ಗೃಹಸಚಿವ ಹುದ್ದೆಯ ಘನತೆ ಕಾಪಾಡಿ: ಅಮಿತ್‌ ಶಾಗೆ ಶರದ್‌ ಪವಾರ್

ಮುಂಬೈ: ‘ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು 1978ರಲ್ಲಿ ಶರದ್ ಪವಾರ್ ಆರಂಭಿಸಿದ ದ್ರೋಹದ ರಾಜಕಾರಣವನ್ನು ಕೊನೆಗಾಣಿಸಿದೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿರುವ ಶರದ್ ಪವಾರ್, ಗೃಹಸಚಿವ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಿ ಎಂದಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ‘1978ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದೆ. ಆಗ ನನಗೆ ಅವರು(ಅಮಿತ್ ಶಾ) ಎಲ್ಲಿದ್ದರು ಎಂಬ ಬಗ್ಗೆ ತಿಳಿದಿಲ್ಲ’ ಎಂದು ಹೇಳಿದರು.

‘ಈ ದೇಶವು ಅನೇಕ ಅತ್ಯುತ್ತಮ ಗೃಹಮಂತ್ರಿಗಳನ್ನು ಕಂಡಿದೆ. ಆದರೆ ಅವರ್‍ಯಾರನ್ನು ತಮ್ಮ ರಾಜ್ಯದಿಂದಲೇ ಹೊರಹಾಕಿಲ್ಲ’ ಎಂದು 2010ರಲ್ಲಿ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್‌ ಶಾ ಅವರನ್ನು ಎರಡು ವರ್ಷಗಳ ಕಾಲ ಗುಜರಾತ್‌ನಿಂದ ಗಡಿಪಾರು ಮಾಡಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. 2014ರಲ್ಲಿ ಈ ಪ್ರಕರಣದಲ್ಲಿ ಅಮಿತ್‌ ಶಾ ಖುಲಾಸೆಗೊಂಡಿದ್ದರು.

‘ಅವರು(ಅಮಿತ್ ಶಾ) ಗುಜರಾತ್‌ನಲ್ಲಿ ಉಳಿಯಲು ಸಾಧ್ಯವಾಗದೇ ಇದ್ದಾಗ, ಬಾಬಾ ಸಾಹೇಬ್ ಠಾಕ್ರೆ ಬಳಿ ಹೋಗಿ ಸಹಾಯ ಕೇಳಿದ್ದರು’ ಎಂದು ಹೇಳಿದರು.

‘ಹಿಂದೆ ರಾಜಕೀಯ ನಾಯಕರ ನಡುವೆ ಉತ್ತಮ ಸಂವಹನವಿತ್ತು. ಆದರೆ, ಈಗಿನ ನಾಯಕರಲ್ಲಿ ಅದು ಕಾಣೆಯಾಗಿದೆ’ ಎಂದು ಪವಾರ್ ಬೇಸರ ವ್ಯಕ್ತಪಡಿಸಿದರು.

ಭಾನುವಾರ ಶಿರಡಿಯಲ್ಲಿ ಬಿಜೆಪಿ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ್ದ ಅಮಿತ್ ಶಾ, ‘ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಗೆಲವು 1978ರಲ್ಲಿ ಶರದ್ ಪವಾರ್ ಆರಂಭಿಸಿದ ಅಸ್ಥಿರತೆ ಮತ್ತು ಬೆನ್ನಿಗೆ ಚೂರಿ ಹಾಕುವ ರಾಜಕಾರಣವನ್ನು ಕೊನೆಕಾಣಿಸಿದೆ. ನೀವು(ಮತದಾರರು) ಅಂತಹ ರಾಜಕಾರಣವನ್ನು 20 ಅಡಿ ಕೆಳಗೆ ಹೂತುಹಾಕಿದ್ದೀರಿ’ ಎಂದಿದ್ದರು.

1978ರಲ್ಲಿ 40 ಶಾಸಕರೊಂದಿಗೆ ಕಾಂಗ್ರೆಸ್‌ ತೊರೆದ ಶರದ್ ಪವಾರ್ ಅವರು ವಸಂತದಾದಾ ಪಾಟೀಲ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಆನಂತರ ಮುಖ್ಯಮಂತ್ರಿ ಹುದ್ದೆಗೂ ಏರಿದ್ದರು. ಈ ಘಟನೆಯನ್ನೇ ಉಲ್ಲೇಖಿಸಿ ಅಮಿತ್ ಶಾ, ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

Donate Janashakthi Media

Leave a Reply

Your email address will not be published. Required fields are marked *