ಕಲಬುರಗಿ: 9ನೇ ತರಗತಿ ಓದುತ್ತಿರುವ 14 ವರ್ಷದ ಈ ಬಾಲಕಿ ತನ್ನ ಮದುವೆಯನ್ನೇ ನಿಲ್ಲಿಸಿ, ಇತರೆ ಅಪ್ರಾಪ್ತ ಬಾಲಕಿಯರಿಗೆ ಮಾದರಿಯಾದ ಘಟನೆ ಬಸವಕಲ್ಯಾಣ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿದೆ.
ಈ ಕುರಿತು ವರದಿಗಾರರೊಂದಿಗೆ ಮಾತನಾಡಿರುವ ಬಾಲಕಿ, ಬಡತನದಿಂದಾಗಿ ತಾಯಿ ತನ್ನ ಮೂವರು ಅಕ್ಕಂದಿರಿಗೆ ಕೆಲವು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದಾರೆ. ತನ್ನ ಅಕ್ಕಂದಿರುವ ಅನುಭವಿಸುತ್ತಿರುವ ಆರೋಗ್ಯದ ಸಮಸ್ಯೆಗಳನ್ನು ನೋಡಿದಾಗ, ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ಬಾಲ್ಯ ವಿವಾಹವು ಕೆಟ್ಟದು ಎಂಬುದು ಅರಿವಾಯಿತು ಎಂದು ಹೇಳಿದ್ದಾಳೆ.
ಆಕೆಯ ತಂದೆ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು, ಕೃಷಿ ಕೂಲಿ ಕಾರ್ಮಿಕರಾಗಿರುವ ತಾಯಿಗೆ ಈ ಬಾಲಕಿ ಸೇರಿದಂತೆ ನಾಲ್ಕು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಬಡತನದ ಕಾರಣದಿಂದ ತನ್ನ ತಾಯಿಯ ಒಂಬತ್ತು ಸಹೋದರರ ಪೈಕಿ 25 ವರ್ಷ ವಯಸ್ಸಿನ ಸೋದರ ಮಾವನಿಗೆ ಆಕೆಯನ್ನು ಕೊಟ್ಟು ಮದುವೆ ಮಾಡಲು ಕುಟುಂಬ ನಿರ್ಧರಿಸಿತು.
ಇದನ್ನು ಓದಿ : ಅಕ್ಕಿ ಕಳ್ಳತನ | ದೂರು ಕೊಟ್ಟ ಅಧಿಕಾರಿಯೇ ಕಳ್ಳ!
ಆದರೆ ಬಾಲಕಿ ಇದನ್ನು ವಿರೋಧಿಸಿ ತಾನು ವಯಸ್ಕಳಾಗಿ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುವವರೆಗೂ ಮದುವೆಯಾಗುವುದಿಲ್ಲ ಎಂದು ತಾಯಿ ಮತ್ತು ಸೋದರ ಮಾವನಿಗೆ ಹೇಳಿದ್ದಾಳೆ. ಆದರೂ ಅವರು ತಲೆಕೆಡಿಸಿಕೊಳ್ಳದೆ ಮದುವೆ ತಯಾರಿಗೆ ಮುಂದಾಗಿದ್ದರು. ಇದನ್ನು ಬಾಲಕಿ ಬಲವಾಗಿ ವಿರೋಧಿಸಿದಳು. ನಂತರ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯವರ ಸಹಾಯ ಪಡೆದು ಮದುವೆ ನಿಲ್ಲಿಸಿದ್ದಾಳೆ.
ಅಪ್ರಾಪ್ತ ಬಾಲಕಿಗೆ ತಿಂಗಳಿಗೆ 4 ಸಾವಿರ ರೂ: ಇತ್ತೀಚಿಗೆ ತನ್ನ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಭೇಟಿ ನೀಡಿ, ಒಂದು ವೇಳೆ ಯಾರಾದರೂ ಕಿರುಕುಳ ನೀಡಿದ್ದರೆ ಸಹಾಯವಾಣಿ ಸಂಪರ್ಕಿಸುವಂತೆ ಸಲಹೆ ನೀಡಿದ್ದನ್ನು ನೆನಪಿಸಿಕೊಂಡ ಬಾಲಕಿ ಶನಿವಾರ ಸಹಾಯವಾಣಿಯನ್ನು ಸಂಪರ್ಕಿಸಿದ್ದು, ಕೊಸಾಂಬೆಯ ಗಮನಕ್ಕೆ ತರಲಾಗಿದೆ.
ಭಾನುವಾರ ತಹಶೀಲ್ದಾರ್ ದತ್ತಾತ್ರೇಯ ಗಡಾದ, ತಾಲ್ಲೂಕು ಪಂಚಾಯಿತಿ ಸಿಇಒ ರಮೇಶ ಸುಲ್ಫಿ, ಸಿಡಿಪಿಒ ಗೌತಮ್ ಸಿಂಧೆ, ಬಿಇಒ ಶಿವರುದ್ರಯ್ಯ, ಪಿಎಸ್ಐ ಜಯಶ್ರೀ, ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪುರ ಅವರೊಂದಿಗೆ ಗ್ರಾಮಕ್ಕೆ ದೌಡಾಯಿಸಿದ್ದು, ಬಾಲಕಿಯ ತಾಯಿ, ಸೋದರ ಮಾವ ಮತ್ತು ಗ್ರಾಮದ ಹಿರಿಯರನ್ನು ಭೇಟಿ ಮಾಡಿತು.
ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮನೆಯವರಿಗೆ ಮನವರಿಕೆ ಮಾಡಿಕೊಟ್ಟು, ಮದುವೆ ಮಾಡಿದರೆ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹುಡುಗಿ ವಯಸ್ಕಳಾಗುವವರೆಗೆ ಮದುವೆ ಮಾಡಿಸುವುದಿಲ್ಲ ಎಂದು ತಾಯಿಯಿಂದ ವಾಗ್ದಾನ ಪಡೆದ ಅಧಿಕಾರಿಗಳ ತಂಡ ಬಾಲಕಿಯನ್ನು ಅಭಿನಂದಿಸಿತು. ಆಕೆಗೆ ಪ್ರತಿ ತಿಂಗಳು 4 ಸಾವಿರ ರೂಪಾಯಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕೊಸಾಂಬೆ ಸೂಚಿಸಿದರು. ನಮ್ಮ ಹಳ್ಳಿಗೆ ಸಹಾಯ ಮಾಡಲು ನಾನು ಪೊಲೀಸ್ ಅಧಿಕಾರಿಯಾಗಲು ಬಯಸುತ್ತೇನೆ ಎಂದು ಬಾಲಕಿ ಹೇಳಿದಳು.
ಇದನ್ನು ನೋಡಿ : ಬಿಟ್ ಕಾಯಿನ್, ಪಿಎಸ್ಐ ನೇಮಕ ಸಮಗ್ರ ತನಿಖೆಗೆ ಆಗ್ರಹ – ಕಿಮ್ಮನೆ ರತ್ನಾಕರJanashakthi Media