ಬೆಂಗಳೂರು : ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದ ವಸತಿ ಸಚಿವ ವಿ.ಸೋಮಣ್ಣ ಅವರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಸಂಧಾನ ತಾತ್ಕಲಿಕವಾಗಿ ಯಶಸ್ವಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಂದಾಯ ಸಚಿವ ಆರ್.ಅಶೋಕ್ ಅವರು ಬುಧವಾರ ತಡರಾತ್ರಿ ಸೋಮಣ್ಣ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ಆರ್.ಟಿ ನಗರ ನಿವಾಸಕ್ಕೆ ಕರೆದೊಯ್ದು ನಡೆಸಿದ ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯಲ್ಲಿ ಏನೇ ಅಸಮಾಧಾನ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷ ವೇದಿಕೆಯಲ್ಲಿ ಕುರಿತು ಇತ್ಯರ್ಥಪಡಿಸಿಕೊಳ್ಳೋಣ. ಪಕ್ಷ ಬಿಡುವ ತೀರ್ಮಾನದಿಂದ ಹಿಂದೆ ಸರಿಯಬೇಕೆಂದು ಸಿಎಂ ಬೊಮ್ಮಾಯಿ ಅವರು ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಚುನಾವಣಾ ಸಂದರ್ಭದಲ್ಲಿ ನಿಮ್ಮಂತಹ ಹಿರಿಯರೇ ಪಕ್ಷ ಬಿಟ್ಟು ಹೋದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಕಾರಕ್ಕಾಗಿ ಬಿಜೆಪಿಗೆ ಬಂದರು. ಈಗ ಅದೇ ಅಕಾರಕ್ಕಾಗಿ ಬೇರೆ ಪಕ್ಷಗಳತ್ತ ಮುಖ ಮಾಡಿದರು ಎಂಬ ಆರೋಪಕ್ಕೆ ತುತ್ತಾಗುತ್ತೀರಿ. ವರಿಷ್ಠರ ಜೊತೆ ಚರ್ಚಿಸಿ ನಿಮ್ಮ ಸಮಸ್ಯೆಯನ್ನು ಇತರ್ಥ್ಯ ಪಡಿಸಲಾಗುತ್ತದೆ. ಯಾರಿಗೆ ಟಿಕೆಟ್ ಕೊಡಬೇಕು,ಯಾರು ಎಲ್ಲಿಂದ ಸ್ಪರ್ಧೆ ಮಾಡಬೇಕು, ಎಲ್ಲವನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಆತುರಾತುರವಾಗಿ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಮಗನ ಭವಿಷ್ಯಕ್ಕಾದರೂ ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಬೊಮ್ಮಾಯಿ ಕಡ್ಡಿ ಮುರಿದಂತೆ ಹೇಳಿದ್ದಾರೆ.
ನಾನು ಪಕ್ಷ ಬಿಡಬೇಕೆಂಬ ತೀರ್ಮಾನಕ್ಕೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ನನಗೆ ಮುಜುಗರ ಉಂಟು ಮಾಡಿದೆ. ನನ್ನ ಹಿರಿತನ, ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸದೆ ಸೂಕ್ತ ಸ್ಥಾನಮಾನ ಕೊಡುತ್ತಿಲ್ಲ. ಮಾಜಿ ಸಿಎಂ ಯಡಿಯೂರಪ್ಪನವರ ಒಬ್ಬ ಮಗ ಶಿವಮೊಗ್ಗ ಸಂಸದ. ಮತ್ತೊಬ್ಬ ಮಗ ಶಿಕಾರಿಪುರ ಆಕಾಂಕ್ಷಿ. ನನ್ನ ಮಗನಿಗೆ ಟಿಕೆಟ್ ಕೇಳಿದರೆ ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಸಬೂಬು ಹೇಳುತ್ತಾರೆ. ನನಗೆ ಚುನಾವಣಾ ಉಸ್ತುವಾರಿಯನ್ನೂ ಕೊಡಲಿಲ್ಲ. ಪಕ್ಷ ಕಟ್ಟಲು, ಕಾರ್ಯಕರ್ತರನ್ನು ತರಲು, ಕಾರ್ಯಕ್ರಮ ಆಯೋಜನೆ, ಕುರ್ಚಿ ಹಾಕಲು, ಬಂದವರಿಗೆ ರಾಜ್ಯಾತಿಥ್ಯ ಕೊಡಲು ನಾನು ಬೇಕು. ಆದರೆ ನನಗೊಂದು ಜವಾಬ್ದಾರಿ ಕೊಡಿ ಎಂದರೆ ಇಲ್ಲದ ಕಥೆ ಹೇಳುತ್ತಾರೆ. ಈ ನೋವನ್ನು ನಾನು ಎಷ್ಟು ದಿನ ಸಹಿಸಿಕೊಂಡು ಇರಲಿ ಎಂದು ಸೋಮಣ್ಣ ಅವರು ಬೊಮ್ಮಾಯಿ ಮತ್ತು ಅಶೋಕ್ ಮುಂದೆ ತಮ್ಮ ನೋವನ್ನು ಹೊರಹಾಕಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಬರುವ ದಿನಗಳಲ್ಲಿ ಖಂಡಿತವಾಗಿಯೂ ನಿಮಗೆ ಹಿರಿತನಕ್ಕೆ ತಕ್ಕಂತೆ ಸ್ಥಾನಮಾನ ಸಿಗಲಿದೆ. ಮೊದಲು ಪಕ್ಷ ತೊರೆಯುವ ತೀರ್ಮಾನದಿಂದ ಹಿಂದೆ ಸರಿಯಬೇಕು. ಗೋವಿಂದರಾಜನಗರದಲ್ಲಿ ಸ್ಪರ್ಧೆಗೆ ಸಿದ್ದರಾಗಿ ಎಂದು ಉಭಯ ನಾಯಕರು ಹೇಳುತ್ತಿದ್ದಂತೆ ಮುನಿಸಿಕೊಂಡಿದ್ದ ಸೋಮಣ್ಣನವರ ಕೋಪತಾಪ ಸದ್ಯಕ್ಕೆ ಶಮನವಾಗಿದೆ. ಬರುವ ದಿನಗಳಲ್ಲಿ ಸೋಮಣ್ಣ ಎಲ್ಲವನ್ನು ಸಹಿಸಿಕೊಂಡು ಬಿಜೆಪಿಯಲ್ಲೇ ಮುಂದುವರೆಯುತ್ತಾರಾ ಎಂಬ ಯಕ್ಷ ಪ್ರಶ್ನೆ ಉದ್ಭವಿಸಿದೆ.