ಸಚಿವೆ ಶಶಿಕಲಾ ಜೊಲ್ಲೆ ಮೇಲಿನ ಭ್ರಷ್ಠಾಚಾರ: ಸ್ವತಂತ್ರ ನ್ಯಾಯಾಂಗ ತನಿಖೆಗೆ ಸಿಪಿಐ(ಎಂ) ಆಗ್ರಹ

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಹಾಗೂ ಬಿಜೆಪಿಗೆ ಸೇರಿದ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಸೇರಿ, ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆಗಳನ್ನು ವಿತರಿಸುವ ಟೆಂಡರ್‌ನಲ್ಲಿ ವಿಚಾರದಲ್ಲಿನ ಕೋಟ್ಯಾಂತರ ಅವ್ಯವಹಾರದ ಭ್ರಷ್ಟಾಚಾರವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.

ಇದನ್ನು ಓದಿ: ಅಂಗನವಾಡಿ ಮಕ್ಕಳ ಮೊಟ್ಟೆಗೆ ಕನ್ನ ಹಾಕಿದ ಸಚಿವೆ, ಸಚಿವೆಗೆ ಸಾಥ್‌ ನೀಡಿದ ಶಾಸಕ ಪರಣ್ಣ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಹೈದರಾಬಾದ್‌ ಕರ್ನಾಟಕ ಭಾಗದ ದಶಲಕ್ಷಾಂತರ ಫಲಾನುಭವಿಗಳಾದ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳು, ಬಾಣಂತಿಯರು, ಗರ್ಭಿಣಿ ಮಹಿಳೆಯರಿಗೆ ಪ್ರತಿದಿನ ಕೊಡಲಾಗುವ ಮೊಟ್ಟೆ ಟೆಂಡರ್‌ ವಿಚಾರವಾಗಿ ತಮಗೆ ಕೋಟ್ಯಾಂತರ ರೂಪಾಯಿಗಳ ಕಮಿಷನ್ ನೀಡುವವರಿಗೆ ಗುತ್ತಿಗೆ ವಿಚಾರ ಬೆಳಕಿಗೆ ಬಂದಿದ್ದು, ಭ್ರಷ್ಟ ಸರಕಾರದ ನಿದರ್ಶನವಾಗಿದೆ ಎಂದಿದ್ದಾರೆ.

ಅದೇ ರೀತಿ, ಅಂಗನವಾಡಿ ಕೇಂದ್ರಗಳಿಗೆ ನೀಡಲಾಗುವ ಪೌಷ್ಠಿಕ ಆಹಾರ ಮತ್ತು ಮೊಟ್ಟೆಗಳ ವಿತರಣೆಯಲ್ಲೂ ಆಯಾ ಕೇಂದ್ರಗಳಿಗೆ ಅಲ್ಲಿನ ಫಲಾನುಭವಿಗಳನ್ನನುಸರಿಸಿ ನೀಡದೇ ಕಡಿಮೆ ನೀಡಲಾಗುತ್ತಿರುವ ವಿಚಾರವೂ ಇಂತಹ ಭ್ರಷ್ಠತೆಯ ಮೂಲವಾಗಿದೆ. ಪ್ರಶ್ನಿಸಿದ ಅಂಗನವಾಡಿ ನೌಕರರನ್ನು ಅಧಿಕಾರಿ ವಲಯ ಬೆದರಿಸುತ್ತಿರುವುದು ಗುಟ್ಟಾದ ವಿಚಾರವಾಗಿ ಉಳಿದಿಲ್ಲ. ಈ ಎಲ್ಲದರಿಂದ ರಾಜ್ಯದ ಜನತೆ ತೀವ್ರವಾಗಿ ಆತಂಕಿತರಾಗಿದ್ದಾರೆ.

ಬಡಜನತೆಯ ಅಪೌಷ್ಠಿಕತೆಯ ವಿಚಾರದಲ್ಲಿ ಸಚಿವರ ಹಾಗೂ ಶಾಸಕರ ಈ ಭ್ರಷ್ಠತೆಯ ನಡವಳಿಕೆ ತೀವ್ರ ಖಂಡನೀಯವಾಗಿದೆ. ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ಈ ಕೂಡಲೆ ಆ ಇಬ್ಬರ ರಾಜಿನಾಮೆಯನ್ನು ಮುಖ್ಯಮಂತ್ರಿಗಳು ಪಡೆಯಬೇಕು ಮತ್ತು ಈ ಭ್ರಷ್ಠಾಚಾರದ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಿ ಜನತೆಗೆ ನಿಜವೇನೆಂದು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *