ದುಷ್ಕರ್ಮಿಗಳ ಗುಂಪೊಂದು ಮಾದಿಗ ಎಂಬ ಕಾರಣಕ್ಕೆ ಯುವಕನೋರ್ವನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಮಾಡಿದ ಅಮಾನವೀಯ ಘಟನೆ ಕೊಪ್ಪಳ ತಾಲೂಕಿನ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಸಂಬಂಧ ಪಟ್ಟ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸಂತ್ರಸ್ತ ಮಾದಿಗ ಸಮುದಾಯದ ಯುವಕನನ್ನು ಗುಡದಪ್ಪ (21) ಎಂದು ಗುರುತಿಸಲಾಗಿದೆ. ಗ್ರಾಮದ ನಾಗನಗೌಡ, ಯಲ್ಲಪ್ಪ, ಭೀಮಪ್ಪ, ಹನುಮಗೌಡ , ಪ್ರಜ್ವಲ್ ಹಾಗೂ ನವೀನ್ ಆರೋಪಿಗಳು ಎನ್ನಲಾಗಿದೆ. ಸೆಪ್ಟೆಂಬರ್‌ 9 ರಂದು ಬೆಳಗ್ಗೆ ಗ್ರಾಮದ ಕಟ್ಟೆಯ ಮೇಲೆ ಕುಳಿತುಕೊಂಡು ಗುಡದಪ್ಪ ಸಿಗರೇಟ್ ಸೇದುತ್ತಿದ್ದ. ಸ್ವಲ್ಪ ದೂರದಲ್ಲಿ ವಾಲ್ಮೀಕಿ ಸಮುದಾಯದ ಯುವಕರು ಮದ್ಯ ಸೇವಿಸಿ ಸಿಗರೇಟ್ ಸೇದಬಾರದು ಎಂದು ನನ್ನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾದರು. ಆಗ ಭಯಗೊಂಡು ನಾನು ಅಲ್ಲಿಂದ ಮನೆ ಕಡೆಗೆ ಹೋದೆ” ಎಂದು ಸಂತ್ರಸ್ತ ಯುವಕ ದೂರಿನಲ್ಲಿ ತಿಳಿಸಿದ್ದಾನೆ.

ಇದನ್ನೂ ಓದಿ: ದುಃಖದ ಕಡಲ ದಾಟಿಸುವ ನಾವಿಕ

ಅದೇ ದಿನ ಸಂಜೆ ಗಣಪತಿ ವಿಸರ್ಜನೆ ವೀಕ್ಷಿಸಲು ಹೋದಾಗ ಅದೇ ಯುವಕರು ನನ್ನ ಮೇಲೆ ಹಲ್ಲೆ ಮಾಡಿ, ತಲೆಗೆ ಹೊಡೆದಿದ್ದಾರೆ. ಬಳಿಕ ನಾನು ತೊಟ್ಟಿದ್ದ ಬಟ್ಟೆಯನ್ನು ಬಿಚ್ಚಿಸಿದ್ದಾರೆ. ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಕೈಗೆ ಸಿಕ್ಕ ಬಡಿಗೆ, ಚಪ್ಪಲಿಯಲ್ಲಿ ಹೊಡೆದಿದ್ದಾರೆ” ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಸಂತ್ರಸ್ತ ಯುವಕ ಗುಡದಪ್ಪ ವಿವರಿಸಿದ್ದಾನೆ.

ಈ ಸಂಬಂಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಲ್ಲೆಗೊಳಗಾದ ಯುವಕ ಗುಡದಪ್ಪ ಮಾತನಾಡಿ, “ಮಾದಿಗ ಜಾತಿ ಎಂಬ ಕಾರಣಕ್ಕೆ ಮದ್ಯದ ಅಮಲಿನಲ್ಲಿ ನನ್ನನ್ನು ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಕಿರಾಣಿ ಅಂಗಡಿ ಹತ್ತಿರ ನಾನು ಸಿಗರೇಟ್ ಸೇದಲು ಕುಂತಾಗ ಯುವಕರ ತಂಡವೊಂದು ‘ಸಿಗರೇಟ್ ಸೇದಬಾರದು, ಇಲ್ಲಿಂದ ಹೋಗು’ ಎಂದಾಗ ಮಾತಿನ ಚಕಮಕಿ ನಡೆಯಿತು.

ಅಂದು ಸಂಜೆ 6ರ ಸುಮಾರಿಗೆ ಕಿರಾಣಿ ಅಂಗಡಿಗೆ ತೆರಳುತ್ತಿದ್ದಾಗ ನನ್ನನ್ನು ನಾಗನಗೌಡ ಎಂಬಾತ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಬಳಿಕ ಕಂಬಕ್ಕೆ ಕಟ್ಟಿ, ಸಿಕ್ಕ ಸಿಕ್ಕ ವಸ್ತುವಿನಲ್ಲಿ ಹಲ್ಲೆ ಮಾಡಿದ್ದಾರೆ. ಗಲಾಟೆಯ ವಿಷಯ ತಿಳಿಯುತ್ತಿದ್ದಂತೆ ನಮ್ಮ ಕುಟುಂಬಸ್ಥರು ಜಗಳ ಬಿಡಿಸಲು ಬಂದಾಗ, ಅವರನ್ನೂ ಕೂಡ ಅವಾಚ್ಯ ಪದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದರು’ ಎಂದು ತಿಳಿಸಿದರು.

ಇಪ್ಪತ್ತು ಜನ ಯುವಕರ ತಂಡ ನನ್ನ ಮೇಲೆ ಹಲ್ಲೆ ಮಾಡಿದರು. 7 ಜನರ ಮೇಲೆ ಮಾತ್ರ ಪ್ರಕರಣ ದಾಖಲಾಗಿದೆ. ನನಗೆ ಬಲಭಾಗದ ಭುಜಕ್ಕೆ ಹಾಗೂ ತಲೆಗೆ ಬಲವಾಗಿ ಗಾಯಗೊಂಡಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಹಲ್ಲೆ ನಡೆಸಿದವರ ಪೈಕಿ ಕೆಲವು ಜನರ ಹೆಸರು ಇನ್ನೂ ಗೊತ್ತಾಗಲಿಲ್ಲ ಎಂದು ತಿಳಿಸಿದರು.

ಈ ಘಟನೆಗೆ ಸಂಬಂಧಿಸಿ ಅಳವಂಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಬ್ಬಾಸ್ ಅವರನ್ನು ಸಂಪರ್ಕಿಸಿದಾಗ, ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಾಗಿದ್ದು, ಒಟ್ಟು 6 ಜನ ಆರೋಪಿಗಳ ಪೈಕಿ ಮೂವರನ್ನು ಈಗಾಗಲೇ ಬಂಧನ ಮಾಡಲಾಗಿದೆ ಎಂದು ತಿಳಿಸಿದರು. ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಕೇಳಿದಾಗ, ಗಣಪತಿ ವಿಸರ್ಜನೆಯ ಭದ್ರತೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ನಡೆದ ಅಹಿತಗರ ಘಟನೆ ಕುರಿತು ವಿಚಾರಣೆ ಮಾಡಿ ಮಾಹಿತಿ ತಿಳಿಸಲಾಗುವುದು ಎಂದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ಮಾದಿಗ ಮುಖಂಡ ಕರಿಯಪ್ಪ ಗುಡಿಮನಿ ನೇತೃತ್ವದ ಮುಖಂಡರ ನಿಯೋಗವು ಸಂತ್ರಸ್ತ ಯುವಕನ ಮನೆಗೆ ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕಿದ್ದಾರೆ.

ಇದನ್ನೂ ನೋಡಿ: ಬಿಸಿ ಪ್ರಳಯದ ಹೊಸ್ತಿಲಲ್ಲಿ ಕೃಷಿಕರ ಸಮಾಜಕ್ಕೆ ಹೊಸ ಸವಾಲುಗಳು – ನಾಗೇಶ ಹೆಗಡೆ Janashakthi Media

Donate Janashakthi Media

Leave a Reply

Your email address will not be published. Required fields are marked *